ಉಳ್ಳಾಲ ಕ್ಷೇತ್ರ ಚಿತ್ರಣ ; ಅಸ್ತಿತ್ವ ಕಳಕೊಂಡ ಎಡರಂಗ, ಹಿಂದುತ್ವದ ಅಲೆಯಲ್ಲಿ ನೆಲೆ ಪಡೆದ ಕಮಲ, ಮುಸ್ಲಿಂ ಬಾಹುಳ್ಯ ಕ್ಷೇತ್ರದಲ್ಲಿ ಯು.ಟಿ.ಖಾದರ್ ಭದ್ರ, ತೊಡರುಗಾಲಾಗುತ್ತಾ ಎಸ್ಡಿಪಿಐ ?

25-02-23 07:14 pm       Written by: Giridhar Shetty, Mangaluru   ಕರಾವಳಿ

1994ರಿಂದ ನಿರಂತರವಾಗಿ ಕಾಂಗ್ರೆಸ್ ಗೆಲ್ಲುತ್ತ ಬಂದಿರುವ ಉಳ್ಳಾಲ ಕ್ಷೇತ್ರದಲ್ಲಿ (ಮಂಗಳೂರು) ಈ ಬಾರಿ ಕಮಲ ಅರಳಿಸಬೇಕೆಂದು ಬಿಜೆಪಿ ರಾಜ್ಯ ನಾಯಕರು ಪಣ ತೊಟ್ಟಿದ್ದಾರೆ.

ಮಂಗಳೂರು, ಫೆ.25: 1994ರಿಂದ ನಿರಂತರವಾಗಿ ಕಾಂಗ್ರೆಸ್ ಗೆಲ್ಲುತ್ತ ಬಂದಿರುವ ಉಳ್ಳಾಲ ಕ್ಷೇತ್ರದಲ್ಲಿ (ಮಂಗಳೂರು) ಈ ಬಾರಿ ಕಮಲ ಅರಳಿಸಬೇಕೆಂದು ಬಿಜೆಪಿ ರಾಜ್ಯ ನಾಯಕರು ಪಣ ತೊಟ್ಟಿದ್ದಾರೆ. ಅದಕ್ಕಾಗಿ ನಾನಾ ರೀತಿಯ ಕಸರತ್ತನ್ನೂ ಮಾಡುತ್ತಿದ್ದಾರೆ. ಆದರೆ ಉಳ್ಳಾಲ ಕ್ಷೇತ್ರವನ್ನು ಬಿಜೆಪಿ ಗೆಲ್ಲುವುದು ಅಷ್ಟು ಸುಲಭ ಅಲ್ಲ ಅನ್ನುವುದು ಅಲ್ಲಿನ ಅಂಕಿ ಅಂಶಗಳನ್ನು ನೋಡಿದರೆ ಖಚಿತವಾಗುತ್ತದೆ. ಒಟ್ಟು ಕ್ಷೇತ್ರದ ಚಿತ್ರಣ ಹೇಗಿದೆ ಅನ್ನುವುದನ್ನು ಕಟ್ಟಿಕೊಡುವ ವರದಿ ಇಲ್ಲಿದೆ.

1957ರಿಂದ ಹಿಡಿದು 2008ರ ವರೆಗೂ ಉಳ್ಳಾಲ ಕ್ಷೇತ್ರ ಎಂದೇ ಕರೆಸಿಕೊಂಡಿದ್ದ ಹಾಲಿ ಮಂಗಳೂರು ವಿಧಾನಸಭಾ ಕ್ಷೇತ್ರ ಒಂದು ರೀತಿಯಲ್ಲಿ ಕಾಂಗ್ರೆಸ್ ಭದ್ರಕೋಟೆ. 15 ಅಸೆಂಬ್ಲಿ ಚುನಾವಣೆಗಳಲ್ಲಿ ಈ ಕ್ಷೇತ್ರವನ್ನು 12 ಬಾರಿ ಕಾಂಗ್ರೆಸ್ ಗೆದ್ದುಕೊಂಡಿದೆ. ಒಂದು ಕಾಲದಲ್ಲಿ ಎಡರಂಗದ ಹಿಡಿತ ಹೊಂದಿದ್ದ ಈ ಕ್ಷೇತ್ರ ಎರಡು ಬಾರಿ ಸಿಪಿಐ- ಸಿಪಿಎಂ ಅಭ್ಯರ್ಥಿಯನ್ನು ಗೆಲ್ಲಿಸಿತ್ತು. 1962ರಲ್ಲಿ ಸಿಪಿಐ ಅಭ್ಯರ್ಥಿಯಾಗಿದ್ದ ಎ.ಕೃಷ್ಣ ಶೆಟ್ಟಿ ಮತ್ತು 1983ರಲ್ಲಿ ಸಿಪಿಎಂ ಅಭ್ಯರ್ಥಿಯಾಗಿದ್ದ ರಾಮಚಂದ್ರ ರಾವ್ ಉಳ್ಳಾಲ ಕ್ಷೇತ್ರದಿಂದ ಶಾಸಕರಾಗಿದ್ದರು. 1980ರ ದಶಕದಲ್ಲಿ ಮಂಗಳೂರಿನಲ್ಲಿ ಗಟ್ಟಿ ನೆಲೆ ಹೊಂದಿದ್ದ ಎಡರಂಗ ನಿಧಾನವಾಗಿ ನೆಲೆ ಕಳಕೊಳ್ಳುತ್ತಿದ್ದಂತೆ ಆ ಜಾಗದಲ್ಲಿ ಭಾರತೀಯ ಜನತಾ ಪಾರ್ಟಿ ಅಸ್ತಿತ್ವ ಪಡೆಯುತ್ತ ಬಂದಿತ್ತು.

