Ganesh Karnik, NEP, Mangalore: ಎನ್ಇಪಿ ಕಿತ್ತೆಸೆಯುತ್ತೇವೆ ಎನ್ನುವ ಮುಖ್ಯಮಂತ್ರಿ, ಶಿಕ್ಷಣ ಮಂತ್ರಿ ಅದನ್ನು ಓದಿದ್ದಾರೆಯೇ..? ಒಕ್ಕೂಟ ವ್ಯವಸ್ಥೆಯಲ್ಲಿ ತಿರಸ್ಕರಿಸುವುದು ಸಂವಿಧಾನ ವಿರೋಧಿ ; ಗಣೇಶ್ ಕಾರ್ಣಿಕ್

11-10-23 06:01 pm       Mangalore Correspondent   ಕರಾವಳಿ

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪೂರ್ವಾಗ್ರಹ ಪೀಡಿತರಾಗಿ ವಿರೋಧಿಸುತ್ತಿದ್ದಾರೆ. ಕಿತ್ತೆಸೆಯುತ್ತೇವೆ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಮಂತ್ರಿ ಎನ್ಇಪಿಯಲ್ಲಿ ಏನಿದೆಯೆಂದು ಓದಿ ನೋಡಿದ್ದಾರೆಯೇ..? ಒಕ್ಕೂಟ ವ್ಯವಸ್ಥೆಯಲ್ಲಿದ್ದು ಕೇಂದ್ರ ಸರಕಾರ ಜಾರಿಗೆ ತಂದ ಶಿಕ್ಷಣ ಪದ್ಧತಿಯನ್ನು ತಿರಸ್ಕರಿಸುವುದು ಸಂವಿಧಾನ ವಿರೋಧಿ.

ಮಂಗಳೂರು, ಅ.11: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪೂರ್ವಾಗ್ರಹ ಪೀಡಿತರಾಗಿ ವಿರೋಧಿಸುತ್ತಿದ್ದಾರೆ. ಕಿತ್ತೆಸೆಯುತ್ತೇವೆ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಮಂತ್ರಿ ಎನ್ಇಪಿಯಲ್ಲಿ ಏನಿದೆಯೆಂದು ಓದಿ ನೋಡಿದ್ದಾರೆಯೇ..? ಒಕ್ಕೂಟ ವ್ಯವಸ್ಥೆಯಲ್ಲಿದ್ದು ಕೇಂದ್ರ ಸರಕಾರ ಜಾರಿಗೆ ತಂದ ಶಿಕ್ಷಣ ಪದ್ಧತಿಯನ್ನು ತಿರಸ್ಕರಿಸುವುದು ಸಂವಿಧಾನ ವಿರೋಧಿ. ಆ ರೀತಿ ಹೇಳಿಕೆ ಕೊಡುವುದು ಒಕ್ಕೂಟ ವ್ಯವಸ್ಥೆಗೆ ಅಪಮಾನ ಎಂದು ಪೀಪಲ್ಸ್ ಫಾರಂ ಫಾರ್ ಕರ್ನಾಟಕ ಇದರ ಸದಸ್ಯ, ಮಾಜಿ ಎಂಎಲ್ಸಿ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.

ಎನ್ಇಪಿ ಶಿಕ್ಷಣ ಪದ್ಧತಿಯ ಬದಲು ರಾಜ್ಯದಲ್ಲಿ ಎಸ್ಇಪಿ ತರುತ್ತೇವೆಂದು ಹೇಳುತ್ತಿರುವ ರಾಜ್ಯ ಸರಕಾರದ ನಡೆಯ ವಿರುದ್ಧ ಪೀಪಲ್ಸ್ ಫಾರಂ ಫಾರ್ ಕರ್ನಾಟಕ ಎನ್ನುವ ಹೆಸರಲ್ಲಿ ಶಿಕ್ಷಣ ತಜ್ಞರು, ನಿವೃತ್ತ ಪ್ರೊಫೆಸರ್, ಚಿಂತಕರನ್ನು ಒಳಗೊಂಡ ಸಂಘಟನೆಯನ್ನು ಅಸ್ತಿತ್ವಕ್ಕೆ ತಂದಿದ್ದು, ಮುಖ್ಯಮಂತ್ರಿ ಹೇಳಿಕೆಯ ಬಗ್ಗೆಯೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎನ್ಇಪಿ ಒಳಗಡೆಯೇ ಎಸ್ಇಪಿ ಒಳಗೊಂಡಿದೆ ಎನ್ನುವುದು ಇವರಿಗೆ ತಿಳಿದಿಲ್ಲ. ಪಠ್ಯದಲ್ಲಿ ಏನಿದೆಯೆಂದು ಕಿತ್ತೆಸೆಯುತ್ತೇವೆ ಎನ್ನುತ್ತಿದ್ದಾರೆ. ಇವರಿಗೆ ಆಕ್ಷೇಪ ಆಗಿರುವುದು ಹೆಡಗೇವಾರ್, ಸೂಲಿಬೆಲೆ, ಕೆಟಿ ಗಟ್ಟಿಯವರ ಪಠ್ಯಗಳು. ಆ ಪಠ್ಯಗಳ ಬದಲು ಇವರು ಸೇರಿಸುತ್ತಿರುವ ಹೊಸ ಪಠ್ಯ ಯಾವುದು. ವೇದಗಳು ಭಾರತದ್ದಲ್ಲ, ವೇದಗಳ ಕಾಲದಲ್ಲಿ ಅನಿಷ್ಟ ಪದ್ಧತಿಗಳಿದ್ದವು, ಆರ್ಯರು ಭಾರತಕ್ಕೆ ಬಂದರು ಎನ್ನುವ ಕಪೋಲಕಲ್ಪಿತ ವಿಚಾರಗಳನ್ನು ಮಕ್ಕಳಿಗೆ ಹೇರುತ್ತಿದ್ದಾರೆ. ಮಕ್ಕಳ ಭವಿಷ್ಯಕ್ಕೆ ಕಲ್ಲು ಚಪ್ಪಡಿ ಹಾಕುವ ಯತ್ನ ಮಾಡುತ್ತಿದ್ದಾರೆ.

