Mangalore 12th DYFI state convention: ಸಮಾನ ಶಿಕ್ಷಣ ನೀತಿ ಜಾರಿ ಆದ್ಯತೆಯಾಗಬೇಕು, ನಿರುದ್ಯೋಗ ಸಮಸ್ಯೆಗೂ ಕೋಮುವಾದಕ್ಕೂ ನಂಟಿರುವುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ; ಡಿವೈಎಫ್ಐ ರಾಜ್ಯ ಸಮ್ಮೇಳನದಲ್ಲಿ ಜಸ್ಟೀಸ್ ಎಚ್.ಎನ್. ನಾಗಮೋಹನದಾಸ್ 

25-02-24 05:12 pm       Mangalore Correspondent   ಕರಾವಳಿ

ಐವತ್ತು ವರ್ಷಗಳಲ್ಲಿ ಅತಿ ಹೆಚ್ಚು ನಿರುದ್ಯೋಗ ಪ್ರಮಾಣ ಪ್ರಸ್ತುತ ದೇಶದಲ್ಲಿದೆ. ನಮ್ಮಲ್ಲಿ ವಿದ್ಯೆ ಇದೆ, ಪದವಿ ಇದೆ, ಆದರೆ ಉದ್ಯೋಗ ಇಲ್ಲ. ನಮ್ಮ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಸಿಗುತ್ತಿಲ್ಲ.

ಮಂಗಳೂರು, ಫೆ.25: ಐವತ್ತು ವರ್ಷಗಳಲ್ಲಿ ಅತಿ ಹೆಚ್ಚು ನಿರುದ್ಯೋಗ ಪ್ರಮಾಣ ಪ್ರಸ್ತುತ ದೇಶದಲ್ಲಿದೆ. ನಮ್ಮಲ್ಲಿ ವಿದ್ಯೆ ಇದೆ, ಪದವಿ ಇದೆ, ಆದರೆ ಉದ್ಯೋಗ ಇಲ್ಲ. ನಮ್ಮ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಸಿಗುತ್ತಿಲ್ಲ. ಆದರೆ ಎಲ್ಲ ವಲಯದಲ್ಲಿಯೂ ಅರ್ಹ ಅಭ್ಯರ್ಥಿಗಳ ಕೊರತೆ ಕಾಡುತ್ತಿದೆ. ಶಿಕ್ಷಣದ ತಾರತಮ್ಯದಿಂದಾಗಿ ಯುವಕರಲ್ಲಿ ಮೇಲುಕೀಳು ಕಂಡುಬರುತ್ತಿದೆ. ದೇಶದಲ್ಲಿ ಸಮಾನ ಶಿಕ್ಷಣ ನಮ್ಮ ಆದ್ಯತೆಯಾಗಬೇಕಿದೆ ಎಂದು ಜಸ್ಟೀಸ್ ಎಚ್.ಎನ್. ನಾಗಮೋಹನದಾಸ್ ಹೇಳಿದರು. 

ತೊಕ್ಕೊಟ್ಟಿನ ಕಲ್ಲಾಪು ಯುನಿಟಿ ಸಭಾಂಗಣದಲ್ಲಿ ಫೆಬ್ರವರಿ 25ರಂದು ಭಾರತ ಪ್ರಜಾಸತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) 12ನೇ ರಾಜ್ಯ ಸಮ್ಮೇಳನ ನಡೆದಿದ್ದು ಸಮಾರಂಭವನ್ಮು ಉದ್ಘಾಟಿಸಿ ಜಸ್ಟೀಸ್ ಎಚ್.ಎನ್. ನಾಗಮೋಹನದಾಸ್ ಮಾತಾನಾಡಿದರು. ಎಲ್ಲಾ ಮಕ್ಕಳು ಒಂದೇ ಎನ್ನುತ್ತೇವೆ. ಆದರೆ ಶಿಕ್ಷಣದಲ್ಲಿ ಯಾಕೆ ತಾರತಮ್ಯ? ಇದರಿಂದಾಗಿಯೇ ಮಕ್ಕಳ ನಡುವೆ ತಾರತಮ್ಯ ಸಷ್ಟಿಸಲಾಗುತ್ತಿಲ್ಲವೇ? ಇದಕ್ಕಾಗಿ ದೇಶದಲ್ಲಿ ಸಮಾನ ಶಿಕ್ಷಣ ನೀತಿ ಜಾರಿಯಾಗಬೇಕಿದೆ. ಗುಣಾತ್ಮಕ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಗೆ ಬರಬೇಕಾಗಿದೆ. ಹೊಸ ಶಿಕ್ಷಣ ನೀತಿಯ ಬಗ್ಗೆ ಚರ್ಚೆಯಾಗಬೇಕು ಎಂದು ಅಭಿಪ್ರಾಯಿಸಿದರು. 

