ಸಿನೆಮಾ ಕತೆಯಿಂದ ಪ್ರೇರಣೆ ಪಡೆದು ಭಿಕ್ಷೆ ಬೇಡಲು ನಿಂತ ಯುವಕ !! 

15-11-20 09:01 pm       Udupi Correspondent   ಕರಾವಳಿ

ಸಿನೆಮಾದಿಂದ ಪ್ರೇರಿತನಾದ ಯುವಕನೊಬ್ಬ ಉಡುಪಿ ಶ್ರೀಕೃಷ್ಣ ಮಠದ ಪರಿಸರದಲ್ಲಿ ಭಿಕ್ಷೆ ಬೇಡುತ್ತಿದ್ದ ಪ್ರಸಂಗ ಬೆಳಕಿಗೆ ಬಂದಿದೆ.

ಉಡುಪಿ ನ.15: ಸಿನೆಮಾದಿಂದ ಪ್ರೇರಿತನಾದ ಯುವಕನೊಬ್ಬ ಉಡುಪಿ ಶ್ರೀಕೃಷ್ಣ ಮಠದ ಪರಿಸರದಲ್ಲಿ ಭಿಕ್ಷೆ ಬೇಡುತ್ತಿದ್ದ ಪ್ರಸಂಗ ಬೆಳಕಿಗೆ ಬಂದಿದೆ. ಚಿತ್ರದುರ್ಗ ಮೂಲದ ಯುವಕನನ್ನು ಉಡುಪಿಯ ಸಾಮಾಜಿಕ ಕಾರ್ಯಕರ್ತರು ರಕ್ಷಿಸಿದ್ದಾರೆ.

ಚಿತ್ರದುರ್ಗದ ಪದವೀಧರ ಯುವಕ ಕೆಲಸವಿಲ್ಲದೆ, ಮನನೊಂದು ಮನೆ ಬಿಟ್ಟಿದ್ದ. ಊರಿಂದ ಊರಿಗೆ ಸಂಚರಿಸುತ್ತಿದ್ದ ವೇಳೆ ‘ಅಮ್ಮ ಐ ಲವ್ ಯು’ ಎಂಬ ಸಿನೆಮಾ ನೋಡಿದ್ದಾನೆ. ಸಿನೆಮಾ ಕತೆಯಿಂದ ಪ್ರೇರಣೆ ಪಡೆದ ಯುವಕ ಅದರಲ್ಲಿದ್ದ ರೀತಿ 48 ದಿನಗಳ ಕಾಲ ಉಡುಪಿಯಲ್ಲಿ ಭಿಕ್ಷೆ ಬೇಡಿ ತಿಂದರೆ ಕಷ್ಟ ಪರಿಹಾರ ಆಗುವುದೆಂದು ನಂಬಿದ್ದಾನೆ. ಅದರಂತೆ ಉಡುಪಿ ಶ್ರೀಕೃಷ್ಣ ಮಠದ ಪರಿಸರದಲ್ಲಿ ಭಿಕ್ಷೆ ಬೇಡುತ್ತಿದ್ದನೆನ್ನಲಾಗಿದೆ.

ಯುವಕನನ್ನು ಗಮನಿಸಿದ ಸಾಮಾಜಿಕ ಕಾರ್ಯಕರ್ತರಾದ ವಿಶು ಶೆಟ್ಟಿ ಅಂಬಲಪಾಡಿ ಹಾಗೂ ತಾರಾನಾಥ್ ಮೇಸ್ತ ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಆತ ಗುಣಮುಖನಾಗಿದ್ದಾನೆ.

ಮಗ ಮನೆ ಬಿಟ್ಟಂದಿನಿಂದ ಹೆತ್ತವರು ಹುಡುಕಾಟದಲ್ಲಿ ನಿರತರಾಗಿದ್ದರು. ಮಗನ ಇರುವಿಕೆಯ ಸುದ್ದಿ ತಿಳಿದ ತಂದೆ ಕೂಡಲೇ ಉಡುಪಿಗೆ ಆಗಮಿಸಿ ಮಗನನ್ನು ಊರಿಗೆ ಕರೆದುಕೊಂಡು ಹೋಗಿದ್ದಾರೆ.

ಈ ವರ್ಷ ಮಗನಿಲ್ಲದೆ ದೀಪಾವಳಿ ಆಚರಣೆ ಮಾಡದಿರಲು ಹೆತ್ತವರು ನಿರ್ಧರಿಸಿದ್ದರು. ಇದೀಗ ದೀಪಾವಳಿ ಸಂದರ್ಭದಲ್ಲೇ ಮಗ ಸಿಕ್ಕಿರುವುದು ಸಂತಸ ತಂದಿದೆ ಎಂದು ಯುವಕನ ತಂದೆ ಸಂತಸ ವ್ಯಕ್ತಪಡಿಸಿದ್ದಾರೆ.

In a strange incident man in Udupi who was inspired by, I Love You Amma movie becomes passionate about begging goes street to street to beg. Social activities who saw him counselled him and made arrangements to reach him back to his home town.