ದಕ್ಷಿಣ ಕನ್ನಡ ; ನಾಟಕ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಷರತ್ತಿನ ಅನುಮತಿ

06-11-20 06:25 pm       Mangalore Correspondent   ಕರಾವಳಿ

ಕೊರೊನಾ ನಿರ್ಬಂಧಗಳ ನಡುವೆ ನಾಟಕ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬೇಕೆಂಬ ನಾಟಕ ಕಲಾವಿದರ ಸಂಘದ ಮನವಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸ್ಪಂದಿಸಿದ್ದಾರೆ.  

ಮಂಗಳೂರು, ನವೆಂಬರ್ 06: ಕೊರೊನಾ ನಿರ್ಬಂಧಗಳ ನಡುವೆ ನಾಟಕ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬೇಕೆಂಬ ನಾಟಕ ಕಲಾವಿದರ ಸಂಘದ ಮನವಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸ್ಪಂದಿಸಿದ್ದಾರೆ.  ಸರಕಾರದ ಮಾರ್ಗಸೂಚಿ ಅನ್ವಯ ನಾಟಕ ಆರಂಭಕ್ಕೆ ಅನುಮತಿ ನೀಡುವುದಾಗಿ ಹೇಳಿದ್ದಾರೆ. 

ಕೊರೊನಾ ಕಾರಣದಿಂದ ಕಳೆದೊಂದು ವರ್ಷದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಂಸ್ಕೃತಿಕ ಮತ್ತು ಜನಪದ ಕಾರ್ಯಕ್ರಮಗಳು ಸಂಪೂರ್ಣ ಸ್ಥಗಿತಗೊಂಡಿತ್ತು. ಹೀಗಾಗಿ ಕಲಾವಿದರಿಗೆ ದೈನಂದಿನ ಜೀವನ ಸಾಗಿಸಲು ಕಷ್ಟವಾಗಿತ್ತು. ಕರಾವಳಿ ಜಿಲ್ಲೆಯಲ್ಲಿ ಸುಮಾರು 50ಕ್ಕಿಂತಲೂ ಹೆಚ್ಚಿನ ವೃತ್ತಿಪರ ನಾಟಕ ತಂಡಗಳಿವೆ. ನಾಟಕಗಳಲ್ಲಿ ದುಡಿಯುವ ಹೆಚ್ಚಿನ ರಂಗ ಕಲಾವಿದರು ಕಲೆಯನ್ನೇ ಜೀವನದ ವೃತ್ತಿಯನ್ನಾಗಿಸಿದ್ದು, ಕಲಾವಿದರಿಗೆ ಬೇರೆ ಆದಾಯದ ಮೂಲಗಳಿರುವುದಿಲ್ಲ. ಈ ಹಿನ್ನೆಲೆಯಲ್ಲಿ ನಾಟಕ ಕಲಾವಿದರ ಸಂಘವು ಜಿಲ್ಲಾಧಿಕಾರಿಯವರನ್ನು ಭೇಟಿ ‌ಮಾಡಿ ಮನವಿ ಸಲ್ಲಿಸಿತ್ತು‌. 

ಮನವಿ ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ, ಸರಕಾರದ ಸುತ್ತೋಲೆಯಂತೆ ಎಲ್ಲಾ ವಿಧದ ಮನೋರಂಜನಾ ಕಾರ್ಯಕ್ರಮಗಳಿಗೆ ಷರತ್ತಿನ ಆಧಾರದಲ್ಲಿ ಅನುಮತಿ ನೀಡುವುದಾಗಿ ತಿಳಿಸಿದ್ದಾರೆ ಎಂದು ಕರಾವಳಿ ಕರ್ನಾಟಕ ರಂಗ ಕಲಾವಿದರ  ಸೇವಾ  ಪರಿಷತ್ತು (ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆ) ಅಧ್ಯಕ್ಷ ಮೋಹನ್ ದಾಸ್ ಕೊಟ್ಟಾರಿ ತಿಳಿಸಿದ್ದಾರೆ. ‌

ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ರಾಜೇಶ್ ಕಣ್ಣೂರು, ಗೌರವ ಸಲಹೆಗಾರ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಸ್ಥಾಪಕ ಸದಸ್ಯರು ರಮೇಶ್ ರೈ ಕುಕ್ಕುವಳ್ಳಿ, ಚಿದಾನಂದ ಅದ್ಯಪಾಡಿ, ನ್ಯಾಯವಾದಿ ಮೋಹನ್ ದಾಸ್ ರೈ, ಕೀತ್ ಪುರ್ತಾಡೊ, ಚಲನಚಿತ್ರ ನಿರ್ದೇಶಕ ವಿಶ್ವನಾಥ್ ಕೋಡಿಕಲ್  ಹಾಗೂ ನ್ಯಾಯವಾದಿ ರಿತೇಶ್  ಬಂಗೇರ ಉಪಸ್ಥಿತರಿದ್ದರು.

The Mangalore DC has given permission to hold Drama and Cultural Activities with certain guidelines here on Nov 6, 2020.