ಉದ್ಯೋಗ ಸೃಷ್ಟಿ ಕಡಿಮೆಯಾದಂತೆ ಅಪರಾಧೀಕರಣ, ಕೋಮುವಾದ, ಭಯೋತ್ಪಾದನೆ, ವೇಶ್ಯಾವಾಟಿಕೆ ಮೊದಲಾದವು ಹೆಚ್ಚುತ್ತದೆ. ನಿರುದ್ಯೋಗ ಸಮಸ್ಯೆಗೂ, ಕೋಮುವಾದ, ಅಪರಾಧಕ್ಕೂ ನಂಟಿದೆ ಎಂದು ಸರ್ಕಾರ ತಿಳಿದುಕೊಳ್ಳಬೇಕು ಎಂದರು. 

ಎರಡನೆಯ ಮಹಾ ಯುದ್ದದಲ್ಲಿ ಅಪಾರ ಸಂಖ್ಯೆಯ ಸಾವು ನೋವುಗಳಾದವು. ಕಾರ್ಖಾನೆಗಳು, ಬಂದರು, ರಸ್ತೆಗಳು ನಾಶವಾದವು. ಆಗ ಯುದ್ದಗಳನ್ನು ನಿಲ್ಲಿಸಲು ವಿಶ್ವಸಂಸ್ಥೆ ಆರಂಭಿಸಲಾಯಿತು. ಆದರೂ ಯುದ್ದ ನಿಂತಿಲ್ಲ. ವರ್ಷಕ್ಕೆ ಸರಾಸರಿ 1 ಲಕ್ಷ ಜನ ಯುದ್ದದಿಂದ ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ ಬಹುದೊಡ್ಡ ಪಾಲು ಯುವಕರು ಬಲಿಪಶು ಆಗುತ್ತಿದ್ದಾರೆ ಎಂದು ತಿಳಿಸಿದರು. ಯುದ್ಧ ಕಾರಣದಿಂದ ಶಿಕ್ಷಣ, ಉದ್ಯೋಗ, ವಸತಿ, ಆರೋಗ್ಯದಂತಹ ಜನಕಲ್ಯಾಣಗಳು ಹಿನ್ನಡೆ ಅನುಭವಿಸುತ್ತವೆ. ಆಗ ದೇಶ ಹಿನ್ನಡೆಯತ್ತ ಮುಖಮಾಡುತ್ತದೆ. ಹಾಗಾಗಿ ಯುದ್ಧವನ್ನು ವಿರೋಧಿಸಬೇಕಿದೆ ಎಂದರು. 

ಶಿಕ್ಷಣದಲ್ಲಿ ತಾರತಮ್ಯ ಹೆಚ್ಚುತ್ತಿದೆ. ಶ್ರೀಮಂತರಿಗೆ ಒಂದು, ಬಡವರಿಗೆ ಇನ್ನೊಂದು ಎಂಬ ಆಯ್ಕೆಯ ಮೂಲಕ ಮಕ್ಕಳಲ್ಲಿ ಅಸಮಾನತೆ, ಅಸೂಯೆ ಸೃಷ್ಟಿಯಾಗುತ್ತಿದೆ. ಈ ತಾರತಮ್ಯ ನಿಲ್ಲಬೇಕಾದರೆ, ಸಮಾನ ಗುಣಮಟ್ಟದ ಶಿಕ್ಷಣ ಸಿಗಬೇಕು, ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗ ಸೃಷ್ಟಿಯಾಬೇಕು ಎಂದರು. ನನ್ನೊಳಗೆ ಬದಲಾವಣೆ, ಗಟ್ಟಿತನ, ಧೈರ್ಯ, ಬದ್ದತೆ ತಂದು ಕೊಟ್ಟಿದ್ದು ಡಿವೈಎಫ್ಐ. ನಾಲ್ಕು ದಶಕಗಳ ಹಿಂದೆ ನಾನು ರಾಜ್ಯವೆಲ್ಲ ಸುತ್ತಾಡಿ ಯುವಜನರನ್ನು ಸಂಘಟಿಸಿದ್ದೆ ಎಂದು ಹಿಂದಿನ ಹೋರಾಟಗಳನ್ನು ಮೆಲಕು ಹಾಕಿದರು. 