ಮುಸ್ಲಿಂ ಪ್ರಾಬಲ್ಯದ ಉಳ್ಳಾಲ ಗೆದ್ದಿದ್ದ ಬಿಜೆಪಿ

1994ರಲ್ಲಿ ಸಿಪಿಎಂ, ಕಾಂಗ್ರೆಸ್, ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಾಗ ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ.ಜಯರಾಮ ಶೆಟ್ಟಿ ಗೆದ್ದುಕೊಂಡಿದ್ದರು. ಆಗ ಚಲಾವಣೆಯಾಗಿದ್ದ 75680 ಮತಗಳ ಪೈಕಿ ಬಿಜೆಪಿಯ ಜಯರಾಮ ಶೆಟ್ಟಿ 24,412 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್ ಮಹಮ್ಮದ್ ಮಸೂದ್ 18,817 ಮತ, ಸಿಪಿಎಂ ಅಭ್ಯರ್ಥಿ ಕೆ.ಆರ್ ಶ್ರೀಯಾನ್ 13,154 ಮತಗಳನ್ನು ಪಡೆದಿದ್ದರು. ಜನತಾದಳದಿಂದ ಸ್ಪರ್ಧಿಸಿದ್ದ ನಜೀರ್ ಉಳ್ಳಾಲ್ 9062 ಮತಗಳನ್ನು ಪಡೆದಿದ್ದರು. ಆಮೂಲಕ ಮುಸ್ಲಿಂ ಮತ್ತು ಕಾಂಗ್ರೆಸ್ ಪ್ರಾಬಲ್ಯ ಇದ್ದರೂ ನಾಲ್ಕು ಪಕ್ಷಗಳ ಜಿದ್ದಾಜಿದ್ದಿನಿಂದಾಗಿ ಬಿಜೆಪಿ ಅಭ್ಯರ್ಥಿ ಗೆಲುವು ಕಂಡಿದ್ದರು. 1989ರ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ಬಿಎಂ ಇದಿನಬ್ಬ(25,785) ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿಯ ಜಯರಾಮ ಶೆಟ್ಟಿ 17,069 ಮತಗಳನ್ನು ಪಡೆದಿದ್ದರು. ಸಿಪಿಎಂ ಅಭ್ಯರ್ಥಿ ಕೆ.ಆರ್ ಶ್ರೀಯಾನ್ 20,371 ಮತ ಗಳಿಸಿದ್ದರು.

