Ashok rai, Dinesh Gundurao, Vedavyas Kamath: ಕೆಡಿಪಿ ಸಭೆಯಲ್ಲಿ ಶಾಸಕ ವೇದವ್ಯಾಸ ಕಾಮತ್- ಅಶೋಕ್ ರೈ ವಾಗ್ಯುದ್ಧ ; ಕೈಹಿಡಿದು ಕುಳ್ಳಿರಿಸಿದ ಭಂಡಾರಿ, ಕೋಳಿ ಅಂಕಕ್ಕೆ ಹರೀಶ್ ಪೂಂಜ ಬ್ಯಾಟಿಂಗ್, ಪರವಾನಗಿ ನೀಡಲು ಅವಕಾಶ ಇಲ್ಲ ಎಂದ ಎಸ್ಪಿ

12-01-24 07:24 pm       Mangalore Correspondent   ಕರಾವಳಿ

ಜಿಲ್ಲಾ ಮಟ್ಟದ ಕೆಡಿಪಿ ಸಭೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ಮತ್ತು ಪುತ್ತೂರಿನ ಶಾಸಕ ಅಶೋಕ್ ರೈ ಪರಸ್ಪರ ಮಾತಿನ ಚಕಮಕಿ ನಡೆಸಿದ ಪ್ರಸಂಗ ನಡೆದಿದ್ದು, ಇಬ್ಬರ ಅಬ್ಬರದ ಮಾತು ಕೇಳಿ ಇಡೀ ಸಭೆಯಲ್ಲಿದ್ದ ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿದ್ದರು.

ಮಂಗಳೂರು, ಜ.12: ಜಿಲ್ಲಾ ಮಟ್ಟದ ಕೆಡಿಪಿ ಸಭೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ಮತ್ತು ಪುತ್ತೂರಿನ ಶಾಸಕ ಅಶೋಕ್ ರೈ ಪರಸ್ಪರ ಮಾತಿನ ಚಕಮಕಿ ನಡೆಸಿದ ಪ್ರಸಂಗ ನಡೆದಿದ್ದು, ಇಬ್ಬರ ಅಬ್ಬರದ ಮಾತು ಕೇಳಿ ಇಡೀ ಸಭೆಯಲ್ಲಿದ್ದ ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿದ್ದರು.

ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರ ಸರಿ ಇಲ್ಲ. ಇದರಿಂದಾಗಿ ರೋಗಿಗಳ ಸಮಸ್ಯೆ ಆಗಿದೆ ಎಂದು ವೇದವ್ಯಾಸ ಕಾಮತ್ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಗಮನಕ್ಕೆ ತಂದರೆ, ಶಾಸಕ ಅಶೋಕ್ ರೈ ಈಗ ಅಂತಹ ಸ್ಥಿತಿ ಇಲ್ಲ ಎಂದು ವಾದಿಸುತ್ತಲೇ ನೇರವಾಗಿ ಮಾತಿಗಿಳಿದಿದ್ದಾರೆ. ಹಿಂದೆ ಐದು ವರ್ಷ ಸರಕಾರ ಇದ್ದಾಗ ಸಮಸ್ಯೆ ಇರಲಿಲ್ಲವೇ.. ಈಗ ಸಮಸ್ಯೆ ಆಗಿದ್ದೇ ಎಂದು ಪ್ರಶ್ನಿಸಿದರು. ಈ ವೇಳೆ, ನೀವು ಮೊನ್ನೆ ಏಳು ತಿಂಗಳಿಂದ ಶಾಸಕರಾಗಿರೋದು. ನಿಮಗೆ ಮಾಹಿತಿ ಕೊರತೆ ಇದೆ ಎಂದು ವೇದವ್ಯಾಸ ಕಾಮತ್ ಹೇಳಿದ್ದಕ್ಕೆ ಸಿಟ್ಟಾದ ಶಾಸಕ ಅಶೋಕ್ ರೈ, ನೀವು ಐದು ವರ್ಷ ಶಾಸಕರಾಗಿದ್ದು ಏನು ಪಿಎಚ್ ಡಿ ಮಾಡಿಕೊಂಡಿದ್ದೀರಿ ಅನ್ಕೊಂಡಿದ್ದೀರಾ.. ಐದು ವರ್ಷ ಶಾಸಕರಾದರೆ ಸಾಲದು ಎಂದು ತರಾಟೆಗೆತ್ತಿಕೊಂಡರು.

