ಇಡೀ ಸಿಟಿ ಬಂದ್ ಮಾಡಿ, ಹೆಲಿಕಾಪ್ಟರ್ ವ್ಯವಸ್ಥೆ ಮಾಡ್ರೀ.. ಟ್ರಾಫಿಕ್ ಅವ್ಯವಸ್ಥೆಗೆ ಜನ ಗರಂ ! ಮೇಯರ್, ಶಾಸಕರಿಗೆ ತೀವ್ರ ತರಾಟೆ

09-11-20 06:29 pm       Mangalore Correspondent   ಕರಾವಳಿ

ಸ್ಮಾರ್ಟ್ ಸಿಟಿಯಡಿ ನಗರದ ಹೃದಯಭಾಗ ಹಂಪನಕಟ್ಟೆ ವೃತ್ತದಲ್ಲಿ ಕಾಂಕ್ರೀಟ್ ಸಲುವಾಗಿ ದಿಢೀರ್ ಆಗಿ ಹಂಪನಕಟ್ಟೆಗೆ ವಾಹನ ಪ್ರವೇಶವನ್ನೇ ಸ್ಥಗಿತಗೊಳಿಸಲಾಗಿದೆ.

ಮಂಗಳೂರು, ನವೆಂಬರ್ 09: ಇಡೀ ಮಂಗಳೂರು ನಗರವನ್ನೇ ಬಂದ್ ಮಾಡಿ, ಯಾಕೆ ಹಂಪನಕಟ್ಟೆ ಮಾತ್ರ ಬಂದ್ ಮಾಡಬೇಕು.. ಅತ್ತ ಕಾರ್ ಸ್ಟ್ರೀಟ್, ಬಂದರಿನಲ್ಲೂ ಬಂದ್ ಮಾಡಿದ್ದಾರೆ.. ಎಲ್ಲ ಕಡೆಯೂ ಅರ್ಧರ್ಧ ಕೆಲಸ ಮಾಡಿಸುತ್ತಿದ್ದಾರೆ. ನಮ್ಗೆ ಸ್ಮಾರ್ಟ್ ಸಿಟಿಯವರು ಹೆಲಿಕಾಪ್ಟರ್ ಮಾಡಿಸಿಕೊಡಲಿ.. ಮಹಾನಗರ ಪಾಲಿಕೆಯವರು ದಿನವೂ ಟ್ರಿಪ್ ಮಾಡಿಸಲಿ..

ಹೀಗೆಂದು ಮಂಗಳೂರಿನ ಶಾಸಕರಿಗೆ ಮತ್ತು ಮಂಗಳೂರು ಮೇಯರ್ ಗೆ ಜನ ಬೈತಿದ್ದಾರೆ. ಹೌದು.. ಮಂಗಳೂರು ನಗರ ಭಾಗದಲ್ಲಿ ಜನರ ಆಕ್ರೋಶ ಎಷ್ಟಿದೆಯಂದ್ರೆ, ಇವತ್ತಿನ ಟ್ರಾಫಿಕ್ ಸ್ಥಿತಿ ನೋಡಿ ಜನ ರೋಸಿ ಹೋಗಿದ್ದರು. ಸ್ಮಾರ್ಟ್ ಸಿಟಿಯಡಿ ನಗರದ ಹೃದಯಭಾಗ ಹಂಪನಕಟ್ಟೆ ವೃತ್ತದಲ್ಲಿ ಕಾಂಕ್ರೀಟ್ ಸಲುವಾಗಿ ದಿಢೀರ್ ಆಗಿ ಹಂಪನಕಟ್ಟೆಗೆ ವಾಹನ ಪ್ರವೇಶವನ್ನೇ ಸ್ಥಗಿತಗೊಳಿಸಲಾಗಿದೆ. ಬಸ್ ಮತ್ತು ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಿ ಮಂಗಳೂರು ಪೊಲೀಸ್ ಕಮಿಷನರ್ ಆದೇಶ ಮಾಡಿದ್ದಾರೆ.