ಶಿಕ್ಷಣದ ಬಳಿಕ ಕೌಶಲ್ಯ ಭರಿತ ವಿದ್ಯಾರ್ಥಿಗಳು ಹೊರಬರಬೇಕೆಂಬ ಉದಾತ್ತ ಧ್ಯೇಯ ಇಟ್ಟುಕೊಂಡು ಹಲವಾರು ಕ್ಷೇತ್ರಗಳ ತಜ್ಞರು ಸೇರಿಕೊಂಡು 36 ವರ್ಷಗಳ ಬಳಿಕ ದೇಶದಲ್ಲಿ ಹೊಸ ಶಿಕ್ಷಣ ಪದ್ಧತಿ ತರಲಾಗಿದೆ. ಸುಮಾರು ನಾಲ್ಕು ಲಕ್ಷದಷ್ಟು ಸಲಹೆಗಳನ್ನು ಸ್ವೀಕರಿಸಿ, ಚರ್ಚಿಸಿ ಕಸ್ತೂರಿರಂಗನ್ ಅಧ್ಯಕ್ಷತೆಯ ಸಮಿತಿಯ ಶಿಫಾರಸು ಆಧರಿಸಿ ಶಿಕ್ಷಣ ಪದ್ಧತಿ ಬದಲಿಸಲಾಗುತ್ತಿದೆ. ಇದನ್ನು ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ತಂದಿದ್ದು ಕರ್ನಾಟಕ. 2040ರ ವೇಳೆಗೆ ಪೂರ್ಣ ರೀತಿಯಲ್ಲಿ ಶಿಕ್ಷಣ ಪದ್ಧತಿ ಬದಲಾಗಬೇಕೆಂಬ ದೂರಗಾಮಿ ಗುರಿ ಇದೆ. ಈಗಿನ ಎಲ್ಕೆಜಿ, ಯುಕೆಜಿ ಸೇರಿ ಮೊದಲ ನಾಲ್ಕು ವರ್ಷದ ಶಿಕ್ಷಣ ಅಂಗನವಾಡಿಯಲ್ಲೇ ನಡೆಯುತ್ತದೆ. ಆಮೂಲಕ ಅಂಗನವಾಡಿಗಳನ್ನು ಶಿಕ್ಷಣ ಇಲಾಖೆ ವ್ಯಾಪ್ತಿಗೆ ತಂದು ಶಿಕ್ಷಕಿಯರನ್ನು ಖಾಯಂ ಗೊಳಿಸುವ ಗುರಿಯಿದೆ.  

ಈಗಾಗಲೇ ಕಾಲೇಜು ಹಂತದಲ್ಲಿ ಕಳೆದೆರಡು ವರ್ಷಗಳಲ್ಲಿ ಎನ್ಇಪಿ ತರಲಾಗಿದ್ದು, ಈಗ ಕಿತ್ತೆಸೆಯುವ ಹೇಳಿಕೆಯಿಂದಾಗಿ ವಿದ್ಯಾರ್ಥಿಗಳು, ಪೋಷಕರು, ಉಪನ್ಯಾಸಕರು ಗೊಂದಲಕ್ಕೀಡಾಗಿದ್ದಾರೆ. ಮೂರನೇ ವರ್ಷದಲ್ಲಿ ಎನ್ಇಪಿ ರದ್ದುಪಡಿಸಿ ಎಸ್ಇಪಿ ಮಾಡುತ್ತೇವಂದ್ರೆ, ಇವರೇನು ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಅಸಂಬದ್ಧ ಹೇಳಿಕೆ ಕೊಡುವುದು ಬಿಟ್ಟು ಸಲಹೆಗಳನ್ನು ಕೊಡಲಿ. ಎನ್ಇಪಿಯಲ್ಲಿ ಬದಲಾವಣೆಗೆ ಅವಕಾಶ ಇದೆ, ಆಕ್ಷೇಪ, ತಪ್ಪುಗಳಿದ್ದರೆ ತಿಳಿಸಲಿ. ಅದು ಬಿಟ್ಟು ವಿರೋಧಕ್ಕಾಗಿ ವಿರೋಧ ಎನ್ನುವುದು ತಪ್ಪು. ಇವರೇನು ಪರ್ಮನೆಂಟ್ ಮುಖ್ಯಮಂತ್ರಿ, ಶಿಕ್ಷಣ ಮಂತ್ರಿಯೇ ಎಂದು ಕಾರ್ಣಿಕ್ ಪ್ರಶ್ನಿಸಿದರು.  

