Mangalore Traffic Police, Rto DL cancel: ರಸ್ತೆ ನಿಯಮ ಉಲ್ಲಂಘನೆ ; 14 ದಿನಗಳಲ್ಲಿ 222 ಮಂದಿಗೆ ಡಿಎಲ್ ಕ್ಯಾನ್ಸಲ್ ಶಿಫಾರಸು, ರೂಲ್ಸ್ ಪಾಲನೆ ಮಾಡದಿದ್ದಲ್ಲಿ ಗದಾಪ್ರಹಾರ !

27-07-23 10:37 pm       Mangalore Correspondent   ಕರಾವಳಿ

ರಸ್ತೆ ಸುರಕ್ಷತಾ ನಿಯಮಗಳನ್ನು ಅನುಸರಿಸದೆ ಅಜಾಗ್ರತೆಯಿಂದ ವಾಹನ ಚಲಾಯಿಸುವವರಿಗೆ ಗದಾ ಪ್ರಹಾರ ಮಾಡಲು ಮಂಗಳೂರು ಕಮಿಷನರ್ ಕುಲದೀಪ್ ಜೈನ್ ಮುಂದಾಗಿದ್ದಾರೆ.

ಮಂಗಳೂರು, ಜುಲೈ 27: ರಸ್ತೆ ಸುರಕ್ಷತಾ ನಿಯಮಗಳನ್ನು ಅನುಸರಿಸದೆ ಅಜಾಗ್ರತೆಯಿಂದ ವಾಹನ ಚಲಾಯಿಸುವವರಿಗೆ ಗದಾ ಪ್ರಹಾರ ಮಾಡಲು ಮಂಗಳೂರು ಕಮಿಷನರ್ ಕುಲದೀಪ್ ಜೈನ್ ಮುಂದಾಗಿದ್ದಾರೆ. ಮೊನ್ನೆಯಷ್ಟೇ ಮೊಬೈಲ್ ನೋಡುತ್ತ ನಿರ್ಲಕ್ಷ್ಯದಿಂದ ಬಸ್ ಚಲಾಯಿಸಿದ ಚಾಲಕನ ಲೈಸನ್ಸ್ ರದ್ದುಪಡಿಸಲು ಆರ್ ಟಿಓಗೆ ಶಿಫಾರಸು ಮಾಡಿದ್ದರು. ಇದರ ಬೆನ್ನಲ್ಲೇ ಕೇವಲ 14 ದಿನಗಳ ಅವಧಿಯಲ್ಲಿ ರಸ್ತೆ ನಿಮಯ ಉಲ್ಲಂಘಿಸಿದ 222 ಮಂದಿಗೂ ಕಠಿಣ ಸಂದೇಶ ರವಾನಿಸಿದ್ದಾರೆ.

ಭಾರತೀಯ ಮೋಟಾರು ವಾಹನ ಕಾಯ್ದೆ ಪ್ರಕಾರ ರಸ್ತೆ ನಿಮಯಗಳನ್ನು ಉಲ್ಲಂಘಿಸಿದಲ್ಲಿ ಚಾಲನಾ ಪರವಾನಗಿ ರದ್ದುಪಡಿಸಲು ಅವಕಾಶ ಇರುತ್ತದೆ. ಇದೇ ನಿಯಮದಡಿ ಜುಲೈ 13ರಿಂದ 26ರ ವರೆಗಿನ ಅವಧಿಯಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ಒಟ್ಟು 222 ಮಂದಿ ಚಾಲನಾ ಪರವಾನಗಿ ರದ್ದುಪಡಿಸಲು ಆರ್ಟಿಓಗೆ ಪೊಲೀಸರು ಶಿಫಾರಸು ಮಾಡಿದ್ದಾರೆ.

