ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರಿಟ್ಟು ಹೋರ್ಡಿಂಗ್ಸ್ !!

25-11-20 03:21 pm       Mangalore Correspondent   ಕರಾವಳಿ

ಕೋಟಿ ಚೆನ್ನಯ ಹೆಸರಲ್ಲಿ ಸ್ವಾಗತಿಸುವ ಜಾಹೀರಾತು ಬೋರ್ಡ್ ಹಾಕಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ.

ಮಂಗಳೂರು, ನ. 25: ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರನ್ನು ಇಡಲು ಒತ್ತಾಯಿಸಿ ಪ್ರತಿಭಟನೆ ನಡೆಯುತ್ತಿರುವ ನಡುವಲ್ಲೇ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಒಂದು ಹೆಜ್ಜೆ ಮುಂದಿಟ್ಟು ಗಮನ ಸೆಳೆದಿದ್ದಾರೆ. ಬಜ್ಪೆ ಆಸುಪಾಸಿನಲ್ಲಿ ಕೋಟಿ ಚೆನ್ನಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ನಾಮಕರಣದ ಜಾಹೀರಾತು ಬೋರ್ಡ್ ಹಾಕಿ ಕುತೂಹಲ ಮೂಡಿಸಿದ್ದಾರೆ.

ಆದರೆ, ಹೀಗೆ ನಾಮಕರಣ ಮಾಡಿರುವುದೂ ಪ್ರತಿಭಟನೆಯಂತೆ. ನಿಲ್ದಾಣಕ್ಕೆ ಹೋಗುವ ಕೆಂಜಾರು ಸಮೀಪ ‘ಸುಸ್ವಾಗತ, ಕೋಟಿ ಚೆನ್ನಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು’ ಎಂಬ ಬೃಹತ್ ಜಾಹೀರಾತು ಬೋರ್ಡ್ ಗಳನ್ನು ಮಿಥುನ್ ರೈ ಭಾವಚಿತ್ರ ಮತ್ತು ಹೆಸರಿನಲ್ಲಿ ಹಾಕಲಾಗಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ, ಶ್ರೀನಿವಾಸ ಮಲ್ಯ ಸೇರಿದಂತೆ ಹಲವಾರು ಗಣ್ಯರ ಹೆಸರುಗಳನ್ನು ಇಡಬೇಕೆಂಬ ಒತ್ತಾಯ, ಪ್ರತಿಭಟನೆ ಹಲವು ವರ್ಷಗಳಿಂದ ನಡೆಯುತ್ತಿವೆ. ಪ್ರಸ್ತುತ ವಿಮಾನ ನಿಲ್ದಾಣವನ್ನು 50 ವರ್ಷಗಳಿಗೆ ಅದಾನಿ ಕಂಪನಿ ನಿರ್ವಹಣೆ ಗುತ್ತಿಗೆ ನೀಡಿದ ಬಳಿಕ ಪ್ರವೇಶ ದ್ವಾರ ಸೇರಿದಂತೆ ಎಲ್ಲ ಕಡೆ ವಿಮಾನ ನಿಲ್ದಾಣದ ಹೆಸರಿನ ಜೊತೆ ಅದಾನಿ ಏರ್‌ಪೋರ್ಟ್ಸ್ ಎಂಬ ಹೆಸರನ್ನು ಸೇರಿಸಲಾಗಿದೆ. ಈ ಬಗ್ಗೆ ಸಾಮಾಜಿಕ ವಲಯದಲ್ಲಿ ಸಾಕಷ್ಟು ವಿರೋಧ, ಆಕ್ಷೇಪಗಳು ವ್ಯಕ್ತವಾಗಿವೆ.

ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರಿಡಬೇಕೆಂದು ಒತ್ತಾಯಿಸಿ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ನೇತೃತ್ವದಲ್ಲಿ ಸರಣಿ ಪ್ರತಿಭಟನೆಗಳು ನಡೆದಿವೆ. ಈ ನಡುವೆಯೇ, ಕೋಟಿ ಚೆನ್ನಯ ಹೆಸರಲ್ಲಿ ಸ್ವಾಗತಿಸುವ ಜಾಹೀರಾತು ಬೋರ್ಡ್ ಹಾಕಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಿಥುನ್ ರೈ, ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರಿಡುವಂತೆ ಒಂದೆಡೆ ಹೋರಾಟ ನಡೆಯುತ್ತಿದ್ದು, ಇದೇ ವೇಳೆ ಸಂಸದರಿಗೆ ಮತ್ತು ಸಚಿವರಿಗೆ ಎಚ್ಚರಿಕೆಯನ್ನು ನೀಡುವ ಸಲುವಾಗಿ ಜಾಹೀರಾತು ಬೋರ್ಡ್ ‌ಗಳನ್ನು ಅಳವಡಿಸಲಾಗಿದೆ. ಆದಷ್ಟು ಶೀಘ್ರವಾಗಿ ಕೋಟಿ ಚೆನ್ನಯ ನಾಮಕರಣ ಮಾಡಬೇಕೆಂಬುದು ನಮ್ಮ ಬೇಡಿಕೆ. ನಮ್ಮ ಹೋರಾಟ ಮುಂದುವರಿಯಲಿದೆ ಎಂದಿದ್ದಾರೆ.

District Youth Congress president Mithun Rai has come up with a unique way of protest in the party’s demand to rename Mangaluru International Airport to Koti Chennayya airport.