ಮಂಗಳೂರು ವಿವಿಯ ನಿವೃತ್ತ ಪ್ರೊಫೆಸರ್ ಡಾ.ರವಿಶಂಕರ್ ಮಾತನಾಡಿ, ಕೆಟ್ಟ ಶಿಕ್ಷಣ ಪಡೆಯುವ ಬದಲು ಅಂಥದ್ದನ್ನು ಕಲಿಯದಿರುವುದೇ ಉತ್ತಮ. ಈ ರೀತಿಯ ಶಿಕ್ಷಣ ದೇಶವನ್ನು ದುರ್ಬಲಗೊಳಿಸಲು ಕಾರಣವಾಗುತ್ತದೆ ಎಂದು 1990ರಲ್ಲಿ ಆಚಾರ್ಯ ರಾಮಮೂರ್ತಿ ಹೇಳಿದ್ದರು. ಆದರೆ, ಅವರು ಮಾಡಿದ್ದ ಶಿಫಾರಸುಗಳನ್ನು ನಾವು ಗಂಭೀರವಾಗಿ ಪರಿಗಣಿಸಿಲ್ಲ. ದೇಶದ ಮೊದಲ ಶಿಕ್ಷಣ ನೀತಿಯಲ್ಲಿ ಸಂಸ್ಕೃತ ಕಡ್ಡಾಯ ಮಾಡಬೇಕೆಂದು ಹೇಳಿದ್ದರು. ದೇಶದ ಮೂಲ ಅಂಶಗಳನ್ನು ಬದಿಗಿಡುವುದೇ ತಪ್ಪು. ಶಿಕ್ಷಣ ರಾಜಕೀಯಗೊಳ್ಳದೆ ದೇಶದ ಭವಿಷ್ಯದ ಚಿಂತನೆಯಿಂದ ರೂಪುಗೊಳ್ಳಬೇಕು ಎಂದರು.

 

ರಥಬೀದಿ ಸರಕಾರಿ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ರಾಜಶೇಖರ ಹೆಬ್ಬಾರ್, ಈಗಾಗಲೇ ಎರಡು ವರ್ಷದಲ್ಲಿ ಎನ್ಇಪಿ ಜಾರಿಗೊಳಿಸಿ ಮೂರನೇ ವರ್ಷದಲ್ಲಿದ್ದೇವೆ. ಯಾವುದೇ ತೊಂದರೆ, ಸಮಸ್ಯೆ ಆಗಿಲ್ಲ. ವಿದ್ಯಾರ್ಥಿಗಳಿಗೂ ಹೊಸತನದ ಅನುಭವ ಆಗಿದೆ. ಕಾಲೇಜಿನಲ್ಲಿ ಮೊದಲ ವರ್ಷಕ್ಕೆ ಬಿಟ್ಟು ಹೋದರೂ ಆನಂತರ ಯಾವಾಗಲೋ ಮತ್ತೆ ಸೇರಿ ಶಿಕ್ಷಣ ಮುಂದುವರಿಸಬಹುದು. ಮೊದಲ ವರ್ಷದ ಡಿಗ್ರಿಗೆ ಸರ್ಟಿಫಿಕೇಟ್, ಎರಡನೇ ವರ್ಷಕ್ಕೆ ಡಿಪ್ಲೊಮಾ, ಮೂರನೇ ವರ್ಷಕ್ಕೆ ಡಿಗ್ರಿ, ನಾಲ್ಕನೇ ವರ್ಷಕ್ಕೆ ಸೆಮಿ ಪಿಜಿ, ಐದು ವರ್ಷಕ್ಕೆ ಪೋಸ್ಟ್ ಗ್ರಾಜುವೇಟ್ ಎಂದು ವಿಭಜಿಸಿ ಹೊಸ ಪದ್ಧತಿ ತರಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಒಳಿತೇ ಹೊರತು ಕೇಡು ಇಲ್ಲ ಎಂದರು. ಸುದ್ದಿಗೋಷ್ಟಿಯಲ್ಲಿ ಎಂಎಲ್ಸಿ ಪ್ರತಾಪಸಿಂಹ ನಾಯಕ್, ವಿಕಾಸ್ ಪುತ್ತೂರು ಇದ್ದರು.

Ganesh Karnik slams about NEP in Mangalore. Has the education minister read about the NEP policy he slammed.