ಸ್ವಾಗತ ಭಾಷಣ ಮಾಡಿದ ವಿಶ್ರಾಂತ ಜಿಲ್ಲಾಧಿಕಾರಿ, ಸ್ವಾಗತ ಸಮಿತಿಯ ಗೌರವಾಧ್ಯಕ್ಷರೂ ಆದ ಎ.ಬಿ. ಇಬ್ರಾಹಿಂ, "ಜನರು ಭ್ರಮಾಲೋಕದಲ್ಲಿದ್ದ ರೀತಿ ಮತ ಚಲಾಯಿಸುತ್ತಿದ್ದಾರೆ. ಕರಾವಳಿಯನ್ನು ಬುದ್ಧಿವಂತರ ಜಿಲ್ಲೆ ಎಂದು ಕರೆಯಲಾಗುತ್ತದೆ. ಆದರೆ ಪ್ರಸಕ್ತ ಸ್ಥಿತಿಯಲ್ಲಿ ನಾವು ಬುದ್ಧಿವಂತರು ಮತ್ತು ಅಕ್ಷರಸ್ಥರ ನಡುವೆ ಬೇರೆಯೇ ವ್ಯಾಖ್ಯಾನವನ್ನು ನೀಡಬೇಕಾಗಿದೆ ಎಂದು ಹೇಳಿದರು.  

"ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿದ ನೆಲವಿದು, ರಾಣಿ ಅಬ್ಬಕ್ಕರ ಮಾತೃ ಪ್ರಧಾನ ಸಮಾಜವಿದು. ಇದು ನಮಗೆ ಮಾದರಿಯಾಗಬೇಕಾದ ನೆಲ. ಇದು ಶೇಕಡ 100 ರಷ್ಟು ಅಕ್ಷರಸ್ಥರು ಇರುವ, ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ನಮ್ಮ ಜಿಲ್ಲೆ ಜಗತ್ತಿಗೆ ಮಾದರಿಯಾಗಬೇಕಾದ ಜಿಲ್ಲೆ. ಆದರೆ ಕಳೆದ ಮೂರು ದಶಕಗಳಲ್ಲಿ ನಮ್ಮ ಜಿಲ್ಲೆ, ನಗರ ಕುಖ್ಯಾತಿ ಪಡೆಯುತ್ತಾ ಬಂದಿರುವ ನೆಲವಾಗಿದೆ. ಹೊರ ಜಿಲ್ಲೆಯವರು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಜನರನ್ನು ಪ್ರಶ್ನಿಸುವಂತಾಗಿದೆ ಎಂದರು. 

ಸಂವಿಧಾನ ಉಳಿಸಬೇಕೆಂದು ಪೇಪರ್‌ನ ಮೊದಲ ಪುಟದಲ್ಲಿ ಜಾಹೀರಾತು ನೀಡಿದರೆ ಸಾಕಾಗದು. ಸಂವಿಧಾನ ಉಳಿಸಲು ಚಳುವಳಿ ಕಟ್ಟಬೇಕು, ಹೋರಾಡಬೇಕು ಎಂದು ತಿಳಿಸಿದರು. ಮಂಗಳೂರನ್ನು ಕೋಮುವಾದಿಗಳ ಪ್ರಯೋಗಶಾಲೆ ಎಂದು ಕರೆಯಲಾಗುತ್ತದೆ. ಆದರೆ ಅದು ತಪ್ಪು. ಪ್ರಯೋಗ ಮುಗಿದಿದೆ, ಯಶಸ್ವಿಯಾಗಿದೆ. ಈಗ ಮಂಡ್ಯ, ಇನ್ಯಾವುದೋ ಜಿಲ್ಲೆಗೆ ವಿಸ್ತರಿಸಲಾಗುತ್ತಿದೆ ಎಂದು ಅಭಿಪ್ರಾಯಿಸಿದರು. 

