Mangalore Activist Robert Rosario, catholic diocese: ರಾಬರ್ಟ್ ರೊಸಾರಿಯೋ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಕ್ಯಾಥೊಲಿಕ್ ಪ್ರತಿನಿಧಿ ಅಲ್ಲ ; ಅವರ ಅಭಿಪ್ರಾಯಗಳು ವೈಯಕ್ತಿಕ, ಡಯಾಸಿಸ್ ಸ್ಪಷ್ಟನೆ 

04-03-24 10:03 pm       Mangalore Correspondent   ಕರಾವಳಿ

ಚರ್ಚ್ ಪಾದ್ರಿಗಳ ವರ್ತನೆಯನ್ನು ವಿರೋಧಿಸಿ ಹೇಳಿಕೆ ನೀಡುತ್ತಿರುವ ಸಾಮಾಜಿಕ ಕಾರ್ಯಕರ್ತ ರಾಬರ್ಟ್ ರೊಸಾರಿಯೋ ಅವರ ವಿರುದ್ಧ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯ ಪತ್ರಿಕಾ ಹೇಳಿಕೆ ನೀಡಿದೆ.

ಮಂಗಳೂರು, ಮಾ.4: ಚರ್ಚ್ ಪಾದ್ರಿಗಳ ವರ್ತನೆಯನ್ನು ವಿರೋಧಿಸಿ ಹೇಳಿಕೆ ನೀಡುತ್ತಿರುವ ಸಾಮಾಜಿಕ ಕಾರ್ಯಕರ್ತ ರಾಬರ್ಟ್ ರೊಸಾರಿಯೋ ಅವರ ವಿರುದ್ಧ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯ ಪತ್ರಿಕಾ ಹೇಳಿಕೆ ನೀಡಿದೆ. ತನ್ನನ್ನು ತಾನು ಕ್ಯಾಥೊಲಿಕ್ ನಾಯಕನೆಂದು ಬಿಂಬಿಸಿಕೊಳ್ಳುತ್ತಿರುವ ಮತ್ತು ಅಧಿಕೃತ ಅನುಮತಿಯಿಲ್ಲದೆ ವಿವಿಧ ಮಾಧ್ಯಮ ಚರ್ಚೆಗಳಲ್ಲಿ ಭಾಗವಹಿಸುತ್ತಿರುವ ರಾಬರ್ಟ್ ರೊಸಾರಿಯೊ ಅವರಿಂದ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯವು ಅಂತರ ಕಾಯ್ದುಕೊಳ್ಳುತ್ತದೆ. ಅವರಿಗೂ ನಮಗೂ ಸಂಬಂಧ ಇಲ್ಲವೆಂದು ಹೇಳಿಕೆಯಲ್ಲಿ ತಿಳಿಸಿದೆ. 

ಕ್ಯಾಥೊಲಿಕ್ ಸಮುದಾಯವನ್ನು ಪ್ರತಿನಿಧಿಸಲು ರಾಬರ್ಟ್ ರೊಸಾರಿಯೊರಿಗೆ ಧರ್ಮಪ್ರಾಂತ್ಯದಿಂದ ಯಾವುದೇ ಅಧಿಕಾರ ನೀಡಿಲ್ಲ ಅಥವಾ ಅವರನ್ನು ವಿನಂತಿಸಿಲ್ಲ ಎಂದು ಡಯಾಸಿಸ್ ಸ್ಪಷ್ಟಪಡಿಸುತ್ತದೆ. ವ್ಯಕ್ತಿಗಳು ಸ್ವ ನೆಲೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಮತ್ತು ನಂಬಿಕೆಗಳನ್ನು ವ್ಯಕ್ತಪಡಿಸಬಹುದು, ಆದರೆ ರಾಬರ್ಟ್ ರೊಸಾರಿಯೊ ಎಲ್ಲಾ ಕ್ಯಾಥೋಲಿಕರನ್ನು ಪ್ರತಿನಿಧಿಸುವ ನಾಯಕ ಎಂದು ಹೇಳಿಕೊಳ್ಳುವುದು ಸಂಪೂರ್ಣವಾಗಿ ಸುಳ್ಳು ಮತ್ತು ತಪ್ಪು ದಾರಿಗೆಳೆಯುವಂತಿದೆ. 

