ಕಟೀಲು ದೇಗುಲದ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತಿನವರಲ್ಲ, ಅವರಿಗೆ ಮೊಕ್ತೇಸರನಾಗುವ ಅರ್ಹತೆ ಇಲ್ಲ ; ಸಿವಿಲ್ ಕೋರ್ಟ್ ತೀರ್ಪು

31-08-23 09:04 pm       Mangalore Correspondent   ಕರಾವಳಿ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಮೊಕ್ತೇಸರನಾಗಿರುವ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತಿಗೆ ಸಂಬಂಧಪಟ್ಟವರಲ್ಲ.

ಮಂಗಳೂರು, ಆಗಸ್ಟ್ 31: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಮೊಕ್ತೇಸರನಾಗಿರುವ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತಿಗೆ ಸಂಬಂಧಪಟ್ಟವರಲ್ಲ. ಅವರು ಪುತ್ತಿಗೆ ಗುತ್ತಿನವರಾಗಿದ್ದು, ಕೊಡೆತ್ತೂರು ಗುತ್ತಿನವರೆಂದು ಹೇಳಿಕೊಂಡು ಕಟೀಲು ದೇಗುಲದ ಮೊಕ್ತೇಸರ ಹುದ್ದೆಯನ್ನು ಪಡೆದಿದ್ದಾರೆ. ಅಳಿಯ ಸಂತಾನ ಪದ್ಧತಿಯಂತೆ ಕೊಡೆತ್ತೂರು ಗುತ್ತಿಗೆ ಸಂಬಂಧಪಟ್ಟವರೇ ಮೊಕ್ತೇಸರ ಹುದ್ದೆಯನ್ನು ಪಡೆಯಬೇಕೆಂದು ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯ ತೀರ್ಪು ನೀಡಿದೆ.

ಈ ಬಗ್ಗೆ ಕೊಡೆತ್ತೂರು ಗುತ್ತಿಗೆ ಸಂಬಂಧಪಟ್ಟ ಪ್ರಮುಖರು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ್ದು, ಕೊಡೆತ್ತೂರು ಗುತ್ತಿನ ಕುಟುಂಬದ ಹಿರಿಯರಿಗೆ ಕಟೀಲು ದೇಗುಲದ ಆನುವಂಶಿಕ ಮೊಕ್ತೇಸರ ಆಡಳಿತ ಟ್ರಸ್ಟಿಯಾಗುವ ಹಕ್ಕು ಇರುತ್ತದೆ ಎಂದು ತಿಳಿಸಿದ್ದಾರೆ. ಅರುಣ್ ಕುಮಾರ್ ಶೆಟ್ಟಿ ಮಾತನಾಡಿ, ಈ ಹಿಂದೆ ನಮ್ಮ ಗುತ್ತಿನ ಹಿರಿಯರಾದ ದಿ. ಕೊಡೆತ್ತೂರು ಗುತ್ತು ಪಟೇಲ್ ಕುಂಜಪ್ಪ ಶೆಟ್ಟಿ ಮೊಕ್ತೇಸರ ಆಗಿದ್ದರು. ಅವರ ಪತ್ನಿಯಾಗಿ ಪುತ್ತಿಗೆ ಗುತ್ತಿನ ಪೂವಕ್ಕ ಶೆಡ್ತಿ ಇದ್ದರು. ಅವರ ಮಕ್ಕಳ ಪೈಕಿ ಅಂತಕ್ಕೆ ಎಂಬವರು ಕಿರಿಯ ಮಗಳಾಗಿದ್ದರು. ಅಂತಕ್ಕೆಯವರ ಮಗಳು ಲಕ್ಷ್ಮಣಿಯವರ ಮಗ ಈಗಿನ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿಯಾಗಿದ್ದಾರೆ. ಕುಂಜಪ್ಪ ಶೆಟ್ಟಿಯವರ ಬಳಿಕ ಮೂರು ತಲೆಮಾರು ಬದಲಾಗಿದ್ದು ಸನತ್ ಕುಮಾರ್ ಶೆಟ್ಟಿ ಪುತ್ತಿಗೆ ಗುತ್ತಿಗೆ ಸೇರಿದವರು. ಅವರ ತಾಯಿ, ಅಜ್ಜಿ ಸೇರಿದಂತೆ ಎಲ್ಲರೂ ಪುತ್ತಿಗೆ ಗುತ್ತಿನವರೆಂದು ನ್ಯಾಯಾಲಯದಲ್ಲಿ ಸಾಬೀತಾಗಿದೆ.

