ಅಮೆರಿಕದ ಸಂಸತ್ತಿಗೆ ಆಯ್ಕೆಯಾಗಲು ಕುಕ್ಕೆ ಸುಬ್ರಹ್ಮಣ್ಯನಿಗೆ ಹರಕೆ !

07-11-20 03:57 pm       Mangalore Correspondent   ಕರಾವಳಿ

ಅಮೆರಿಕದ ಸಂಸತ್ತಿಗೆ ಸೆನೆಟ್ ಸದಸ್ಯರಾಗಿ ಆಯ್ಕೆಯಾದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ಹರಕೆ ಸಲ್ಲಿಸಿದ್ದಾರೆ. 

ಸುಳ್ಯ, ನವೆಂಬರ್ 07: ಅಮೆರಿಕದ ಅಧ್ಯಕ್ಷರ ಹುದ್ದೆಯ ಆಯ್ಕೆಗೆ ಭಾರೀ ಸೆಣಸಾಟ ನಡೆಯುತ್ತಿದೆ. ಈ ಮಧ್ಯೆ ಅಮೆರಿಕದ ಸಂಸತ್ತಿಗೆ ಸೆನೆಟ್ ಸದಸ್ಯರಾಗಿ ಆಯ್ಕೆಯಾದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ಹರಕೆ ಸಲ್ಲಿಸಿದ್ದಾರೆ. 

ಅಮೆರಿಕದಲ್ಲಿ ವಕೀಲರಾಗಿರುವ, ನವದೆಹಲಿ ಮೂಲದ ರಾಜಾ ಕೃಷ್ಣಮೂರ್ತಿಯವರು 2016 ರಲ್ಲಿ ಮೊದಲ ಬಾರಿಗೆ ಅಮೆರಿಕ ಸಂಸತ್ತಿಗೆ ಆಯ್ಕೆಯಾಗಿದ್ದರು. ಬಳಿಕ ಕಳೆದ ವರ್ಷ ತನ್ನ ತಾಯಿ ವಿಜಯಾ ಕೃಷ್ಣಮೂರ್ತಿ ಜತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿ ನಾಗಪ್ರತಿಷ್ಠೆ ಹಾಗೂ ಪಂಚಾಮಾಭಿಷೇಕ ಸೇವೆ ಪೂರೈಸಿದರು.

ಈ ಬಾರಿ ಸೆನೆಟ್ ಪ್ರತಿನಿಧಿಯ ಚುನಾವಣೆಗೆ ಸ್ಪರ್ಧಿಸಿದ್ದ ವೇಳೆ ಬೆಂಗಳೂರು ಮೂಲದ ಜ್ಯೋತಿಷಿ, ಅಮೆರಿಕದ ಚಿಕಾಗೋದಲ್ಲಿ ಹಿಂದೂ ದೇವಸ್ಥಾನ ಒಂದರಲ್ಲಿ ಅರ್ಚಕರಾಗಿರುವ ಪುರೋಹಿತ ನಾಗೇಂದ್ರ ರಾವ್ ಸಲಹೆಯಂತೆ ಸುಬ್ರಹ್ಮಣ್ಯ ದೇವರಿಗೆ ಹರಕೆ ಹೊತ್ತುಕೊಂಡಿದ್ದರು. ಇದೀಗ ಚುನಾವಣೆಯಲ್ಲಿ ಗೆದ್ದ ಬಳಿಕ ಹರಕೆ ಈಡೇರಿಸಲು ಕ್ಷೇತ್ರಕ್ಕೆ ಬಂದಿರುವುದಾಗಿ ರಾಜಾ ಕೃಷ್ಣಮೂರ್ತಿ ಹೇಳಿದ್ದಾರೆ.

ಭೇಟಿ ಸಂದರ್ಭ ದೇಗುಲದ ಶಿಷ್ಟಾಚಾರ ಅಧಿಕಾರಿ ಗೋಪಿನಾಥ ನಂಬೀಶರು ಮಾರ್ಗದರ್ಶನ ನೀಡಿದರು. ಈ ಗೆಲುವಿನಲ್ಲಿ ದೇವರ ದಯೆಯೂ ಇದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಭಕ್ತನಾಗಿರುವ ಅವರು ಪ್ರತಿಕ್ರಿಯಿಸಿದ್ದಾರೆ.

America Democratic Party Senate Member Raja Krishnamoorthi visited Kukke Subramanya Temple, Mangalore to offer special pooja.