Naxals Udupi, Byndoor: ಬೈಂದೂರಿನಲ್ಲಿ ಶಸ್ತ್ರಸಜ್ಜಿತ ನಕ್ಸಲರ ಚಲನವಲನ ಪತ್ತೆ ; ರಾತ್ರಿ ವೇಳೆ ಮನೆಗಳಿಗೆ ಭೇಟಿ, ಹತ್ತು ವರ್ಷಗಳ ಬಳಿಕ ನಕ್ಸಲರು ಬಂದಿದ್ದೆಲ್ಲಿಂದ? 

06-02-24 09:33 pm       Udupi Correspondent   ಕರಾವಳಿ

ಬೈಂದೂರು ತಾಲೂಕಿನ ಮುದೂರು, ಜಡ್ಕಲ್, ಬೆಳ್ಕಲ್ ಪರಿಸರದಲ್ಲಿ ಹತ್ತು ವರ್ಷಗಳ ಬಳಿಕ ನಕ್ಸಲರ ಚಲನವಲನ ಪತ್ತೆಯಾಗಿರುವುದನ್ನು ಪೊಲೀಸ್ ‌ಮೂಲಗಳು ದೃಢಪಡಿಸಿವೆ.

ಉಡುಪಿ, ಫೆ.6: ಬೈಂದೂರು ತಾಲೂಕಿನ ಮುದೂರು, ಜಡ್ಕಲ್, ಬೆಳ್ಕಲ್ ಪರಿಸರದಲ್ಲಿ ಹತ್ತು ವರ್ಷಗಳ ಬಳಿಕ ನಕ್ಸಲರ ಚಲನವಲನ ಪತ್ತೆಯಾಗಿರುವುದನ್ನು ಪೊಲೀಸ್ ‌ಮೂಲಗಳು ದೃಢಪಡಿಸಿವೆ. ಒಂದು ತಿಂಗಳಿನಿಂದ ಈ ಭಾಗದಲ್ಲಿ ನಾಲ್ವರಿದ್ದ ತಂಡ ಓಡಾಡುತ್ತಿದ್ದು ಹಳ್ಳಿ ಭಾಗದ ಜನರಿಂದ ಪೊಲೀಸರ ಗಮನಕ್ಕೆ ಬಂದಿದೆ. 

ಯೂನಿಫಾರಂ ಹಾಕಿದ ನಾಲ್ವರಿದ್ದ ತಂಡ ಈ ಪರಿಸರದ ಕೆಲವು ಮನೆಗಳಿಗೆ ಭೇಟಿ ಮಾಡಿದೆ. ನಾಲ್ವರ ಪೈಕಿ ಇಬ್ಬರಲ್ಲಿ ಶಸ್ತ್ರಾಸ್ತ್ರಗಳಿದ್ದವು ಎನ್ನಲಾಗಿದೆ. ಕೆಲವು ಮನೆಯವರು ನಕ್ಸಲರ ಭೇಟಿಗೆ ಅವಕಾಶ ನೀಡಿಲ್ಲ. ಕೆಲವು ಮನೆಯವರ ಬಳಿ ರಾತ್ರಿ ವೇಳೆ ಕಿಟಕಿಯಿಂದಷ್ಟೇ ಮಾತಾಡಿ ಹೋಗಿದ್ದಾರೆ. ಎರಡು ದಿನಗಳ ಹಿಂದೆಯೂ ಕೆಲವು ಮನೆಗಳಿಗೆ ಇವರು ಭೇಟಿ ನೀಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. 

