Robert Rosario Mangalore, Catholic Church, Bishop: ನೀವು ವಿದೇಶಕ್ಕೆ ನಿಷ್ಢರಾಗಿರುವವರು, ಭಾರತಕ್ಕಲ್ಲ..!ಕ್ರೈಸ್ತ ಸಮುದಾಯದ ಪೇಟೆಂಟ್ ತೆಗೆದುಕೊಂಡಿಲ್ಲ, ಪ್ರಜಾತಂತ್ರ ವ್ಯವಸ್ಥೆ ನಿಮ್ಮಲ್ಲಿಲ್ಲ! ಮಂಗಳೂರು ಧರ್ಮಪ್ರಾಂತ್ಯಕ್ಕೆ ರಾಬರ್ಟ್ ರೊಸಾರಿಯೋ ಮರುತ್ತರ 

07-03-24 11:08 am       Mangalore Correspondent   ಕರಾವಳಿ

ರಾಬರ್ಟ್ ರೊಸಾರಿಯೋ ನಮ್ಮ ಅಧಿಕೃತ ಪ್ರತಿನಿಧಿ ಅಲ್ಲ ಎಂದು ಹೇಳಿಕೆ ನೀಡಿದ್ದ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ (ಪಿಆರ್ ಓ) ಗಳಿಗೆ ಸಾಮಾಜಿಕ ಕಾರ್ಯಕರ್ತ ರಾಬರ್ಟ್ ರೊಸಾರಿಯೋ ಮರುತ್ತರ ನೀಡಿದ್ದು ತಮ್ಮ ಖಡಕ್ ಮಾತುಗಳಲ್ಲಿ ಬಿಷಪ್ ಮತ್ತು ಚರ್ಚ್ ಆಡಳಿತಕ್ಕೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. 

ಮಂಗಳೂರು, ಮಾ.6: ರಾಬರ್ಟ್ ರೊಸಾರಿಯೋ ನಮ್ಮ ಅಧಿಕೃತ ಪ್ರತಿನಿಧಿ ಅಲ್ಲ ಎಂದು ಹೇಳಿಕೆ ನೀಡಿದ್ದ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ (ಪಿಆರ್ ಓ) ಗಳಿಗೆ ಸಾಮಾಜಿಕ ಕಾರ್ಯಕರ್ತ ರಾಬರ್ಟ್ ರೊಸಾರಿಯೋ ಮರುತ್ತರ ನೀಡಿದ್ದು ತಮ್ಮ ಖಡಕ್ ಮಾತುಗಳಲ್ಲಿ ಬಿಷಪ್ ಮತ್ತು ಚರ್ಚ್ ಆಡಳಿತಕ್ಕೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. 

"ನಾನೇ ಸರಿ, ಮಿಕ್ಕಿದೆಲ್ಲವರು ತಪ್ಪು. ನನ್ನದು ಸತ್ಯ ಮತ್ತು ಅಸಲಿ, ಮಿಕ್ಕಿದ್ದೆಲ್ಲ ಸುಳ್ಳು ಮತ್ತು ನಕಲಿ. ನನ್ನದು ಏಕೈಕ ದಾರಿ, ಬೇರೆ ದಾರಿ ಇಲ್ಲ. ನನ್ನದೇ ನಿಜವಾದ ಧರ್ಮ, ಮಿಕ್ಕಿದ್ದೆಲ್ಲಾ ಅಂಧ ವಿಶ್ವಾಸ. ನನ್ನ ದೇವರೇ ನಿಜವಾದ ಮತ್ತು ಅಸಲಿ ದೇವರು, ಸ್ವರ್ಗ ಭೂಮಿ ಪಾತಾಳದ ರಚನೆ ಮಾಡಿದವರು" ಎಂಬಿತ್ಯಾದಿ ಸ್ವಯಂ ಶ್ರೇಷ್ಠ ಮಾನಸಿಕತೆಯಿಂದ ಕೂಡಿದ ನಿಮ್ಮ ವ್ಯವಸ್ಥೆಯಿಂದ ಇಂತಹ ಪತ್ರ ಬಂದಿರುವುದು ಸಹಜ ಮತ್ತು ನಿಮ್ಮ ಮಾನಸಿಕತೆಯ ಪ್ರತಿಫಲನ ಅಷ್ಟೇ. ಒಂದು ಕಡೆ ಪುರೋಹಿತಶಾಹಿಯನ್ನು ಹೀಗಳೆದು ಅದು ಚರ್ಚ್ ವ್ಯವಸ್ಥೆಗೆ ಮಾರಕ ಎಂದೂ ಇನ್ನೊಂದೆಡೆ ಅದನ್ನೇ ಅನುಷ್ಠಾನ ಮಾಡುವುದು ತಮ್ಮವರಿಗೆ ಕರಗತವಾದ ಕಲೆ.

