ಡಿ.10ರಿಂದಲೇ ಮಂಗಳೂರು- ಮೈಸೂರು ಮಧ್ಯೆ ವಿಮಾನ ಹಾರಾಟ ಆರಂಭ

22-11-20 05:36 pm       Mangalore Correspondent   ಕರಾವಳಿ

ಡಿಸೆಂಬರ್ 10 ರಿಂದ ಮೈಸೂರು ಮತ್ತು ಮಂಗಳೂರು ನಗರಗಳ ಮಧ್ಯೆ ವಿಮಾನ ಸಂಚಾರ ಆರಂಭಗೊಳ್ಳಲಿದೆ.

ಮಂಗಳೂರು, ನವೆಂಬರ್ 22: ರಾಜ್ಯದಲ್ಲಿ ಮೈಸೂರು ಮತ್ತು ಮಂಗಳೂರು ಸಮಾನಾಂತರವಾಗಿ ಬೆಳೆಯುತ್ತಿರುವ ಅವಳಿ ನಗರಗಳು. ಈ ನಗರಗಳ ಮಧ್ಯೆ ತುರ್ತು ಪ್ರಯಾಣಕ್ಕಾಗಿ ವಿಮಾನ ಸೌಲಭ್ಯ ಬರಬೇಕೆಂಬ ಜನರ ನಿರೀಕ್ಷೆ ಈಡೇರುತ್ತಿದೆ. ಇದೇ ಡಿಸೆಂಬರ್ 10 ರಿಂದ ಇವೆರಡು ನಗರಗಳ ಮಧ್ಯೆ ವಿಮಾನ ಸಂಚಾರ ಆರಂಭಗೊಳ್ಳಲಿದೆ.

ಉಡಾನ್ ಯೋಜನೆಯಡಿ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ, ಅಂಗ ಸಂಸ್ಥೆಯಾದ ಅಲಯನ್ಸ್ ಏರ್ ವಿಮಾನ ಮೈಸೂರು – ಮಂಗಳೂರು ಮಧ್ಯೆ ವಾರದಲ್ಲಿ ನಾಲ್ಕು ದಿನ ಸಂಚರಿಸಲಿದೆ. ಬುಧವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ಈ ಸೇವೆ ಇರಲಿದ್ದು ಮೈಸೂರಿನಿಂದ ಬೆಳಗ್ಗೆ ಹನ್ನೊಂದಕ್ಕೆ ಹೊರಡುವ ಈ ವಿಮಾನವು ಮಂಗ್ಳೂರಿಗೆ ಮಧ್ಯಾಹ್ನ 12.15ಕ್ಕೆ ತಲುಪಲಿದೆ. ಅಲ್ಲಿಂದ ಮರಳಿ ಮಧ್ಯಾಹ್ನ 12.40ಕ್ಕೆ ಹೊರಟು 1.40ಕ್ಕೆ ಮೈಸೂರಿಗೆ ತಲುಪಲಿದೆ.

ಮಂಗಳೂರು ಮೂಲದ ಸುಮಾರು ಅರುವತ್ತು ಸಾವಿರ ಕುಟುಂಬಗಳು ಮೈಸೂರಿನಲ್ಲಿ ವಾಸವಿದ್ದು ಈ ಹಿನ್ನೆಲೆಯಲ್ಲಿ ಎರಡೂ ನಗರಗಳ ನಡುವೆ ವಿಮಾನ ಹಾರಾಟ ಆರಂಭಿಸುವಂತೆ ಹಲವು ಸಂಘ ಸಂಸ್ಥೆಗಳು, ವಾಣಿಜ್ಯೋದ್ಯಮಿಗಳು ಸೇರಿದಂತೆ ಪ್ರಮುಖರು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಅಕ್ಟೋಬರ್ ನಲ್ಲಿಯೇ ಈ ಮಾರ್ಗದಲ್ಲಿ ವಿಮಾನ ಸಂಚಾರ ಆರಂಭಿಸುವುದಾಗಿ ಏರ್ ಇಂಡಿಯಾ ಪ್ರಕಟಿಸಿತ್ತು. ಆದರೆ ಅನುಮತಿ ದೊರೆತಿರಲಿಲ್ಲ. ಹೀಗಾಗಿ ವಿಮಾನ ಸಂಚಾರ ವಿಳಂಬವಾಗಿತ್ತು. ಇದೀಗ ಹಸಿರು ನಿಶಾನೆ ದೊರೆತಿದ್ದು ಉಭಯ ಜಿಲ್ಲೆಗಳ ಪ್ರಯಾಣಿಕರಿಗೆ ಸಂತಸವಾಗಿದೆ. 

Video:

Air India to commence it's operations from Mangalore to Mysore from December 10th, 2020.