Mangalore Kondana temple, Kotekar, Mutanna Shetty: ಕೊಂಡಾಣದ ಭಂಡಾರಮನೆ ಪುಡಿಗೈದ ಆರೋಪಿಯಿಂದ ಅಕ್ರಮ ಮನೆ ನಿರ್ಮಾಣ ; ಪಂಚಾಯತ್ ನೋಟೀಸಿಗೆ ಕ್ಯಾರೆನ್ನದ ಗುರಿಕಾರ, ಅನಧಿಕೃತ ಕಟ್ಟಡಕ್ಕೆ ಬುಲ್ಡೋಜರ್ ಹರಿಸಲು ಅಧಿಕಾರಿಗಳಿಗೆ ಧಮ್ ಇಲ್ಲವೇ..? 

07-03-24 04:37 pm       Dinesh, Mangaluru Corresopondent   ಕರಾವಳಿ

ಕೋಟೆಕಾರು ಬೀರಿಯ ಕೊಂಡಾಣ ಪಿಲಿ ಚಾಮುಂಡಿ, ಬಂಟ, ವೈದ್ಯನಾಥ ದೈವಸ್ಥಾನದಲ್ಲಿ ನಿರ್ಮಾಣ ಹಂತದಲ್ಲಿದ್ದ ಭಂಡಾರ ಮನೆಯನ್ನ ಅದೇ ಪರಿಸರದ ಗುತ್ತಿನ ಮನೆಯ ಗುರಿಕಾರ ಮುತ್ತಣ್ಣ ಶೆಟ್ಟಿ ಜೆಸಿಬಿ ಮೂಲಕ ಕೆಡವಿ ಹಾಕಿದ್ದು ಭಾರೀ ಸುದ್ದಿಯಾಗಿತ್ತು.

ಉಳ್ಳಾಲ, ಮಾ.7: ಕೋಟೆಕಾರು ಬೀರಿಯ ಕೊಂಡಾಣ ಪಿಲಿ ಚಾಮುಂಡಿ, ಬಂಟ, ವೈದ್ಯನಾಥ ದೈವಸ್ಥಾನದಲ್ಲಿ ನಿರ್ಮಾಣ ಹಂತದಲ್ಲಿದ್ದ ಭಂಡಾರ ಮನೆಯನ್ನ ಅದೇ ಪರಿಸರದ ಗುತ್ತಿನ ಮನೆಯ ಗುರಿಕಾರ ಮುತ್ತಣ್ಣ ಶೆಟ್ಟಿ ಜೆಸಿಬಿ ಮೂಲಕ ಕೆಡವಿ ಹಾಕಿದ್ದು ಭಾರೀ ಸುದ್ದಿಯಾಗಿತ್ತು. ಅದೇ ವ್ಯಕ್ತಿ ಕಾನೂನನ್ನೇ ಉಲ್ಲಂಘಿಸಿ ಅಕ್ರಮವಾಗಿ ಮನೆ ನಿರ್ಮಿಸುತ್ತಿದ್ದರೂ ಪಟ್ಟಣ ಪಂಚಾಯತ್ ಅಧಿಕಾರಿಗಳು, ಅಕ್ರಮ ಕಟ್ಟಡಕ್ಕೆ ಬುಲ್ಡೋಜರ್ ಹರಿಸಲು ಧಮ್ಮಿಲ್ಲದೆ ಕೈಕಟ್ಟಿ ಕುಳಿತಿದ್ದಾರೆ.