ಡಿವೈಎಫ್‌ಐ ಅಖಿಲ ಭಾರತ ಸಮಿತಿ ಸದಸ್ಯ ಜ್ಯಾಕ್ ಸಿ. ಥಾಮಸ್ ಮಾತನಾಡಿ, "ಕಾನೂನುಬಾಹಿರ ಆಗಿರುವುದನ್ನು ಕಾನೂನಿಗ ಚೌಕಟ್ಟಿನ ಒಳಗೆ ತಂದ ಏಕೈಕ ದೇಶ ಭಾರತ.  ಅದುವೇ ಚನಾವಣಾ ಬಾಂಡ್ ಆಗಿದೆ. ಇತ್ತೀಚೆಗೆ ಚುನಾವಣಾ ಬಾಂಡ್ ಅನ್ನು ದೇಶದಲ್ಲಿ ನಿಷೇಧ ಮಾಡಲಾಗಿದೆ. ಚುನಾವಣಾ ಬಾಂಡ್ ಮೂಲಕ ಯಾವುದೇ ಪಕ್ಷ ಲೆಕ್ಕವಿಲ್ಲದೆ ಕೋಟ್ಯಾಂತರ ರೂಪಾಯಿ ಪಡೆಯಬಹುದು. ಇದರ ಖಾತೆಯನ್ನು ಎಸ್‌ಬಿಐನಲ್ಲಿ ತೆರೆಯಲಾಗುತ್ತದೆ. ಆದರೆ ಈ ದೇಶದಲ್ಲಿ ಇದರ ಖಾತೆ ಇಲ್ಲದ ಏಕೈಕ ಪಕ್ಷ ಎಡ ಪಕ್ಷ ಎಂದು ತಿಳಿಸಿದರು. 

ನಾವು ಜನರ ಹೃದಯದಲ್ಲಿದ್ದೇವೆ 

ಅಧ್ಯಕ್ಷ ಭಾಷಣ ಮಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, "ನೀವು ಪಾರ್ಲಿಮೆಂಟ್‌ನಲ್ಲಿ ಇಲ್ಲ, ನೀವು ಎಲ್ಲಿದ್ದೀರಿ ಎಂದು ನಮ್ಮನ್ನು ಕೇಳುತ್ತೀರಿ. ನೀವು ಬಿಲ್ಡರ್‌ಗಳ, ದನಿಗಳ ಜೊತೆ ಇರಬಹುದು. ಆದರೆ ನಾವು ಪ್ರಸ್ತುತ ಮುಚ್ಚಲಾದ ಸುರತ್ಕಲ್ ಟೋಲ್‌ಗೇಟ್‌ನಲ್ಲಿ, ಶವ ಬಂಧನದಲ್ಲಿಟ್ಟು ಕುಟುಂಬದವರನ್ನು ಸತಾಯಿಸುವ ಖಾಸಗಿ ಆಸ್ಪತ್ರೆಗಳ ಹೊರಗೆ ಹೋರಾಟದಲ್ಲಿ, ಕುಡಿಯುವ ನೀರಿಗಾಗಿ ನಡೆದ ಚಳುವಳಿಯಲ್ಲಿ, ಎಂಆರ್‌ಪಿಎಲ್‌ನಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂಬ ಹೋರಾಟದಲ್ಲಿ ನಾವಿದ್ದೇವೆ. ನಾವು ಜನರ ಹೃದಯದಲ್ಲಿದ್ದೇವೆ. ನಾವು ಎಂದಿಗೂ ತಲೆತಗ್ಗಿಸುವವರಲ್ಲ. ನಾವು ಎತ್ತಿದ ತಲೆಯನ್ನು ನೀವು ಕತ್ತರಿಸಿದರೂ ಸರಿ, ನಾವೆಂದಿಗೂ ತಲೆ ತಗ್ಗಿಸಲ್ಲ ಎಂದು ಹೇಳಿದರು. 