ಆದರೆ, ಈ ಬೆಳವಣಿಗೆ ದಿಢೀರ್ ಆದಿತ್ಯವಾರದಿಂದ ಜಾರಿಗೆ ಬಂದಿದ್ದು, ರಜೆ ಮುಗಿಸಿ ಸೋಮವಾರ ಎಂದಿನಂತೆ ಅಂಗಡಿ ತೆರೆಯಲು ಹಂಪನಕಟ್ಟೆಗೆ ಬಂದ ವ್ಯಾಪಾರಸ್ಥರಿಗೆ ಶಾಕ್ ಆಗಿತ್ತು. ಮಿಲಾಗ್ರಿಸ್ ರಸ್ತೆಯನ್ನು ಅಗೆದು ಹಾಕಲಾಗಿದ್ದರೆ, ಯಾವುದೇ ಕಡೆಯಿಂದಲೂ ಹಂಪನಕಟ್ಟೆಗೆ ವಾಹನ ತೆರಳಲು ಅವಕಾಶ ಇರಲಿಲ್ಲ. ರಸ್ತೆ ಕಾಮಗಾರಿಗೆ ಅವೈಜ್ಞಾನಿಕವಾಗಿ ಟ್ರಾಫಿಕ್ ವ್ಯವಸ್ಥೆ ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಇತ್ತ ಪಿವಿಎಸ್ ನಿಂದ ಹಂಪನಕಟ್ಟೆಗೆ ತೆರಳುವ ಮಾರ್ಗವನ್ನು ಕಡಿತಗೊಳಿಸಿದ್ದರೆ, ಜ್ಯೋತಿ, ಬಲ್ಮಠದಿಂದಲೂ ಸಂಚಾರವನ್ನು ಬಂದ್ ಮಾಡಲಾಗಿತ್ತು.

ಇದರಿಂದ ರೊಚ್ಚಿಗೆದ್ದ ಮಂಗಳೂರಿನ ಜನ ಬೆಳಗ್ಗಿನಿಂದಲೇ ಮೇಯರ್ ದಿವಾಕರ್ ಪಾಂಡೇಶ್ವರ ಮತ್ತು ಶಾಸಕ ವೇದವ್ಯಾಸ ಕಾಮತ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಜನರ ತರಾಟೆಯಿಂದ ಬೇಸತ್ತ ಶಾಸಕರು, ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಶಾಸಕರು ಮತ್ತು ಮೇಯರ್ ಹೇಳೋ ಪ್ರಕಾರ, ಅಧಿಕಾರಿಗಳು ಹಂಪನಕಟ್ಟೆಯಲ್ಲಿ ಟ್ರಾಫಿಕ್ ಬದಲು ಮಾಡುವಾಗ ತಿಳಿಸಿಲ್ಲವಂತೆ. ಜನಪ್ರತಿನಿಧಿಗಳ ಗಮನಕ್ಕೆ ತರದೆ ಟ್ರಾಫಿಕ್ ಡೈವರ್ಟ್ ಮಾಡಿದ್ದಾರಂತೆ..

ಏ ಮೇಯರ್ ಸಾಹೇಬ್ರೇ, ಸ್ಮಾರ್ಟ್ ಸಿಟಿ ಯೋಜನಾ ಸಮಿತಿಯಲ್ಲಿ ತಾವು ಕೂಡ ಸದಸ್ಯರು. ಪ್ರಮುಖ ಕಾಮಗಾರಿಗಾಗಿ ಟ್ರಾಫಿಕ್ ಬದಲಾಯಿಸಿದ್ದು ಗೊತ್ತಿಲ್ಲ ಅಂತೀರಲ್ರೀ.. ಎಂದು ಜನ ಪ್ರಶ್ನೆ ಮಾಡಿದ್ದಕ್ಕೆ ಮೇಯರ್ ಬಳಿ ಉತ್ತರವೇ ಇಲ್ಲ. ತಿಂಗಳ ಹಿಂದೆ ಮಂಗಳೂರು ಸ್ಮಾರ್ಟ್ ಸಿಟಿಯ ಆಡಳಿತ ನಿರ್ದೇಶಕರಾಗಿದ್ದ ನಜೀರ್ ಅವರನ್ನು ದಿಢೀರ್ ಆಗಿ ಎತ್ತಂಗಡಿ ಮಾಡಲಾಗಿತ್ತು. ಬದಲಿ ಅಧಿಕಾರಿಯನ್ನು ಹಾಕೋ ಬದಲು ಮಹಾನಗರ ಪಾಲಿಕೆಯ ಆಯುಕ್ತರಿಗೆ ಪ್ರಭಾರ ಚಾರ್ಜ್ ಕೊಡಲಾಗಿತ್ತು. ಹೊಸತಾಗಿ ಬಂದಿದ್ದ ಐಎಎಸ್ ಅಧಿಕಾರಿ ಅಕ್ಷಯ್ ಶ್ರೀಧರ್, ಹೊಸ ಚಾರ್ಜ್ ಸಿಕ್ಕಿದ ಉಮೇದಿನಲ್ಲಿ ಕೆಲಸ ಆರಂಭಿಸಿದ್ದಾರೆ. ಪೊಲೀಸ್ ಕಮಿಷನರ್ ಮೂಲಕ ಟ್ರಾಫಿಕ್ ಡೈವರ್ಟನ್ನು ಮಾಡಿಸಿ ಆದೇಶ ಮಾಡಿಸಿದ್ದಾರೆ. ಇದರಿಂದ ಮಂಗಳೂರಿನ ಜನ ಅತ್ತಿತ್ತ ಹೋಗುವುದಕ್ಕೂ ಸುತ್ತು ಹೊಡೀಬೇಕಾಗತ್ತೆ ಎನ್ನುವ ಕಾಳಜಿ ಅಧಿಕಾರಿಗಳಿಗೆ ಇಲ್ಲವಾಗಿತ್ತು.

