CM Siddaramaiah, Mangalore congress rally, BJP: ಬಿಜೆಪಿಯ ಕೋಲೆ ಬಸವ ಎಂಪಿಗಳು ಕನ್ನಡಿಗರಿಗೆ ದ್ರೋಹ ಮಾಡಿದ್ದಾರೆ, ತೆರಿಗೆ ಅನ್ಯಾಯ ಆದ್ರೂ ಸುಮ್ಮನಿದ್ದಾರೆ, ನಾವು ಗ್ಯಾರಂಟಿ ಕೊಟ್ಟೂ ದಿವಾಳಿಯಾಗಿಲ್ಲ, ಮೋದಿ ನಮ್ಮ ಗ್ಯಾರಂಟಿಯನ್ನೇ ಕದ್ಬಿಟ್ಟಿದ್ದಾರೆ ; ಸಿಎಂ ಸಿದ್ದರಾಮಯ್ಯ

17-02-24 07:50 pm       Mangalore Correspondent   ಕರಾವಳಿ

ಇಡೀ ದೇಶದಲ್ಲಿ ಎರಡನೇ ಅತಿ ಹೆಚ್ಚು ತೆರಿಗೆ ನೀಡುವ ರಾಜ್ಯ ನಮ್ಮದು. ಆದರೆ 4.30 ಲಕ್ಷ ಕೋಟಿ ರೂಪಾಯಿ ತೆರಿಗೆಯನ್ನು ಪ್ರತಿ ವರ್ಷ ಕೇಂದ್ರಕ್ಕೆ ನೀಡುತ್ತೇವೆ. ನಮಗೆ ತಿರುಗಿ ಕೋಡುತ್ತಿರೋದು ಕೇವಲ 50,527 ಕೋಟಿ.

ಮಂಗಳೂರು, ಫೆ.17: ಇಡೀ ದೇಶದಲ್ಲಿ ಎರಡನೇ ಅತಿ ಹೆಚ್ಚು ತೆರಿಗೆ ನೀಡುವ ರಾಜ್ಯ ನಮ್ಮದು. ಆದರೆ 4.30 ಲಕ್ಷ ಕೋಟಿ ರೂಪಾಯಿ ತೆರಿಗೆಯನ್ನು ಪ್ರತಿ ವರ್ಷ ಕೇಂದ್ರಕ್ಕೆ ನೀಡುತ್ತೇವೆ. ನಮಗೆ ತಿರುಗಿ ಕೋಡುತ್ತಿರೋದು ಕೇವಲ 50,527 ಕೋಟಿ. ಇದು ಅನ್ಯಾಯ ಅಲ್ವೇ.. 25 ಮಂದಿ ಎಂಪಿಗಳು ಕೋಲೆ ಬಸವರ ಥರ ಹೋಗಿದ್ದೀರಲ್ಲಾ.. ಕನ್ನಡಿಗರಿಗಾದ ಅನ್ಯಾಯವನ್ನು ನೀವು ಕೇಳಿದ್ದೀರಾ.. ನೀವು ಕನ್ನಡಿಗರಿಗೆ ದ್ರೋಹ ಮಾಡಿದ್ದೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ನಗರದ ಅಡ್ಯಾರಿನಲ್ಲಿ ನಡೆದ ಎರಡು ಜಿಲ್ಲೆಗಳ ಕಾರ್ಯಕರ್ತರ ರಾಜ್ಯ ಮಟ್ಟದ ಕಾಂಗ್ರೆಸ್ ಸಮಾವೇಶದಲ್ಲಿ ಸಿದ್ದರಾಮಯ್ಯ ವೀರಾವೇಶದ ಭಾಷಣ ಮಾಡಿದರು. ದೇಶ ಮತ್ತು ರಾಜ್ಯದ ರಾಜಕೀಯವನ್ನು ಅರ್ಥ ಮಾಡಿಕೊಳ್ಳಬಲ್ಲವರು ಕರಾವಳಿ ಜನ. ಹಾಗಾಗಿ ಕೈಮುಗಿದು ಕೇಳಿಕೊಳ್ಳುತ್ತೇನೆ, ಬಿಜೆಪಿಯನ್ನು ನಂಬಬೇಡಿ, ಬಿಜೆಪಿ ಎಂದೂ ನುಡಿದಂತೆ ನಡೆದಿಲ್ಲ. ಪ್ರಧಾನಿ ಹತ್ತು ವರ್ಷಗಳ ಹಿಂದೆ ಏನೇನು ಹೇಳಿದ್ರು ಅಂತ ಮನನ ಮಾಡಿಕೊಳ್ಳಿ. ಕೋಮುವಾದ ಹೇಳೋದು ಬಿಟ್ಟರೆ, ಧರ್ಮಗಳ ನಡುವೆ ಬೆಂಕಿ ಹಚ್ಚೋದು ಬಿಟ್ಟರೆ ಬೇರೇನು ಮಾಡಿದ್ದಾರೆ. 2014ರಲ್ಲಿ ಮೋದಿ ಕೊಟ್ಟ ಭರವಸೆ ಈಡೇರಿಸಿದ್ದಾರೆಯೇ.. ಬೆಲೆಯೇರಿಕೆ ಕಡಿಮೆ ಮಾಡಿ ಅಚ್ಚೇ ದಿನ ತಂದಿದ್ದಾರೆಯೇ.. ಪೆಟ್ರೋಲ್, ಡೀಸೆಲ್ ಬೆಲೆ ಏನಾಗಿದೆ, ಗೊಬ್ಬರ, ಗ್ಯಾಸ್ ಬೆಲೆ ಏನಾಗಿದೆ ಅಂತ ಯೋಚನೆ ಮಾಡಿ ನೋಡಿ.  