ಹಿಂದಿನ ಪಾರಮ್ಯ ಕಳಕೊಂಡ ಎಡರಂಗ

1999ರ ಚುನಾವಣೆಯಲ್ಲಿ ಯುಟಿ ಫರೀದ್ ಮತ್ತೆ ಚುನಾವಣಾ ಕಣಕ್ಕಿಳಿದು ಕಾಂಗ್ರೆಸ್ ಶಾಸಕರಾಗಿದ್ದರು. ಆಗ ಒಟ್ಟು ಚಲಾವಣೆಯಾದ 93,156 ಮತಗಳ ಪೈಕಿ 50,134 ಮತಗಳನ್ನು ಯುಟಿ ಫರೀದ್ ಪಡೆದಿದ್ದರು. ಪ್ರತಿಸ್ಪರ್ಧಿ ಬಿಜೆಪಿಯ ಕೆ.ಜಯರಾಮ ಶೆಟ್ಟಿ 34881 ಮತ ಪಡೆದಿದ್ದರೆ, ಸಿಪಿಎಂ ಅಭ್ಯರ್ಥಿ ಬಿ.ಮಾಧವ ಕೇವಲ 8141 ಮತಗಳನ್ನು ಗಳಿಸಿದ್ದು ಕ್ಷೇತ್ರದಲ್ಲಿ ಎಡರಂಗ ಪ್ರಾಬಲ್ಯ ಕಳಕೊಂಡಿದ್ದನ್ನು ಸೂಚಿಸಿತ್ತು. 2004ರ ಚುನಾವಣೆಯಲ್ಲಿ ಮತ್ತೆ ಶಾಸಕರಾಗಿದ್ದ ಯುಟಿ ಫರೀದ್ (47,839) ಪ್ರಯಾಸದಿಂದ ಗೆಲುವು ಕಂಡಿದ್ದರು. ನಿಕಟ ಪ್ರತಿಸ್ಪರ್ಧಿಯಾಗಿದ್ದ ಚಂದ್ರಶೇಖರ್ ಉಚ್ಚಿಲ್ 40,491 ಮತಗಳನ್ನು ಪಡೆದಿದ್ದರೆ, ಬಿಜೆಪಿಯಲ್ಲಿ ಸೀಟು ಸಿಗದೆ ಜನತಾದಳದಿಂದ ಸ್ಪರ್ಧಿಸಿದ್ದ ಜಯರಾಮ ಶೆಟ್ಟಿ 8184 ಮತಗಳನ್ನು ಪಡೆದಿದ್ದರು. ಸಿಪಿಎಂ ಅಭ್ಯರ್ಥಿ ರಾಮಚಂದ್ರ ಉಚ್ಚಿಲ್ 7320 ಮತ ಗಳಿಸಿದ್ದರು. ಅಂದು ಜನತಾದಳ ಅಭ್ಯರ್ಥಿ ಹಾಕದೇ, ಜಯರಾಮ ಶೆಟ್ಟಿ ಪಕ್ಷದಲ್ಲೇ ಇರುತ್ತಿದ್ದರೆ ಬಿಜೆಪಿ ಮತ್ತೊಮ್ಮೆ ಶಾಸಕ ಸ್ಥಾನ ಗೆಲ್ಲುವುದನ್ನು ತಳ್ಳಿಹಾಕುವಂತಿರಲಿಲ್ಲ.  

1978, 1999 ಮತ್ತು 2004ರಲ್ಲಿ ಮೂರು ಬಾರಿ ಶಾಸಕರಾಗಿದ್ದ ಯುಟಿ ಫರೀದ್ ನಿಧನದ ತರುವಾಯ 2007ರಲ್ಲಿ ಉಪ ಚುನಾವಣೆ ನಡೆದು ಯುಟಿ ಖಾದರ್ ದಿಢೀರ್ ಶಾಸಕರಾಗಿದ್ದರು. ಆನಂತರ 2008, 2013 ಮತ್ತು 2018ರ ಚುನಾವಣೆಯಲ್ಲಿ ಸತತ ನಾಲ್ಕು ಬಾರಿ ಶಾಸಕರಾಗಿರುವ ಯುಟಿ ಖಾದರ್ ಈ ಬಾರಿ ಐದನೇ ಸಲ ಶಾಸಕರಾಗುವತ್ತ ಕಣ್ಣು ನೆಟ್ಟಿದ್ದಾರೆ. ಮುಸ್ಲಿಂ ಬಾಹುಳ್ಯದ ಈ ಕ್ಷೇತ್ರವನ್ನು ಯುಟಿ ಖಾದರ್ ಭದ್ರ ತಳಪಾಯ ಮಾಡಿಕೊಂಡಿದ್ದು, ಇಡೀ ಕ್ಷೇತ್ರದಲ್ಲಿ ಪ್ರಭಾವ ವಿಸ್ತರಿಸಿದ್ದಾರೆ. ಸದ್ಯಕ್ಕೆ ಕಾಂಗ್ರೆಸ್ ನಲ್ಲಿ ಇವರನ್ನು ಬಿಟ್ಟರೆ, ಉಳ್ಳಾಲ ಕ್ಷೇತ್ರದಲ್ಲಿ ಎರಡನೇ ಹಂತದ ನಾಯಕರೇ ಇಲ್ಲ ಅನ್ನುವ ಸ್ಥಿತಿಯಿದೆ.

