Anjaneya, Ayodhya case, KPCC vice-president K R Sudarshan: ಆಂಜನೇಯರದ್ದು ವೈಯಕ್ತಿಕ ಹೇಳಿಕೆ, ಅದು ಪಕ್ಷದ ನಿಲುವಲ್ಲ ; ಬಿಜೆಪಿ ಅಧಿಕಾರದಲ್ಲಿದ್ದಾಗ ಅಯೋಧ್ಯೆ ಕೇಸ್ ಯಾಕೆ ವಾಪಸ್ ತಗೊಂಡಿಲ್ಲ - ಸುದರ್ಶನ್ ಪ್ರಶ್ನೆ 

02-01-24 04:47 pm       Mangalore Correspondent   ಕರಾವಳಿ

 ಸಿದ್ದರಾಮಯ್ಯ ಅವರೇ ನಮ್ಮ ರಾಮ, ಅಯೋಧ್ಯೆಯದ್ದು ಬಿಜೆಪಿ ರಾಮ ಎಂಬ ಮಾಜಿ ಸಚಿವ ಆಂಜನೇಯ ವಿವಾದಾತ್ಮಕ ಹೇಳಿಕೆ ಬಗ್ಗೆ ಕೆಪಿಸಿಸಿ ಉಪಾಧ್ಯಕ್ಷ ಕೆ.ಆರ್ ಸುದರ್ಶನ್ ಪ್ರತಿಕ್ರಿಯಿಸಿದ್ದು ಆಂಜನೇಯರದ್ದು ವೈಯಕ್ತಿಕ ಹೇಳಿಕೆ.

ಮಂಗಳೂರು, ಜ.2: ಸಿದ್ದರಾಮಯ್ಯ ಅವರೇ ನಮ್ಮ ರಾಮ, ಅಯೋಧ್ಯೆಯದ್ದು ಬಿಜೆಪಿ ರಾಮ ಎಂಬ ಮಾಜಿ ಸಚಿವ ಆಂಜನೇಯ ವಿವಾದಾತ್ಮಕ ಹೇಳಿಕೆ ಬಗ್ಗೆ ಕೆಪಿಸಿಸಿ ಉಪಾಧ್ಯಕ್ಷ ಕೆ.ಆರ್ ಸುದರ್ಶನ್ ಪ್ರತಿಕ್ರಿಯಿಸಿದ್ದು ಆಂಜನೇಯರದ್ದು ವೈಯಕ್ತಿಕ ಹೇಳಿಕೆ. ಅದು ಪಕ್ಷದ ನಿಲುವಲ್ಲ. ಸಿದ್ದರಾಮಯ್ಯ ಮೇಲಿನ ಅಭಿಮಾನದಿಂದ ಹಾಗೆ ಹೇಳಿರಬಹುದು ಎಂದಿದ್ದಾರೆ. ‌

ಅವರ ಅಭಿಪ್ರಾಯ ಪಕ್ಷದ ಅಭಿಪ್ರಾಯ ಆಗಲ್ಲ. ಆದರೆ ಸಿದ್ದರಾಮಯ್ಯ ಒಬ್ಬ ಜನನಾಯಕ. ಕೆಲವರು ಅವರನ್ನು ನೋಡುವ ದೃಷ್ಟಿಕೋನ ಬೇರೆ ಇರುತ್ತೆ. ಆ ಕಾರಣದಿಂದ ಆಂಜನೇಯ, ಸಿದ್ದರಾಮಯ್ಯರನ್ನೇ ರಾಮ ಎಂದು ಹೇಳಿರಬಹುದು ಎಂದು ಹೇಳಿದ್ದಾರೆ. ‌ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. 