ಆದರೆ ಸನತ್ ಕುಮಾರ್ ಶೆಟ್ಟಿ ತಾನೇ ಕೊಡೆತ್ತೂರು ಗುತ್ತಿನವ ಎಂದು ಹೇಳಿಕೊಂಡು 2017ರಲ್ಲಿ ಹಿಂದಿನ ಮೊಕ್ತೇಸರ ರವೀಂದ್ರನಾಥ ಪೂಂಜ ನಿಧನರಾದ ಬಳಿಕ ಹೊಸತಾಗಿ ಮೊಕ್ತೇಸರ ಹುದ್ದೆ ಪಡೆದಿದ್ದರು. ಬಂಟ ಸಮುದಾಯದಲ್ಲಿ ಹಿಂದಿನಿಂದಲೂ ಮಾತೃ ಪ್ರಧಾನ ವ್ಯವಸ್ಥೆಯಿದ್ದು, ತಂದೆಯಿಂದ ಮಗನಿಗೆ ಅಧಿಕಾರ ಸಿಗುವ ಬದಲು ಅಳಿಯನಿಗೆ ಸಿಗಬೇಕಾಗುತ್ತದೆ. ಮಾತೃ ಪ್ರಧಾನ ವ್ಯವಸ್ಥೆಯಲ್ಲಿ ಗುತ್ತಿನ ಕುಟುಂಬದ ಪುರುಷನ ಪತ್ನಿ, ಮಕ್ಕಳು ಅಲ್ಲಿನ ಅಧಿಕಾರದ ಹಕ್ಕು ಹೊಂದಿರುವುದಿಲ್ಲ. ಆದರೆ ಸನತ್ ಕುಮಾರ್ ಶೆಟ್ಟಿ ಹಣ ಬಲದಿಂದ ಅಧಿಕಾರ ಪಡೆದಿದ್ದಾರೆ. ನಮಗೆ ವೈಯಕ್ತಿಕವಾಗಿ ಸನತ್ ಕುಮಾರ್ ಶೆಟ್ಟಿ ಬಗ್ಗೆ ಅಸಮಾಧಾನ ಇಲ್ಲ. ಕೊಡೆತ್ತೂರು ಗುತ್ತಿನವರಲ್ಲದ ವ್ಯಕ್ತಿ ತಾನು ಅದೇ ಕುಟುಂಬದ ವ್ಯಕ್ತಿಯೆಂದು ಹೇಳಿ ಅಧಿಕಾರ ಅನುಭವಿಸುವುದು ಸರಿಯಲ್ಲ. ನಾವು ಸಿವಿಲ್ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿ, ತೀರ್ಪು ನಮ್ಮ ಪರವಾಗಿ ಬಂದಿರುತ್ತದೆ ಎಂದಿದ್ದಾರೆ.

ಸನತ್ ಕುಮಾರ್ ಶೆಟ್ಟಿ ಮತ್ತು ಅವರ ಕುಟುಂಬಸ್ಥರು ಪುತ್ತಿಗೆ ಗುತ್ತಿನವರಾಗಿರುವುದರಿಂದ ಕಟೀಲು ದೇವಸ್ಥಾನದ ಟ್ರಸ್ಟಿ ಆಗಲು ಅವರಿಗೆ ಹಕ್ಕು ಇರುವುದಿಲ್ಲ. ಕೊಡೆತ್ತೂರು ಗುತ್ತಿನ ಕುಟುಂಬಕ್ಕೆ ಸೇರಿದವರು ಮಾತ್ರ ಕಟೀಲು ದೇವಸ್ಥಾನದ ಟ್ರಸ್ಟಿ ಆಗಬಹುದು ಎಂದು ಸಿವಿಲ್ ಕೋರ್ಟ್ ನ್ಯಾಯಾಧೀಶೆ ಪ್ರತಿಭಾ ಡಿ.ಎಸ್. ತೀರ್ಪು ನೀಡಿದ್ದಾರೆ. ಕೋರ್ಟ್ ಈ ಬಗ್ಗೆ ಶಾಶ್ವತ ತಡೆಯಾಜ್ಞೆ ನೀಡಿದ್ದು, ಇದನ್ನು ಪಾಲನೆ ಮಾಡುವಂತೆ ರಾಜ್ಯ ಸರಕಾರವನ್ನು ಪ್ರತಿನಿಧಿಸುವ ಜಿಲ್ಲಾಧಿಕಾರಿ, ಮುಜರಾಯಿ ಇಲಾಖೆ ಆಯುಕ್ತರು, ರಾಜ್ಯ ಧಾರ್ಮಿಕ ಪರಿಷತ್, ಜಿಲ್ಲಾ ಧಾರ್ಮಿಕ ಪರಿಷತ್ತಿಗೆ ಆದೇಶ ಮಾಡಿದೆ.