2008ರ ಬಳಿಕ ಬಿಜೆಪಿ-ಕಾಂಗ್ರೆಸ್ ಹಣಾಹಣಿ   

2008ರ ಚುನಾವಣೆ ಬಳಿಕ ಉಳ್ಳಾಲದ ಮತಕ್ಷೇತ್ರ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ನೇರ ಸ್ಪರ್ಧಾ ಕಣ ಅನ್ನುವಂತಾಗಿದೆ. ಅಲ್ಲಿವರೆಗೂ ಇದ್ದ ಎಡರಂಗ, ಜನತಾದಳ ಈ ಕ್ಷೇತ್ರದಲ್ಲಿ ನೆಲೆಯನ್ನೇ ಕಳಕೊಂಡಿದೆ. 2013ರಲ್ಲಿ ಬಿಜೆಪಿಯ ಚಂದ್ರಹಾಸ ಉಳ್ಳಾಲ್ 40,339 ಮತ ಪಡೆದಿದ್ದರೆ, ಯುಟಿ ಖಾದರ್ 69,450 ಮತ ಗಳಿಸಿದ್ದರು. 2018ರ ಚುನಾವಣೆಯಲ್ಲಿ ಯುಟಿ ಖಾದರ್ (80,813) ಅವರು ಬಿಜೆಪಿ ಅಭ್ಯರ್ಥಿ ಸಂತೋಷ್ ಕುಮಾರ್ ರೈ(61074) ವಿರುದ್ಧ 19 ಸಾವಿರ ಮತಗಳಿಂದ ಗೆಲುವು ಕಂಡಿದ್ದರು. ಕಳೆದೆರಡು ಚುನಾವಣೆಗಳಲ್ಲೂ ಈ ಅಂತರ ಒಂದೇ ರೀತಿ ಇದ್ದುದನ್ನು ಕಾಣಬಹುದು. ಕಳೆದ ಬಾರಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆಯ ಉಳಿದೆಲ್ಲ ಕ್ಷೇತ್ರಗಳನ್ನು ಹಿಂದುತ್ವದ ಸೂತ್ರದಡಿ ಗೆದ್ದುಕೊಂಡಿದ್ದರೆ, ಉಳ್ಳಾಲವನ್ನು ಗೆಲ್ಲುವುದು ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣವಾಗಿದ್ದು ಇಲ್ಲಿನ ಮುಸ್ಲಿಂ ಪ್ರಾಬಲ್ಯದ ಮತದಾರರು.

ಅಲ್ಪಸಂಖ್ಯಾತ ಮತಗಳೇ ಪವರ್ ಪಾಯಿಂಟ್

ಈ ಬಾರಿಯೂ ಕ್ಷೇತ್ರದಲ್ಲಿ ಯುಟಿ ಖಾದರ್ ಹವಾ ಜೋರಾಗಿದ್ದು, ಇದಕ್ಕೆ ಬ್ರೇಕ್ ಬೀಳಬೇಕಿದ್ದರೆ ಎಸ್ಡಿಪಿಐನಿಂದ ಮಾತ್ರ ಸಾಧ್ಯ ಎನ್ನುವ ಲೆಕ್ಕಾಚಾರ ಕೇಳಿಬರುತ್ತಿದೆ. ಸದ್ಯಕ್ಕೆ, ಅಧಿಕೃತ ಮಾಹಿತಿ ಪ್ರಕಾರ ಉಳ್ಳಾಲ ಕ್ಷೇತ್ರದಲ್ಲಿ ಒಟ್ಟು 2,00002 (2 ಲಕ್ಷದ 2) ಮತದಾರರಿದ್ದಾರೆ. ಆ ಪೈಕಿ 88,066 ಹಿಂದುಗಳದ್ದು ಮತ್ತು 97,722 ಮುಸ್ಲಿಮರ ಮತಗಳಿವೆ. 14,214 ಕ್ರಿಸ್ತಿಯನ್ನರ ಮತಗಳಿವೆ. ಅಲ್ಪಸಂಖ್ಯಾತ ಮತಗಳೇ ಒಂದು ಲಕ್ಷಕ್ಕಿಂತ ಹೆಚ್ಚಿರುವುದು ಉಳ್ಳಾಲ ಕ್ಷೇತ್ರದಲ್ಲಿ ಕಾಂಗ್ರೆಸ್ ಪಾಲಿಗೆ ಪ್ಲಸ್ ಪಾಯಿಂಟ್ ಎನ್ನಲಾಗುತ್ತಿದೆ. ಹಿಂದುಗಳ ಪೈಕಿ ಜಾತಿವಾರು ಅಂದಾಜಿನಂತೆ ಬಿಲ್ಲವರು 45 ಸಾವಿರ, ಬಂಟ 18 ಸಾವಿರ, 3-4 ಸಾವಿರ ಕುಲಾಲ, 7 ಸಾವಿರದಷ್ಟು ಎಸ್ಸಿ-ಎಸ್ಟಿ ಮತ್ತಿತರ ಹಿಂದುಳಿದ ಜಾತಿಗಳ ಮತಗಳಿವೆ.