ಹಾಗಾಗಿ, ಈ ಪ್ರಕಟಣೆಯ ಮೂಲಕ ರಾಬರ್ಟ್ ರೊಸಾರಿಯೊ ಅವರು ವೈಯಕ್ತಿಕ ಸಾಮರ್ಥ್ಯದಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮಂಗಳೂರು ಧರ್ಮಪ್ರಾಂತ್ಯವು ಹೇಳಿದೆ. ಕ್ಯಾಥೊಲಿಕ್ ಸಮುದಾಯದ ಪ್ರತಿನಿಧಿಯಾಗಿ ಅವರ ಅಭಿಪ್ರಾಯಗಳು ಅಥವಾ ಹೇಳಿಕೆಗಳನ್ನು ಡಯಾಸಿಸ್ ಅನುಮೋದಿಸುವುದಿಲ್ಲ. ಧರ್ಮಪ್ರಾಂತ್ಯದ ಸಂಬಂಧಪಟ್ಟ ಅಧಿಕಾರಿಗಳು ಅವರಿಗೆ ಅಧಿಕೃತ ಅನುಮೋದನೆ ಅಥವಾ ಅಧಿಕಾರವನ್ನು ನೀಡಿದ್ದಾರೆ ಎಂಬ ಯಾವುದೇ ಹೇಳಿಕೆಯಲ್ಲಿ ಹುರುಳಿಲ್ಲ. ಇದು ಸಂಪೂರ್ಣ ಸುಳ್ಳು ಎಂದು ಹೇಳಿದೆ. 

ಕ್ಯಾಥೋಲಿಕ್ ಸಮುದಾಯದ ಪರವಾಗಿ ಮಾತನಾಡುವ ಅಧಿಕಾರವನ್ನು ಅಧಿಕೃತ ಧರ್ಮಪ್ರಾಂತ್ಯದಿಂದ ನೇಮಿಸಿದ ಮತ್ತು ಗುರುತಿಸಿದ ವ್ಯಕ್ತಿಗಳು ಮಾತ್ರ ಹೊಂದಿರುತ್ತಾರೆ. ಇದಕ್ಕೆ ವಿರುದ್ಧವಾದ ಯಾವುದೇ ಪ್ರಾತಿನಿಧ್ಯವನ್ನು ತಪ್ಪು ಮಾಹಿತಿ ಎಂದು ಪರಿಗಣಿಸಬೇಕು ಮತ್ತು ಅದನ್ನು ಧರ್ಮಪ್ರಾಂತ್ಯವು ಅಂಗೀಕರಿಸುವುದಿಲ್ಲ. ರಾಬರ್ಟ್ ರೊಸಾರಿಯೊ ಕ್ಯಾಥೊಲಿಕ್ ಸಮುದಾಯದ ಪ್ರತಿನಿಧಿ ಎಂದು ಅನಧಿಕೃತವಾಗಿ ಹೇಳಿಕೆಗಳನ್ನು ನೀಡುವುದನ್ನು ತಡೆಯಲು ಮಾಧ್ಯಮ ಮತ್ತು ಸಾರ್ವಜನಿಕರು ಅವರಿಂದ ಅಂತರ ಕಾಯ್ದುಕೊಳ್ಳುವಂತೆ ವಿನಂತಿಸಲಾಗಿದೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ರಾಯ್ ಕ್ಯಾಸ್ಟಲಿನೊ ಮತ್ತು ಡಾ. ಜೆ.ಬಿ. ಸಲ್ಡಾನ್ಹಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಇತ್ತೀಚೆಗೆ ಪೆರಿಯಾಲ್ತಡ್ಕ ಚರ್ಚ್ ಪಾದ್ರಿ, ವೃದ್ಧ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆದಿರುವುದನ್ನು ರಾಬರ್ಟ್ ರೊಸಾರಿಯೋ ಖಂಡಿಸಿ ಹೇಳಿಕೆ ನೀಡಿದ್ದರು. ಈ ಹಿಂದೆ ಜೆರೋಸಾ ಶಾಲೆಯ ಘಟನೆಯಲ್ಲಿ ಸಿಸ್ಟರ್ ಪ್ರಭಾ ವರ್ತನೆಯ ಬಗ್ಗೆಯೂ ವಿರೋಧಿಸಿ ಮಾಧ್ಯಮಕ್ಕೆ ಹೇಳಿಕೆಗಳನ್ನು ನೀಡಿದ್ದರು. ಇದರಿಂದ ತೀವ್ರ ಇರಿಸುಮುರಿಸಿಗೆ ಒಳಗಾಗಿದ್ದ ಕ್ಯಾಥೊಲಿಕ್ ಧರ್ಮಪ್ರಾಂತ್ಯದಿಂದ ಈಗ ಹೊಸತಾಗಿ ಹೇಳಿಕೆ ನೀಡಲಾಗಿದ್ದು ರಾಬರ್ಟ್ ರೊಸಾರಿಯೊ ಅವರ ಹೇಳಿಕೆಯ ಬಗ್ಗೆ ಗಮನ ಹರಿಸದಂತೆ ಸೂಚಿಸಿದೆ.

Mangalore Activist Robert Rosario is not representative of Mangalore catholic diocese. In a circular issued by the Mangalore catholic diocese the statement has been made clear the Robert Rosario is not representative of Mangalore catholics. All his opinions in the media is just his personal opinion.