Mangalore Sister Prabha from Gerosa school Jeppu: ಶಿಕ್ಷಕಿ ಹಿಂದು ದೇವರನ್ನು ನಿಂದಿಸಿಲ್ಲ, ವೇದವ್ಯಾಸ ಕಾಮತ್ ಒತ್ತಡಕ್ಕೆ ಕಟ್ಟುಬಿದ್ದು ಸಿಸ್ಟರ್ ಪ್ರಭಾ ಅವರನ್ನು ವಜಾ ಮಾಡಿದ್ದೇವೆ ; ಜೆರೋಸಾ ಶಾಲಾಡಳಿತ ಸ್ಪಷ್ಟನೆ

15-02-24 06:37 pm       Mangalore Correspondent   ಕರಾವಳಿ

ಸಿಸ್ಟರ್ ಪ್ರಭಾ ಅವರು ಏಳನೇ ತರಗತಿಗೆ ಕರ್ನಾಟಕ ಸರಕಾರದಿಂದ ಕೊಡಲಾಗಿರುವ ರವೀಂದ್ರನಾಥ ಠಾಗೋರ್ ಅವರ ಇಂಗ್ಲಿಷ್ ಕವನದ ಅರ್ಥವನ್ನು ವಿವರಿಸಿದ್ದಾರೆ ಹೊರತು ಹಿಂದು ದೇವರ ಅವಹೇಳನ ಮಾಡಿಲ್ಲ. ಕಾಯಕವೇ ಕೈಲಾಸ, ದುಡಿಮೆಯೇ ದೇವರು ಎನ್ನುವ ಅರ್ಥ ಕೊಡುವ ಪದ್ಯವನ್ನು ಸಾಕ್ಷ್ಯ ಸಹಿತ ವಿವರಣೆ ಕೊಟ್ಟಿದ್ದಾರೆ.

ಮಂಗಳೂರು, ಫೆ.15: ಸಿಸ್ಟರ್ ಪ್ರಭಾ ಅವರು ಏಳನೇ ತರಗತಿಗೆ ಕರ್ನಾಟಕ ಸರಕಾರದಿಂದ ಕೊಡಲಾಗಿರುವ ರವೀಂದ್ರನಾಥ ಠಾಗೋರ್ ಅವರ ಇಂಗ್ಲಿಷ್ ಕವನದ ಅರ್ಥವನ್ನು ವಿವರಿಸಿದ್ದಾರೆ ಹೊರತು ಹಿಂದು ದೇವರ ಅವಹೇಳನ ಮಾಡಿಲ್ಲ. ಕಾಯಕವೇ ಕೈಲಾಸ, ದುಡಿಮೆಯೇ ದೇವರು ಎನ್ನುವ ಅರ್ಥ ಕೊಡುವ ಪದ್ಯವನ್ನು ಸಾಕ್ಷ್ಯ ಸಹಿತ ವಿವರಣೆ ಕೊಟ್ಟಿದ್ದಾರೆ. ಆದರೆ ಅದೇ ವಿಚಾರವನ್ನು ವಿವಾದ ಎಬ್ಬಿಸಲಾಗಿದೆ. ಶಾಸಕ ವೇದವ್ಯಾಸ ಕಾಮತ್ ಅವರ ಬಲವಂತಕ್ಕೆ ಕಟ್ಟುಬಿದ್ದು ನಾವು ಶಿಕ್ಷಕಿ ಪ್ರಭಾ ಅವರನ್ನು ಕೆಲಸದಿಂದ ತೆಗೆದು ಹಾಕಿದ್ದೇವೆ ಎಂದು ಮಂಗಳೂರಿನ ವೆಲೆನ್ಸಿಯಾದ ಸೈಂಟ್ ಜೆರೋಸಾ ಶಾಲೆಯ ಆಡಳಿತ ಪತ್ರಿಕಾ ಹೇಳಿಕೆ ನೀಡಿದೆ.