ಅಧಿಕಾರಿಗಳ ನಡೆಯಿಂದ ಗರಂ ಆಗಿರುವ ಶಾಸಕ ವೇದವ್ಯಾಸ ಕಾಮತ್, ತುರ್ತು ವ್ಯವಸ್ಥೆಗಾಗಿ ಅಧಿಕಾರಿಗಳನ್ನು ಕರೆದು ಸಭೆ ನಡೆಸುತ್ತಿದ್ದಾರೆ. ಆದರೆ, ಒಂದೇ ದಿನದಲ್ಲಿ ಹಂಪನಕಟ್ಟೆಯ ಎರಡೂ ಕಡೆಯ ರಸ್ತೆಗಳನ್ನು ಅಗೆದು ಹಾಕಿದ್ದರಿಂದ ಹೇಗೆ ನಿರ್ವಹಿಸಬೇಕೆಂಬುದೇ ಚಿಂತೆಯಾಗಿದೆ. ಒಂದು ಭಾಗದ ಕಾಮಗಾರಿ ಮುಗಿದ ಬಳಿಕ ಇನ್ನೊಂದು ಕಡೆಯ ರಸ್ತೆಯನ್ನು ಮಾಡಬೇಕಿದ್ದಲ್ಲಿ ಒಂದೇ ದಿನದಲ್ಲಿ ಇಡೀ ರಸ್ತೆಯನ್ನು ಅಗೆದಿದ್ದು, ಎರಡು ತಿಂಗಳ ಕಾಲ ಸತಾಯಿಸಲು ವೇದಿಕೆ ರೆಡಿ ಮಾಡಿದ್ದಾರೆ.

ಮೊದಲೇ ಕೊರೊನಾ, ಲಾಕ್ಡೌನ್ ಕಾರಣದಿಂದ ವ್ಯಾಪಾರಿಗಳು ಬಸವಳಿದಿದ್ದರು. ಈಗ ದೀಪಾವಳಿ ಬರುತ್ತಿದೆ, ಖರೀದಿ ಶುರು ಆಗಬಹುದು ಎಂದುಕೊಳ್ಳುತ್ತಿದ್ದ ವ್ಯಾಪಾರಸ್ಥರಿಗೆ ಹಂಪನಕಟ್ಟೆಯನ್ನು ಬಂದ್ ಮಾಡಿಸಿದ್ದು ಶಾಕ್ ಆಗಿದೆ. ಇಡೀ ಆಡಳಿತ ಶಾಹಿಗಳಿಗೆ ಈಗ ವ್ಯಾಪಾರಸ್ಥರು ಹಿಡಿಶಾಪ ಹಾಕುತ್ತಿದ್ದಾರೆ. 

The Traffic Diversion in Hampankatta, Mangalore has created massive traffic block in the city. Public raged anger towards the decision taken by the authorities. Police Commissioner Vikash Kumar Vikash on Saturday issued a notification diverting traffic in Hampankatta for two months.