Arun Puthila Gram Panchyath: ಪುತ್ತೂರಿನಲ್ಲಿ ಮತ್ತೆ ತೊಡೆತಟ್ಟಿದ ಪುತ್ತಿಲ ಪರಿವಾರ ; ಬಿಜೆಪಿ ವಿರುದ್ಧ ಗ್ರಾಪಂ ಚುನಾವಣೆಗೂ ‘ಬ್ಯಾಟಿಂಗ್ ’ ಖಚಿತ, ರಾಜ್ಯಾಧ್ಯಕ್ಷರ ತವರಲ್ಲಿ ನಿಲ್ಲದ ಸಮರ !

11-07-23 08:31 pm       Mangalore Correspondent   ಕರಾವಳಿ

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ತೊಡೆ ತಟ್ಟಿ ದೆಹಲಿ ಮಟ್ಟಕ್ಕೆ ಶಕ್ತಿ ತೋರಿಸಿದ್ದ ಪುತ್ತಿಲ ಪರಿವಾರದ ಕಾರ್ಯಕರ್ತರು ಈಗ ಗ್ರಾಮ ಪಂಚಾಯತ್ ಚುನಾವಣೆಗೂ ಖದರ್ ತೋರಿಸಲು ರೆಡಿಯಾಗಿದ್ದಾರೆ.

ಪುತ್ತೂರು, ಜುಲೈ 11: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ತೊಡೆ ತಟ್ಟಿ ದೆಹಲಿ ಮಟ್ಟಕ್ಕೆ ಶಕ್ತಿ ತೋರಿಸಿದ್ದ ಪುತ್ತಿಲ ಪರಿವಾರದ ಕಾರ್ಯಕರ್ತರು ಈಗ ಗ್ರಾಮ ಪಂಚಾಯತ್ ಚುನಾವಣೆಗೂ ಖದರ್ ತೋರಿಸಲು ರೆಡಿಯಾಗಿದ್ದಾರೆ. ಜುಲೈ 23ರಂದು ಪುತ್ತೂರು ತಾಲೂಕಿನಲ್ಲಿ ಎರಡು ಗ್ರಾಪಂ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದ್ದು, ಎರಡು ಕಡೆಯೂ ಪುತ್ತಿಲ ಪರಿವಾರದಿಂದ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಆಮೂಲಕ ಬಿಜೆಪಿ ವಿರುದ್ಧದ ಸಿಟ್ಟು ತಗ್ಗಿಲ್ಲ ಎನ್ನುವ ಸಂದೇಶ ರಾಜ್ಯಕ್ಕೆ ರವಾನಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಊರಿನಲ್ಲೇ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದು ಅರುಣ್ ಪುತ್ತಿಲ ಮತ್ತು ಅವರ ಕಾರ್ಯಕರ್ತರ ಪಡೆಯ ಶಕ್ತಿಯನ್ನು ತೋರಿಸಿತ್ತು. ಅರುಣ್ ಪುತ್ತಿಲ ಆಕಾಂಕ್ಷಿಯಾಗಿದ್ದರೂ ಸೈಡ್ ಲೈನ್ ಮಾಡಿ ಕ್ಷೇತ್ರದ ಹೊರಗಿನ ವ್ಯಕ್ತಿಯನ್ನು ಚುನಾವಣೆಗೆ ಅಭ್ಯರ್ಥಿಯಾಗಿಸಿದ್ದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ವಿರುದ್ಧವೇ ಕಾರ್ಯಕರ್ತರು ಸೆಟೆದು ನಿಲ್ಲುವಂತಾಗಿತ್ತು. ಆನಂತರ, ಅರುಣ್ ಪುತ್ತಿಲ ಅವರನ್ನು ದೆಹಲಿಗೆ ಕರೆದು ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮಾತುಕತೆ ನಡೆಸಿದ್ದರು. ಈ ವೇಳೆ, ಕಾರ್ಯಕರ್ತರು ನಾಯಕರಿಗೆ ಎದುರು ಬಿದ್ದಿರುವುದು, ನಳಿನ್ ಕುಮಾರ್ ಬಗ್ಗೆ ಅಸಮಾಧಾನ ಹೊಂದಿರುವ ವಿಚಾರವನ್ನು ಸಂತೋಷ್ ಗಮನಕ್ಕೆ ತಂದಿದ್ದರು.

ಒಂದೆಡೆ ಸಂತೋಷ್ ಭೇಟಿಯಾಗಿ ತಿಂಗಳು ಕಳೆದಿದ್ದರೂ ಯಾವುದೇ ಬೆಳವಣಿಗೆ ಆಗದಿರುವುದು, ಮತ್ತೊಂದೆಡೆ ಪುತ್ತೂರಿನಲ್ಲಿ ಅರುಣ್ ಪುತ್ತಿಲ ಮತ್ತು ಬೆಂಬಲಿಗರನ್ನು ಸಂಘಟನೆಯಲ್ಲಿ ಬದಿಗೆ ಸರಿಸುತ್ತಿರುವುದು ಕಾರ್ಯಕರ್ತರನ್ನು ಕೆರಳಿಸಿದೆ. ಇತ್ತೀಚೆಗೆ ಆರೆಸ್ಸೆಸ್ ಮತ್ತು ಸಂಘ ಪರಿವಾರ ನಡೆಸಿಕೊಂಡು ಬಂದಿದ್ದ ಪುತ್ತೂರಿನ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸ್ಥಾನದಿಂದ ಅರುಣ್ ಪುತ್ತಿಲ ಹೆಸರನ್ನು ಹೊರಗಿಡಲಾಗಿತ್ತು. ಅಲ್ಲದೆ, ಗಣೇಶೋತ್ಸವಕ್ಕೆ ದೊಡ್ಡ ರೀತಿಯ ಕೊಡುಗೆ ನೀಡುತ್ತಿದ್ದ ಉದ್ಯಮಿ ಶಶಾಂಕ್ ಕೊಟೇಚಾರನ್ನೂ ಪುತ್ತಿಲ ಜೊತೆಗಿದ್ದಾರೆಂದು ಸಮಿತಿಯಿಂದ ಹೊರಗೆ ಇರಿಸಲಾಗಿತ್ತು. ಇದಕ್ಕೆ ಪರ್ಯಾಯವಾಗಿ ಪ್ರತ್ಯೇಕ ಗಣೇಶೋತ್ಸವ ಮಾಡುವುದಕ್ಕೂ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.

