Siddaramaiah budget, Aikala Harish Shetty, Bunt Community: ಬಂಟ ಅಭಿವೃದ್ಧಿ ನಿಗಮದ ಬಗ್ಗೆ ಚಕಾರ ಎತ್ತದ ಸಿದ್ದರಾಮಯ್ಯ ; ಬಜೆಟಲ್ಲಿ ನಿರಾಸೆ ಮೂಡಿಸಿದ್ದಾರೆ, ಮತ್ತೆ ಸಿಎಂ ಬಳಿ ಹೋಗುತ್ತೇವೆ ; ಐಕಳ ಹರೀಶ್ ಶೆಟ್ಟಿ

19-02-24 09:54 pm       Mangalore Correspondent   ಕರಾವಳಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆ ಸಂದರ್ಭದಲ್ಲಿ ಬಂಟ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವ ಬಗ್ಗೆ ಘೋಷಣೆ ಮಾಡದಿರುವುದು ಬಂಟ ಸಮುದಾಯಕ್ಕೆ ನಿರಾಸೆ ಮೂಡಿಸಿದೆ.

ಮಂಗಳೂರು, ಫೆ.19: ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆ ಸಂದರ್ಭದಲ್ಲಿ ಬಂಟ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವ ಬಗ್ಗೆ ಘೋಷಣೆ ಮಾಡದಿರುವುದು ಬಂಟ ಸಮುದಾಯಕ್ಕೆ ನಿರಾಸೆ ಮೂಡಿಸಿದೆ. ಇದಕ್ಕಾಗಿ ಮತ್ತೊಮ್ಮೆ ಮುಖ್ಯಮಂತ್ರಿಯನ್ನು ಭೇಟಿ ಮಾಡುತ್ತೇವೆ, ಬಂಟ ಸಮುದಾಯದ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸುವ ಅಗತ್ಯ ಇರುವುದನ್ನು ಒತ್ತಿ ಹೇಳುತ್ತೇವೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದ್ದಾರೆ.

ನಗರದ ಬಂಟ್ಸ್ ಹಾಸ್ಟೆಲ್ ಕಟ್ಟಡದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಕಳೆದ ಅಕ್ಟೋಬರ್ ತಿಂಗಳಲ್ಲಿ ಉಡುಪಿಯಲ್ಲಿ ನಡೆಡ ವಿಶ್ವ ಬಂಟ ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯ ಬಂಟ ನಿಗಮಕ್ಕೆ 500 ಕೋಟಿ ನಿಧಿಯನ್ನು ತೆಗೆದಿಟ್ಟು ಬಜೆಟಲ್ಲಿ ಘೋಷಿಸುತ್ತೇನೆ ಎಂದು ಹೇಳಿದ್ದರು. ಸಿದ್ದರಾಮಯ್ಯ ನುಡಿದಂತೆ ನಡೆದವರು ಎಂದು ಹೆಸರು ಪಡೆದವರು. ಬಂಟ ನಿಗಮವನ್ನೂ ಘೋಷಣೆ ಮಾಡುತ್ತಾರೆಂಬ ನಿರೀಕ್ಷೆ ಇತ್ತು. ಆದರೆ ಬಜೆಟಲ್ಲಿ ನಿರಾಸೆ ಮೂಡಿಸಿದ್ದಾರೆ. ಕಾಂಗ್ರೆಸ್ ಬಂಟ ನಿಗಮದ ಬಗ್ಗೆ ತನ್ನ ಪ್ರಣಾಳಿಕೆಯಲ್ಲೂ ಹೇಳಿತ್ತು.

