ಬಂಟ್ವಾಳ ಪುರಸಭೆ ; ಫಲ ನೀಡದ ಬಿಜೆಪಿ ಕಸರತ್ತು , ಕಾಂಗ್ರೆಸ್ ಕೈ ಹಿಡಿದ ಎಸ್ಡಿಪಿಐ !

07-11-20 06:02 pm       Mangalore Correspondent   ಕರಾವಳಿ

ಬಂಟ್ವಾಳ ಪುರಸಭೆಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ನಡೆಸಿದ ಕಸರತ್ತು ಫಲ ನೀಡಲಿಲ್ಲ. ಕಾಂಗ್ರೆಸ್ ಪಕ್ಷದ ಮುಹಮ್ಮದ್ ಶರೀಫ್ ಅಧ್ಯಕ್ಷರಾಗಿ ಮತ್ತು  ಜೆಸಿಂತಾ ಡಿಸೋಜ ಉಪಾಧ್ಯಕ್ಷೆಯಾಗಿ  ಆಯ್ಕೆಯಾಗಿದ್ದಾರೆ.

ಬಂಟ್ವಾಳ, ನವೆಂಬರ್ 7: ಭಾರೀ ಕುತೂಹಲ ಮೂಡಿಸಿದ್ದ ಬಂಟ್ವಾಳ ಪುರಸಭೆಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ನಡೆಸಿದ ಕಸರತ್ತು ಫಲ ನೀಡಲಿಲ್ಲ. ಕೊನೆಕ್ಷಣದಲ್ಲಿ ಕಾಂಗ್ರೆಸ್, ಎಸ್ ಡಿಪಿಐ ಪಕ್ಷದ ಬೆಂಬಲ ಪಡೆದು ಪುರಸಭೆಯ ಅಧಿಕಾರ ಗಿಟ್ಟಿಸಿಕೊಂಡಿದೆ.‌ 

ಕಾಂಗ್ರೆಸ್ ಪಕ್ಷದ ಮುಹಮ್ಮದ್ ಶರೀಫ್ ಅಧ್ಯಕ್ಷರಾಗಿ ಮತ್ತು  ಜೆಸಿಂತಾ ಡಿಸೋಜ ಉಪಾಧ್ಯಕ್ಷೆಯಾಗಿ  ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷೆ ಸ್ಥಾನ ಹಿಂದುಳಿದ ವರ್ಗ ಬಿ ಮಹಿಳೆಗೆ ಮೀಸಲಾಗಿತ್ತು. ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಸದಸ್ಯ ಗೋವಿಂದ ಪ್ರಭು ನಾಮಪತ್ರ ಸಲ್ಲಿಸಿದ್ದರೆ, ಉಪಾಧ್ಯಕ್ಷೆ ಸ್ಥಾನಕ್ಕೆ ಮೀನಾಕ್ಷಿ ಗೌಡ ನಾಮಪತ್ರ ಸಲ್ಲಿಸಿದ್ದರು. ಎಸ್ ಡಿಪಿಐನಿಂದ ಆರಂಭದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮುನೀಶ್ ಅಲಿ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಬೇಕಾದ ಅರ್ಹ ಅಭ್ಯರ್ಥಿ ಎಸ್.ಡಿ.ಪಿ.ಐ. ಬಳಿ ಇರಲಿಲ್ಲ. ಕಾಂಗ್ರೆಸ್ 12 ಸ್ಥಾನ, ಬಿಜೆಪಿ 11 ಹಾಗೂ ಎಸ್ ಡಿಪಿಐ 4 ಸ್ಥಾನಗಳನ್ನು ಪಡೆದಿದ್ದವು. ಸ್ಥಳೀಯ ಶಾಸಕ ಮತ್ತು ಸಂಸದರಿಗೆ ಮತ ಚಲಾಯಿಸುವ ಅರ್ಹತೆ ಇದ್ದುದರಿಂದ ಬಿಜೆಪಿ 13 ಸ್ಥಾನಗಳನ್ನು ಪಡೆದು ಅಧಿಕಾರ ಗಳಿಸುವ ವಿಶ್ವಾಸದಲ್ಲಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಎಸ್.ಡಿ.ಪಿ.ಐ. ಅಭ್ಯರ್ಥಿ ಮುನೀಶ್ ಅಲಿ ನಾಮಪತ್ರ ವಾಪಸ್ ಪಡೆದು ಕಾಂಗ್ರೆಸಿಗೆ ಬೆಂಬಲ ಘೋಷಿಸಿದರು. 

ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಾಗ, ಕಾಂಗ್ರೆಸ್ ಪರವಾಗಿ 12 ಸದಸ್ಯರು ಮತ್ತು ಎಸ್ ಡಿಪಿಐನ  4 ಸದಸ್ಯರು ಒಟ್ಟು 16 ಮತಗಳೊಂದಿಗೆ ಮುಹಮ್ಮದ್ ಶರೀಫ್ ಅಧ್ಯಕ್ಷರಾಗಿ ಮತ್ತು ಜೆಸಿಂತಾ ಡಿಸೋಜ ಉಪಾಧ್ಯಕ್ಷರಾಗಿ ಆಯ್ಕೆಯಾದರು. 

ಬಿಜೆಪಿಯ 11 ಸದಸ್ಯರು ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಮತ್ತು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ‌ ಮತಗಳು ಸೇರಿ ಬಿಜೆಪಿ ಅಭ್ಯರ್ಥಿಗಳಿಗೆ 13 ಮತಗಳು ಚಲಾವಣೆಯಾದವು. ಚುನಾವಣಾ ಅಧಿಕಾರಿಯಾಗಿ ಬಂಟ್ವಾಳ ತಹಶಿಲ್ದಾರ್ ಎಸ್.ಆರ್.ರಶ್ಮಿ ಕರ್ತವ್ಯ ನಿರ್ವಹಿಸಿದರು.

Congress attains victory in Bantwal Town Municipality Elections that was held here on 7 November, Saturday 2020.