ಕೋರ್ಟ್ ಆದೇಶ ಪ್ರಕಾರ, ಪುತ್ತಿಗೆ ಗುತ್ತಿನವರು ತಾವು ದೇವಸ್ಥಾನದ ಆಡಳಿತ ಟ್ರಸ್ಟಿ ಎಂದು ಹೇಳಿಕೊಳ್ಳಲು ಅಥವಾ ಬೇರೆಯವರನ್ನು ನಾಮ ನಿರ್ದೇಶನ ಮಾಡುವುದಕ್ಕೆ ಸಾಧ್ಯವಿಲ್ಲ. ಇದು ನಮ್ಮ ಕೊಡೆತ್ತೂರು ಗುತ್ತಿನ ಕುಟುಂಬಕ್ಕೆ ಸಂದ ಜಯ. ಕಟೀಲು ದೇವಿಯು ನಮ್ಮ ಕುಟುಂಬಕ್ಕೆ ಪುನರಪಿ ಸೇವಾ ಭಾಗ್ಯ ಕರುಣಿಸಿದ್ದಾಳೆ ಎಂದು ಕುಟುಂಬಕ್ಕೆ ಸೇರಿದ ನಿತಿನ್ ಶೆಟ್ಟಿ ಕೊಡೆತ್ತೂರು ಹೇಳಿದ್ದಾರೆ.

ಈ ಬಗ್ಗೆ ಹಿಂದೆಯೇ ಯಾಕೆ ಪ್ರಶ್ನೆ ಮಾಡಿಲ್ಲ ಎಂದು ಕೇಳಿದ್ದಕ್ಕೆ, 1928ರ ಕಾಲದಿಂದಲೂ ಈ ಕುರಿತ ವ್ಯಾಜ್ಯ ಇತ್ತು. ಕಾಲಕ್ರಮೇಣ ಅದನ್ನು ಮುಂದುವರಿಸಲು ಸಾಧ್ಯವಾಗದೇ ಇದ್ದುದರಿಂದ ಉಳಿದುಹೋಗಿತ್ತು. 2007ರಲ್ಲಿ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ದೂರು ಹೋದಾಗ, ಎರಡು ಕುಟುಂಬಗಳ ನಡುವಿನ ವ್ಯಾಜ್ಯವನ್ನು ಜಿಲ್ಲಾಧಿಕಾರಿ ಇತ್ಯರ್ಥ ಮಾಡಲಾಗದು. ಸಿವಿಲ್ ಕೋರ್ಟಿನಲ್ಲಿ ಇತ್ಯರ್ಥ ಮಾಡಿಕೊಂಡು ಬನ್ನಿ ಎಂಬ ಆದೇಶ ಬಂದಿತ್ತು. ಅದರಂತೆ ಸಿವಿಲ್ ಕೋರ್ಟಿನಲ್ಲಿ ಪ್ರಶ್ನೆ ಮಾಡಲಾಗಿತ್ತು ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಹರಿಶ್ಚಂದ್ರ ಆಳ್ವ, ಬಿ.ಆರ್. ಪ್ರಸಾದ್ ಉಪಸ್ಥಿತರಿದ್ದರು.

Sanath Kumar Shetty is not a Representative of Kodethurguthu lineage at Kateel temple says Mangalore Civil court.