ಕೋಟೆಕಾರು ವ್ಯಾಪ್ತಿಯ ವಾರ್ಡ್ ನಂಬರ್ 8ರ ಗುಡ್ಡಕ್ಕೆಪಾಲು ಎಂಬಲ್ಲಿ ಸರ್ವೆ ನಂಬರ್ 117/1 ರಲ್ಲಿ ಮುತ್ತಣ್ಣ ಶೆಟ್ಟಿ ಪಂಚಾಯತ್ ಪರವಾನಿಗೆ ಇಲ್ಲದೆ ತನ್ನ ಮನೆಯ ಕಟ್ಟಡವನ್ನ ವಿಸ್ತರಿಸಲು ಅಡಿಪಾಯ ಹಾಕುತ್ತಿರುವಾಗಲೇ ಪಂಚಾಯತ್ ಆಡಳಿತಕ್ಕೆ ಲಿಖಿತ ದೂರು ಸಲ್ಲಿಕೆಯಾಗಿತ್ತು. ದೂರನ್ನು ಆಲಿಸಿದ ಅಂದಿನ ಪಂಚಾಯತ್ ಮುಖ್ಯಾಧಿಕಾರಿ ಮಾಲಿನಿ ಅವರು 21-11-2023 ರಂದು ಅಕ್ರಮ ಕಾಮಗಾರಿ ನಿಲ್ಲಿಸುವಂತೆ ಮುತ್ತಣ್ಣ ಶೆಟ್ಟಿಗೆ ನೋಟೀಸು ನೀಡಿದ್ದರು. ಪಂಚಾಯತ್ ಕಿರಿಯ ಅಭಿಯಂತರರು ಸ್ಥಳ ಪರಿಶೀಲನೆ ನಡೆಸಿದ್ದು ಮರುದಿನ 22ರಂದು ಅಕ್ರಮ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಿ ನಿಯಮಾನುಸಾರ ಪರವಾನಿಗೆ ಪಡೆದು ಕೆಲಸ ಮುಂದುವರಿಸಬೇಕು. ತಪ್ಪಿದಲ್ಲಿ ಕ್ರಮ ಜರಗಿಸುವುದಾಗಿ ಎಚ್ಚರಿಕೆ ನೋಟೀಸನ್ನ ಪಂಚಾಯತ್ ಮುತ್ತಣ್ಣ ಶೆಟ್ಟಿಗೆ ನೀಡಿದ್ದರು. ಯಥಾ ಪ್ರತಿಯನ್ನು 23-11-2023 ರಂದು ಉಳ್ಳಾಲ ಆರಕ್ಷಕ ಠಾಣಾ ನಿರೀಕ್ಷಕರಿಗೂ ನೀಡಿದ್ದರು. 

