Puttur Municipal elections, BJP congress win, Arun Puthila defeated: ಪುತ್ತೂರು ನಗರಸಭೆಯಲ್ಲಿ ಕಾಂಗ್ರೆಸ್, ಬಿಜೆಪಿ ಸಮಬಲ ; ಬ್ಯಾಟ್ ಹಿಡಿದರೂ ಫೀಲ್ಡಿಂಗಲ್ಲಿ ಕೈಕೊಟ್ಟ ಪುತ್ತಿಲ ಪರಿವಾರ, ಒಂದು ಕ್ಷೇತ್ರದಲ್ಲಿ ಕಮಲ ಮೂರನೇ ಸ್ಥಾನಕ್ಕೆ

30-12-23 01:04 pm       Mangalore Correspondent   ಕರಾವಳಿ

ಪುತ್ತಿಲ ಪರಿವಾರದ ಸ್ಪರ್ಧೆಯಿಂದಾಗಿ ತೀವ್ರ ಕುತೂಹಲ ಮೂಡಿಸಿದ್ದ ಪುತ್ತೂರು ನಗರಸಭೆಯ ಎರಡು ಸ್ಥಾನಗಳ ಉಪ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಒಂದೊಂದು ಸ್ಥಾನ ಗಳಿಸಿದೆ.

ಪುತ್ತೂರು, ಡಿ.30: ಪುತ್ತಿಲ ಪರಿವಾರದ ಸ್ಪರ್ಧೆಯಿಂದಾಗಿ ತೀವ್ರ ಕುತೂಹಲ ಮೂಡಿಸಿದ್ದ ಪುತ್ತೂರು ನಗರಸಭೆಯ ಎರಡು ಸ್ಥಾನಗಳ ಉಪ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಒಂದೊಂದು ಸ್ಥಾನ ಗಳಿಸಿದೆ. ಒಂದೆಡೆ ಪುತ್ತಿಲ ಪರಿವಾರಕ್ಕೆ ಮುಖಭಂಗ ಆಗಿದ್ದರೆ, ಬಿಜೆಪಿ ಪರವಾಗಿ ಸಂಸದ ನಳಿನ್ ಕುಮಾರ್ ಖುದ್ದು ಪ್ರಚಾರ ನಡೆಸಿದರೂ ಒಂದು ಕ್ಷೇತ್ರದಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ವಾರ್ಡ್ 1ರಲ್ಲಿ ಒಟ್ಟು 958 ಮತಗಳು ಚಲಾವಣೆಯಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಶೇವಿರೆ 427 ಮತ, ಪುತ್ತಿಲ ಪರಿವಾರದ ಅನ್ನಪೂರ್ಣ 308 ಮತ, ಬಿಜೆಪಿಯ ಸುನೀತಾ 219 ಮತ ಗಳಿಸಿದ್ದಾರೆ. ನೋಟಾಕ್ಕೆ ನಾಲ್ಕು ಮತ ಚಲಾವಣೆಯಾಗಿದ್ದು ದಿನೇಶ್ ಶೇವಿರೆ 119 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ. ವಾರ್ಡ್ 11ರಲ್ಲಿ ಒಟ್ಟು 1053 ಮತಗಳು ಚಲಾವಣೆಯಾಗಿದ್ದು ಬಿಜೆಪಿಯ ಹಿರಿಯ ಕಾರ್ಯಕರ್ತ ರಮೇಶ್ ರೈ 431 ಮತ ಪಡೆದು ಗೆಲುವು ಕಂಡಿದ್ದಾರೆ. ಕಾಂಗ್ರೆಸಿನ ದಾಮೋದರ ಭಂಡಾರ್ಕರ್ 400 ಮತ, ಪುತ್ತಿಲ ಪರಿವಾರದ ಚಿಂತನ್ 216 ಮತ ಪಡೆದಿದ್ದಾರೆ. ನೋಟಾಕ್ಕೆ 6 ಮತ ಚಲಾವಣೆಯಾಗಿದೆ. ಈ ಮೂಲಕ ಬಿಜೆಪಿಯ ರಮೇಶ್ ರೈ 31 ಮತಗಳ ಅಂತರದಲ್ಲಿ ಗೆದ್ದಿದ್ದಾರೆ.

Arun Puthila missing BJP ticket: His supporters call emergency meeting |  udayavani

Puttur Arun Kumar Puthila makes BAT as their election symbol | ಬಂಡೆಯಂತೆ  ನಿಂತುಬಿಟ್ಟ ಅರುಣ್ ಪುತ್ತಿಲ ; ಪುತ್ತೂರಿನಲ್ಲಿ 'ಬ್ಯಾಟ್' ಹಿಡಿದು ಕ್ರೀಸಿಗಿಳಿದ  ಕಾರ್ಯಕರ್ತರು, ಗೂಗ್ಲಿ ...