ನಿಮ್ಮ ಪತ್ರದಲ್ಲಿ ತಾವು ಬಹಳ ಚಾತುರ್ಯ ಮತ್ತು ಷಡ್ಯಂತ್ರದ ಭಾಗವಾಗಿ ಚರ್ಚ್ ವ್ಯವಸ್ಥೆ ಮತ್ತು ಸಾಮಾನ್ಯ ಕ್ರೈಸ್ತ ಸಮುದಾಯದ ಮಧ್ಯೆ ಇರುವ ವ್ಯತ್ಯಾಸವನ್ನು ನಾಜೂಕಾಗಿ ಮರೆ ಮಾಚುವ ಪ್ರಯತ್ನ ಮಾಡಿದ್ದೀರಿ. ನಾನು ಯಾವತ್ತೂ ನನ್ನನ್ನು ಸಾಮಾಜಿಕ, ರಾಜಕೀಯ ಕಾರ್ಯಕರ್ತ ಎಂದಷ್ಟೇ ಹೇಳಿಕೊಂಡು ಬಂದಿದ್ದೇನೆ, ಎಲ್ಲಿಯೂ ಒಂದು ಸಮುದಾಯ ಯಾ ಧರ್ಮದ ಜತೆ ಗುರುತಿಸಿಕೊಂಡಿಲ್ಲ. ಆದರೂ ದಶಕಗಳ ಕಾಲ ನನ್ನ ಕೆಲಸಗಳನ್ನು ಗಮನಿಸಿದ ಮಾಧ್ಯಮಗಳು ಸಂದರ್ಭಕ್ಕೆ ತಕ್ಕಂತೆ, ವಿಷಯಕ್ಕೆ ತಕ್ಕಂತೆ ನನ್ನನ್ನು ಕ್ರೈಸ್ತ ಮುಖಂಡ ಎಂದು ಕರೆದಿದೆ. ಅದು ಅವರ ಸ್ವಾತಂತ್ರ್ಯ. ನಾನು ಕೂಡಾ ಅದಕ್ಕೆ ಅಡ್ಡಿ ಪಡಿಸುವ ಯಾ ಸರಿ ಪಡಿಸುವ ಅಗತ್ಯವನ್ನು ಮನಗಂಡಿಲ್ಲ.

ಈಗ ನೀವುಗಳು ಮಾಧ್ಯಮದ ಈ ಸ್ವಾತಂತ್ಯವನ್ನು ಪ್ರಶ್ನಿಸುವ ಮೂಲಕ ಹಾಗೂ ತಾವೇ ನಿಜವಾದ ಕ್ರೈಸ್ತರು ಎನ್ನುವ ಮೂಲಕ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದ್ದೀರಿ. ಈಗ ನೀವು ಅದೇ ಮಾಧ್ಯಮದ ಮುಂದೆ ಬಂದು ತಾವು ಸಂವಿಧಾನದ ಯಾವ ನಿಯಮ ಪ್ರಕಾರ ಈ ರೀತಿ ದಾವೆ ಮಂಡ್ಡಿಸಿದ್ದೀರಿ ಎಂದು ಸ್ಪಷ್ಪಪಡಿಸಬೇಕಿದೆ. ತಮ್ಮನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಿದ ಪ್ರಾಧಿಕಾರವನ್ನು ಯಾರು ಮತ್ತು ಹೇಗೆ ಆಯ್ಕೆ ಮಾಡಿದರು ಎಂದು ವಿವರಿಸಬೇಕಿದೆ. 