ಗ್ಯಾರಂಟಿ ಕೊಟ್ಟರೂ ದಿವಾಳಿಯಾಗಿಲ್ಲ

ನಮ್ಮ ಕಾರ್ಯಕರ್ತರು ಪ್ರಜ್ಞಾವಂತರಿದ್ದಾರೆ, ನುಡಿದಂತೆ ನಡೆದಿದ್ದೇವೋ ಅಂತ ವಿಮರ್ಶೆ ಮಾಡುವ ಶಕ್ತಿ ಇದೆ, ನಾವು ಆರೇ ತಿಂಗಳಲ್ಲಿ ಚುನಾವಣೆಯಲ್ಲಿ ಹೇಳಿದ್ದ ಐದು ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. ಶಕ್ತಿ ಯೋಜನೆಯಲ್ಲಿ ಬರೋಬ್ಬರಿ 155 ಕೋಟಿ ಮಹಿಳೆಯರು ಫ್ರೀಯಾಗಿ ಪ್ರಯಾಣ ಮಾಡಿದ್ದಾರೆ. ಬಿಜೆಪಿಯವರು ಯಾವತ್ತಾದರೂ ಇಂಥ ಕೆಲಸ ಮಾಡಿದ್ರಾ.. ಒಂದು ಲಕ್ಷ ಜನರು ಯುವನಿಧಿಯನ್ನು ನೋಂದಣಿ ಮಾಡಿಸಿದ್ದಾರೆ. ಈ ವರ್ಷ ಯಾವುದೇ ಮಧ್ಯವರ್ತಿ ಇಲ್ಲದೆ 36 ಸಾವಿರ ಕೋಟಿ ರೂ. ಜನರ ಖಾತೆಗೆ ನೇರವಾಗಿ ತಲುಪಿಸಿದ್ದೇವೆ, ಬಿಜೆಪಿಯವರು ಗ್ಯಾರಂಟಿ ಕೊಡಕ್ಕಾಗಲ್ಲ, ರಾಜ್ಯ ದಿವಾಳಿಯಾಗತ್ತೆ ಎಂದಿದ್ದರು. ಗ್ಯಾರಂಟಿ ಕೊಟ್ಟು ದಿವಾಳಿ ಆಗಿಲ್ಲ, ಆರ್ಥಿಕವಾಗಿ ಸುಭದ್ರವಾಗಿದ್ದೇವೆ.

