ಮಗುವಿನ ಚಿಕಿತ್ಸೆಗಾಗಿ ಮಿಡಿದ ಮಂಗಳಮುಖಿಯರು ! ಭಿಕ್ಷೆ ಎತ್ತಿ ಹಣ ಸಂಗ್ರಹ

20-11-20 03:03 pm       Mangalore Correspondent   ಕರಾವಳಿ

ಉಡುಪಿಯ ಮಂಗಳಮುಖಿಯರ ತಂಡ, ಹೆಣ್ಣು ಮಗುವಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲೆಯಾದ್ಯಂತ ಸಂಚರಿಸಿ ಹಣಸಂಗ್ರಹ ಮಾಡಿದೆ.

ಉಡುಪಿ, ನ.20: ಮಂಗಳಮುಖಿಯರನ್ನು ನಾಗರಿಕ ಸಮಾಜ ಪರಿತ್ಯಕ್ತ ಭಾವನೆಯಿಂದಲೇ ಕಾಣುತ್ತದೆ. ಆದರೆ, ಅದೇ ಮಂಗಳಮುಖಿಯರು ಮಾನವೀಯ ಕಾರ್ಯದ ಮೂಲಕ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ. 

ದಕ್ಷಿಣ ಕನ್ನಡ ಜಿಲ್ಲೆಯ ಮಡಂತ್ಯಾರು ನಿವಾಸಿ ಆರಾಧ್ಯ ಎಂಬ ಎರಡೂವರೆ ವರ್ಷದ ಹೆಣ್ಣು ಮಗುವಿಗೆ ಶ್ರವಣ ದೋಷದ ಸಮಸ್ಯೆ ಇತ್ತು. ಮಗುವಿನ ಚಿಕಿತ್ಸೆಗೆ ಬರೋಬ್ಬರಿ 14 ಲಕ್ಷ ರೂ. ಅಗತ್ಯ ಇತ್ತು. ಮಾತ್ರವಲ್ಲ, ಮೂರು ತಿಂಗಳ ಒಳಗಾಗಿ ಈ ಸರ್ಜರಿ ಮಾಡಲೇಬೇಕಿತ್ತು.


ಈ ವಿಷಯ ತಿಳಿದ ಉಡುಪಿಯ ಮಂಗಳಮುಖಿಯರ ತಂಡ, ಹೆಣ್ಣು ಮಗುವಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲೆಯಾದ್ಯಂತ ಸಂಚರಿಸಿ ಹಣಸಂಗ್ರಹ ಮಾಡಿದೆ. ಮಂಗಳಮುಖಿಯರ ತಂಡದ ನೇತೃತ್ವ ವಹಿಸಿದವರು ಸಮೀಕ್ಷಾ ಎಂಬವರು. ಎಂಬಿಎ ಪದವೀಧರೆಯಾಗಿರುವ ಸಮೀಕ್ಷಾ ತನ್ನ ತಂಡದವರಾದ ಸಾನ್ವಿ, ರೇಖಾ, ಸಂಧ್ಯಾ, ನಿಶಾ, ಲಾವಣ್ಯ ಜೊತೆ ಸೇರಿಕೊಂಡು ಹಣ ಸಂಗ್ರಹಿಸಿದೆ.

ಉಡುಪಿ ಜಿಲ್ಲೆಯಾದ್ಯಂತ ಅಂಗಡಿ- ಮುಂಗಟ್ಟುಗಳು, ಮಾರುಕಟ್ಟೆ ಪ್ರದೇಶ ಮತ್ತು ಮನೆಗಳಿಗೆ ತೆರಳಿ ಎರಡೂವರೆ ವರ್ಷದ ಪುಟ್ಟ ಕಂದಮ್ಮಳಿಗಾಗಿ ಹಣ ಸಂಗ್ರಹಿಸಿದ್ದು ಸುಮಾರು 21 ಸಾವಿರದಷ್ಟು ಮೊತ್ತವನ್ನು ಮಗುವಿಗೆ ಹಸ್ತಾಂತರಿಸಿದ್ದಾರೆ. ಈ ಮೂಲಕ ಮಂಗಳಮುಖಿಯರು ಮಾನವೀಯತೆ ಮೆರೆದಿದ್ದಾರೆ. ಮೇಲ್ನೋಟಕ್ಕೆ ಈ ಹಣ ಸಣ್ಣ ಮೊತ್ತವೇ ಆಗಿದ್ದರೂ, ಮಗುವಿಗಾಗಿ ಮಿಡಿದ ಮಂಗಳಮುಖಿಯರ ಮಾನವೀಯತೆಗೆ ಮೆಚ್ಚಬೇಕು. 

ಉಡುಪಿ ಜಿಲ್ಲೆಯಲ್ಲಿ ಇವರು ಆಶ್ರಯ ಸಮುದಾಯ ಸಂಘಟನೆ ಎಂಬ ಸಂಘ ಮಾಡಿಕೊಂಡಿದ್ದು ಇದರಲ್ಲಿ 283 ಜನ ಸದಸ್ಯರಿದ್ದಾರೆ. ಪಿಯುಸಿ ಮಾಡಿದವರು, ಪದವಿ ಮಾಡಿದವರು, ಎಂಬಿಎ ಕಲಿತವರು, ಮತ್ತು ಬಿಬಿಎಂ ಕಲಿತವರು ಈ ಸಂಘಟನೆಯಲ್ಲಿ ಇದ್ದಾರೆ.

Transgenders in Udupi show noble side by collecting about Rs 21,000 to help a little girl for operation.