ಎರಡೂ ಕಡೆಯಲ್ಲಿ ಬಿಜೆಪಿಗೇ ಹೆಚ್ಚು ಗೆಲ್ಲುವ ಅವಕಾಶಗಳಿದ್ದವು. ಪುತ್ತಿಲ ಪರಿವಾರದ ಸ್ಪರ್ಧೆಯಿಂದಾಗಿ ತ್ರಿಕೋನ ಸ್ಪರ್ಧೆ ಉಂಟಾಗಿತ್ತು. ಇವೆರಡು ಕ್ಷೇತ್ರಗಳಲ್ಲಿಯೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅರುಣ್ ಪುತ್ತಿಲ ಪರವಾಗಿ ಹೆಚ್ಚು ಮತಗಳು ಬಿದ್ದಿದ್ದವು. ಹೀಗಾಗಿ ಈ ಬಾರಿ ಎರಡೂ ಸ್ಥಾನದಲ್ಲಿ ಪುತ್ತಿಲ ಪರಿವಾರದ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದೇ ಅವರ ಜೊತೆಗಿದ್ದವರು ಭಾವಿಸಿದ್ದರು. ಆದರೆ ಬಿಜೆಪಿ ನಾಯಕರು ಮಾತ್ರ ಕಾಂಗ್ರೆಸ್ ಗೆದ್ದರೂ ಆದೀತು, ಪುತ್ತಿಲ ಪರಿವಾರ ಗೆಲ್ಲಲೇಬಾರದು ಎನ್ನುವ ನೆಲೆಯಲ್ಲಿ ಕೆಲಸ ಮಾಡಿದ್ದರು.

ಇದರಿಂದಾಗಿ ಒಂದು ಕಡೆ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರೂ, ಗೆಲ್ಲುವ ಭರವಸೆಯಿದ್ದ ರಮೇಶ್ ರೈ 31 ಮತಗಳಲ್ಲಿ ಗೆದ್ದಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸಿನ ಪ್ರಭಾವಿ ಅಭ್ಯರ್ಥಿ ದಾಮೋದರ ಭಂಡಾರ್ಕರ್ ಗೆಲ್ಲುತ್ತಾರೆಂದು ಹೇಳಲಾಗಿತ್ತು. ವಾರ್ಡ್ 1ರಲ್ಲಿ ಪುತ್ತಿಲ ಪರಿವಾರ ಮತ್ತು ಬಿಜೆಪಿ ಜಗಳದಿಂದಾಗಿ ಕಾಂಗ್ರೆಸಿನ ದಿನೇಶ್ ಶೇವಿರೆ ಅನಿರೀಕ್ಷಿತ ಗೆಲುವು ಕಂಡಿದ್ದಾರೆ. ಚುನಾವಣೆಗೆ ಎರಡು ದಿನ ಇರುವಾಗ ಶ್ರೀನಿವಾಸ ಕಲ್ಯಾಣದಲ್ಲಿ ಪುತ್ತಿಲ ಪರಿವಾರದ ಕಾರ್ಯಕರ್ತರು ಬಿಝಿಯಾಗಿದ್ದು ಫೀಲ್ಡಿಂಗ್ ಕೈಕೊಡುವಂತಾಗಿತ್ತು. ಕಾಂಗ್ರೆಸ್, ಬಿಜೆಪಿ ಆ ಹೊತ್ತಿಗೆ ಬ್ಯಾಟಿಂಗ್ ಮಾಡಿದ್ದು ಗೆಲುವಿನ ಪತಾಕೆ ಹಾರಿಸಿದೆ.

ವಾರ್ಡ್ ನಂಬರ್ 1ರ ರಕ್ತೇಶ್ವರಿ ಘಟಕದಲ್ಲಿ ಖುದ್ದು ಸಂಸದ ನಳಿನ್ ಕುಮಾರ್ ಮತ ಪ್ರಚಾರಕ್ಕೆ ಹೋದರೂ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಅಲ್ಲಿ ಬಿಜೆಪಿ ಅಭ್ಯರ್ಥಿ ಕೇವಲ 219 ಮತಗಳನ್ನು ಪಡೆದಿದ್ದರೆ, ಪುತ್ತಿಲ ಪರಿವಾರದ ಅಭ್ಯರ್ಥಿ 308 ಮತ ಪಡೆದಿದ್ದಾರೆ. ಎರಡೂ ಕಡೆ ಸಂಸದ ನಳಿನ್ ಪ್ರಚಾರ ಕೈಗೊಂಡಿದ್ದರೂ, ಈ ಕ್ಷೇತ್ರದಲ್ಲಿ ಮನೆ ಮನೆ ಪ್ರಚಾರಕ್ಕೂ ಹೋಗಿದ್ದರು. ಆದರೂ ಈ ಪ್ರಯತ್ನ ಮತವಾಗಿ ಪರಿವರ್ತನೆ ಆಗಲಿಲ್ಲ.

Puttur Town Municipal elections, BJP and congress wins, Arun Puthila team faces defeat. Arun Puthila team who was in confidence of winning has got total defeat after congress and Bjp win each one seat.