Daiva Mangalore, C K Prashanth, Kaveri serial: ಸಿನಿಮಾ ಬಳಿಕ ಸೀರಿಯಲ್ ಹೊಕ್ಕ ದೈವಾರಾಧನೆ ; ಪಾಂಡೇಶ್ವರ ಠಾಣೆಗೆ ದೂರು, ದೈವಗಳನ್ನು ವೇಷ ತೊಟ್ಟು ಛದ್ಮವೇಷದ ರೀತಿ ತೋರಿಸಬೇಡಿ, ಸೀರಿಯಲ್ ನಿಲ್ಲಿಸದಿದ್ದರೆ ಕಾನೂನು ಹೋರಾಟದ ಎಚ್ಚರಿಕೆ  

10-02-24 10:34 pm       Mangalore Correspondent   ಕರಾವಳಿ

ಕರಾವಳಿಯ ತುಳುನಾಡಿನ ಜನರು ಆರಾಧಿಸುವ ದೈವಗಳ ಬಗ್ಗೆ ಸಿನಿಮಾ, ಸೀರಿಯಲ್ ಮಾಡುತ್ತಿರುವುದಕ್ಕೆ ದೈವಾರಾಧಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಮಂಗಳೂರು, ಫೆ.10: ಕರಾವಳಿಯ ತುಳುನಾಡಿನ ಜನರು ಆರಾಧಿಸುವ ದೈವಗಳ ಬಗ್ಗೆ ಸಿನಿಮಾ, ಸೀರಿಯಲ್ ಮಾಡುತ್ತಿರುವುದಕ್ಕೆ ದೈವಾರಾಧಕರು ವಿರೋಧ ವ್ಯಕ್ತಪಡಿಸಿದ್ದಾರೆ. ಖಾಸಗಿ ವಾಹಿನಿಯೊಂದರಲ್ಲಿ ದೈವಾರಾಧನೆ ಆಧರಿಸಿ ಕಾವೇರಿ ಎನ್ನುವ ಹೆಸರಿನ ಸೀರಿಯಲ್ ಬಂದಿದ್ದು, ಅದರ ಪ್ರೋಮೋ ಬರುತ್ತಲೇ ಪ್ರಸಾರ ತಡೆಹಿಡಿಯುವಂತೆ ಮಂಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ.

ದೈವಾರಾಧನೆಯನ್ನೇ ಮುಂದಿಟ್ಟು ಮಾಡಿದ್ದ ಕಾಂತಾರ ಸಿನಿಮಾ ಹಿಟ್ ಆದಬಳಿಕ ದೈವಗಳ ನಂಬಿಕೆಯನ್ನೇ ಆಧರಿಸಿ ಕೆಲವರು ಸಿನಿಮಾ, ಸೀರಿಯಲ್ ಮಾಡಲು ಆರಂಭಿಸಿದ್ದಾರೆ. ಕನ್ನಡದ ಸುವರ್ಣ ವಾಹಿನಿಯಲ್ಲಿ ಕಾವೇರಿ ಎನ್ನುವ ಸೀರಿಯಲ್ ಆರಂಭಗೊಳ್ಳುತ್ತಿದ್ದು, ಅದರಲ್ಲಿ ದೈವದ ಕಲೆಯನ್ನೇ ಮುಖ್ಯವಾಗಿ ತೋರಿಸಲಾಗಿದೆ. ಅದರ ಪ್ರೋಮೋ ಬರುತ್ತಲೇ ದೈವಾರಾಧಕರು ವಿರೋಧ ವ್ಯಕ್ತಪಡಿಸಿದ್ದು, ಮಂಗಳೂರಿನಲ್ಲಿ ಪೊಲೀಸ್ ಕಮಿಷನರ್ ಮತ್ತು ಪಾಂಡೇಶ್ವರ ಠಾಣೆಗೆ ದೂರು ಸಲ್ಲಿಸಿದ್ದಾರೆ.

ದೈವಾರಾಧನೆ ಪ್ರದರ್ಶನ ಕಲೆಯಲ್ಲ, ಸಾತ್ವಿಕರ ನಂಬಿಕೆಯ ಆರಾಧನೆ. ದೈವಗಳ ವೇಷ ತೊಟ್ಟು ಕುಣಿಯುವುದು, ಛದ್ಮವೇಷದಂತೆ ತೋರಿಸುವುದು ತಪ್ಪು. ದೈವಗಳಿಗೆ ಕಟ್ಟುವುದು ನಿರ್ದಿಷ್ಟ ಜನಾಂಗದವರು ಮಾತ್ರ ಆಗಿದ್ದು, ಅದನ್ನು ಇತರರು ಪ್ರದರ್ಶನ ವಸ್ತುವಾಗಿ ತೋರಿಸುತ್ತಿದ್ದಾರೆ. ದೈವಗಳಿಗೆ ಕಟ್ಟುವುದಕ್ಕೆ ನಿರ್ದಿಷ್ಟ ಉದ್ದೇಶ, ಪಾಡ್ದನದ ಹಿನ್ನೆಲೆ ಇರುತ್ತದೆ. ಅದನ್ನು ಬಿದ್ದು ಕಾರಣಿಕ ಎಂದು ತೋರಿಸಲು ಛದ್ಮವೇಷದ ರೀತಿ ಮಾಡುತ್ತಿದ್ದಾರೆ. ಇದು ನಮ್ಮೆಲ್ಲರ ನಂಬಿಕೆಗೆ ಘಾಸಿ ಮಾಡಿದೆ. ಅಪಮಾನ ಮಾಡಿದಂತಾಗಿದೆ ಎಂದು ದೈವಾರಾಧಕರು ಆಕ್ಷೇಪ ಎತ್ತಿದ್ದಾರೆ.

ಕನ್ನಡ ವಾಹಿನಿಯಲ್ಲಿ ಮಂಗಳೂರಿನ ಪ್ರಶಾಂತ್ ಸಿಕೆ ಎಂಬವರು ದೈವದ ವೇಷ ತೊಟ್ಟು ಪಾತ್ರ ಮಾಡಿದ್ದಲ್ಲದೆ, ತನ್ನದೇ ನಿರ್ದೇಶನದಲ್ಲಿ ಸೀರಿಯಲ್ ಮಾಡುತ್ತಿದ್ದಾರೆ. ಕಾವೇರಿ ಸೀರಿಯಲ್ ಪ್ರಸಾರ ಮಾಡಬಾರದು, ಚಾನೆಲ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತುಳುನಾಡ ದೈವಾರಾಧನೆ ಸಂರಕ್ಷಣಾ ಸಂಸ್ಥೆ ಹೆಸರಲ್ಲಿ ಪೊಲೀಸ್ ದೂರು ನೀಡಲಾಗಿದೆ. ಈ ರೀತಿಯ ಅವಹೇಳನ ನಿಲ್ಲಿಸದೇ ಇದ್ದರೆ, ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ದೈವಾರಾಧಕರು ಎಚ್ಚರಿಸಿದ್ದಾರೆ.

Daiva aradhakas team in Mangalore demand to stop new kannada serial Kaveri which is about Daiva to start in Star suvarna, case filed. C k prashanth has done the role of Daiva which now has been objected.