Gerosa School, Threat call, Teacher: ಜೆರೋಸಾ ಶಾಲೆಯ ಘಟನೆ ಹಿನ್ನೆಲೆ ; ಮಾಧ್ಯಮಕ್ಕೆ ಹೇಳಿಕೆ ನೀಡಿದ್ದ ಪೋಷಕಿಗೆ ಜೀವ ಬೆದರಿಕೆ, ಶಿಕ್ಷಕಿ ಕೆಲಸದಿಂದ ಕಿತ್ತು ಹಾಕಿದ ಹೋಲಿ ಏಂಜಲ್ ಸಂಸ್ಥೆ 

20-02-24 10:16 am       Mangalore Correspondent   ಕರಾವಳಿ

ಸಂತ ಜೆರೊಸಾ ಶಾಲೆಯಲ್ಲಿ ಹಿಂದು ಧರ್ಮ ಅವಹೇಳನದ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದ ಪೋಷಕರೊಬ್ಬರಿಗೆ ವಿದೇಶದಿಂದ ಜೀವ ಬೆದರಿಕೆ ಕರೆ ಮಾಡಲಾಗಿದೆ.

ಮಂಗಳೂರು, ಫೆ.20: ಸಂತ ಜೆರೊಸಾ ಶಾಲೆಯಲ್ಲಿ ಹಿಂದು ಧರ್ಮ ಅವಹೇಳನದ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದ ಪೋಷಕರೊಬ್ಬರಿಗೆ ವಿದೇಶದಿಂದ ಜೀವ ಬೆದರಿಕೆ ಕರೆ ಮಾಡಲಾಗಿದೆ. ಈ ಬಗ್ಗೆ ಪೋಷಕಿ ಮಂಗಳೂರಿನ ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದಾರೆ. 

ಅಲ್ಲದೆ, ಜೆರೊಸಾ ಘಟನೆ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಕಾರಣಕ್ಕೆ ಶಿಕ್ಷಕಿಯೂ ಆಗಿರುವ ಪೋಷಕಿ ಕವಿತಾ ಅವರನ್ನು ತಾವು ಕೆಲಸ ಮಾಡುತ್ತಿದ್ದ ಶಾಲೆಯಿಂದ ಕಿತ್ತು ಹಾಕಲಾಗಿದೆ. ತೊಕ್ಕೊಟ್ಟಿನ ಹೋಲಿ ಏಂಜಲ್ ಪ್ರಾಥಮಿಕ ಶಾಲೆಯಲ್ಲಿ ಕವಿತಾ ಶಿಕ್ಷಕಿಯಾಗಿದ್ದರು. ಕವಿತಾ ಅವರು ಮಂಗಳೂರಿನ ಜಪ್ಪಿನಮೊಗರು ನಿವಾಸಿಯಾಗಿದ್ದು ಮಗಳು ಸಂತ ಜೆರೋಸಾ ಶಾಲೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿನಿ. ರಾಮನ ಬಗ್ಗೆ ಅವಹೇಳನಗೈದ ಶಿಕ್ಷಕಿ ಸಿಸ್ಟರ್ ಪ್ರಭಾ ಬಗ್ಗೆ ಮನೆಯಲ್ಲಿ ಹೇಳಿಕೊಂಡಿದ್ದಳು. 

ಘಟನೆಯ ಬಳಿಕ ಫೆ.10 ರಂದು ಹಿಂದು ಸಂಘಟನೆಗಳ ಜೊತೆಗೆ ಡಿಡಿಪಿಐ ಕಚೇರಿಗೆ ಬಂದಿದ್ದ ಕವಿತಾ, ಹಿಂದು ಧರ್ಮ ಅವಹೇಳನ ಮಾಡಿರುವ ಶಿಕ್ಷಕಿ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯ ಮಾಡಿದ್ದರು.‌ ಈ ವೇಳೆ ಕವಿತಾ ಅವರು ಮಾತನಾಡಿದ್ದ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಅಷ್ಟಕ್ಕೇ ಶಿಕ್ಷಕಿ ಹುದ್ದೆಯಿಂದಲೇ ಕವಿತಾ ಅವರನ್ನು ಕ್ರೈಸ್ತ ಶಿಕ್ಷಣ ಸಂಸ್ಥೆ ಹೋಲಿ ಎಂಜಲ್ ಶಾಲೆಯ ಆಡಳಿತ ಮಂಡಳಿ ಕಿತ್ತು ಹಾಕಿದೆ. ಹೋಲಿ ಎಂಜಲ್ ಶಾಲೆಯಲ್ಲಿ ಕವಿತಾ ಪ್ರಾಥಮಿಕ ತರಗತಿ ಶಿಕ್ಷಕಿಯಾಗಿದ್ದರು. 

ನಿಮ್ಮ ಸೇವೆ ಇನ್ನು ಅಗತ್ಯ ಇಲ್ಲ ಎಂದು ಹೋಲಿ ಎಂಜಲ್ ಶಾಲೆಯನ್ನು ನಡೆಸುತ್ತಿರುವ ಫಾದರ್ ಹೇಳಿದ್ದಾಗಿ ಕವಿತಾ ತಿಳಿಸಿದ್ದಾರೆ. ಅಲ್ಲದೆ, ಕವಿತಾ ಅವರ ಮೊಬೈಲ್ ಗೆ ನಿರಂತರ ಬೆದರಿಕೆ ಕರೆಗಳು ಬರುತ್ತಿದ್ದು ರಾತ್ರಿ ವೇಳೆ ವಾಟ್ಸಪ್ ನಂಬರಿಗೆ ಅಶ್ಲೀಲವಾಗಿ ಆಡಿಯೋ ಮೆಸೇಜ್ ಗಳನ್ನು ಹಾಕುತ್ತಿದ್ದಾರೆ. ಕತಾರ್ ದೇಶದಿಂದ ರಾತ್ರಿ ವೇಳೆ ಫೋನ್ ಮಾಡಿ ಬೆದರಿಕೆ ಹಾಕುತ್ತಿದ್ದಾರೆ.‌ ಈ ಬಗ್ಗೆ ಕಂಕನಾಡಿ ನಗರ ಠಾಣೆಗೆ ಸೋಮವಾರ ರಾತ್ರಿ ದೂರು ನೀಡಿದ್ದಾರೆ. ‌

Mangalore Gerosa school audio viral, teacher of Holy Angel school dismissed, teacher gets threat calls. The school dismissed teacher Kavitha for taking to media against the school as her daughter is studying at Gerosa.