ಜಮ್ಮು ಕಾಶ್ಮೀರದಲ್ಲಿ ಭೂಕುಸಿತ ; ಅಮರನಾಥ ಯಾತ್ರೆ ಸ್ಥಗಿತ, ಅರ್ಧಕ್ಕೆ ಸಿಕ್ಕಿಬಿದ್ದ ದಕ್ಷಿಣ ಕನ್ನಡ ಜಿಲ್ಲೆಯ ತಂಡ, ಸೇನಾ ಶಿಬಿರದಲ್ಲಿ ವಾಸ್ತವ್ಯ

10-07-23 12:38 pm       Mangalore Correspondent   ಕರಾವಳಿ

ಜಮ್ಮು ಕಾಶ್ಮೀರ, ಉತ್ತರಾಖಂಡ ಭಾಗದಲ್ಲಿ ಭಾರೀ ಮಳೆ ಆಗಿರುವುದರಿಂದ ಅಮರನಾಥ ಯಾತ್ರೆ ಸ್ಥಗಿತಗೊಂಡಿದ್ದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಿಂದ ತೆರಳಿದ್ದ ಸುಮಾರು 20 ಯಾತ್ರಾರ್ಥಿಗಳು ಅರ್ಧ ದಾರಿಯಲ್ಲಿ ಸಿಕ್ಕಿಬಿದ್ದಿದ್ದಾರೆ.

ಮಂಗಳೂರು, ಜುಲೈ 10: ಜಮ್ಮು ಕಾಶ್ಮೀರ, ಉತ್ತರಾಖಂಡ ಭಾಗದಲ್ಲಿ ಭಾರೀ ಮಳೆ ಆಗಿರುವುದರಿಂದ ಅಮರನಾಥ ಯಾತ್ರೆ ಸ್ಥಗಿತಗೊಂಡಿದ್ದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಿಂದ ತೆರಳಿದ್ದ ಸುಮಾರು 20 ಯಾತ್ರಾರ್ಥಿಗಳು ಅರ್ಧ ದಾರಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಮಾಹಿತಿ ಪ್ರಕಾರ, ಕರಾವಳಿಯಿಂದ ತೆರಳಿರುವ ಎಲ್ಲರೂ ಸುರಕ್ಷಿತರಾಗಿ ಸೇನಾ ಕ್ಯಾಂಪ್ ನಲ್ಲಿ ಆಶ್ರಯ ಪಡೆದಿದ್ದಾರೆ.

ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಸಂತೋಷ್ 20 ಜನರ ತಂಡದ ನೇತೃತ್ವ ವಹಿಸಿದ್ದು, ತಾವು ಸುರಕ್ಷಿತರಾಗಿದ್ದೇವೆ ಎಂದು ವಿಡಿಯೋ ಕಳುಹಿಸಿ ಊರಿಗೆ ಸಂದೇಶ ರವಾನಿಸಿದ್ದಾರೆ. ಯಾತ್ರೆ ತೆರಳುವ ಹಾದಿಯಲ್ಲಿ ಕುಸಿತ ಉಂಟಾಗಿದ್ದು, ಮುಂದಕ್ಕೆ ಹೋಗಲು ಬಾಕಿಯಾಗಿದ್ದೇವೆ. ತಂಡದಲ್ಲಿರುವ ಎಲ್ಲರೂ ಸೇನಾ ಶಿಬಿರದಲ್ಲಿ ಸುರಕ್ಷಿತವಾಗಿದ್ದೇವೆ. ಸದ್ಯ ಯಾತ್ರೆಯನ್ನು ಸ್ಥಗಿತ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಗುಡ್ಡ ಕುಸಿತ ಆಗಿರುವ ದಾರಿಯಲ್ಲಿ ಮಣ್ಣು ತೆರವು ಕಾರ್ಯ ಮಾಡುತ್ತಿದ್ದಾರೆ. ಮತ್ತಷ್ಟು ಭೂಕುಸಿತ ಆಗುವ ಸಾಧ್ಯತೆ ಇರುವುದರಿಂದ ಸೇನೆಯವರು ಯಾತ್ರಾರ್ಥಿಗಳನ್ನು ತಡೆದಿದ್ದಾರೆ. ಭಾರೀ ಭೂಕುಸಿತ ಆಗಿರುವುದರಿಂದ ಅತ್ತ ಅಮರನಾಥ ಕಡೆಗೆ ತೆರಳುವುದಕ್ಕೂ ಆಗುವುದಿಲ್ಲ. ಇತ್ತ ಮರಳಿ ಜಮ್ಮು ಕಾಶ್ಮೀರಕ್ಕೆ ಬರುವುದಕ್ಕೂ ಸಾಧ್ಯವಾಗದ ಸ್ಥಿತಿಯಿದೆ. ಸೇನಾ ಶಿಬಿರದಲ್ಲಿ ಊಟ, ಉಪಹಾರಕ್ಕೆ ವ್ಯವಸ್ಥೆ ಮಾಡಿದ್ದಾರೆ ಎಂದು ಸಂತೋಷ್ ತಿಳಿಸಿದ್ದಾರೆ.

ಇನ್ನೊಂದು ತಂಡದಲ್ಲಿ ಅಮರನಾಥಕ್ಕೆ ತೆರಳಿರುವ ಬೋಳಂತೂರು ನಿವಾಸಿ ಅಭಿಲಾಷ್ ವಿಡಿಯೋ ಸಂದೇಶ ಕಳುಹಿಸಿದ್ದು, ಸುರಕ್ಷಿತ ಆಗಿರುವ ಬಗ್ಗೆ ತಿಳಿಸಿದ್ದಾರೆ. ಸದ್ಯ ಪುರಾಣಿ ಮಂಡಿ ಆಶ್ರಮದಲ್ಲಿ ಸೇಫ್ ಆಗಿದ್ದೇವೆ. ಸೇನೆಯವರು ಅನುಮತಿ ಸಿಕ್ಕ ಕೂಡಲೇ ಅಮರನಾಥ ಯಾತ್ರೆಗೆ ದರ್ಶನ ಮಾಡಿಯೇ ಹಿಂತಿರುಗುತ್ತೇವೆ ಎಂದಿದ್ದಾರೆ. ಬಂಟ್ವಾಳದ ಸಂತೋಷ್ ನೇತೃತ್ವದಲ್ಲಿ ತೆರಳಿರುವ ತಂಡದಲ್ಲಿ 20 ಮಂದಿಯಿದ್ದು, ಬಂಟ್ವಾಳ ತಾಲೂಕಿನ 5 ಮಂದಿ, ಮಂಗಳೂರಿನ ಅಡ್ಯಾರಿನಿಂದ 8, ಪುತ್ತೂರು, ಉಡುಪಿ, ಮೂಡುಬಿದಿರೆ, ಉಪ್ಪಿನಂಗಡಿಯ ಕರಾಯದಿಂದ ತಲಾ ಒಬ್ಬರಿದ್ದಾರೆ.

20 stranded pilgrims from Dakshina kannada wait for help in Amarnath yatra camp due to landslides in Jammu and Kashmir. Amarnath pilgrimage has been stalled due to heavy rainfall and landslides in Jammu and Kashmir region. Pilgrims of Dakshina Kannada are stuck in a camp halfway on their way to the shrine.