ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ; ತಲೆಮರೆಸಿಕೊಂಡ ಆರೋಪಿಗಳಿಗೆ ಮತ್ತೊಂದು ಗಡುವು, ಎನ್ಐಎ ಟಾರ್ಗೆಟ್ ಆಗಸ್ಟ್ 18 ! 

16-07-23 04:11 pm       Mangalore Correspondent   ಕರಾವಳಿ

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡ ಆರೋಪಿಗಳ ಪತ್ತೆಗಾಗಿ ಮತ್ತೆ ಎನ್ಐಎ ಅಧಿಕಾರಿಗಳು ಎಚ್ಚರಿಕೆ ನೀಡಿದ್ದು ಕೋರ್ಟಿಗೆ ಶರಣಾಗಲು ಆಗಸ್ಟ್ 18ರ ಗಡುವು ನೀಡಿದ್ದಾರೆ. ‌

ಮಂಗಳೂರು, ಜುಲೈ 16: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡ ಆರೋಪಿಗಳ ಪತ್ತೆಗಾಗಿ ಮತ್ತೆ ಎನ್ಐಎ ಅಧಿಕಾರಿಗಳು ಎಚ್ಚರಿಕೆ ನೀಡಿದ್ದು ಕೋರ್ಟಿಗೆ ಶರಣಾಗಲು ಆಗಸ್ಟ್ 18ರ ಗಡುವು ನೀಡಿದ್ದಾರೆ. ‌

ಆಗಸ್ಟ್ 18 ರೊಳಗೆ ಬೆಂಗಳೂರಿನ ಎನ್ಐಎ ಕೋರ್ಟಿಗೆ ಶರಣಾಗುವಂತೆ ಸೂಚಿಸಿ ಎನ್ಐಎ ಅಧಿಕಾರಿಗಳು ಆರೋಪಿಗಳ ಮನೆ ಗೋಡೆ, ಸಾರ್ವಜನಿಕ ಪ್ರದೇಶದಲ್ಲಿ ವಾರಂಟ್ ನೋಟಿಸ್ ಅಂಟಿಸಿದ್ದಾರೆ. ಸುಳ್ಯದ ಆಸುಪಾಸು ಮತ್ತು ಬೆಳ್ಳಾರೆಯಲ್ಲಿರುವ ಆರೋಪಿಗಳ ಮನೆಗಳಿಗೆ ಅಧಿಕಾರಿಗಳು ಭೇಟಿ ನೀಡಿದ್ದು ಕೋರ್ಟ್ ವಾರಂಟ್ ಬಗ್ಗೆ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಸ್ಥಳೀಯ ಪೊಲೀಸರ ನೆರವಿನಲ್ಲಿ ಆಗಸ್ಟ್ 18ರೊಳಗೆ ಕೋರ್ಟಿಗೆ ಶರಣಾಗಲು ಧ್ವನಿ ವರ್ಧಕದ ಮೂಲಕ ಪ್ರಕಟಣೆ ನೀಡಿದ್ದಾರೆ. 

ಈ ಹಿಂದೆ ಜೂನ್ 30ರ ಒಳಗೆ ಕೋರ್ಟಿಗೆ ಶರಣಾಗದಿದ್ದರೆ ಆರೋಪಿಗಳ ಮನೆ, ಆಸ್ತಿ ಮುಟ್ಟುಗೋಲು ಹಾಕುವುದಾಗಿ ಎನ್ಐಎ ಎಚ್ಚರಿಕೆ ನೀಡಿತ್ತು. ಅಲ್ಲದೆ, ಆರೋಪಿಗಳು ಎಲ್ಲಿದ್ದಾರೆಂದು ಸುಳಿವು ಕೊಟ್ಟವರಿಗೆ ನಗದು ಬಹುಮಾನದ ಘೋಷಣೆ ನೀಡಿದ್ದಾರೆ. 

ಎಫ್ಐಆರ್ ನಲ್ಲಿ ಗುರುತಿಸಲ್ಪಟ್ಟ ಆರೋಪಿಗಳಾದ ಮುಸ್ತಫಾ ಪೈಚಾರ್, ಅಬುಬಕ್ಕರ್ ಸಿದ್ದಿಕ್, ಉಮ್ಮರ್ ಫಾರುಕ್, ಕೋಡಾಜೆ ಮಹಮ್ಮದ್ ಶರೀಫ್, ಮಸೂದ್ ಅಗ್ನಾಡಿ ಎಂಬವರ ಪತ್ತೆಗಾಗಿ ಮತ್ತೊಂದು ಗಡುವು ನೀಡಿದ್ದಾರೆ. ‌ಈ ಹಿಂದಿನ ಗಡುವು ಕಳೆದರೂ ಆರೋಪಿಗಳ ಸುಳಿವು ಸಿಗದೇ ಇದ್ದುದರಿಂದ ಆ ಪೈಕಿ ಕೆಲವರು ವಿದೇಶಕ್ಕೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿತ್ತು. ಇದೀಗ ಗಡುವು ವಿಸ್ತರಿಸಲಾಗಿದ್ದು ಆಸ್ತಿ ಮುಟ್ಟುಗೋಲು ಹಾಕಲು ತಯಾರಿ ನಡೆಸಿದ್ಯಾ ಎನ್ನುವ ಅನುಮಾನ ಹುಟ್ಟಿಸಿದೆ.

Final calling for accused of Praveen Nettaru by NIA in Sullia.