Mangalore, Harish Acharya: ಅತಿಥಿ ಉಪನ್ಯಾಸಕರನ್ನು ಶೋಷಣೆ ಮಾಡುತ್ತಿರುವ ಸರ್ಕಾರ, ಗುತ್ತಿಗೆ ನೇಮಕಾತಿಯೇ ನಿಯಮದ ಉಲ್ಲ‌ಂಘನೆ ; ಹರೀಶ್ ಆಚಾರ್ಯ ಆಕ್ಷೇಪ 

03-12-23 10:55 pm       Mangalore Correspondent   ಕರಾವಳಿ

ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಅದರ ಘಟಕ ಕಾಲೇಜುಗಳು ಮತ್ತು ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ತಮ್ಮ ವೇತನಾ ಸೌಲಭ್ಯ, ಸೇವಾ ಭದ್ರತೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಮಂಗಳೂರು, ಡಿ.3: ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಅದರ ಘಟಕ ಕಾಲೇಜುಗಳು ಮತ್ತು ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ತಮ್ಮ ವೇತನಾ ಸೌಲಭ್ಯ, ಸೇವಾ ಭದ್ರತೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವರು ಕನಿಷ್ಠ ವೇತನದಲ್ಲಿ ಕಾರ್ಯ ನಿರ್ವಹಿಸಿ ತಿಂಗಳ ವೇತನಕ್ಕೆ ತಿಂಗಳುಗಳ ಕಾಲ ಕಾಯುವ ಮತ್ತು ವೇತನ ಬಿಡುಗಡೆಗಾಗಿ ಒತ್ತಾಯಿಸಿ ಅಲೆದಾಡುವ ಪ್ರಸಂಗ ಎದುರಾಗುತ್ತಿದೆ. ಇವರ ನೇಮಕಾತಿ ನಿಯಮಾಳಿಯೇ ಪ್ರಶ್ನಾರ್ಹವಾಗಿದ್ದು 11 ತಿಂಗಳ ಬದಲು ಹತ್ತು ತಿಂಗಳಿಗೆ ನೇಮಿಸಿಕೊಂಡು ಯಾವುದೇ ಸೇವಾ ಭದ್ರತೆಯಿಲ್ಲದೆ ದುಡಿಸುತ್ತಿದ್ದಾರೆ ಎಂದು ಮಂಗಳೂರು ವಿವಿಯ ಮಾಜಿ ಸಿಂಡಿಕೇಟ್ ಸದಸ್ಯ ಎಸ್.ಆರ್ ಹರೀಶ್ ಆಚಾರ್ಯ ಸರ್ಕಾರಕ್ಕೆ ಪ್ರಶ್ನೆ ಎತ್ತಿದ್ದಾರೆ. 

