ರಮಾನಾಥ ರೈ ವಿರುದ್ಧ ಹರಿಕೃಷ್ಣ ವ್ಯಗ್ರ ; ರೈ ಮುಖ ಭಾರತ, ದೇಹ - ಮನಸ್ಸು ಪಾಕಿನದ್ದು !! 

14-11-20 09:38 pm       Mangaluru Correspondent   ಕರಾವಳಿ

ಮಾಜಿ ಸಚಿವ ರಮಾನಾಥ ರೈ ವಿರುದ್ಧ ಕಿಯೋನಿಕ್ಸ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಹರಿಹಾಯ್ದಿದ್ದಾರೆ. 

ಮಂಗಳೂರು, ನವೆಂಬರ್ 14: ಎಸ್ ಡಿಪಿಐ - ಕಾಂಗ್ರೆಸ್ ಮೈತ್ರಿ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ತನ್ನನ್ನು ಬಂಧಿಸುವಂತೆ ದೂರು ನೀಡಿರುವ ಮಾಜಿ ಸಚಿವ ರಮಾನಾಥ ರೈ ವಿರುದ್ಧ ಕಿಯೋನಿಕ್ಸ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಹರಿಹಾಯ್ದಿದ್ದಾರೆ. 

ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಹರಿಕೃಷ್ಣ ಬಂಟ್ವಾಳ್,  ನಾನು ಎಲ್ಲಿಯೂ ರಮಾನಾಥ ರೈಯವರನ್ನು‌ ಕೊಲೆಗಾರ ಎಂದು ಹೇಳಿಲ್ಲ. ನನ್ನ ಇಡೀ‌ ಭಾಷಣವನ್ನು ಬೇಕಾದರೆ ನೋಡಿ. ಬಂಧಿಸುವುದಾದರೆ ರಮಾನಾಥ ರೈಯವರನ್ನು ಬಂಧಿಸಬೇಕು. ಮೋದಿ, ಪಾಕ್ ಪ್ರಧಾನಿ ತಾಯಿ ಒಂದೇ ಎಂದು ರಮಾನಾಥ ರೈ ಹೇಳಿದ್ದರು. ಪೊಲೀಸರು ಯಾಕೆ ಬಂಧಿಸಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. 

ರಾಜ್ಯದಲ್ಲಿ ನಡೆದ ಸರಣಿ ಹತ್ಯೆಗಳಲ್ಲಿ ಪಿಎಫ್ ಐ ಕೈವಾಡ ಕೇಳಿಬಂದಿತ್ತು. ಸಿದ್ದರಾಮಯ್ಯ ಸರಕಾರ ಇದ್ದಾಗ ಪಿಎಫ್ ಐ ಮೇಲಿನ 1,600 ಕೇಸ್ ಗಳನ್ನು ಕೈಬಿಟ್ಟಿದ್ದಾರೆ. ಕಾಂಗ್ರೆಸ್, ಪಿಎಫ್ ಐ ಒಂದೇ ರೀತಿಯವು. ನೀವು ಪಿಎಫ್ ಐ ಸಂಘಟನೆಯ ಇನ್ನೊಂದು ರೂಪ ಎಸ್ ಡಿಪಿಐಯನ್ನು ಬೆಂಬಲಿಸಿದ್ದೀರಿ. ನಿಮಗೆ ಜನ ಶಿಕ್ಷೆ ಕೊಟ್ಟಿದ್ದಾರೆ. ಇನ್ಯಾಕೆ ಶಿಕ್ಷೆ ಕೊಡಬೇಕು ಎಂದು ಕೇಳಿದರು. 

ಕಾಂಗ್ರೆಸ್ ನಿಮಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕೊಡಲ್ಲ. ರಮಾನಾಥ ರೈಗೆ ಮುಂದೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್ ಅಂತ್ಯವಾದಂತೆ. ಆವಾಗ ಬಿಜೆಪಿ - ಎಸ್ ಡಿಪಿಐ ಮಧ್ಯೆ ನೇರ ಸ್ಪರ್ಧೆ ಇರುತ್ತದೆ ಎಂದು ಹೇಳಿದ ಹರಿಕೃಷ್ಣ ಬಂಟ್ವಾಳ್, ರಮಾನಾಥ ರೈಯದ್ದು ಮುಖ ಮಾತ್ರ ಭಾರತ, ದೇಹ, ಮನಸ್ಸು ಪಾಕಿಸ್ತಾನದ್ದು. ಕಾಂಗ್ರೆಸ್, ಪಿಎಫ್ ಐ ಗಂಡಬೇರುಂಡ ಇದ್ದಂತೆ. ಎರಡೂ ಬೇರೆಯಲ್ಲ ಎಂದು ಹೋಲಿಸಿದ್ದಾರೆ. 