ಅಶೋಕ್ ರೈ ಜೋರು ದನಿಯಲ್ಲಿ ಮಾತಿಗಿಳಿದಾಗ ಪಕ್ಕದಲ್ಲಿದ್ದ ಎಂಎಲ್ಸಿ ಮಂಜುನಾಥ ಭಂಡಾರಿ, ಕೈ ಹಿಡಿದೆಳೆದು ಕುಳಿತುಕೊಳ್ಳುವಂತೆ ಹೇಳಿದರು. ಸಚಿವ ಗುಂಡುರಾವ್ ಕೂಡ ಇಬ್ಬರು ಕೂಡ ಕುಳಿತುಕೊಳ್ಳುವಂತೆ ಮನವಿ ಮಾಡಿದರು. ಆದರೆ ಇಬ್ಬರು ಶಾಸಕರು ಕೂಡ ತಾ ಮುಂದು ನಾ ಮುಂದೆ ಎನ್ನುವಂತೆ ಮಾತಿಗಿಳಿದಿದ್ದು ಕೊನೆಗೆ ಭಂಡಾರಿ, ಅಶೋಕ್ ರೈಯನ್ನು ಕೈಯಿಂದ ಎಳೆದು ಕುಳ್ಳಿರಿಸಿದರು. ಸಚಿವ ಗುಂಡೂರಾವ್ ಪ್ರತಿಕ್ರಿಯಿಸಿ, ಡಯಾಲಿಸಿಸ್ ಸಮಸ್ಯೆ ರಾಜ್ಯದ ಎಲ್ಲ ಕಡೆ ಇದೆ. ಅದನ್ನು ಶೀಘ್ರದಲ್ಲಿ ಸರಿಪಡಿಸಲಾಗುವುದು ಎಂದು ಹೇಳಿ ವಿವಾದಕ್ಕೆ ತೆರೆಯೆಳೆದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಾತನಾಡಿ, ತುಳುನಾಡಿನಲ್ಲಿ ದೇವಸ್ಥಾನ ಮತ್ತು ದೈವಸ್ಥಾನಗಳ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಕೋಳಿ ಅಂಕ ನಡೆಯುವುದು ಹಿಂದಿನಿಂದ ಬಂದ ಸಂಪ್ರದಾಯ. ಆದರೆ ಪೊಲೀಸರು ಪರ್ಮಿಶನ್ ಹೆಸರಲ್ಲಿ ಪೀಡಿಸುತ್ತಿದ್ದಾರೆ. ವಾರ್ಷಿಕ ಉತ್ಸವಕ್ಕೆ ಕೋಳಿ ಅಂಕ ನಡೆಸಲು ಪರ್ಮಿಶನ್ ಅಂತ ಎಸ್ಐ, ಡಿವೈಎಸ್ಪಿ, ಎಸ್ಪಿ ವರೆಗೂ ಹೋಗುವುದಕ್ಕೆ ಯಾಕೆ ಅವಕಾಶ ಮಾಡಿಕೊಡುತ್ತೀರಿ. ಪ್ರತಿ ಠಾಣೆಯಲ್ಲಿ ವಾರ್ಷಿಕ ಉತ್ಸವದ ಬಗ್ಗೆ ಮಾಹಿತಿ ಇರುತ್ತದೆ. ಈ ಬಗ್ಗೆ ಸರ್ವೆ ಲಿಸ್ಟ್ ಮಾಡಿಸಿ, ಕೋಳಿ ಅಂಕದ ಬಗ್ಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಸಭೆಯ ಗಮನಕ್ಕೆ ತಂದರು.

ಇದರ ಬಗ್ಗೆ ಶಾಸಕ ಅಶೋಕ್ ರೈ ಬಳಿ ಸಚಿವರು ಸ್ಪಷ್ಟನೆ ಕೇಳಿದರು. ಇಂತಹ ಸಮಸ್ಯೆ ಮೊದಲೇನಲ್ಲ. ಕೆಲವೊಂದು ಕಡೆ ಆಗಿರಬಹುದು. ಪುತ್ತೂರಿನಲ್ಲಿ ಸಮಸ್ಯೆ ಇಲ್ಲ ಎಂದರು. ಎಸ್ಪಿ ಸಿಬಿ ರಿಷ್ಯಂತ್ ಪ್ರತಿಕ್ರಿಯಿಸಿ, ಕೋಳಿ ಅಂಕಕ್ಕೆ ಪರವಾನಗಿ ಕೊಡಲು ನಮಗೆ ರೈಟ್ಸ್ ಇಲ್ಲ. ಕಾನೂನಿನಲ್ಲಿ ಅವಕಾಶವೂ ಇಲ್ಲ. ವಾರ್ಷಿಕ ಉತ್ಸವಗಳಿಗೆ ಅಂತಹ ಪರ್ಮಿಶನ್ ಪಡೆಯುವ ಅಗತ್ಯ ಇಲ್ಲ. ಪೊಲೀಸರು ಆ ರೀತಿ ಪೀಡನೆ ಮಾಡಿದರೆ ನನ್ನ ಗಮನಕ್ಕೆ ತರುವಂತೆ ಹೇಳಿದರು. ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಪ್ರತಿಕ್ರಿಯಿಸಿ, ವಾರ್ಷಿಕ ಉತ್ಸವದಲ್ಲಿ ಒಂದೆರಡು ದಿನ ಕೋಳಿ ಅಂಕ ನಡೆಯುವುದು ವಾಡಿಕೆ. ಹಾಗಂತ, ಅದೇ ನೆಪದಲ್ಲಿ ನಾಲ್ಕೈದು ದಿನ ಟೆಂಟ್ ಹಾಕಿ ಕೋಳಿ ಅಂಕ ನಡೆಸುವುದಕ್ಕೆ ಅವಕಾಶ ನೀಡಬಾರದು. ಅದನ್ನು ಪೊಲೀಸರೇ ನಿಯಂತ್ರಿಸಬೇಕು ಎಂದು ಸೈಲಂಟಾಗಿ ಟಾಂಗ್ ಇಟ್ಟರು.

Mangalore Mla Ashok Rai and Vedavyas Kamath fight in KDP meeting video goes viral which was held by health Minister Dinesh Gundurao. The war of words was over dialysis machine not working properly at government hospital.