ಪಂಚಾಯತ್ ಸೂಚನಾ ಪತ್ರಗಳಿಗೆ ಕ್ಯಾರೇ ಎನ್ನದ ಮುತ್ತಣ್ಣ ಶೆಟ್ಟಿ ಕಾಮಗಾರಿ ಮುಂದುವರಿಸಿದಾಗ ಮತ್ತೆ ದೂರು ಬಂದ ಹಿನ್ನೆಲೆಯಲ್ಲಿ 31-01-2024 ರಂದು ಕೋಟೆಕಾರ್ ಪಂಚಾಯತ್ ಅಂತಿಮ ನೋಟೀಸನ್ನು ನೀಡಿದ್ದು, 187 ಮುನಿಸಿಪಲ್ ಕಾಯಿದೆ ಪ್ರಕಾರ ಮನೆ ರಿಪೇರಿಗೂ ಪಂಚಾಯತ್ ಅನುಮತಿ ಬೇಕು. ಹಾಗಾಗಿ ಮುತ್ತಣ್ಣ ಅವರ ಈ ಹಿಂದಿನ ಮನೆಯ ಡೋರ್ ನಂಬರನ್ನೇ ರದ್ದುಗೊಳಿಸಿ, ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಮೆಸ್ಕಾಂ ಇಲಾಖೆಗೆ ಶಿಫಾರಸು ಮಾಡುವುದಾಗಿ ನೋಟೀಸಲ್ಲಿ ನಮೂದಿಸಲಾಗಿತ್ತು. ಅಂದಿನ ಪಂಚಾಯತ್ ಮುಖ್ಯಾಧಿಕಾರಿ ಮಾಲಿನಿ ಅವರು ಮುತ್ತಣ್ಣರಿಗೆ ಪತ್ರಗಳನ್ನು ಬರೆದಿದ್ದರೇ ಹೊರತು ಯಾವುದೇ ಖಡಕ್ ನಿರ್ಧಾರ ತೆಗೆಯದೆ ದಿನ ದೂಡಿ ವರ್ಗಾವಣೆಗೊಂಡಿದ್ದರು. ಇದೀಗ ಕಳೆದೆರಡು ವಾರದ ಹಿಂದಷ್ಟೇ ಆನಂದ್ ಎಂಬವರು ನೂತನ ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಮುತ್ತಣ್ಣ ಅವರು ಅಂತಿಮ ನೋಟೀಸನ್ನೂ ಲೆಕ್ಕಿಸದೆ, ಅಡಿಪಾಯ ಕಾಮಗಾರಿ ಮುಗಿಸಿ, ಕಲ್ಲಿನ ಗೋಡೆಗಳನ್ನೂ ಏರಿಸಿ ಕಾಮಗಾರಿ ನಡೆಸುತ್ತಲೇ ಇದ್ದಾರೆಂದು ದೂರುದಾರರು ತಿಳಿಸಿದ್ದಾರೆ. ಮುತ್ತಣ್ಣ ತಾನು ದೈವಸ್ಥಾನಕ್ಕೆ ಸಂಬಂಧಪಟ್ಟ ಗುರಿಕಾರನೆಂಬ ಮಾತ್ರಕ್ಕೆ ತನ್ನ ಸಹಮತವಿಲ್ಲದೆ ನಿರ್ಮಿಸುತ್ತಿದ್ದ ಭಂಡಾರ ಮನೆಯನ್ನ ಜೆಸಿಬಿ ಹರಿಸಿ ಪುಡಿಗೈದು ರಾತ್ರಿಯೊಳಗೆ ಜಾಮೀನು ಪಡೆದು ಹೊರಗೆ ಬಂದಿದ್ದರು. ಒಂದು ವೇಳೆ ಇಂತಹ ಕೃತ್ಯವನ್ನು ಬೇರೆ ಯಾರಾದರೂ ನಡೆಸುತ್ತಿದ್ದರೆ ರಾತ್ರಿಯೊಳಗೆ ಆರೋಪಿಗಳು ಜಾಮೀನು ಪಡೆಯುತ್ತಿದ್ದರೆ..? ಕಾಂಗ್ರೆಸ್ ಪರವಾಗಿರುವ ಆರೋಪಿಗಳ ವಿರುದ್ಧ ಉದ್ದೇಶ ಪೂರ್ವಕವಾಗಿಯೇ ದುರ್ಬಲ ಸೆಕ್ಷನ್ ಹೇರಿದ್ದರೆಂದು ಹಿಂದೂ ಸಂಘಟನೆ ಮುಖಂಡರು ಆರೋಪಿಸಿದ್ದರು. ಈಗ ಅದೇ ಮುತ್ತಣ್ಣ ಪುರಸಭಾ ಕಾಯ್ದೆಯನ್ನ ಧಿಕ್ಕರಿಸಿ ಅಕ್ರಮವಾಗಿ ಕಟ್ಟಡ ಕಟ್ಟುತ್ತಿದ್ದು ಅದನ್ನು ಪುಡಿಗೈಯುವ ತಾಕತ್ತು ಅಧಿಕಾರಿಗಳಿಗಿದೆಯೇ ಎಂದು ಸ್ಥಳೀಯ ಜನರು ಪ್ರಶ್ನಿಸುತ್ತಿದ್ದಾರೆ.

Mangalore Kondana temple news, prime accused Mutanna Shetty who destroyed the temple trssure house by getting JCB is now building his own house illegally at Kotekar without any permission from the panchyath, officals silent without action.