ಕಳೆದ ಚುನಾವಣೆಯಲ್ಲಿ ರೌಡಿ ರಮಾನಾಥ ರೈಗೆ ಯಾಕೆ ಟಿಕೆಟ್ ಕೊಟ್ರಿ ಅಂತಾ ವೀರಪ್ಪ ಮೊಯ್ಲಿ‌ ಕೇಳಿದ್ದರು. ಚುನಾವಣೆಯಲ್ಲಿ ಸ್ಪರ್ಧಿಸುವಾಗ ನಿಮಗೆ ಸಂಪಾದನೆ ಇತ್ತಾ ರಮಾನಾಥ ರೈಯವರೇ..? ಈಗ ಸಂಪಾದನೆ ಇಲ್ಲ ಎನ್ನುತ್ತೀರಲ್ಲಾ.. ನನ್ನ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಬೇಡಿ. ನಿಮ್ಮ‌ ಹೆಬ್ಬೆರಳಿನಿಂದ ಹಿಡಿದು ಕೂದಲ ವರೆಗೂ ನನಗೆ ಗೊತ್ತು. ಯಾವುದೂ ಬಿಡಲ್ಲ.‌. ಎಂದು ಸವಾಲು ಹಾಕಿದ್ದಾರೆ. 

ಹಿಂದು - ಮುಸ್ಲಿಮರನ್ನು ಕಚ್ಚಾಡುವ ಕೆಲಸ ಮಾಡಿದ್ದು ನೀವು. ರಮಾನಾಥ ರೈಯವರೇ ನೀವು ಆ ಎರಡು ಕೊಲೆಗಳ ಬಗ್ಗೆ ಯಾಕೆ ಮಾತನಾಡಿಲ್ಲ ಎಂದು ಪ್ರಶ್ನಿಸಿದ ಹರಿಕೃಷ್ಣ , ನನ್ನ ಡಿಎನ್ ಎ ಪ್ರಶ್ನೆ ಮಾಡಿದ್ದರು ಅಂತಾ ರೈ ಹೇಳಿದ್ದರಲ್ಲ.. ಡಿಎನ್ ಎನೂ ಗೊತ್ತು.. ಅವರ ಎ ಟು ಝೆಡ್ ಗೊತ್ತು ಎಂದು ಛೇಡಿಸಿದರು. 

ರಮಾನಾಥ ರೈಯಿಂದಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ದಿವಾಳಿ ಆಗಲಿದೆ ಎಂದ ಅವರು, ನಳಿನ್ ಕುಮಾರ್ ಏಳು ಹೊಸ ಮುಖಗಳಿಗೆ ಅವಕಾಶ ಕೊಟ್ಟಿದ್ದಾರೆ. ಆದರೆ ಇವರು ಮಾಡಿದ್ದೇನು ? ಈಗ ನನ್ನನ್ನು ಬಂಧಿಸಿ ಅಂತಾ ಅಲೆದಾಡುತ್ತಿದ್ದಾರೆ. ಈ ಹಿಂದೆ ಪ್ರಭಾಕರ್ ಭಟ್ ಅವರನ್ನು ಬಂಧಿಸಲು ಅಲೆದಾಟ ಮಾಡಿದ್ದರು. ಆದರೆ, ಅವರ ಕೂದಲು ಅಲುಗಾಡಿಸುವುದಕ್ಕೂ ಆಗಲಿಲ್ಲ. ನನ್ನ ಪತ್ನಿಯನ್ನು ರೇಪ್ ಮಾಡಿ ಕೊಲ್ಲುತ್ತಾರೆ ಅಂದಿದ್ದರು. ಜಲೀಲ್ ಹತ್ಯೆ ಆದಾಗ ನಿಮ್ಮ ಮೇಲೆ ಆರೋಪ ಬಂದಿತ್ತು. ಕಾಂಗ್ರೆಸ್ಸಿಗರೇ, ನೆನಪಿಟ್ಟು ಕೊಳ್ಳಿ ರಮಾನಾಥ ರೈ ಕಾಂಗ್ರೆಸ್ ಪಾಲಿಗೆ ನಳ ಮಹಾರಾಜನಿಗೆ ಕಚ್ಚಿದ ಕಾರ್ಕೋಟ ಇದ್ದಂತೆ. ಯಾವತ್ತೂ ಪಕ್ಷದ ಉದ್ಧಾರ ಆಗಲ್ಲ ಎಂದು ಬಿಜೆಪಿ ಮುಖಂಡರೂ ಆಗಿರುವ ಹರೀಶ್ ಬಂಟ್ವಾಳ ವ್ಯಗ್ರವಾಗಿ ಟೀಕಿಸಿದ್ದಾರೆ.

 

Keonics President Harikrishna Bantwal lashes out at former Minister Ramanath Rai over damaging comments at the press meet held at BJP office in Mangalore.