ಇದೀಗ ಆರ್ಯಾಪು ಮತ್ತು ನಿಡ್ಪಳ್ಳಿ ಗ್ರಾಪಂ ಉಪ ಚುನಾವಣೆ ಘೋಷಣೆ ಆಗುತ್ತಿದ್ದಂತೆ, ಪುತ್ತಿಲ ಪರಿವಾರದಿಂದ ಪ್ರತ್ಯೇಕ ಅಭ್ಯರ್ಥಿ ಕಣಕ್ಕಿಳಿಸಿರುವುದು ಬಿಜೆಪಿ ವಿರುದ್ಧ ಮತ್ತೆ ತೊಡೆ ತಟ್ಟುವ ಸೂಚನೆ ಸಿಕ್ಕಂತಾಗಿದೆ. ನಿಡ್ಪಳ್ಳಿ ಗ್ರಾಪಂ ಕಚೇರಿಯಲ್ಲಿ ಪುತ್ತಿಲ ಪರಿವಾರದ ಅಭ್ಯರ್ಥಿಯಾಗಿ ಜಗನ್ನಾಥ್ ರೈ ಮತ್ತು ಆರ್ಯಾಪು ಗ್ರಾಪಂ ಕಚೇರಿಯಲ್ಲಿ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ, ಹತ್ತಾರು ಮಂದಿ ಪುತ್ತಿಲ ಪರಿವಾರದ ಪ್ರಮುಖರು ಸಾಥ್ ನೀಡಿದ್ದಾರೆ. ಇವೆರಡೂ ಬಿಜೆಪಿ ಪ್ರಾಬಲ್ಯದ ಕ್ಷೇತ್ರಗಳಾಗಿದ್ದು, ಪಕ್ಷದಿಂದಲೂ ಅಧಿಕೃತ ಅಭ್ಯರ್ಥಿಗಳನ್ನು ಹಾಕಲಾಗಿದೆ. ಆದರೆ ಪುತ್ತಿಲ ಪರಿವಾರ ಹಳೆಯ ಬ್ಯಾಟನ್ನು ಮತ್ತೆ ಕೈಗೆತ್ತಿಕೊಂಡು ಸ್ಪರ್ಧಿಸಿದಲ್ಲಿ ಫಲಿತಾಂಶದ ದಿಕ್ಕು ಬುಡಮೇಲಾಗಲಿದೆ.

ಮುಯ್ಯಿಗೆ ಮುಯ್ಯಿ ಎನ್ನುವ ರೀತಿಯ ನಡೆಯನ್ನು ಪುತ್ತಿಲ ಪರಿವಾರದ ಕಾರ್ಯಕರ್ತರು ಅನುಸರಿಸುತ್ತಿದ್ದಾರೆ. ತಮ್ಮನ್ನು ಕಡೆಗಣಿಸಿದಲ್ಲಿ ಶಕ್ತಿ ತೋರಿಸುತ್ತೇವೆ ಎನ್ನುವ ರೀತಿ ವರ್ತಿಸುತ್ತಿರುವುದು ದಕ್ಷಿಣ ಕನ್ನಡ ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗಿದೆ. ವಿಧಾನಸಭೆ ಚುನಾವಣೆ ಮುಗಿದು ಎರಡು ತಿಂಗಳು ಕಳೆದರೂ, ಪುತ್ತಿಲ ಪರಿವಾರದ ಖದರ್ ಕಡಿಮೆಯಾಗಿಲ್ಲ. ಇದಲ್ಲದೆ, ಅರುಣ್ ಪುತ್ತಿಲ ಜಿಲ್ಲೆಯಾದ್ಯಂತ ಸಂಚರಿಸುತ್ತಿದ್ದು, ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಲೋಕಸಭೆಗೆ ಬಿಜೆಪಿಯಿಂದ ಅರುಣ್ ಪುತ್ತಿಲರನ್ನೇ ಕಣಕ್ಕಿಳಿಸಬೇಕೆಂದು ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ. ಹಾಲಿ ಸಂಸದರ ವಿರುದ್ಧ ಜಿಲ್ಲೆಯ ಕಾರ್ಯಕರ್ತರಲ್ಲಿಯೇ ಅಸಮಾಧಾನ ಎದ್ದಿರುವುದರಿಂದ ಅರುಣ್ ಪುತ್ತಿಲರನ್ನು ಲೋಕಸಭೆ ಚುನಾವಣೆಗೆ ಪರಿಗಣಿಸುತ್ತಾರೆಯೇ ಎನ್ನುವ ಕುತೂಹಲಕ್ಕೀಡು ಮಾಡಿದೆ.

Arun Puthila to contest for Gram Panchayat elections against BJP in Puttur, Pic with KL Santosh goes viral. Puthila and team is under preparation to contest for elections on July.