ಕೇರಳ ಭಾಗದಲ್ಲಿ ನಕ್ಸಲ್‌ ಚಟುವಟಿಕೆಗೆ ಪೊಲೀಸರ ನಿರಂತರ ಕಾರ್ಯಾಚರಣೆಯಿಂದ ಹಿನ್ನಡೆಯಾಗಿದೆ. ಈ ಹಿನ್ನೆಲೆಯಲ್ಲಿ ನಕ್ಸಲರು ಇದೀಗ ಕರ್ನಾಟಕಕ್ಕೆ ಬಂದಿರುವ ಸಾಧ್ಯತೆಯಿದ್ದು ಕುಂದಾಪುರ ಭಾಗದಲ್ಲಿ ಚಟುವಟಿಕೆ ಆರಂಭಿಸಿರುವ ಅನುಮಾನ ದಟ್ಟವಾಗಿದೆ. ಇಲ್ಲಿನ ಪರಿಸರದ ಮನೆಗಳಿಗೆ ಪೊಲೀಸರು ಭೇಟಿ ನೀಡಿದ್ದು ಮಾಹಿತಿ ಕಲೆ ಹಾಕಿದ್ದಾರೆ. ಹತ್ತು ವರ್ಷಗಳ ಹಿಂದೆ ಎಎನ್ಎಫ್ ನಿರಂತರ ಕಾರ್ಯಾಚರಣೆಯಿಂದಾಗಿ ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ನಕ್ಸಲ್ ಚಟುವಟಿಕೆಗೆ ಬ್ರೇಕ್ ಬಿದ್ದಿತ್ತು. ಅಲ್ಲದೆ, ಕರ್ನಾಟಕದ ಪ್ರಮುಖ ನಕ್ಸಲ್ ನಾಯಕರು ಕೇರಳದ ವಯನಾಡಿನಲ್ಲಿ ಪೊಲೀಸರಿಗೆ ಸೆರೆ ಸಿಕ್ಕಿದ್ದರು. 

ನಕ್ಸಲ್ ನಿಗ್ರಹದ ಕಾರಣಕ್ಕೆ ಸ್ಥಾಪಿಸಿದ್ದ ಏಂಟಿ ನಕ್ಸಲ್ ಫೋರ್ಸ್ ಕಾರ್ಕಳದಲ್ಲಿ ಠಿಕಾಣಿ ಹೂಡಿದ್ದರೂ, ಕಳೆದ ಐದಾರು ವರ್ಷಗಳಲ್ಲಿ ಕೆಲಸ ಇಲ್ಲದೆ ಕುಳಿತು ಬಿಟ್ಟಿದೆ. ಹಾಗಿದ್ದರೂ ಎಎನ್ಎಫ್ ಪಡೆಯನ್ನು ಸರ್ಕಾರ ಹಿಂದಕ್ಕೆ ಕರೆಸಿಕೊಂಡಿಲ್ಲ. ಗಲಭೆ ಇನ್ನಿತರ ತುರ್ತು ಸಂದರ್ಭದಲ್ಲಿ ಅಗತ್ಯ ಬಿದ್ದರೆ ಕಾರ್ಯಾಚರಣೆಗೆಂದು ಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಬೈಂದೂರಿನ ನಕ್ಸಲ್ ಚಟುವಟಿಕೆ ಬಗ್ಗೆ ಜಿಲ್ಲಾ ಮಟ್ಟದ ಪೊಲೀಸ್ ಅಧಿಕಾರಿಗಳಲ್ಲಿ ಕೇಳಿದರೆ, ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಯಾರೋ ಟೂರಿಸ್ಟ್ ಆಗಿರಬಹುದೆಂದು ಹಾರಿಕೆಯ ಉತ್ತರವನ್ನು ನೀಡುತ್ತಿದ್ದಾರೆ. ಆದರೆ ಹಸುರು ಬಣ್ಣದ ಯೂನಿಫಾರ್ಮ್ ಮತ್ತು ಶಸ್ತ್ರಾಸ್ತ್ರ ಇತ್ತೆನ್ನುವ ವಿಚಾರ ನಕ್ಸಲರು ಎನ್ನುವುದನ್ನು ಒತ್ತಿ ಹೇಳುತ್ತಿವೆ.

Naxalites with weapons found at Byndoor in Udupi.