ಎಸ್ಡಿಪಿಐ, ಬಿಜೆಪಿ ಅಭ್ಯರ್ಥಿ ಯಾರು ?

ಈ ಬಾರಿ ಎಸ್ಡಿಪಿಐ ಪಕ್ಷದಿಂದ ಅಭ್ಯರ್ಥಿ ಕಣಕ್ಕಿಳಿಸುವುದು ಖಚಿತವಾಗಿದೆ. ತಾಂಟ್ರೆ ಬಾ ತಾಂಟ್ ಖ್ಯಾತಿಯ ಭಾಷಣಕಾರ ರಿಯಾಜ್ ಪರಂಗಿಪೇಟೆ ಉಳ್ಳಾಲದಲ್ಲಿ ಸ್ಪರ್ಧಿಸಲಿದ್ದಾರೆಂದು ಹೇಳಲಾಗುತ್ತಿದೆ. ಉಳ್ಳಾಲ ಕ್ಷೇತ್ರ ವ್ಯಾಪ್ತಿಯಲ್ಲಿ 51 ಮಂದಿ ಎಸ್ಡಿಪಿಐ ಗ್ರಾಮ ಪಂಚಾಯತ್ ಸದಸ್ಯರಿದ್ದಾರೆ. ಎರಡು ಗ್ರಾಪಂನಲ್ಲಿ ಎಸ್ಡಿಪಿಐ ಅಧಿಕಾರದಲ್ಲಿದೆ. ದಿನದಿಂದ ದಿನಕ್ಕೆ ಎಸ್ಡಿಪಿಐ ಪಕ್ಷದ ಪ್ರಾಬಲ್ಯ ಕಾಂಗ್ರೆಸ್ ಶಾಸಕ ಯುಟಿ ಖಾದರ್ ಗೆ ಅಪಾಯಕಾರಿ ಎನ್ನುವಂತಿದೆ. ರಿಯಾಜ್ ಪರಂಗಿಪೇಟೆ ಉಳ್ಳಾಲದಲ್ಲಿಯೇ ಬಾಡಿಗೆ ಮನೆ ಪಡೆದು ಪ್ರಚಾರ ಆರಂಭಿಸಿದ್ದಾರೆ. ಬಿಜೆಪಿಯಿಂದ ಸಂಭಾವ್ಯ ಅಭ್ಯರ್ಥಿಗಳಾಗಿ ಕಳೆದ ಬಾರಿ ಸ್ಪರ್ಧಿಸಿದ ಸಂತೋಷ್ ಕುಮಾರ್ ರೈ, ಬಿಲ್ಲವ ಕೋಟಾದಡಿ ಸತೀಶ್ ಕುಂಪಲ ಹೆಸರು ಕೇಳಿಬರುತ್ತಿದೆ. ಜೊತೆಗೆ, ಬಜರಂಗದಳ ಮುಖಂಡ ಶರಣ್ ಪಂಪ್ವೆಲ್ ಹೆಸರು ಕೂಡ ಎನ್ನುವ ರೇಸಿನಲ್ಲಿದೆ. ಹಿಂದುತ್ವ ಸೂತ್ರದಡಿ ಯುಟಿ ಖಾದರ್ ಕಟ್ಟಿಹಾಕಲು ಬಿಜೆಪಿ ನಾಯಕರು ವಿಭಿನ್ನ ತಂತ್ರವನ್ನಂತೂ ಹೆಣೆದಿದ್ದಾರೆ.

Picture of Ullal Constituency, how has BJP, Congress and SDPI prepared for the coming elections a detailed political report by Headline Karnataka. As elections are just around the corner in the state, Dakshina Kannada district is expected to have tough fight on its hands. The Congress is mulling to field right candidate to fight the BJP MLA’s in six constituencies. In 2013, the Congress dominated Dakshina Kannada winning 7 seats except the Sullia constituency. However in 2018, the BJP wrested the seats held by the Congress by winning 7 seats except the Mangaluru constituency which was retained by U T Khader.