ನನಗೆ ಸ್ಪಷ್ಟವಾಗಿ ತಿಳಿದ ಪ್ರಕಾರ ಸದ್ರಿ ಪ್ರಾಧಿಕಾರವನ್ನು /ಅಧಿಕಾರಿಯನ್ನು ವಿದೇಶದಲ್ಲಿರುವ ಅಧಿಕಾರಿ ನಮ್ಮ ಮೇಲೆ ಹೇರಿದ್ದೇ ಹೊರತು ಪ್ರಜಾಪ್ರಭುತ್ವದ ಮೌಲ್ಯಗಳ ಪ್ರಕಾರ ನಾವು ಆಯ್ಕೆ ಮಾಡಿರುವುದು ಅಲ್ಲ. ನಿಮ್ಮನ್ನ ಅಯ್ಕೆ ಮಾಡಿದವರು ಭಾರತದ ಗಡಿಯೊಳಗೆ ಇರುವ ಅಧಿಕಾರಿಯಿಂದ ಆರಿಸಲ್ಪಟ್ಟವರೂ ಅಲ್ಲ. ಆದ್ದರಿಂದ ಅವರ ಭಾರತದ ಸಂವಿಧಾನಕ್ಕೆ ಇರುವ ನಿಷ್ಠೆ ಸಂದೇಹಾಸ್ಪದ ಆಗಿರುತ್ತದೆ. 

ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ನಮ್ಮಲ್ಲಿ ಜನರಿಂದ ಚುನಾಯಿಸಲ್ಪಟ್ಟವರು ಮಾತ್ರ ಅಧಿಕಾರ ಹೊಂದಿ ಅದನ್ನು ಚಲಾಯಿಸಲು ಅವಕಾಶ ಇದೆ. ಆದ್ದರಿಂದ ತಾವು ಇಂತಹ ಯಾವುದೇ ಅಧಿಕಾರ ಇಲ್ಲದೇ ಈ ರೀತಿ ಪತ್ರಿಕಾ ಹೇಳಿಕೆ ನೀಡಿ ತಪ್ಪು ಎಸಗಿದ್ದೀರಿ. ತಮ್ಮಲ್ಲಿ ಒಬ್ಬರು ಪಾದ್ರಿಯಾಗಿದ್ದು ವ್ಯಾಟಿಕನ್ ಗೆ ತಮ್ಮ ನಿಷ್ಠೆಯನ್ನ ಸಾರಿರುವವರು. ಆದ್ದರಿಂದ ಅವರು ಭಾರತದ ನಿಜವಾದ ನಾಗರಿಕ ಎನಿಸಿಕೊಳ್ಳುವಂತಿಲ್ಲ. ಯಾಕೆಂದರೆ, ಭಾರತದ ಸಂವಿಧಾನಕ್ಕೆ, ಈ ನೆಲದ ಧರ್ಮ ಮತ್ತು ಸಂಸ್ಕೃತಿಗೆ, ಇಲ್ಲಿನ ನಾಗರಿಕತೆಗೆ, ಅಭಿವ್ಯಕ್ತಿ ಸ್ವಾತಂತ್ಯಕ್ಕೆ ಅವರ ನಿಷ್ಠೆ ಶೂನ್ಯವಿರುತ್ತದೆ. 