ಬಂಟ ಸಮುದಾಯದ ಜನಪ್ರತಿನಿಧಿಗಳು ಇದರ ಬಗ್ಗೆ ವಿಧಾನಸಭೆಯಲ್ಲಿ ಧ್ವನಿ ಎತ್ತಬೇಕು. ಒಮ್ಮೆ ಪುತ್ತೂರು ಶಾಸಕ ಅಶೋಕ್ ರೈ ಈ ಬಗ್ಗೆ ಪ್ರಸ್ತಾಪಿಸಿದ್ದರು. ಈಗಲೂ ನಾವು ಕಾಂಗ್ರೆಸ್ ಪಕ್ಷದ ಬಂಟ ನಾಯಕರಲ್ಲಿ ಒತ್ತಾಯ ಮಾಡುತ್ತೇವೆ, ಅವರ ಜೊತೆಯಲ್ಲೇ ಸಿದ್ದರಾಮಯ್ಯ ಅವರನ್ನು ಮತ್ತೆ ಭೇಟಿ ಮಾಡುತ್ತೇವೆ. ಜಾಗತಿಕ ಬಂಟರ ಸಂಘದ ಅಧ್ಯಕ್ಷನಾಗಿ ನನ್ನಲ್ಲಿ ಸಮುದಾಯದ ಬಂಧುಗಳು ಕೇಳುತ್ತಿದ್ದಾರೆ. ಬಂಟ ನಿಗಮ ಸ್ಥಾಪನೆ ಮಾಡಲಾಗದಿದ್ದರೆ ನನ್ನಿಂದ ಸಾಧ್ಯವಿಲ್ಲ ಎನ್ನುವ ಸಂದೇಶ ಹೋಗುವುದರಿಂದ ನನ್ನ ಅಧ್ಯಕ್ಷ ಸ್ಥಾನ ತ್ಯಜಿಸಬೇಕಾಗುತ್ತದೆ ಎಂದು ಹರೀಶ್ ಶೆಟ್ಟಿ ಹೇಳಿದರು.

ಕಳೆದ ಬಾರಿಯ ಬಂಟ ಸಮ್ಮೇಳನದಲ್ಲಿ ಬಿಜೆಪಿ, ಕಾಂಗ್ರೆಸ್ ಎಲ್ಲ ಪಕ್ಷದವರೂ ಭಾಗವಹಿಸಿದ್ದರು. ಬಂಟ ನಿಗಮದ ಬಗ್ಗೆ ಭರವಸೆ ಮಾತುಗಳನ್ನಷ್ಟೇ ನೀಡಿದ್ದಾರೆ ಎಂದರು. ನಾರಾಯಣ ಗುರು ಅಭಿವೃದ್ಧಿ ನಿಗಮವನ್ನೂ ಘೋಷಣೆ ಮಾಡಿದ್ದಾರೆ, ಅನುದಾನವನ್ನೇ ನೀಡಿಲ್ಲ ಎಂದು ಗಮನಸೆಳೆದಾಗ, ಆ ಬಗ್ಗೆ ಕಾಳಜಿ ಇದೆ. ಅವರಿಗೂ ಕೊಡಬೇಕಾದ್ದನ್ನು ಕೊಡಬೇಕು. ಅವರು ಸಾಕಷ್ಟು ಹೋರಾಟವನ್ನೂ ಮಾಡಿದ್ದಾರೆ. ನಮ್ಮಲ್ಲಿಯೂ 50 ಶೇಕಡಾ ಜನರು ಬಡವರಿದ್ದಾರೆ. ಸಮುದಾಯದ ಅಭಿವೃದ್ಧಿಗಾಗಿ ನಾವು ನಿಗಮ ಕೇಳುತ್ತಿದ್ದೇವೆ ಎಂದರು. ತೋನ್ಸೆ ಆನಂದ ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ಉಳ್ತೂರು ಮೋಹನದಾಸ ಶೆಟ್ಟಿ, ಚಂದ್ರಹಾಸ ಡಿ. ಶೆಟ್ಟಿ, ಬಾಳ ಜಗನ್ನಾಥ ಶೆಟ್ಟಿ ಉಪಸ್ಥಿತರಿದ್ದರು.

Siddaramaiah budget injustice to bunts community says Aikala Harish Shetty in Mangalore.