Mangalore Bajrang dal, Vijayendra, R Ashok: ವಿಪಕ್ಷ ಸ್ಥಾನದಿಂದ ಅಶೋಕ್ ಕಿತ್ತು ಹಾಕಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿಯಾಗಿ ಬಜರಂಗದಳ ಮುಖಂಡರ ಆಗ್ರಹ

22-02-24 10:29 pm       Mangalore Correspondent   ಕರಾವಳಿ

ಆರ್. ಅಶೋಕ್ ಅವರನ್ನು ವಿಪಕ್ಷ ಸ್ಥಾನದಿಂದ ತೆಗೆದು ಹಾಕಬೇಕು ಹಾಗೂ ಹಿಂದು ಕಾರ್ಯಕರ್ತರಲ್ಲಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಮುಖಂಡರು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನು ಭೇಟಿಯಾಗಿದ್ದಾರೆ.

ಮಂಗಳೂರು, ಫೆ.22: ಆರ್. ಅಶೋಕ್ ಅವರನ್ನು ವಿಪಕ್ಷ ಸ್ಥಾನದಿಂದ ತೆಗೆದು ಹಾಕಬೇಕು ಹಾಗೂ ಹಿಂದು ಕಾರ್ಯಕರ್ತರಲ್ಲಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಮುಖಂಡರು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನು ಭೇಟಿಯಾಗಿದ್ದಾರೆ.

ಪಬ್ ದಾಳಿಗೈದ ಬಜರಂಗದಳ ಕಾರ್ಯಕರ್ತರ ಮೇಲೆ ಮುಲಾಜಿಲ್ಲದೆ ಗೂಂಡಾ ಕಾಯ್ದೆ ಹಾಕಿದ್ದೆ ಎಂದು ಅಶೋಕ್ ಅಧಿವೇಶನದಲ್ಲಿ ಹೇಳಿರುವುದು ಹಿಂದು ಕಾರ್ಯಕರ್ತರ ಮನಸ್ಸಿಗೆ ಘಾಸಿಯುಂಟು ಮಾಡಿದೆ. ಹಿಂದುತ್ವ, ಸಿದ್ಧಾಂತ ಎಂದು ಹೋರಾಡಿಕೊಂಡು ಬಂದವರಿಗೆ ನೋವಾಗಿದೆ. ಸದನದಲ್ಲಿದ್ದು ಹಿಂದು ಕಾರ್ಯಕರ್ತರ ಭಾವನೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕಾದ ವ್ಯಕ್ತಿ ಕೇವಲವಾಗಿ ಮಾತನಾಡಿದ್ದಾರೆ. ಇಂತಹ ವ್ಯಕ್ತಿ ವಿಪಕ್ಷ ನಾಯಕನಾಗಿ ಮುಂದುವರಿಯಬಾರದು. ಪಕ್ಷದ ಹಿರಿಯರ ಗಮನಕ್ಕೆ ತಂದು ಅಶೋಕ್ ಅವರನ್ನು ಆ ಸ್ಥಾನದಿಂದ ಕಿತ್ತು ಹಾಕಬೇಕು. ಅಲ್ಲದೆ, ಸಾರ್ವಜನಿಕವಾಗಿ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ವಿಜಯೇಂದ್ರ ಅವರನ್ನು ಒತ್ತಾಯ ಮಾಡಿದ್ದಾರೆ.

ವಿಶ್ವ ಹಿಂದು ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್, ಬಜರಂಗದಳ ಪ್ರಾಂತ ಸಂಚಾಲಕ ಸುನಿಲ್ ಕೆ.ಆರ್ ನೇತೃತ್ವದಲ್ಲಿ ಹಿಂದು ಸಂಘಟನೆಗಳ ಮುಖಂಡರು ವಿಜಯೇಂದ್ರ ಅವರನ್ನು ಭೇಟಿಯಾಗಿದ್ದು, ಅಶೋಕ್ ವಿರುದ್ಧ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಿದ್ದಾರೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅಶೋಕ್ ವಿರುದ್ಧವೇ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ವಿರೋಧಿ ಅಭಿಯಾನ ಶುರುವಾಗಿದ್ದು ಬಿಜೆಪಿಯನ್ನು ಅಡಕತ್ತರಿಗೆ ಸಿಲುಕುವಂತೆ ಮಾಡಿದೆ.

Mangalore Bajrang dal members meet Vijayendra over R Ashok remarks, says to remove him out of Assembly.