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ರಾಜ್ಯದಲ್ಲಿ ಸುಮಾರು 430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು 14,000 ಅಧ್ಯಾಪಕರಿದ್ದಾರೆ. ಶೇಕಡಾ 70ರಷ್ಟು ಅಂದರೆ 9,000 ಕ್ಕಿಂತ ಹೆಚ್ಚು ಅತಿಥಿ ಉಪನ್ಯಾಸಕರು ಇದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಅದರ ಘಟಕ ಕಾಲೇಜುಗಳಲ್ಲಿ 600 ಅಧ್ಯಾಪಕರಿದ್ದು ಅವುಗಳಲ್ಲಿ 480 ಅತಿಥಿ ಉಪನ್ಯಾಸಕರಿದ್ದಾರೆ. ರಾಜ್ಯದಲ್ಲಿ ಒಟ್ಟು 1890 ಪದವಿ ಪೂರ್ವ ಕಾಲೇಜುಗಳಿದ್ದು 679 ಸರಕಾರಿ ಕಾಲೇಜುಗಳು. ಇದರಲ್ಲಿ ಸುಮಾರು 8000 ದಷ್ಟು ಉಪನ್ಯಾಸಕರಿದ್ದು ಆ ಪೈಕಿ 3200 ದಷ್ಟು ಅತಿಥಿ ಉಪನ್ಯಾಸಕರು. ಇವರು ಬೋಧನೆ ಜೊತೆಗೆ ಬೋಧಕೇತರ ಕಾರ್ಯದಲ್ಲಿಯೂ ತೊಡಗಿಸಿದ್ದಾರೆ. ಒಟ್ಟು ಬೋಧಕ ವ್ಯವಸ್ಥೆಯಲ್ಲಿ ಅತಿಥಿ ಉಪನ್ಯಾಸಕರು ಅವಿಭಾಜ್ಯ ಅಂಗವಾಗಿದ್ದರೂ ಸರಕಾರ ಮತ್ತು ವಿಶ್ವವಿದ್ಯಾನಿಲಯಗಳು ತಾತ್ಸಾರ ಭಾವನೆಯಿಂದ ನೋಡುತ್ತಿದೆ. ಅವರಲ್ಲಿ ತಮ್ಮನ್ನು ಶೋಷಿಸುತ್ತಿರುವ ಭಾವನೆ ಉಂಟಾಗಿದೆ. ‌

ಸರಕಾರೇತರ ವ್ಯವಸ್ಥೆಯಲ್ಲಿ ಸಿಬ್ಬಂದಿ ನೇಮಕಾತಿಯಲ್ಲಿ ಶೋಷಣೆ ನಿವಾರಿಸಲು ಕ್ರಮಕ್ಕೆ ಮುಂದಾಗುವ ರಾಜ್ಯ ಸರಕಾರವು ಸರಕಾರಿ ವ್ಯವಸ್ಥೆಯಲ್ಲಿ ತಾನೇ ರೂಪಿಸಿರುವ ನಿಯಮಾವಳಿಗಳ ವಿರುದ್ಧವಾಗಿ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳುತ್ತಿರುವುದು ವ್ಯವಸ್ಥೆಯ ಅಣಕ. ಸರಕಾರದ ಈ ರೀತಿಯ ನಡೆ ಖಂಡನೀಯ ಎಂದು ಹರೀಶ್ ಆಚಾರ್ಯ ಅಭಿಪ್ರಾಯ ಪಟ್ಟಿದ್ದಾರೆ. 2005 ರಿಂದ ನಿರಂತರವಾಗಿ ಹತ್ತು ತಿಂಗಳ ಅವಧಿಗೆ ನೇಮಕಾತಿ ಮಾಡಿಕೊಳ್ಳುತ್ತಿದ್ದು ಸರಕಾರ ತನ್ನ ಯಾವ ನಿಯಮಾವಳಿಯಂತೆ ಮಾಡುತ್ತಿದೆ ಎಂಬುದನ್ನು ಸಾರ್ವಜನಿಕರಿಗೆ ಸ್ಪಷ್ಟ ಪಡಿಸಬೇಕು ಎಂದಿದ್ದಾರೆ. 

ಆದುದರಿಂದ ಅತಿಥಿ ಉಪನ್ಯಾಸಕರ ನೇಮಕಾತಿಯನ್ನು ಸರಕಾರದ ಸಿಬ್ಬಂದಿ ಸೇವಾ ನಿಯಮಗಳಡಿ ಸಕ್ರಮಗೊಳಿಸಬೇಕು. ಅವರಿಗೆ ನೇಮಕಾತಿ ಆದೇಶ ಪತ್ರವನ್ನು ನೀಡಿ ಸೇವಾ ಭದ್ರತೆಯನ್ನು ಒದಗಿಸಬೇಕು. ರಜಾ ಸೌಲಭ್ಯ ಮತ್ತು ಭವಿಷ್ಯ ನಿಧಿ, ಇ.ಎಸ್.ಐ. ಸೌಲಭ್ಯವನ್ನು ಒದಗಿಸಬೇಕು ಎಂದು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ. ‌

ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಶಿಕ್ಷಣ ಚಟುವಟಿಕೆಗಳು ಆಗಸ್ಟ್ 23 ರಿಂದ ಪ್ರಾರಂಭವಾಗಿದ್ದರೂ ಸರಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ತಡವಾಗಿತ್ತು.‌ ಅಕ್ಟೋಬರ್ 7 ರಿಂದ ವಿಳಂಬ ನೇಮಕಾತಿಯಾಗಿದ್ದು 45 ದಿನಗಳ ನಂತರ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇದೀಗ ಡಿಸೆಂಬರ್ 15ರ ಒಳಗೆ ತರಗತಿ ಮುಗಿಸಬೇಕಾಗಿದೆ. ಹೆಚ್ಚುವರಿ ಸಮಯ ಕರ್ತವ್ಯ ನಿರ್ವಹಿಸಿ ಈ ಸೆಮಿಸ್ಟರ್ ಒಳಗೆ ಅಗತ್ಯ ಬೋಧನಾ ಕಾರ್ಯವನ್ನು ಮುಗಿಸಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ರಾಜ್ಯ ಸರಕಾರ ತಕ್ಷಣವೇ ಈ ಬಗ್ಗೆ ಗಮನಹರಿಸಿ ಉಪನ್ಯಾಸಕರ ಹೆಚ್ಚುವರಿ ಕಾರ್ಯಕ್ಕೆ ಹೆಚ್ಚುವರಿ ವೇತನ ಪಾವತಿ ಮಾಡಬೇಕೆಂದು ಹರೀಶ್ ಆಚಾರ್ಯ ಒತ್ತಾಯಿಸಿದ್ದಾರೆ.‌
                                                                     
ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಅದರ ಘಟಕ ಕಾಲೇಜುಗಳಲ್ಲಿ ಕಳೆದ ಮೂರು ತಿಂಗಳುಗಳಿಂದ ವೇತನ ಪಾವತಿಸದೇ ಬಾಕಿ ಉಳಿಸಿಕೊಂಡಿದೆ. ಉಪನ್ಯಾಸಕರ ವೇತನ ಮಾತ್ರವಲ್ಲದೇ ಹೆಚ್ಚಿನ ವಿಭಾಗಗಳ ಪರೀಕ್ಷಾ ಮೌಲ್ಯಮಾಪನ ಕಾರ್ಯವನ್ನು ನಿರ್ವಹಿಸಿದ ಉಪನ್ಯಾಸಕರಿಗೆ ಸಂಭಾವನೆಯನ್ನೂ ಬಾಕಿ ಉಳಿಸಿದೆ. ಹಣಕಾಸು ಕೊರತೆಯೆಂದು ನೆಪ ಹೇಳಿ ಕಾಲ ತಳ್ಳುತ್ತಿದ್ದಾರೆ. ತಕ್ಷಣವೇ ಕುಲಪತಿಗಳು ಅತಿಥಿ ಉಪನ್ಯಾಸಕರ ವೇತನ ಪಾವತಿಯ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು, ತೊಂದರೆ ಇದ್ದರೆ ರಾಜ್ಯ ಸರಕಾರ ಕೂಡಲೇ ಮಧ್ಯ ಪ್ರವೇಶ ಮಾಡಿ ಪಾವತಿಗೆ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಸರಕಾರವನ್ನು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಧುಸೂದನ್ ಗಟ್ಟಿ ಮತ್ತು ಭರತ್ ನಿಡ್ಪಳ್ಳಿ ಇದ್ದರು.

The guest lecturers working in government first grade colleges, Mangalore University and its constituent colleges and pre-university colleges in the state are facing many problems including salary facilities, service security, etc. They work on minimum wages, wait for months for their monthly wages and wander around demanding the release of their salaries.