ಸುಳ್ಯ: ಮೊಗ್ರ ಸೇತುವೆ - ಕಮಿಲ ರಸ್ತೆ ದುರವಸ್ಥೆ; ಸ್ಥಳೀಯರಿಂದ ಪ್ರಧಾನಿಗೆ ವೀಡಿಯೊ ಸಿ.ಡಿ. ರವಾನೆ !

11-11-20 05:12 pm       Mangalore Correspondent   ಕರಾವಳಿ

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಜನರು ತಮ್ಮ ಮೂಲ ಸೌಕರ್ಯಕ್ಕಾಗಿ ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ನೀಡಿ ಬೇಸತ್ತು ಈಗ ಪ್ರಧಾನಿಯ ಮೊರೆ ಹೋಗಿದ್ದಾರೆ.

ಸುಳ್ಯ, ನವೆಂಬರ್ 11 : ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಜನರು ತಮ್ಮ ಮೂಲ ಸೌಕರ್ಯಕ್ಕಾಗಿ ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ನೀಡಿ ಬೇಸತ್ತು ಈಗ ಪ್ರಧಾನಿಯ ಮೊರೆ ಹೋಗಿದ್ದಾರೆ. ಮೊಗ್ರ ಪ್ರದೇಶದಲ್ಲಿ ಸೇತುವೆ ನಿರ್ಮಾಣ ಹಾಗೂ ಗುತ್ತಿಗಾರು- ಕಮಿಲ- ಬಳ್ಪ ರಸ್ತೆ ಸಮಸ್ಯೆಯ ವೀಡಿಯೊ ಸಹಿತ ವಿವರಣೆಯುಳ್ಳ ಸಿ.ಡಿ. ತಯಾರಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ರವಾನಿಸಿದ್ದಾರೆ. ನಾಗರಿಕ ಹೋರಾಟ ಕ್ರಿಯಾ ಸಮಿತಿ ಸದಸ್ಯರು ಕಮಿಲ ಅಂಚೆ ಕಚೇರಿ ಮೂಲಕ ಸಿಡಿ ಮತ್ತು ಮನವಿಯನ್ನು ಕಳುಹಿಸಿದ್ದಾರೆ.

ಇಂದು ಅತ್ಯಾಧುನಿಕ ತಂತ್ರಜ್ಞಾನದ ಮಾಧ್ಯಮಗಳಿದ್ದರೂ, ಅಂಚೆ ಕಚೇರಿ ಮೂಲಕವೇ ಸಮಸ್ಯೆ ಹೊತ್ತ ವೀಡಿಯೊ ಸಿ.ಡಿ.ಯನ್ನು ಪ್ರಧಾನಿಗೆ ಕಳುಹಿಸಿದ್ದು ವಿಶೇಷ. ಗ್ರಾಮೀಣ ಭಾಗದಲ್ಲಿ ಬಹುಪಾಲು ಮಂದಿ ಅಂಚೆ ಕಚೇರಿ ಬಳಸುತ್ತಿದ್ದಾರೆ. ಗ್ರಾಮಾಂತರದ ಬ್ಯಾಂಕಿಂಗ್‌ ವ್ಯವಸ್ಥೆ ಕೂಡ ಅಂಚೆ ಕಚೇರಿಯೇ ಆಗಿದೆ. ಹೀಗಾಗಿ ಆಧುನಿಕ ವ್ಯವಸ್ಥೆ ಇದ್ದರೂ ಗ್ರಾಮೀಣ ಭಾಗದ ಅಂಚೆ ಕಚೇರಿ ಬಳಕೆಯಾಗುವಂತೆ ಮಾಡಲು ಸಿ.ಡಿ. ರವಾನೆಯನ್ನು ನಾಗರಿಕ ಹೋರಾಟ ಕ್ರಿಯಾ ಸಮಿತಿ ಅಂಚೆ ಮೂಲಕ ಮಾಡಿದೆ.

ವೀಡಿಯೊ ಸಿ.ಡಿ. ರವಾನೆ ಸಂದರ್ಭ ನಾಗರಿಕ ಹೋರಾಟ ಕ್ರಿಯಾ ಸಮಿತಿ ಪದಾಧಿಕಾರಿಗಳಾದ ಪಿ.ಎಸ್‌. ಗಂಗಾಧರ ಭಟ್ ಪುಚ್ಚಪ್ಪಾಡಿ, ಬಿಟ್ಟಿ ಬಿ ನೆಡುನೀಲಂ, ಜೀವನ್‌ ಮಲ್ಕಜೆ, ಲಕ್ಷ್ಮೀಶ ಗಬ್ಲಡ್ಕ, ಮಹೇಶ್‌ ಪುಚ್ಚಪ್ಪಾಡಿ, ಹರ್ಷಿತ್‌ ಕಾಂತಿಲ, ಬಾಬು ಕಮಿಲ, ಸುರೇಶ್‌ ಮೊಗ್ರ , ವಿಶ್ವನಾಥ ಕೇಂಬ್ರೋಳಿ ಮತ್ತಿತರರು ಇದ್ದರು.

Villagers of Kamila-Mogra in Guthigaru gram panchayat of Sullia taluk in Dakshina Kannada have sent a CD that contains a documentary that narrates the pathetic condition of their village, which lacks basic infrastructure, to Prime Minister Narendra Modi.