"ಸ್ಮಾರ್ಟ್" ಅವ್ಯವಸ್ಥೆ ; ಬಿಜೆಪಿ ಶಾಸಕರು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆಯೇ ? ಮಿಥುನ್ ರೈ ಪ್ರಶ್ನೆ

10-11-20 02:03 pm       Mangalore Correspondent   ಕರಾವಳಿ

ಮಂಗಳೂರಲ್ಲಿ ಏಕಾಏಕಿ ರಸ್ತೆ ಕಾಮಗಾರಿ ಆರಂಭಿಸಲಾಗಿದ್ದು ಇದರಿಂದ ಬಡ ವ್ಯಾಪಾರಿಗಳಿಗೆ ತೊಂದರೆಯಾಗಿದೆ ಎಂದು ಮಿಥುನ್ ರೈ ಹೇಳಿದ್ದಾರೆ. 

ಮಂಗಳೂರು, ನವೆಂಬರ್ 10 : ಮಂಗಳೂರು ನಗರದಲ್ಲಿ ಏಕಾಏಕಿ ರಸ್ತೆ ಕಾಮಗಾರಿ ನಡೆಸುವ ಮೂಲಕ ಬಿಜೆಪಿ ಶಾಸಕರು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆಯೇ ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಪ್ರಶ್ನೆ ಮಾಡಿದ್ದಾರೆ. 

ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಮಿಥುನ್ ರೈ, ಮಂಗಳೂರಲ್ಲಿ ಏಕಾಏಕಿ ರಸ್ತೆ ಕಾಮಗಾರಿ ಆರಂಭಿಸಲಾಗಿದ್ದು ಇದರಿಂದ ಬಡ ವ್ಯಾಪಾರಿಗಳಿಗೆ ತೊಂದರೆಯಾಗಿದೆ.‌ ಕೊರೊನಾ ಆಘಾತದ ಬಳಿಕ ಜನರಿಗೆ ರಸ್ತೆ ಕಾಮಗಾರಿ ನೆಪದಲ್ಲಿ ಮತ್ತೊಂದು ಹೊಡೆತ ನೀಡಲಾಗಿದೆ. ಯಾರ ಒತ್ತಡಕ್ಕೆ ಒಳಗಾಗಿ ಏಕಾಏಕಿ ಕಾಮಗಾರಿ ಆರಂಭಿಸಲಾಗಿದೆ. ಈ ವಿಚಾರದಲ್ಲಿ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ಜನರಿಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು. 

 

ರಸ್ತೆ ಕಾಮಗಾರಿ ವಿಚಾರದಲ್ಲಿ ಅನುಭವದ ಕೊರತೆ ಎದ್ದು ಕಾಣುತ್ತಿದೆ. ಮರದ ರೆಂಬೆಯ ಮೇಲೆ ಕುಳಿತು ಮರ ಕಡಿಯುವ ಕೆಲಸ ಮಾಡುತ್ತಿದ್ದಾರೆ. ಒಂದೇ ಸಮಯದಲ್ಲಿ ಎಲ್ಲ ಕಡೆ ಅಗೆದು ಹಾಕಿದ್ದಾರೆ. ಅತ್ತ ಕಾರ್ ಸ್ಟ್ರೀಟ್, ಬಂದರು, ಹಂಪನಕಟ್ಟೆ ಹೀಗೆ ಎಲ್ಲ ಕಡೆ ಅಗೆದು ಬಂದ್ ಮಾಡಿದರೆ ಅಲ್ಲಿನ ನಿವಾಸಿಗಳು ಎಲ್ಲಿ ಹೋಗಬೇಕು‌? ಅಲ್ಲಿನ ಬೀದಿಬದಿ ವ್ಯಾಪಾರಿಗಳು, ರಿಕ್ಷಾ ಚಾಲಕರು ಏನು ಮಾಡಬೇಕು  ಅಲ್ಲಿನ ಜನರ ಪ್ರಶ್ನೆಗೆ, ಯಾರು ಉತ್ತರ ಕೊಡುತ್ತಾರೆ. ಜನರು ನಡೆದು ಹೋಗುವುದಕ್ಕೂ ಆಗದ ಪರಿಸ್ಥಿತಿ ಅಲ್ಲಿ ಉಂಟಾಗಿದೆ. ಈ ಸ್ಥಿತಿಗೆ ಇಲ್ಲಿನ ಬಿಜೆಪಿ ಶಾಸಕರೇ ಕಾರಣ. ಈ ಕೂಡಲೇ ದ.ಕ. ಜಿಲ್ಲಾಧಿಕಾರಿ ಈ ವಿಚಾರದಲ್ಲಿ  ಮಧ್ಯಪ್ರವೇಶ ಮಾಡಿ, ಕಾಮಗಾರಿ ಬಗ್ಗೆ ಸ್ಪಷ್ಟ ವಿವರ ನೀಡಬೇಕು ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹೇಳಿದ್ದಾರೆ. 

ಮಾಜಿ ಶಾಸಕ ಜೆ.ಆರ್.ಲೋಬೊ, ಮನಪಾ ವಿಪಕ್ಷ ನಾಯಕ ಅಬ್ದುಲ್ ರವೂಫ್, ಕಾರ್ಪೊರೇಟರ್ ಗಳಾದ ಶಶಿಧರ ಹೆಗ್ಡೆ, ಎ.ಸಿ.ವಿನಯರಾಜ್, ನವೀನ್ ಡಿಸೋಜ ಉಪಸ್ಥಿತರಿದ್ದರು.

The BJP leaders of Mangaluru are ruling like Tuglaks after creating havoc in the city by Diversion of Road in Hampankatta slammed Youth Congress Leader Mithun Rai in Mangalore.