NIA Raid, Mangalore, Kadaba: ಕಡಬದ ಮನೆಯೊಂದಕ್ಕೆ ಎನ್ಐಎ ದಾಳಿ ; ಬಿಜು ಅಬ್ರಹಾಂ ಬಗ್ಗೆ ಹುಡುಕಾಟ, ಹಳೆ ಕೇಸು- ಹೊಸ ಲಿಂಕು

05-03-24 04:11 pm       Mangalore Correspondent   ಕರಾವಳಿ

ಕಡಬ ತಾಲೂಕಿನ ನಿಂತಿಕಲ್ಲು ಬಳಿಯ ಎಣ್ಮೂರು ಎಂಬಲ್ಲಿನ ಮನೆಯೊಂದಕ್ಕೆ ಮಂಗಳವಾರ ಬೆಳ್ಳಂಬೆಳಗ್ಗೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ಮನೆಮಂದಿಯನ್ನು ವಿಚಾರಣೆ ನಡೆಸಿದ್ದಾರೆ.

ಪುತ್ತೂರು, ಮಾ.5: ಕಡಬ ತಾಲೂಕಿನ ನಿಂತಿಕಲ್ಲು ಬಳಿಯ ಎಣ್ಮೂರು ಎಂಬಲ್ಲಿನ ಮನೆಯೊಂದಕ್ಕೆ ಮಂಗಳವಾರ ಬೆಳ್ಳಂಬೆಳಗ್ಗೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ಮನೆಮಂದಿಯನ್ನು ವಿಚಾರಣೆ ನಡೆಸಿದ್ದಾರೆ.

ಕೇರಳ ಮೂಲದ ಬಿಜು ಅಬ್ರಹಾಂ ಎಂಬಾತ ಎಣ್ಮೂರಿನ ಚಿದಾನಂದ ಎಂಬವರಿಗೆ ಸೇರಿದ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ. ಕಳೆದ ಜುಲೈ ತಿಂಗಳಲ್ಲಿ ಬೆಂಗಳೂರಿನ ಸುಲ್ತಾನ್ ಪಾಳ್ಯದಲ್ಲಿ ಏಳು ಪಿಸ್ತೂಲ್ ಮತ್ತು ಸಜೀವ ಗುಂಡು ಸಹಿತ ಐವರು ಹಳೆ ಆರೋಪಿಗಳು ಸಿಕ್ಕಿಬಿದ್ದಿರುವುದು ಮತ್ತು ಅವರಿಗೆ ಲಷ್ಕರ್ ಉಗ್ರರ ಜೊತೆ ಲಿಂಕ್ ಇರುವುದು ಪತ್ತೆಯಾಗಿತ್ತು.

ಆರೋಪಿಗಳಿಗೆ ಬಿಜು ಅಬ್ರಹಾಂ ಆಶ್ರಯ ಕೊಟ್ಟಿದ್ದಾನೆಂಬ ಆರೋಪದಲ್ಲಿ ಆತನ ಮನೆಯನ್ನು ಅಧಿಕಾರಿಗಳು ಶೋಧ ನಡೆಸಿದ್ದಾರೆ. ಐವರು ಆರೋಪಿಗಳನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದು ಪ್ರಕರಣದಲ್ಲಿ ಉಗ್ರವಾದದ ಲಿಂಕ್ ಇರುವ ಹಿನ್ನೆಲೆಯಲ್ಲಿ ತನಿಖೆಯನ್ನು ಎನ್ಐಎಗೆ ಹಸ್ತಾಂತರ ಮಾಡಲಾಗಿತ್ತು. ಬೆಂಗಳೂರಿನ ರಾಮೇಶ್ವರ ಕೆಫೆ ಸ್ಫೋಟ ಕೃತ್ಯದ ಹಿನ್ನೆಲೆಯಲ್ಲಿ ಅಲರ್ಟ್ ಆಗಿರುವ ಎನ್ಐಎ ಅಧಿಕಾರಿಗಳು ಹಳೆ ಕೇಸುಗಳನ್ನು ತಾಳೆ ಹಾಕಿ ನೋಡುತ್ತಿದ್ದು, ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.

ಬೆಂಗಳೂರಿನ ಜೈಲಿನಲ್ಲಿದ್ದ ಶಂಕಿತ ಲಷ್ಕರ್ ಉಗ್ರರ ಪ್ರೇರಣೆಯಲ್ಲಿ ಐವರು ಆರೋಪಿಗಳು ವಿಧ್ವಂಸಕ ಕೃತ್ಯಕ್ಕೆ ಸಂಚು ಹೂಡಿದ್ದರು ಎನ್ನುವ ವಿಚಾರವೂ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಇದೀಗ ಬೆಂಗಳೂರಿನ ಹೊಟೇಲಿನಲ್ಲಿ ವ್ಯಕ್ತಿಯೊಬ್ಬ ಬಾಂಬ್ ಇಟ್ಟು ಹೋಗಿರುವುದು ಭಾರೀ ಗಾಬರಿ ಹುಟ್ಟಿಸಿರುವುದರಿಂದ ಪೊಲೀಸರು ಮತ್ತು ಎನ್ಐಎ ಅಧಿಕಾರಿಗಳು ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದಾರೆ.

NIA officers raid to Kadaba in Mangalore, search for Biju Abraham over terror link.