ನಾವು ಆದರ್ಶ ವ್ಯಕ್ತಿಗಳ ಚಿತ್ರವನ್ನು ಪೋಸ್ಟರ್‌ನಲ್ಲಿ ಬಳಸಿದ್ದಕ್ಕೆ ವಿರೋಧ ಮಾಡಲಾಯಿತು. ಟಿಪ್ಪು ಸುಲ್ತಾನ್ ಚಿತ್ರ ಬಳಸಬಾರದು ಎಂದು ಪೊಲೀಸ್ ನೊಟೀಸ್ ನೀಡಲಾಯಿತು. ಆದರೆ ನಾವು ಅದಕ್ಕೆ ಪ್ರತಿಯಾಗಿ ಹೇಳಿಕೆಯನ್ನು ನೀಡಿದ್ದೇವೆ. ನೀವು ನಂಬುವ ಸಿದ್ಧಾಂತವನ್ನೇ ನಾವು ನಂಬಬೇಕು, ನೀವು ಇಷ್ಟಪಡುವವರನ್ನೇ ನಾವು ಇಷ್ಟಪಡಬೇಕು ಎಂಬುದು ಫ್ಯಾಸಿಸಂ ಎಂದರು. ಅಪಪ್ರಚಾರದಲ್ಲಿ ಬಲಪಂಥೀಯರು ಕೆಲಸ ಮಾಡುತ್ತಲೇ ಇದ್ದಾರೆ. ಕೋಟಿ ಚೆನ್ನಯ್ಯರ ಫೋಟೊ ಬಳಸಿದ್ದಕ್ಕೆ ರಾಮ ಪ್ರತಿಷ್ಟಾಪನೆ ನಂತರ ಎಡಪಂಥೀಯರು ನಮ್ಮ  ರಾಮ ಲಕ್ಷ್ಮಣರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಬಿಂಬಿಸಿ ನಮ್ಮ ವಿರುದ್ಧ ಅಪಪ್ರಚಾರ ಆರಂಭಿಸಿದರು.   ನಾರಾಯಣ ಗುರು, ಕೋಟಿ ಚೆನ್ನಯ್ಯರ ಚಿತ್ರಗಳನ್ನು ಪೋಸ್ಟರ್‌ನಲ್ಲಿ ಬಳಸಿ ನಿಮ್ಮ ಧಾರ್ಮಿಕ ಭಾವನೆಗೆ ನಾವು ಧಕ್ಕೆ ತಂದಿದ್ದೇವೆ ಎಂದು ನೀವು ಹೇಳುತ್ತೀರಿ. ನಿಜವಾಗಿ ಈ ನೆಲದಲ್ಲಿ ಕೋಟಿ ಚೆನ್ನಯ್ಯರ ವಾರಿಸುದಾರರು, ಅವರ ಆದರ್ಶವನ್ನು ಪಾಲಿಸುವವರು ಇದ್ದರೆ ಅದು ಡಿವೈಎಫ್‌ಐ ಸಂಘಟನೆಯವರು ಮಾತ್ರ ಎಂದು ತಿಳಿಸಿದರು. 

ರಮೇಶ್ ಕುಮಾರ್ ಸ್ಮರಣೆಯಲ್ಲಿ ಹೋರಾಟ ಚಳುವಳಿಗಳ ನೆನಪಿನ ಪೋಸ್ಟರ್ ಗ್ಯಾಲರಿಯನ್ನ ವಿಶ್ರಾಂತ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಉದ್ಘಾಟಿಸಿದರು. ವೇದಿಕೆಯಲ್ಲಿ ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ್ ಪೂಜಾರ್, ಡಿವೈಎಫ್‌ಐ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ರಜೀಶ್ ವೆಲ್ಲಾಟ್, ಡಿವೈಎಫ್‌ಐ ಕರ್ನಾಟಕ ರಾಜ್ಯ ಸಮಿತಿ ಸದಸ್ಯೆ ರೇಣುಕಾ ಕಹಾರ್, ಆಶಾ ಬೋಳೂರು, ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ಭೀಮನಗೌಡ, ಸ್ವಾಗತ ಸಮಿತಿ ಸದಸ್ಯ ಸುನೀಲ್ ಕುಮಾರ್ ಬಜಾಲ್, ಕೃಷ್ಣಪ್ಪ ಕೊಂಚಾಡಿ, ಬಿಕೆ ಇಂತಿಯಾಜ್, ವಕೀಲ ರಾಮಚಂದ್ರ ಬಬ್ಬುಕಟ್ಟೆ, ಡಾ.ಜೀವನ್ ರಾಜ್ ಕುತ್ತಾರ್ ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಸ್ವಾಗತಿಸಿದರು. ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿಕೆ ಇಮ್ತಿಯಾಜ್ ವಂದಿಸಿದರು.

The 12th DYFI state convention, focusing on the theme of Harmony, Employment, and Dignified Life, was inaugurated by retired High Court judge Justice H N Nagamohan Das at Unity Hall on Sunday, February 25.