ಫೆ.8ರಂದು ಜೆರೋಸಾ ಶಾಲೆ ಅನಿರೀಕ್ಷಿತ ಮತ್ತು ವಿಷಾದನೀಯ ಘಟನೆಗಳಿಗೆ ಸಾಕ್ಷಿಯಾಯ್ತು. 60 ವರ್ಷಗಳ ಶಾಲೆಯ ಇತಿಹಾಸದಲ್ಲಿ ಅಂತಹ ಯಾವುದೇ ಕಪ್ಪು ಚುಕ್ಕೆಯ ಘಟನೆ ನಡೆದದ್ದಿಲ್ಲ. ಫೆ.10ರಂದು ನಾಲ್ಕು ಮಂದಿ ಶಾಲೆಗೆ ಬಂದು ಸಿಸ್ಟರ್ ಪ್ರಭಾ ಅವರು ಹಿಂದು ಧರ್ಮ ಮತ್ತು ಪ್ರಧಾನಿ ಮೋದಿಯ ಬಗ್ಗೆ ಅವಹೇಳನ ಮಾಡಿದ್ದಾರೆಂದು ಮುಖ್ಯ ಶಿಕ್ಷಕಿ ಬಳಿ ದೂರು ಹೇಳಿಕೊಂಡಿದ್ದರು. ಆ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆಂದು ಹೇಳಿದ್ದೆವು. ಈ ಬಗ್ಗೆ ಶಿಕ್ಷಕಿ ಪ್ರಭಾ ಅವರಲ್ಲಿ ಕೇಳಿದಾಗ, ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ. ರವೀಂದ್ರನಾಥ ಠಾಗೋರ್ ಬರೆದಿರುವ ವರ್ಕ್ ಈಸ್ ವರ್ಶಿಪ್ ಎನ್ನುವ ಪದ್ಯದ ಬಗ್ಗೆ ವಿವರಣೆ ಕೊಟ್ಟಿದ್ದ ಬಗ್ಗೆ ಮಾಹಿತಿ ನೀಡಿದ್ದಾರೆ.

ತರಗತಿಯಲ್ಲಿ ಪದ್ಯದ ಬಗ್ಗೆ ವಿವರಣೆ ನೀಡುವ ಸಂದರ್ಭದಲ್ಲಿ ದೇವಸ್ಥಾನ, ಚರ್ಚ್ ಅಥವಾ ಮಸೀದಿಗಳು ಕೇವಲ ಕಟ್ಟಡಗಳಷ್ಟೇ. ದೇವರು ಮಾನವನ ಹೃದಯದಲ್ಲೇ ಇರುತ್ತಾನೆ. ಹೀಗಾಗಿ ದೇವರ ಹೆಸರಲ್ಲಿ ಮಾನವರನ್ನು ಕೊಲ್ಲುವುದು ಸರಿಯಲ್ಲ. ನಾವು ಮಾಡುವ ಕೆಲಸವನ್ನು ಮತ್ತು ಮನುಷ್ಯರನ್ನು ಗೌರವಿಸಬೇಕು. ನಾವು ಮಾಡುವ ಕೆಲಸದಲ್ಲಿಯೇ ದೇವರನ್ನು ಕಾಣಬೇಕು. ದೇವರು ಯಾವುದೋ ಬಿಲ್ಡಿಂಗ್ ಅಥವಾ ಮೂರ್ತಿಗಳಲ್ಲಿ ಇರುವುದಿಲ್ಲ. ನಮ್ಮ ಹೃದಯದಲ್ಲೇ ದೇವರಿದ್ದಾನೆ. ಹಾಗಾಗಿ ನಮ್ಮ ಹೃದಯವೇ ದೇವರು ಎಂಬುದಾಗಿ ತರಗತಿಯಲ್ಲಿ ವಿವರಣೆ ನೀಡಿದ್ದೇನೆ. ಅದು ಬಿಟ್ಟರೆ ಹಿಂದು ದೇವರನ್ನು ಯಾವುದೇ ರೀತಿಯಲ್ಲಿ ನಿಂದಿಸಿಲ್ಲ ಎಂದು ಹೇಳಿದ್ದರು.

