G R Medical college Mangalore mbbs seat fraud: ಮಂಗಳೂರಿನ ಜಿ.ಆರ್ ಮೆಡಿಕಲ್ ಕಾಲೇಜಿಗೆ ನೀಡಿದ್ದ ಅನುಮತಿ ರದ್ದು ಎತ್ತಿಹಿಡಿದ ಹೈಕೋರ್ಟ್ ; ಕಾಲೇಜು ಅರ್ಜಿ ವಜಾ 

15-01-24 06:26 pm       Mangalore Correspondent   ಕರಾವಳಿ

ಸೌಲಭ್ಯಗಳ ಕೊರತೆ ಹಿನ್ನೆಲೆಯಲ್ಲಿ ಮಂಗಳೂರಿನ ಜಿ.ಆರ್. ವೈದ್ಯಕೀಯ ಕಾಲೇಜಿಗೆ 2022-23ನೇ ಸಾಲಿನ ಎಂಬಿಬಿಎಸ್ ಕೋರ್ಸ್ ನಡೆಸಲು ನೀಡಿದ್ದ ಅನುಮತಿಯನ್ನು ರದ್ದುಪಡಿಸಿದ್ದ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‍ಎಂಸಿ) ನಿರ್ಧಾರದಲ್ಲಿ ಮಧ್ಯಪ್ರವೇಶ ಮಾಡಲು ಹೈಕೋರ್ಟ್ ನಿರಾಕರಿಸಿದೆ.

ಬೆಂಗಳೂರು, ಜ.15: ಸೌಲಭ್ಯಗಳ ಕೊರತೆ ಹಿನ್ನೆಲೆಯಲ್ಲಿ ಮಂಗಳೂರಿನ ಜಿ.ಆರ್. ವೈದ್ಯಕೀಯ ಕಾಲೇಜಿಗೆ 2022-23ನೇ ಸಾಲಿನ ಎಂಬಿಬಿಎಸ್ ಕೋರ್ಸ್ ನಡೆಸಲು ನೀಡಿದ್ದ ಅನುಮತಿಯನ್ನು ರದ್ದುಪಡಿಸಿದ್ದ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‍ಎಂಸಿ) ನಿರ್ಧಾರದಲ್ಲಿ ಮಧ್ಯಪ್ರವೇಶ ಮಾಡಲು ಹೈಕೋರ್ಟ್ ನಿರಾಕರಿಸಿದೆ.

ಅಲ್ಲದೆ, 2021-22ನೇ ಸಾಲಿನಲ್ಲಿ ಕಾಲೇಜಿಗೆ ಪ್ರವೇಶ ಪಡೆದು ಎಂಬಿಬಿಎಸ್ ಕೋರ್ಸ್ ಮುಂದುವರೆಸುತ್ತಿದ್ದ 150 ಮಂದಿ ವಿದ್ಯಾರ್ಥಿಗಳನ್ನು ರಾಜ್ಯದ ಇತರೆ ಕಾಲೇಜುಗಳಿಗೆ ಸ್ಥಳಾಂತರಿಸಲು ಸೂಚಿಸಿದ್ದ ಎನ್‍ಎಂಸಿ ನಿರ್ಧಾರವನ್ನು ಎತ್ತಿ ಹಿಡಿದಿದೆ. ಕಾಲೇಜಿಗೆ ಅನುಮತಿ ಮುಂದುವರೆಸುವುದು ಮತ್ತು ವಿದ್ಯಾರ್ಥಿಗಳನ್ನು ಮತ್ತೊಂದು ಕಾಲೇಜಿಗೆ ಸ್ಥಳಾಂತರಿಸುವಂತೆ ಸೂಚಿಸಿದ್ದ ಎನ್‍ಎಂಸಿ ಹಾಗೂ ರಾಜ್ಯ ಸರಕಾರದ ಕ್ರಮ ಪ್ರಶ್ನಿಸಿ ಕಾಲೇಜು ಆಡಳಿತ ಮಂಡಳಿ ಹೈಕೋರ್ಟ್ ಮೆಟ್ಟಿಲೇರಿತ್ತು.

ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ಆದೇಶ ನೀಡಿದ್ದು, ಅರ್ಜಿ ವಜಾಗೊಳಿಸಿ ಆದೇಶಿಸಿದೆ. ಎನ್‍ಎಂಸಿ ಸಿಬ್ಬಂದಿ 2022ರ ಸೆ.5 ಮತ್ತು 6ರಂದು ಕಾಲೇಜಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿತ್ತು. ಈ ಸಂದರ್ಭದಲ್ಲಿ ಶೇ.71ರಷ್ಟು ಬೋಧಕ ಸಿಬ್ಬಂದಿ ಕೊರತೆ, ಶೇ.79ರಷ್ಟು ವೈದ್ಯರ (ರೆಸಿಡೆಂಟ್) ಕೊರತೆ, ಶೇ.30ರಷ್ಟು ಮಾತ್ರ ಹೊರ ರೋಗಿಗಳ ಹಾಜರಾತಿ ಇತ್ತು. ಶೇ.10ರಷ್ಟು ಮಾತ್ರ ಒಳರೋಗಿಗಳಿದ್ದರು. ಈ ಎಲ್ಲ ಮಾಹಿತಿಯ ಆಧಾರದಲ್ಲಿ ಎನ್‍ಎಂಸಿ ಕಾಲೇಜಿನ ಅನುಮತಿ ನವೀಕರಿಸಲು ನಿರಾಕರಿಸಿತ್ತು.

ಕಾಲೇಜಿಗೆ ಅನುಮತಿ ನಿರಾಕರಿಸುವುದಕ್ಕೂ ಮುನ್ನ ಕಾಲೇಜಿಗೆ ಹಲವು ಬಾರಿ ಅವಕಾಶಗಳನ್ನು ನೀಡಿದ್ದರೂ, ಸರಿಪಡಿಸಿಕೊಂಡಿಲ್ಲ. ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದಿಂದ ಬೇರೊಂದು ಕಾಲೇಜಿಗೆ ಸ್ಥಳಾಂತರ ನಿರ್ಧಾರ ಮಾಡಲಾಗಿದೆ. ಇದರಲ್ಲಿ ಯಾವುದೇ ದೋಷ ಕಂಡು ಬರುತ್ತಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು ಅರ್ಜಿಯನ್ನು ವಜಾಗೊಳಿಸಿದೆ.

G R Medical college Mangalore mbbs seat fraud, high court holds medical license.