Mangalore City Corporator Jagadish Shetty suicide attempt: ಮಂಗಳೂರಿನ ಬಿಜೆಪಿ ಕಾರ್ಪೊರೇಟರ್ ಆತ್ಮಹತ್ಯೆ ಯತ್ನ, ವಿಷ ಸೇವಿಸಿ ಕಾರಿನಲ್ಲಿ ಪತ್ತೆ

04-01-24 09:46 pm       Mangalore Correspondent   ಕರಾವಳಿ

ಮಂಗಳೂರು ಮಹಾನಗರ ಪಾಲಿಕೆಯ ಬೋಳೂರು ವಾರ್ಡಿನ ಬಿಜೆಪಿ ಕಾರ್ಪೊರೇಟರ್ ಜಗದೀಶ್ ಶೆಟ್ಟಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.

ಮಂಗಳೂರು, ಜ.4: ಮಂಗಳೂರು ಮಹಾನಗರ ಪಾಲಿಕೆಯ ಬೋಳೂರು ವಾರ್ಡಿನ ಬಿಜೆಪಿ ಕಾರ್ಪೊರೇಟರ್ ಜಗದೀಶ್ ಶೆಟ್ಟಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.

ಜಗದೀಶ್ ಶೆಟ್ಟಿ ಗುರುವಾರ ಬೆಳಗ್ಗಿನಿಂದಲೇ ಫೋನ್ ರಿಸೀವ್ ಮಾಡದೇ ಇದ್ದುದರಿಂದ ಎಲ್ಲಿ ಹೋಗಿದ್ದಾರೆ ಎನ್ನುವ ಬಗ್ಗೆ ಮನೆಯವರು ಚಿಂತೆಗೆ ಒಳಗಾಗಿದ್ದರು. ಶಾಸಕ ವೇದವ್ಯಾಸ ಕಾಮತ್ ಅವರ ಗಮನಕ್ಕೂ ತರಲಾಗಿತ್ತು. ಆನಂತರ, ಪೊಲೀಸರಿಗೆ ತಿಳಿಸಿ ಫೋನ್ ನೆಟ್ವರ್ಕ್ ಪತ್ತೆ ಮಾಡಲು ಸೂಚಿಸಲಾಗಿತ್ತು. ಈ ವೇಳೆ ಅವರ ಫೋನ್ ಸ್ಟೇಟ್ ಬ್ಯಾಂಕ್ ವೃತ್ತದ ಬಳಿ ಪತ್ತೆಯಾಗಿದ್ದು, ಪೊಲೀಸರು ಸಂಜೆ 5.30ರ ವೇಳೆಗೆ ಕಾರಿನ ಗ್ಲಾಸ್ ಒಡೆದು ಒಳಗಿದ್ದ ಜಗದೀಶ್ ಶೆಟ್ಟಿ ಅವರನ್ನು ಪತ್ತೆ ಮಾಡಿದ್ದಾರೆ.

ಮಧ್ಯಾಹ್ನ ಹೊತ್ತಿಗೆ ವಿಷ ಸೇವನೆ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಕೆಎಂಸಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು 48 ಗಂಟೆಗಳ ಬಳಿಕ ಅಬ್ಸರ್ವೇಶನ್ ಇಡಬೇಕು ಎಂದು ತಿಳಿಸಿದ್ದಾರೆ. ಶಾಸಕ ವೇದವ್ಯಾಸ ಕಾಮತ್, ಮೇಯರ್ ಸುಧೀರ್ ಶೆಟ್ಟಿ ಆಸ್ಪತ್ರೆಯಲ್ಲಿದ್ದು ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದಾರೆ.

ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದ ಜಗದೀಶ್ ಶೆಟ್ಟಿ ಹಣಕಾಸು ತೊಂದರೆಗೆ ಒಳಗಾಗಿದ್ದರು ಎನ್ನಲಾಗುತ್ತಿದ್ದು, ಅದೇ ಕಾರಣಕ್ಕೆ ಈ ರೀತಿ ಮಾಡಿಕೊಂಡಿದ್ದಾರೆಯೇ ಎನ್ನುವುದು ತಿಳಿದುಬಂದಿಲ್ಲ. ಜಗದೀಶ್ ಶೆಟ್ಟಿ ಒಳ್ಳೆಯ ಹಾಡುಗಾರನಾಗಿದ್ದು, ಹಿಂದೆ ಆರ್ಕೆಸ್ಟ್ರಾ ತಂಡದಲ್ಲಿ ಸಿಂಗರ್ ಆಗಿದ್ದರು. ಹಳೆಯ ಹಿಂದಿ ಚಲನಚಿತ್ರ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವ ಕಾರಣಕ್ಕೆ ಫೇಮಸ್ ಆಗಿದ್ದರು. ಹಿಂದಿ ಸಿನಿಮಾದ ದಂತಕತೆ ಮುಕೇಶ್ ಅವರಂತೆ ಹಾಡುತ್ತಿದ್ದ ಕಾರಣಕ್ಕೆ ಮಂಗಳೂರಿನ ಮುಕೇಶ್ ಎಂದೂ ಅವರನ್ನು ಕರೆಯುತ್ತಿದ್ದರು. ಮೊದಲ ಬಾರಿಗೆ ಬಿಜೆಪಿಯಿಂದ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿ, ಆಯ್ಕೆಯಾಗಿದ್ದಲ್ಲದೆ ಜನರ ಸಮಸ್ಯೆಗಳಿಗೆ ದನಿಯಾಗುತ್ತಿದ್ದ ಕಾರಣಕ್ಕೆ ಜನಾನುರಾಗಿ ಎಂಬ ಹೆಸರನ್ನೂ ಗಳಿಸಿದ್ದರು.

Mangalore City Corporator Jagadish Shetty attempts suicide by consuming poison. Jagadish Shetty who is the Corporator of Boloor ward of the city, was found in a critical condition after reportedly attempting suicide by consuming poison. He is currently receiving medical attention in the intensive care unit of a private hospital in the city.