ಅಯೋಧ್ಯೆ ಹೋರಾಟದ ಕೇಸ್ ರೀ ಓಪನ್ ಕುರಿತಾಗಿ ಆರ್. ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದ ಸುದರ್ಶನ್, ಅಶೋಕ ಅವರು ಹೋಮ್ ಮಿನಿಸ್ಟರ್ ಆಗಿದ್ದಾಗ ಕಡ್ಲೆಕಾಯಿ ತಿಂತಿದ್ರಾ? ಇವರ್ಯಾಕೆ ಅಧಿಕಾರದಲ್ಲಿದ್ದಾಗ ಆ ಕೇಸ್ ಗಳನ್ನ ವಾಪಸ್ ತಗೊಂಡಿಲ್ಲ. ಬಿಜೆಪಿ ನಾಯಕರಿಗೆ ಜವಾಬ್ದಾರಿ ಇರಲಿಲ್ವಾ? ಎರಡು ಸಲ ರಾಜ್ಯದಲ್ಲಿ ಸರ್ಕಾರ ಮಾಡಿಲ್ವಾ? ರಾಜಕಾರಣಕ್ಕೆ ಮಾತ್ರ ಅಯೋಧ್ಯೆ ವಿಚಾರ ಬೇಕು ಇವರಿಗೆ. ಈ ಘಟನೆಯನ್ನು ರಾಜಕೀಯವಾಗಿ ನೋಡುವ ಅಗತ್ಯವಿಲ್ಲ ಎಂದರು. 

ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಬಂಧಿಸದ ಬಗ್ಗೆ ಮುಸ್ಲಿಮರ ಆಕ್ರೋಶದ ಕುರಿತ ಪ್ರಶ್ನೆಗೆ, ಸರ್ಕಾರ ನಿಯಮಾನುಸಾರ ಕೆಲಸ ಮಾಡ ಬೇಕಾಗುತ್ತದೆ. ರಾಜಕೀಯ ದುರುದ್ದೇಶಕ್ಕಾಗಿ ಕೆಲಸ ಮಾಡಲ್ಲ.‌ ಕಾನೂನು ಪ್ರಕಾರ ಏನು‌ ಆಗಬೇಕು ಅದನ್ನು ಸರಕಾರ ಮಾಡಿದೆ. ಬಂಧಿಸಬೇಕು ಎನ್ನುವ ಕಾರಣಕ್ಕೆ ಬಂಧಿಸಲೇಬೇಕು ಅನ್ನುವುದಲ್ಲ.‌ ಹಿಂದಿನ ಬಿಜೆಪಿ ಸರಕಾರದ ದುರಾಡಳಿತದಿಂದ ಜನ ಬದಲಾವಣೆ ಬಯಸಿ ಈ ಬಾರಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದಿದ್ದಾರೆ. ಹಿಂದಿನ ಸರಕಾರದ ಆಡಳಿತದಲ್ಲಿ ಅಭಿವೃದ್ಧಿ ಕುಸಿದಿತ್ತು. ದುರಾಡಳಿತದ ವಿರುದ್ಧ ಕಾಂಗ್ರೆಸಿನ ನಿರಂತರ ಹೋರಾಟದ ಪರಿಣಾಮ ಕೈ ಬಗ್ಗೆ ಜನರ ನಿರೀಕ್ಷೆಯಿಂದಾಗಿ ಹೆಚ್ಚಿನ ಸ್ಥಾನ ನೀಡಿದ್ದಾರೆ. 

ಅಧಿಕಾರಕ್ಕೆ ಬಂದ ಕೂಡಲೇ ಗ್ಯಾರಂಟಿ ಅನುಷ್ಠಾನ ಮಾಡಲಾಗಿದೆ. ಪ್ರಾಮಾಣಿಕವಾಗಿ ಅನುಷ್ಠಾನ ಮಾಡಿದ್ದೇವೆ, ಜಾತಿ ಧರ್ಮ ಸೀಮಿತವಾಗಿ ಮಾಡಿಲ್ಲ. ಈ ಬಾರಿ ಬರಗಾಲದಿಂದ ಜನರು ತತ್ತರಿಸಿದ್ದಾರೆ.‌ ಬರಗಾಲ ಪರಿಣಾಮ ಬೀರಿದ ಸಂದರ್ಭ ಗ್ಯಾರಂಟಿ ಬಡವರ ಬದುಕಿಗೆ ಆಸರೆಯಾಗಿತ್ತು. ಗ್ಯಾರಂಟಿಯಿಂದಾಗಿ ಹಾಹಾಕಾರ ಕಡಿಮೆ ಆಗಿದೆ ಎಂದು ಹೇಳಿದರು.

Reacting to former minister Anjaneya's controversial statement that Siddaramaiah is our Ram and Ayodhya is BJP's Rama, KPCC vice-president K R Sudarshan said, "Anjaneya's statement is a personal statement.