ನಿನ್ನೆ 3.83 ಲಕ್ಷ ಕೋಟಿ ರೂ. ಬಜೆಟ್ ಮಾಡಿದ್ದೇನೆ. ಹಿಂದಿನ ಬಾರಿ ಬಿಜೆಪಿ 3.2 ಲಕ್ಷ ಕೋಟಿ ಬಜೆಟ್ ಮಂಡಿಸಿತ್ತು. ಆನಂತರ ನಾನು ಅಧಿಕಾರಕ್ಕೆ ಬಂದು 3.27 ಲಕ್ಷ ಕೋಟಿ ಮಧ್ಯಂತರ ಬಜೆಟ್ ಮಾಡಿದ್ದೆ. ಈಗ 46 ಸಾವಿರ ಕೋಟಿ ಹೆಚ್ಚುವರಿಯಾಗಿ 3.83 ಲಕ್ಷ ಕೋಟಿಯಾಗಿದೆ. ಬೊಕ್ಕಸ ದಿವಾಳಿಯಾದ್ರೆ ಇದನ್ನು ಮಾಡೋಕೆ ಆಗುತ್ತಾ ಮೋದಿಯವರೇ ಎಂದು ಪ್ರಶ್ನಿಸಿದರು ಸಿದ್ದರಾಮಯ್ಯ. ಈಗ ಮೋದಿ ಗ್ಯಾರಂಟಿ ಹೇಳುತ್ತಿದ್ದಾರೆ, ನಮ್ಮ ಗ್ಯಾರಂಟಿಯನ್ನೇ ಕದ್ಬಿಟ್ಟಿದ್ದಾರೆ. ಇವರು ಹೇಳಿದ್ದನ್ನು ಮಾಡಿದ್ದಾರೆಯೇ ಎಂದು ಹೇಳಿದ ಸಿದ್ದರಾಮಯ್ಯ, ಬಜೆಟ್ ಅಧಿವೇಶವನ್ನು ಬಹಿಷ್ಕರಿಸಿದ್ದು ಕರ್ನಾಟಕದ ಇತಿಹಾಸದಲ್ಲಿ ಯಾವತ್ತೂ ಆಗಿಲ್ಲ. ಬಿಜೆಪಿಯವರು ಮೊದಲೇ ಪ್ಲೇಕಾರ್ಡ್ ಹಿಡಿದು ಬಂದಿದ್ದರು. ಇವರಿಗೆ ಸತ್ಯ ತಡೆಯಕ್ಕಾಗಲ್ಲ. ಮೈಉರಿ ಬಂದಿದೆ. ನಾವು ಗ್ಯಾರಂಟಿ ಕೊಟ್ಟೂ ಇಷ್ಟೊಂದು ಕೊಡುಗೆ ಕೊಡುತ್ತೀವಲ್ಲಾ.. ಚರ್ಚೆ ಮಾಡೋದಕ್ಕೂ ಬರ್ತಾ ಇಲ್ಲ ಎಂದರು.  

ಕೇಂದ್ರ ಸರಕಾರಕ್ಕೆ ರಾಜ್ಯದಿಂದ 4.30 ಲಕ್ಷ ಕೋಟಿ ಹೋಗುತ್ತಿದ್ದರೆ ಮರಳಿ ಬರೋದು 50,257 ಸಾವಿರ ಕೋಟಿ. ಅಂದರೆ ನೂರು ಕೋಟಿ ತೆರಿಗೆಯಲ್ಲಿ ವಾಪಸ್ ಬರ್ತಿರೋದು 13 ರೂ. ಮಾತ್ರ. ಇದನ್ನು ಹೇಳಿದ್ರೆ ವರಿಗೆ ಮೈಯಲ್ಲಿ ಉರಿ ಬರತ್ತೆ. ಏಳು ಕೋಟಿ ಕನ್ನಡಿಗರ ರಕ್ಷಣೆಯ ಬದ್ಧತೆ ಇದ್ರೆ ಬಿಜೆಪಿಯವರೂ ದೆಹಲಿಯಲ್ಲಿ ನಡೆಸಿದ ಧರಣಿಯಲ್ಲಿ ಭಾಗವಹಿಸಬೇಕಿತ್ತು. ಎಲ್ಲರಿಗೂ ಪತ್ರ ಬರೆದಿದ್ದೇನೆ, ಕನ್ನಡಿಗರಿಗೆ ಅನ್ಯಾಯ ಆಗಿದೆ. ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಿದೆ. ಮಿಸ್ಟರ್ ಕಟೀಲ್, ಶೋಭಾ ಕರಂದ್ಲಾಜೆ ಯಾವತ್ತಾದರೂ ನೀವು ಈ ಬಗ್ಗೆ ಬಾಯಿ ಬಿಟ್ಟಿದ್ದೀರಾ.. ನಿಮಗೆ ಸ್ವಾಭಿಮಾನ ಇದ್ದರೆ, ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಬೇಕು ಎಂದು ಕಾರ್ಯಕರ್ತರಿಗೆ ಹೇಳಿದರು.