ಮಹಿಳೆಯೊಬ್ಬರು ಆಡಿಯೋ ಮೆಸೇಜಿನಲ್ಲಿ ಆರೋಪಿಸಿದಂತೆ, ಸದ್ರಿ ಶಿಕ್ಷಕಿ ಹಿಂದು ದೇವರು ಅಥವಾ ಪ್ರಧಾನಿ ಮೋದಿ ಅವರನ್ನು ನಿಂದನೆ ಮಾಡಿಲ್ಲ. ವೈರಲ್ ಆದ ಆಡಿಯೋ ಮೆಸೇಜ್ ಸತ್ಯಕ್ಕೆ ದೂರವಾಗಿದ್ದು, ಅದರ ಬಗ್ಗೆ ತನಿಖೆ ನಡೆಸಬೇಕೆಂದು ಶಾಲೆಯ ಆಡಳಿತ ಮಂಡಳಿ ಪರವಾಗಿ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದೇವೆ. ಅಲ್ಲದೆ, ಶಾಲೆಯ ಆವರಣದಲ್ಲಿ ಅಹಿತಕರ ಘಟನೆ ಆಗದಂತೆ ರಕ್ಷಣೆ ನೀಡುವಂತೆ ಕೋರಿದ್ದೇವೆ. ಆಡಿಯೋ ಬಗ್ಗೆ ತನಿಖೆ ನಡೆಸಬೇಕೆಂದು ಪೊಲೀಸ್ ದೂರನ್ನೂ ನೀಡಿದ್ದೇವೆ ಎಂದು ಶಾಲೆಯ ಆಡಳಿತ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.

ಫೆ.12ರಂದು ಶಿಕ್ಷಣ ಇಲಾಖೆಯಿಂದ ಬಿಇಓ ಕಚೇರಿಯ ಅಧಿಕಾರಿಗಳು, ಡಿಡಿಪಿಐ ಕಚೇರಿಯ ಅಧಿಕಾರಿಗಳು ಶಾಲೆಗೆ ಬಂದಿದ್ದು, ಅವರಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ದೇವೆ. ಆನಂತರ ಶಾಸಕ ವೇದವ್ಯಾಸ ಕಾಮತ್ ಅವರು ಹಿಂದು ಸಂಘಟನೆ ಕಾರ್ಯಕರ್ತರ ಜೊತೆಗೆ ಆಗಮಿಸಿದ್ದು, ಅವರನ್ನು ಶಾಲೆಯ ಒಳಗಡೆ ಬಂದು ಮಾತನಾಡುವಂತೆ ಕೋರಿದ್ದೆವು. ಆದರೆ, ಒಳಗೆ ಬರಲು ಒಪ್ಪದೆ ಹೊರಗಡೆ ನಿಂತು ಪ್ರತಿಭಟನೆ ಮಾಡಿದ್ದಾರೆ. ಮಕ್ಕಳನ್ನೂ ಸೇರಿಸಿ ತಮ್ಮದೇ ಶಾಲೆಯ ವಿರುದ್ಧ ಘೋಷಣೆ ಕೂಗುವಂತೆ ಮಾಡಿದ್ದಾರೆ. ಟೀಚರ್ ತರಗತಿಯಲ್ಲಿ ಪಾಠ ಮಾಡುವಾಗ ಇಲ್ಲದೇ ಇದ್ದ ವಿದ್ಯಾರ್ಥಿಗಳು ಸೇರಿ ಘೋಷಣೆ ಕೂಗಿದ್ದಾರೆ. ಬಳಿಕ ಬಿಇಓ ಮತ್ತು ಇತರ ಶಿಕ್ಷಣ ಅಧಿಕಾರಿಗಳು, ಹೊರಗೆ ಪ್ರತಿಭಟನೆ ನಡೆಸುತ್ತಿರುವ ಶಾಸಕರನ್ನು ಭೇಟಿಯಾಗಲು ಸೂಚಿಸಿದಂತೆ ನಾವು ಹೊರಗಡೆ ಬಂದು ಮನವಿ ಕೇಳಿದ್ದೇವೆ. ಶಾಸಕರು ಕೂಡಲೇ ಆ ಶಿಕ್ಷಕಿಯನ್ನು ವಜಾ ಮಾಡದಿದ್ದರೆ ಧರಣಿ ಕೂರುವುದಾಗಿ ಹೆದರಿಸಿದ್ದಾರೆ.