ಮತ್ತೊಬ್ಬ ಸಹಿ ಹಾಕಿದ ವ್ಯಕ್ತಿ ತನ್ನನ್ನು ಸ್ಥಾನದಲ್ಲಿ ಕೂರಿಸಿದ ಅಧಿಕಾರಿಯ ಪಂಜರದ ಗಿಣಿಯೇ ಹೊರತು ಜನ ಸಾಮಾನ್ಯನಿಗೆ ಉತ್ತರದಾಯಿ ಆಗಿಲ್ಲ. ಇಂತಹವರು ತಮ್ಮನ್ನು ತಾವೇ ನಿಜವಾದ ಸಮುದಾಯ ಮುಖಂಡರು ಎಂದು ಪರಿಚಯಿಸಿಕೊಳ್ಳುವುದು ಹೇಗೆ ಸಾಧ್ಯ? ಈ ಪತ್ರಿಕಾ ಹೇಳಿಕೆ ಮೂಲಕ ಮಾಧ್ಯಮದವರು ಸಂದರ್ಭಕ್ಕೆ ಸರಿಯಾಗಿ ಸ್ವಯಂ ನಿರ್ಧಾರ ತೆಗೆದುಕೊಳ್ಳುವ, ಯಾರನ್ನು ಯಾವ ರೀತಿ ಬಿಂಬಿಸಬೇಕು ಎಂಬ ವಿವೇಚನೆ ಮತ್ತು ಹಕ್ಕಿಗೆ ಸವಾಲು ಎಸೆದಿದ್ದೀರಿ. ಈವರೆಗೆ ತಮ್ಮ ಇಂತಹ ಕಟ್ಟಾಜ್ಞೆಗಳು ಚರ್ಚ್ ಗಡಿಯೊಳಗೆ ಸೀಮಿತವಾಗಿದ್ದವು. ಈಗ ಸ್ವತಂತ್ರ ಮಾದ್ಯಮದ ಮೇಲೆ ಕಟ್ಟಾಜ್ಞೆ ಹೊರಡಿಸುವ ಹಂತ ತಲುಪಿದ್ದೀರಿ. 

ತಾವು ಮಾತ್ರ ಸರಿಯಾದ, ಸತ್ಯ ಮತ್ತು ನಿಖರ ಸುದ್ದಿ ಕೊಡಲು ಶಕ್ತರು ಎಂಬ ದಾವೆ ಮಾಡಿರುವುದು ಬಹಳ ಹಾಸ್ಯಾಸ್ಪದ. ಯಾಕೆಂದರೆ ನಿಮ್ಮ ಈವರೆಗಿನ ಚರಿತ್ರೆ ಸುಳ್ಳು ಸುದ್ದಿ, ಸುಳ್ಳು ನೆರೇಟಿವ್, ಪ್ರೋಪಗಾಂಡ ಮಾತ್ರಕ್ಕೆ ಸೀಮಿತವಾಗಿದೆ, ಸತ್ಯಕ್ಕು ತಮಗೂ ಯಾವುದೇ ಸಂಬಂಧವಿಲ್ಲ ಎಂಬುದು ಚಾರಿತ್ರಿಕ ಸತ್ಯ. ಆದರೆ, ನಾನು ನನ್ನ ಸಮುದಾಯದ ಹಿತಾಸಕ್ತಿ ಎತ್ತಿ ಹಿಡಿಯಲು ಅದನ್ನು ಪ್ರತಿನಿಧಿಸುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ತಾವು ಕ್ರೈಸ್ತ ಸಮುದಾಯವನ್ನು ಪೇಟೆಂಟ್ ಮಾಡಿ ಕಾಪಿ ರೈಟ್ ಪಡೆದಿರುವ ತರಹ ವರ್ತಿಸುವುದು ತುಂಟಾಟ ಎನಿಸಿಕೊಳ್ಳುತ್ತದೆ ಎಂದು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ‌

Robert Rosario not Catholic representative, Rosario slams Mangalore diocese bishop and priests for giving statement against him stating Christian diocese keeps distance from Robert Rosario who is portraying himself as a Catholic leader and participating in various media discussions without official permission, an official communique from the diocese of Mangalore has stated.