Chitradruga accident, three killed on spot: ಬೆಂಗಳೂರಿನಿಂದ ಬಳ್ಳಾರಿಗೆ ಅಜ್ಜಿಯ ಶವವನ್ನು ಕೊಂಡೊಯ್ಯುತ್ತಿದ್ದ ವೇಳೆ ಟೈರ್ ಬ್ಲಾಸ್ಟ್ ಆಗಿ ಕಾರು ಪಲ್ಟಿ ; ಅಜ್ಜಿ ಜೊತೆಗೆ ಮೂವರು ಮೊಮ್ಮಕ್ಕಳು ಸ್ಮಶಾನಕ್ಕೆ

20-01-24 12:22 pm       HK News Desk   ಕರಾವಳಿ

ಚಲಿಸುತ್ತಿದ್ದ ಕಾರು ಪಲ್ಟಿಯಾದ ಪರಿಣಾಮ ಮೂವರು ಮೃತಪಟ್ಟು ಮತ್ತೆ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ರಾಂಪುರ ಬಳಿ ಸಂಭವಿಸಿದೆ.

ಚಿತ್ರದುರ್ಗ, ಜ 20: ಚಲಿಸುತ್ತಿದ್ದ ಕಾರು ಪಲ್ಟಿಯಾದ ಪರಿಣಾಮ ಮೂವರು ಮೃತಪಟ್ಟು ಮತ್ತೆ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ರಾಂಪುರ ಬಳಿ ಸಂಭವಿಸಿದೆ. ಮೃತರೆಲ್ಲರೂ ಬಳ್ಳಾರಿಯ ಸಿರುಗುಪ್ಪ ಮೂಲದವರೆಂದು ತಿಳಿದು ಬಂದಿದೆ.

ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ರಾಂಪುರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರು ಬೆಂಗಳೂರಿನಿಂದ ಅಜ್ಜಿಯ ಶವವನ್ನು ಸಿರುಗುಪ್ಪಗೆ ಕೊಂಡೊಯ್ಯುತ್ತಿದ್ದರು. ರಾಂಪುರ ಬಳಿಯ ಗ್ರ್ಯಾಂಡ್ ಪೋರ್ಡ್ ಹೋಟೆಲ್ ಬಳಿ ಕಾರಿನ ಟೈರ್ ಇದ್ದಕ್ಕಿದ್ದಂತೆ​ ಬ್ಲಾಸ್ಟ್ ಆಗಿ ಕಾರು ಪಲ್ಟಿಯಾಗಿದೆ. ಪರಿಣಾಮ ಅಜ್ಜಿಯ ಮೂವರು ಮೊಮ್ಮಕ್ಕಳು ಕೂಡ ಹೆದ್ದಾರಿಯಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾರೆ.  ಅಜ್ಜಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪಿಎಸ್ಐ ಪರಶುರಾಮ್ ಲಮಾಣಿ ಪರಿಶೀಲನೆ ನಡೆಸಿದರು. ರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದಕ್ಕೂ ಮುನ್ನ ಚಿತ್ರದುರ್ಗ ತಾಲೂಕಿನ ಮದಕರಿಪುರ ಗ್ರಾಮದ ಸಮೀಪ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಟ್ಯಾಂಕರ್ ಲಾರಿಗೆ ಕಾರು ಡಿಕ್ಕಿಯಾದ ಪರಿಣಾಮ ಇಬ್ಬರು ಮಹಿಳೆಯರು ಸಾವನ್ನಪ್ಪಿ, ಮೂವರು ಗಾಯಗೊಂಡ ಘಟನೆ ನಡೆದಿತ್ತು. ಮೃತಪಟ್ಟ ಮಹಿಳೆಯರನ್ನು ಬೆಂಗಳೂರಿನ ನಿರ್ಮಲಾ(55), ವಿನುತಾ(40) ಎಂದು ಗುರುತಿಸಲಾಗಿತ್ತು. ಗಾಯಾಳುಗಳಾದ ಫಣಿರಾಜ್ (36), ರಶ್ಮಿ(32) ಮತ್ತು ಯಶಸ್(2) ಎಂಬವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿಂದ ಹೊಸಪೇಟೆಗೆ ತೆರಳುತ್ತಿದ್ದಾಗ ಅಪಘಾತ ನಡೆದಿದೆ. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ಅಪಘಾತದಿಂದ ಶುಕ್ರವಾರ ಒಂದೇ ದಿನ ಜಿಲ್ಲೆಯಲ್ಲಿ ಒಟ್ಟು ಐದು ಜನ ಸಾವನ್ನಪ್ಪಿದ್ದಾರೆ.

Chitradruga accident, three killed on spot after car tyre blast. The three were carrying the dead body of the grand mother to home town.