ಶಿಕ್ಷಣ ಇಲಾಖೆಯ ನಿಮಯದ ಪ್ರಕಾರ, ತನಿಖೆಯನ್ನೇ ಮಾಡದೇ ವಜಾ ಮಾಡಲು ಆಗಲ್ಲ ಎಂದು ಶಾಸಕರಿಗೆ ಮನವರಿಕೆ ಮಾಡಿದ್ದೇವೆ. ಆದರೆ ಶಾಸಕರು ಮತ್ತು ಜೊತೆಗಿದ್ದವರು ಶಿಕ್ಷಕಿಯನ್ನು ವಜಾ ಮಾಡಲೇಬೇಕೆಂದು ಒತ್ತಡ ಹೇರಿದ್ದಾರೆ. ಅಲ್ಲಿ ಸೇರಿದ್ದ ಉದ್ರಿಕ್ತರನ್ನು ಶಮನಗೊಳಿಸುವುದು ಮತ್ತು ಶಾಂತಿಗೆ ಭಂಗ ಆಗದಂತೆ ನೋಡಿಕೊಳ್ಳಲು ಸಿಸ್ಟರ್ ಪ್ರಭಾ ಅವರನ್ನು ಹುದ್ದೆಯಿಂದ ವಜಾ ಮಾಡುವ ಬಗ್ಗೆ ಹೇಳಿಕೆ ನೀಡುವಂತಾಗಿತ್ತು ಎಂದು ಶಾಲೆಯ ಪರವಾಗಿ ಮುಖ್ಯ ಶಿಕ್ಷಕಿ ಅನಿತಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆಡಿಯೋ ಸಂದೇಶ ಕಳುಹಿಸಿರುವ ಮಹಿಳೆ ಜೆರೋಸಾ ಶಾಲೆಯಲ್ಲಿ ಕಲಿಯುವ ಮಕ್ಕಳ ಪೋಷಕರೇ ಅಥವಾ ಬೇರೆ ವ್ಯಕ್ತಿಯೇ ಎಂಬ ಬಗ್ಗೆ ತನಿಖೆ ಆಗಬೇಕು. ಶಾಲೆಯ ಪೋಷಕಿ ಆಗಿಲ್ಲದೇ ಇದ್ದರೆ, ಈ ರೀತಿಯ ಸುಳ್ಳು ಹಬ್ಬಿಸುವ ಆಕೆಯ ಅಜೆಂಡಾ ಏನಿತ್ತು ಎಂಬ ಬಗ್ಗೆ ತನಿಖೆ ನಡೆಸಬೇಕು. ಆಕೆ ಪೋಷಕಿಯೇ ಆಗಿದ್ದರೆ ಈ ವಿಚಾರದ ಬಗ್ಗೆ ಶಾಲೆಯ ಆಡಳಿತ ಮಂಡಳಿಗೆ ಲಿಖಿತ ದೂರನ್ನು ಯಾಕೆ ನೀಡಿರಲಿಲ್ಲ. ಶಾಲೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿರುವುದು ಜೆರೋಸಾ ಸಂಸ್ಥೆಯ ಗೌರವಕ್ಕೆ ಧಕ್ಕೆ ಉಂಟುಮಾಡಿದೆ. ನಾವು ಎಲ್ಲ ಮತ ಧರ್ಮಗಳ ಬಗ್ಗೆ ಗೌರವ ಹೊಂದಿದ್ದು, ವರ್ಗ, ಜಾತಿ ವಿಚಾರದಲ್ಲಿ ತಾರತಮ್ಯ ಮಾಡಿಲ್ಲ. ಪ್ರತಿ ವರ್ಷ ದೀಪಾವಳಿ, ಈದ್, ಕ್ರಿಸ್ಮಸ್ ಆಚರಣೆ ಮಾಡುತ್ತೇವೆ. ಕಡಿಮೆ ಶುಲ್ಕದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತೇವೆ ಎಂದು ಮುಖ್ಯ ಶಿಕ್ಷಕಿ ಅನಿತಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Mangalore Sister Prabha from Gerosa school was dismissed by pressure of MLA Vedavyas Kamath says school administration. In the letter sister prabha has clarified that no remarks were made on Hindu Gods during the teaching. A case has been filed at the Pandeshwar police station against two MLAs, two corporators of the Mangalore City Corporation (MCC), and the leader of an organization on charges of allegedly threatening the administrative board of St Gerosa School in the city.