ಈ ಪೈಕಿ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯ ಕಾರಣಕ್ಕೆ ಕೇಸು ಹಾಕಿಸಿಕೊಂಡ 113 ಮಂದಿ ಇದ್ದಾರೆ. ಕುಡಿದು ವಾಹನ ಚಲಾಯಿಸಿದ ಒಬ್ಬರಿದ್ದಾರೆ. ಗೂಡ್ಸ್ ವಾಹನದಲ್ಲಿ ಪ್ರಯಾಣಿಕರನ್ನು ಒಯ್ದಿರುವ ಬಗ್ಗೆ 16 ಪ್ರಕರಣಗಳಿವೆ. ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡಿದ ನಾಲ್ಕು ಪ್ರಕರಣ ಇದೆ. ರೆಡ್ ಸಿಗ್ನಲ್ ಜಂಪ್ ಮಾಡಿರುವ 5 ಪ್ರಕರಣಗಳಿವೆ. ಟ್ಯಾಕ್ಸಿ ವಾಹನಗಳಲ್ಲಿ ನಿಗದಿಗಿಂತ ಹೆಚ್ಚು ಪ್ರಯಾಣಿಕರನ್ನು ಒಯ್ದಿರುವ 4 ಪ್ರಕರಣ, ತ್ರಿಬಲ್ ರೈಡಿಂಗ್ ಮೂರು ಕೇಸು, ಹೆಲ್ಮೆಟ್ ರಹಿತ ದ್ವಿಚಕ್ರ ವಾಹನ ಚಾಲನೆ ಮಾಡಿದ 59 ಪ್ರಕರಣಗಳಿದ್ದು, ಸೀಟ್ ಬೆಲ್ಟ್ ಇಲ್ಲದೆ ಕಾರು ಚಲಾಯಿಸಿದ 17 ಪ್ರಕರಣ ಇದೆ. 14 ದಿನಗಳ ಅವಧಿಯಲ್ಲಿ ಒಟ್ಟು ದಾಖಲಾಗಿರುವ ಎಲ್ಲ ಪ್ರಕರಣಗಳಲ್ಲಿಯೂ ಚಾಲನಾ ಪರವಾನಗಿ ರದ್ದುಪಡಿಸಲು ಸಂಚಾರಿ ಪೊಲೀಸರು ಆರ್ಟಿಓಗೆ ಬರೆಯಲು ಮುಂದಾಗಿದ್ದಾರೆ.

ಈ ಬಗ್ಗೆ ಕಮಿಷನರ್ ಕುಲದೀಪ್ ಜೈನ್ ಬಳಿ ಮಾಹಿತಿ ಕೇಳಿದಾಗ, ವಾಹನ ಸವಾರರು ರಸ್ತೆ ನಿಮಯ ಉಲ್ಲಂಘನೆಯನ್ನು ಮಾಡುತ್ತಲೇ ಇರುತ್ತಾರೆ. ಇನ್ನಾದ್ರೂ ಸ್ವಲ್ಪ ಜಾಗ್ರತೆ ವಹಿಸಬೇಕು. ಕಾಯ್ದೆ ಪ್ರಕಾರ, ಡ್ರೈವಿಂಗ್ ಲೈಸನ್ಸ್ ರದ್ದುಪಡಿಸಲು ಅವಕಾಶ ಇರುತ್ತದೆ. ನಾವು ಆರ್ಟಿಓಗೆ ಬರೆಯುತ್ತೇವೆ, ಅವರು ಆಯಾ ವ್ಯಕ್ತಿಗಳಿಗೆ ನೋಟೀಸ್ ಕೊಟ್ಟು ಹಾಜರಾಗದಿದ್ದಲ್ಲಿ ಡಿಎಲ್ ಕ್ಯಾನ್ಸಲ್ ಆರ್ಡರ್ ಮಾಡುತ್ತಾರೆ. ನಾವೇ ಡೈರೆಕ್ಟ್ ಆಗಿ ಮಾಡಲು ಬರುವುದಿಲ್ಲ ಎಂದು ಹೇಳಿದ್ದಾರೆ.

222 driving license to be canceled by RTO for breaking traffic rules in Mangalore. Offenders like not wearing helmet, traffic single jumping, use of mobile phones are considered in this case. 222 cases are booked in just span of 14 days.