Udupi, fishermen rescued: ಮಲ್ಪೆ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ ; ಎಂಟು ಮೀನುಗಾರರು ಅಪಾಯದಿಂದ ಪಾರು 

22-12-23 02:35 pm       Udupi Correspondent   ಕರಾವಳಿ

ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾಗಿದ್ದು ಅದರಲ್ಲಿದ್ದ 8 ಮಂದಿ ಮೀನುಗಾರರು ಬೇರೆ ಬೋಟ್ ಮೂಲಕ ರಕ್ಷಿಸಲ್ಪಟ್ಟಿದ್ದಾರೆ.

ಉಡುಪಿ, ಡಿ.22: ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾಗಿದ್ದು ಅದರಲ್ಲಿದ್ದ 8 ಮಂದಿ ಮೀನುಗಾರರು ಬೇರೆ ಬೋಟ್ ಮೂಲಕ ರಕ್ಷಿಸಲ್ಪಟ್ಟಿದ್ದಾರೆ.

ಕಡೆಕಾರು ಶ್ರೀ ನಾರಾಯಣ ಎಂಬ ಹೆಸರಿನ ಬೋಟ್ ಡಿ.12ರಂದು ರಾತ್ರಿ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಡಿಸೆಂಬರ್ 19 ರಂದು ಹಿಂತಿರುಗಿ ಬರುತ್ತಿದ್ದಾಗ ಮಲ್ಪೆಯಿಂದ 26 ನಾಟಿಕಲ್ ಮೈಲ್ ದೂರದಲ್ಲಿ ಸಮುದ್ರ ಮಧ್ಯೆ ದೋಣಿ ಮುಳುಗಡೆಗೊಂಡಿದೆ.
ಬೆಳಗ್ಗೆ 6.30ರ ಸುಮಾರಿಗೆ ನೀರಿನಡಿಯಲ್ಲಿ ಬಂಡೆ ಕಲ್ಲು ದೋಣಿಯ ತಳಕ್ಕೆ ಸ್ಪರ್ಶಿಸಿ ತಳಭಾಗ ಒಡೆದು ಹೋಗಿದ್ದು ನೀರು ನುಗ್ಗಲು ಆರಂಭಿಸಿತ್ತು. ಸಿಬ್ಬಂದಿ ಕೂಡಲೇ ವೈರ್ ಲೆಸ್ ಸಂಪರ್ಕ ಬಳಸಿ ಇತರೆ ಬೋಟ್ ಗಳಿಗೆ ಸಂದೇಶ ರವಾನಿಸಿದ್ದಾರೆ. ಮೂಕಾಂಬಿಕಾ ಹೆಸರಿನ ದೋಣಿಯಲ್ಲಿದ್ದವರು ಸ್ಥಳಕ್ಕೆ ಧಾವಿಸಿದ್ದು ಮುಳುಗುತ್ತಿರುವ ದೋಣಿಯನ್ನು ಕಟ್ಟಿ ದಡಕ್ಕೆ ಒಯ್ಯಲು ಪ್ರಯತ್ನಿಸಿದ್ದಾರೆ, ಆದರೆ ನೀರಿನ ಅಬ್ಬರ ಜಾಸ್ತಿಯಿದ್ದುದರಿಂದ ಸಾಧ್ಯವಾಗಲಿಲ್ಲ. 8 ಗಂಟೆ ವೇಳೆಗೆ ದೋಣಿ ಸಂಪೂರ್ಣ ಮುಳುಗಡೆಯಾಗಿತ್ತು. 

ಅದೃಷ್ಟವಶಾತ್ ಮೂಕಾಂಬಿಕಾ ದೋಣಿಯ ಮೂಲಕ ಮುಳುಗಡೆಯಾದ ಬೋಟಿನಲ್ಲಿದ್ದ ಮೀನುಗಾರರನ್ನು ಮರಳಿ ದಡಕ್ಕೆ ಕರೆತರಲಾಯಿತು. ಘಟನೆಯಿಂದ ಸುಮಾರು 18 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

Eight fishermen who were on board a deep-sea fishing boat that capsized off Malpe coast in Udupi district were rescued by fishermen from another boat, police said.