Mangalore, Harish Acharya, old pension facility: ಅನುದಾನಿತ ಶಾಲಾ ಶಿಕ್ಷಕರಿಗೂ ಹಳೇ ಪಿಂಚಣಿ ಸೌಲಭ್ಯ ವಿಸ್ತರಣೆಗೆ ಹರೀಶ್ ಆಚಾರ್ಯ ಆಗ್ರಹ 

20-02-24 04:29 pm       Mangalore Correspondent   ಕರಾವಳಿ

ಹಳೆಯ ಪಿಂಚಣಿ ಯೋಜನೆಯ (OPS) ಸೌಲಭ್ಯವನ್ನು ಏಪ್ರಿಲ್ 1, 2006 ರ ಪೂರ್ವದಲ್ಲಿ ಅಧಿಸೂಚಿತಗೊಂಡು ನಂತರದಲ್ಲಿ ನೇಮಕಾತಿಯನ್ನು ಪಡೆದ ಎಲ್ಲಾ ಸರಕಾರಿ ನೌಕರರಿಗೆ ಅನ್ವಯಗೊಳಿಸಲು ರಾಜ್ಯ ಸರಕಾರ ಆದೇಶ ಮಾಡಿದೆ.

ಮಂಗಳೂರು, ಫೆ.20: ಹಳೆಯ ಪಿಂಚಣಿ ಯೋಜನೆಯ (OPS) ಸೌಲಭ್ಯವನ್ನು ಏಪ್ರಿಲ್ 1, 2006 ರ ಪೂರ್ವದಲ್ಲಿ ಅಧಿಸೂಚಿತಗೊಂಡು ನಂತರದಲ್ಲಿ ನೇಮಕಾತಿಯನ್ನು ಪಡೆದ ಎಲ್ಲಾ ಸರಕಾರಿ ನೌಕರರಿಗೆ ಅನ್ವಯಗೊಳಿಸಲು ರಾಜ್ಯ ಸರಕಾರ ಆದೇಶ ಮಾಡಿದೆ. ಆದರೆ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೂ ಈ ಸೌಲಭ್ಯವನ್ನು ವಿಸ್ತರಿಸಲು ಮೀನಮೇಷ ಎಣಿಸುತ್ತಿರುವ ರಾಜ್ಯ ಸರಕಾರ ಅನುದಾನಿತ ಶಿಕ್ಷಕರ ಬಗ್ಗೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯರಾದ ಡಾ.ಎಸ್.ಆರ್ ಹರೀಶ್ ಆಚಾರ್ಯ ದೂರಿದ್ದಾರೆ. 

ಹಳೆಯ ಪಿಂಚಣಿ ವ್ಯವಸ್ಥೆಗೆ ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸಾವಿರಾರು ಅರ್ಹ ಶಿಕ್ಷಕರು ಇದ್ದಾರೆ. ಏಪ್ರಿಲ್ 1, 2006 ರ ಪೂರ್ವದಿಂದಲೇ ಸೇವೆಯಲ್ಲಿದ್ದು ನಂತರದಲ್ಲಿ ಅನುದಾನಕ್ಕೊಳಪಟ್ಟ ಶಿಕ್ಷಕರು ಸಹಜವಾಗಿ ಹಳೆ ಪಿಂಚಣಿ ವ್ಯವಸ್ಥೆಗೆ ಅರ್ಹತೆಯನ್ನು ಹೊಂದಿದ್ದಾರೆ. ಹಾಗೆಯೇ ನಿಗದಿಪಡಿಸಿದ  ದಿನಾಂಕದ ಪೂರ್ವದಿಂದಲೇ ಹಲವಾರು ಖಾಸಗಿ ಅನುದಾನಿತ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದ್ದು ನಂತರ ನೇಮಕಾತಿಯನ್ನು ಹೊಂದಿದ ಅರ್ಹ ಶಿಕ್ಷಕರೂ ಇದ್ದಾರೆ. ಇಂತಹ ಶಿಕ್ಷಕರು ಹಳೆಯ ಪಿಂಚಣಿ ವ್ಯವಸ್ಥೆಗೆ ಸಹಜವಾಗಿ ಅರ್ಹತೆ ಉಳ್ಳವರಾಗಿದ್ದಾರೆ. ಇದು ಸರಕಾರಕ್ಕೆ ಹೆಚ್ಚು ಆರ್ಥಿಕ ವೆಚ್ಚದಾಯಕವೂ ಅಲ್ಲ. ಆದುದರಿಂದ ಅಂಥವರಿಗೂ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಅನ್ವಯಿಸಿ ರಾಜ್ಯ ಸರಕಾರವು ಎಲ್ಲರಿಗೂ ಸಹಜ ನ್ಯಾಯವನ್ನು ಕಲ್ಪಿಸುವ ತತ್ವವನ್ನು ಪಾಲಿಸಬೇಕಾಗಿದೆ ಎಂದು ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ. 

ಪಿಂಚಣಿ ವ್ಯವಸ್ಥೆಯಲ್ಲಿ ಉದ್ಯೋಗಿಯ ಪಾಲು ಹೇಗೆಯೋ ಹಾಗೆಯೇ ಉದ್ಯೋಗದಾತನ ಪಾಲೂ ಇರುತ್ತದೆ. ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ವೇತನದ ಅನುದಾನವನ್ನು ರಾಜ್ಯ ಸರಕಾರವು ನೀಡುತ್ತಿರುವುದರಿಂದ ಇಲ್ಲಿ ಸರಕಾರವೇ ಉದ್ಯೋಗದಾತನ ಪಾತ್ರವನ್ನು ನಿರ್ವಹಿಸಬೇಕಾಗುತ್ತದೆ.  ಎಪ್ರಿಲ್ 1, 2006 ರ ನೇಮಕಾತಿ ಹಾಗೂ ಅನುದಾನಕ್ಕೆ ಒಳಪಟ್ಟ ಶಿಕ್ಷಕರಿಗೆ ಉದ್ಯೋಗದಾತನ ನೆಲೆಯಲ್ಲಿ ಸಂಸ್ಥೆಯ ಆಡಳಿತ ಮಂಡಳಿಯು ಪಿಂಚಣಿಯ ಪಾಲನ್ನು ಒದಗಿಸಬೇಕೆಂದು ಸರಕಾರದ ನಿಯಮವಿದೆ. ಇದು ಸಮಂಜಸವೂ ಅಲ್ಲ. ಸಮರ್ಥನೀಯವೂ ಅಲ್ಲ. ಈ ವಿಷಯದಲ್ಲಿ ಅನಾವಶ್ಯಕವಾಗಿ ಸರಕಾರವು ಅನುದಾನಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯೆಡೆಗೆ ಬೆರಳು ತೋರಿಸಿ ನುಣುಚಿಕೊಳ್ಳುವುದು ಸರಿಯಲ್ಲ. ಆದುದರಿಂದ ಪಿಂಚಣಿಗೆ ಬೇಕಾದ ಉದ್ಯೋಗದಾತನ ಪಾಲನ್ನೂ ಸರಕಾರವು ಒದಗಿಸಿ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳಿಗೂ ಸೌಲಭ್ಯವನ್ನು ವಿಸ್ತರಿಸಬೇಕು ಎಂದು ಹರೀಶ್ ಆಚಾರ್ಯ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

The State Government has issued an order to extend the old pension scheme (OPS) facility to all government employees notified before April 1, 2006 and subsequently appointed. Dr SR Harish Acharya, a former syndicate member of Mangalore University, alleged that the state government was adopting a step-motherly attitude towards aided teachers as it was trying to extend this facility to teachers serving in aided educational institutions.