14ನೇ ಹಣಕಾಸು ಆಯೋಗದಲ್ಲಿ 4.78 ಪರ್ಸೆಂಟ್ ಅನುದಾನ ಅಂತ ಇತ್ತು. 15ನೇ ಹಣಕಾಸು ಆಯೋಗ ಅದನ್ನು 3.7 ಪರ್ಸೆಂಟ್ ಮಾಡಿತ್ತು. ಇದರ ಪ್ರಕಾರ. 5400 ಕೋಟಿ ಅನುದಾನ ಕೊಡಬೇಕಿತ್ತು, ಕರ್ನಾಟಕದಿಂದಲೇ ಗೆದ್ದು ಹೋಗಿರುವ ನಿರ್ಮಲಾ ಸೀತಾರಾಮನ್ ಕೊಡಕ್ಕಾಗಲ್ಲ ಎಂದು ತಿರಸ್ಕರಿಸಿ ಕನ್ನಡಿಗರಿಗೆ ಅನ್ಯಾಯ ಮಾಡಿದ್ದಾರೆ. ಮಿಸ್ಟರ್ ಅಶೋಕ, ಯಡಿಯೂರಪ್ಪ, ಬೊಮ್ಮಾಯಿ ಗೊತ್ತಾಗಲ್ವೇ.. ಟೋಪಿ ಹಾಕ್ಕೊಂಡವರು ನನ್ನ ಕಚೇರಿಗೆ ಬರಬೇಡಿ ಅಂತ ಯತ್ನಾಳ್ ಹೇಳ್ತಾರೆ, ಮೋದಿ ಸಬ್ ಕಾ ವಿಕಾಸ್, ಸಬ್ ಕಾ ಸಾಥ್ ಅಂತ ಹೇಳ್ತಾರಲ್ಲಾ..  

ಮೋದಿ ಸಿರಿವಂತರ ಪರವಾಗಿದ್ದಾರೆ

ಬಡವರಿಗೆ ಬ್ಯಾಂಕ್ ಸವಲತ್ತು ಸಿಗಬೇಕು ಅಂತ ಇಂದಿರಾ ಗಾಂಧಿ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದ್ದರು. ಇವತ್ತು ಮೋದಿ ಬ್ಯಾಂಕನ್ನು ಖಾಸಗೀಕರಣ ಮಾಡುತ್ತಿದ್ದಾರೆ. ಬಡವರ ಮೇಲೆ ತೆರಿಗೆ ಹೆಚ್ಚಿಸುತ್ತಾರೆ. ಕಾರ್ಪೊರೇಟ್ ಕಂಪನಿಗಳ 30 ಪರ್ಸೆಂಟ್ ಇದ್ದ ತೆರಿಗೆಯನ್ನು 22 ಪರ್ಸೆಂಟಿಗೆ ಇಳಿಸುತ್ತಾರೆ. ಇವರು ಶ್ರೀಮಂತರು, ಉದ್ಯಮಿಗಳ ಪರವಾಗಿದ್ದಾರೆ ಅನ್ನೋದನ್ನು ಬೇರೆ ಹೇಳಬೇಕಾ.. ನಾವು ಈ ಬಾರಿ 28ರಲ್ಲಿ 20 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ. ಬಿಜೆಪಿಯವರ ಹಾಗೆ 28ರಲ್ಲಿ 28 ಅಂತ ಸುಳ್ಳು ಹೇಳಲ್ಲ ಎಂದರು.

CM Siddaramaiah slams at BJP leaders at Mangalore Congress convention rally. "In the upcoming elections, we must secure a minimum of 20 seats. I urge the people not to trust the BJP, as they consistently fail to fulfill their promises. Reflect on the commitments made by Prime Minister Narendra Modi a decade ago, none of which have been realized. The BJP manipulates emotions and exploits religious and caste divisions among the populace. Since 2014, no one has experienced 'acche din' as promised by the BJP.