Mangalore Kumpala Brahmakalashotsava 2024: ಕುಂಪಲ ಆದಿಶಕ್ತಿ ಚಾಮುಂಡೇಶ್ವರೀ ಪುನಃಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ ಸಂಪನ್ನ ;  ಬೆಂಗಳೂರಿನ ರವಿಶಂಕರ್ ಗುರೂಜಿ, ಮಹರ್ಷಿ ಆನಂದ ಗುರೂಜಿ ಇಂದು ಕ್ಷೇತ್ರಕ್ಕೆ 

26-01-24 02:00 pm       Mangalore Correspondent   ಕರಾವಳಿ

ಕುಂಪಲ ವ್ಯಾಸನಗರದ ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ಪುನಃ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ ಜ್ಯೋತಿಷ್ಯ ದೈವಜ್ಞ ದಿನೇಶ್ ಪಣಿಕ್ಕರ್, ಶಿಲ್ಪಿಗಳಾದ ಕಂಬ್ಳಪದವು ಬಾಬು ಆಚಾರ್ಯ ಮಾರ್ಗದರ್ಶನದಲ್ಲಿ ಶ್ರೀಕ್ಷೇತ್ರದ ತಂತ್ರಿಗಳಾದ ಶ್ರೀ ಕೇಶವ ಶಾಂತಿ ಪುರೋಹಿತರ ವೈದಿಕರ ನೇತೃತ್ವದಲ್ಲಿ ಗುರುವಾರ ಸಂಪನ್ನಗೊಂಡಿತು. 

ಉಳ್ಳಾಲ, ಜ.26: ಕುಂಪಲ ವ್ಯಾಸನಗರದ ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ಪುನಃ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ ಜ್ಯೋತಿಷ್ಯ ದೈವಜ್ಞ ದಿನೇಶ್ ಪಣಿಕ್ಕರ್, ಶಿಲ್ಪಿಗಳಾದ ಕಂಬ್ಳಪದವು ಬಾಬು ಆಚಾರ್ಯ ಮಾರ್ಗದರ್ಶನದಲ್ಲಿ ಶ್ರೀಕ್ಷೇತ್ರದ ತಂತ್ರಿಗಳಾದ ಶ್ರೀ ಕೇಶವ ಶಾಂತಿ ಪುರೋಹಿತರ ವೈದಿಕರ ನೇತೃತ್ವದಲ್ಲಿ ಗುರುವಾರ ಸಂಪನ್ನಗೊಂಡಿತು. 

ಸುಮಾರು ಆರು ನೂರು ವರ್ಷಗಳ ಇತಿಹಾಸ ಇರುವ ಕುಂಪಲ ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ಕ್ಷೇತ್ರದ ಗರ್ಭಗುಡಿ, ದರ್ಶನ ಮಂಟಪ, ಗುರುಪೀಠ, ತೀರ್ಥಭಾವಿ,  ಸುತ್ತುಪೌಳಿ, ಪರಿವಾರ ದೇವತೆಗಳಾದ ಶ್ರೀ ಕಾಳಭೈರವ, ಮಂತ್ರ ಗುಳಿಗ, ರಕ್ತೇಶ್ವರೀ, ಕ್ಷೇತ್ರಪಾಲ, ನಾಗಸಾನಿಧ್ಯಗಳಿಗೆ ಬ್ರಹ್ಮಕಲಶಾಭಿಷೇಕ‌ ನಡೆಯಿತು.
ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಕ್ಷೇತ್ರ ಕಟೀಲಿನ ಅನುವಂಶೀಯ ಅರ್ಚಕ ಶ್ರೀ ಲಕ್ಷ್ಮೀ ನಾರಾಯಣ ಆಸ್ರಣ್ಣರು ಆಶೀರ್ವಚನದ  ಮಾತುಗಳನ್ನಾಡಿ ಬ್ರಹ್ಮಕಲಶಾಭಿಷೇಕದ ಮೂಲಕ ದೇವಸ್ಥಾನಕ್ಕೆ ದೀಪ ಪ್ರಜ್ವಲನ ಮಾಡುವ ಕೆಲಸ ನಡೆದಿದೆ. ಇನ್ನು ಆ ದೀಪದ ಎಣ್ಣೆ ಕಡಿಮೆ ಆಗದಂತೆ ನಿತ್ಯವೂ ಬೆಳಕು ನೀಡುವಂತೆ ಕಾಪಾಡಿಕೊಂಡು ಬರುವ ಜವಾಬ್ದಾರಿ ಕ್ಷೇತ್ರದ ಭಕ್ತರ ಮೇಲಿದ್ದು ಪ್ರತಿಷ್ಠೆ ಬಳಿಕ ಸಾನಿಧ್ಯ ಬೆಳಗಬೇಕಾದರೆ ಭಕ್ತರು ಕ್ಷೇತ್ರಕ್ಕೆ ನಿತ್ಯವೂ ಬರುತ್ತಿರಬೇಕು ಎಂದರು.

ಸಂಸದ ನಳಿನ್ ಕುಮಾರ್ ಕಟೀಲು, ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ, ಉದ್ಯಮಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ, ಆದಿಶಕ್ತಿ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಶ್ರೀ ಚರಣ್ ಬೇಬಿ ನಾರಾಯಣ ಪಂಡಿತರು, ದೇವಸ್ಥಾನ ಟ್ರಸ್ಟ್ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಕುಲಾಲ್ ಕುಂಪಲ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುರೇಶ್ ಕೆ.ಪಿ. ಮಾಡೂರು, ಕಾರ್ಯಾಧ್ಯಕ್ಷರುಗಳಾದ ಪ್ರಕಾಶ್ ಕುಂಪಲ, ಪದಾಧಿಕಾರಿಗಳು ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ವಿವಿಧ ರೀತಿಯಲ್ಲಿ ಕ್ಷೇತ್ರ ನಿರ್ಮಾಣದಲ್ಲಿ ಸೇವೆಗೈದ ಭಕ್ತರನ್ನು ಸನ್ಮಾನಿಸಲಾಯಿತು.

ಇಂದು ರವಿಶಂಕರ್ ಗುರೂಜಿ, ಮಹರ್ಷಿ ಆನಂದ ಗುರೂಜಿ ಭೇಟಿ 

ಇಂದು ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಬೆಂಗಳೂರು ಆರ್ಟ್ ಆಫ್ ಲಿವಿಂಗ್ ನ ಶ್ರೀ ರವಿಶಂಕರ್ ಗುರೂಜಿ ಹಾಗೂ ಬೆಂಗಳೂರಿನ ಬ್ರಹ್ಮಶ್ರೀ ಆನಂದ ಸಿದ್ಧಿಪೀಠಂನ ಸಂಸ್ಥಾ‌ಪಕ ಮಹರ್ಷಿ ಆನಂದ ಗುರೂಜಿ ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಕುಂಪಲ ತಿಳಿಸಿದ್ದಾರೆ.

Mangalore Kumpala Brahmakalashotsava 2024, Ravishankar Guruji and Anand Guruji at the special event.