Saudi Mangalore flight delay, airport, Air India: ಸೌದಿಯ ದಮಾಮ್ ನಿಂದ ಮಂಗಳೂರು ಬರಬೇಕಿದ್ದ ಏರ್ ಇಂಡಿಯಾ ವಿಮಾನ 18 ಗಂಟೆ ವಿಳಂಬ ; ಸಿಬಂದಿ ವಿರುದ್ಧ ಪ್ರಯಾಣಿಕರ ಆಕ್ರೋಶ 

07-03-24 09:46 pm       Mangalore Correspondent   ಕರಾವಳಿ

ಸೌದಿ ಅರೇಬಿಯಾದ ದಮಾಮ್‌ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ಹೊರಡಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು 18 ಗಂಟೆ ಕಳೆದರೂ ಪ್ರಯಾಣ ಆರಂಭಿಸದ ಬಗ್ಗೆ ಪ್ರಯಾಣಿಕರು ತೊಂದರೆ ಅನುಭವಿಸಿದ್ದು ವಿಮಾನ ಸಿಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮಂಗಳೂರು, ಮಾ.7: ಸೌದಿ ಅರೇಬಿಯಾದ ದಮಾಮ್‌ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ಹೊರಡಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು 18 ಗಂಟೆ ಕಳೆದರೂ ಪ್ರಯಾಣ ಆರಂಭಿಸದ ಬಗ್ಗೆ ಪ್ರಯಾಣಿಕರು ತೊಂದರೆ ಅನುಭವಿಸಿದ್ದು ವಿಮಾನ ಸಿಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬುಧವಾರ ರಾತ್ರಿ 10:20 ಕ್ಕೆ ಟೇಕಾಫ್ ಆಗಬೇಕಿದ್ದ ವಿಮಾನವು ಗುರುವಾರ ಸಂಜೆಯಾದರೂ, ದಮಾಮ್ ನಿಂದ ನಿರ್ಗಮಿಸಿರಲಿಲ್ಲ. ವಿಮಾನ ವಿಳಂಬವಾಗಿದ್ದಕ್ಕೆ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯಿಂದ ಪ್ರಯಾಣಿಕರಿಗೆ ಸೂಕ್ತ ಮಾಹಿತಿ ನೀಡಿಲ್ಲ. ಇದರಿಂದ ತೀವ್ರ ತೊಂದರೆ ಅನುಭವಿಸುವಂತಾಯಿತು ಎಂದು ಪ್ರಯಾಣಿಕರು ದೂರಿದ್ದಾರೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಧ್ಯರಾತ್ರಿ ಸುಮಾರಿಗೆ ವಿಮಾನ ರದ್ದತಿಯ ಬಗ್ಗೆ ಪ್ರಯಾಣಿಕರಿಗೆ ಸೂಚನೆ ನೀಡಿತ್ತು. ಬಳಿಕ ಗುರುವಾರ ಬೆಳಗ್ಗೆ 11 ಗಂಟೆಗೆ ಪ್ರಯಾಣ ಆರಂಭಿಸುವ ಬಗ್ಗೆ ಭರವಸೆ ನೀಡಿತ್ತು. ಅನಿರೀಕ್ಷಿತ ಪ್ರಕಟಣೆಯಿಂದ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ ಪ್ರಯಾಣಿಕರು ತೊಂದರೆ ಎದುರಿಸುವಂತಾಯಿತು ಎಂದು ಪ್ರಯಾಣಿಕರು ಹೇಳಿದ್ದಾರೆ.

ಪ್ರಯಾಣಿಕರೊಬ್ಬರು ಪ್ರತಿಕ್ರಿಯಿಸಿ, ದೂರದ ಸ್ಥಳಗಳಿಂದ ವಿಮಾನ ನಿಲ್ದಾಣಕ್ಕೆ ಆಗಮಿಸಿದವರಿಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆಯನ್ನೂ ಮಾಡಿಲ್ಲ. ವಿಮಾನಯಾನ ಸಂಸ್ಥೆಯಿಂದ ಆಹಾರ ಅಥವಾ ವಸತಿ ವ್ಯವಸ್ಥೆಯನ್ನು ಕಲ್ಪಿಸಿಲ್ಲ‌. ಇದರಿಂದ ತುರ್ತು ಪ್ರಯಾಣಕ್ಕೆ ಬಂದವರು ಕಷ್ಟ ಎದುರಿಸುವಂತಾಗಿದೆ ಎಂದರು.

ಗುರುವಾರ ಬೆಳಗ್ಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರಿಗೆ, ವಿಮಾನವೇರಲು ಅವಕಾಶ ನೀಡಲಾಗಿತ್ತು. ಆದರೆ ಅರ್ಧ ಗಂಟೆಯ ನಂತರ, ಪ್ರಯಾಣಿಕರನ್ನು ಕೆಳಗಿಳಿಸಿದ್ದು ವಿಮಾನದ ಹಾರಾಟ ಮತ್ತಷ್ಟು ವಿಳಂಬವಾಗುವ ಬಗ್ಗೆ ಸೂಚನೆ ನೀಡಿದರು. ಸೌದಿ ಅರೇಬಿಯಾದ ಸ್ಥಳೀಯ ಸಮಯ ಮಧ್ಯಾಹ್ನ 3 ಗಂಟೆಯಾದರೂ, ಅಧಿಕಾರಿಗಳು ಮಂಗಳೂರಿಗೆ ಹೊರಡುವ ಏರ್ ಇಂಡಿಯಾ ವಿಮಾನ ಹಾರಾಟದ ಬಗ್ಗೆ ಯಾವುದೇ ಖಚಿತ ಮಾಹಿತಿ ನೀಡಿಲ್ಲ ಎಂದು ಪ್ರಯಾಣಿಕರು ಹೇಳಿದ್ದಾರೆ. ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಮತ್ತು ರೋಗಿಗಳು ವಿಮಾನ ವಿಳಂಬವಾದ್ದರಿಂದ ಸರಿಯಾದ ವ್ಯವಸ್ಥೆಗಳಿಲ್ಲದೇ ಏರ್ ಇಂಡಿಯಾ ಸಿಬಂದಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು ಎಂದು ವಾರ್ತಾ ಭಾರತಿ ವರದಿ ಮಾಡಿದೆ.

Saudi to Mangalore flight delayed for 18 hours, frustrated passengers fight with airlines for their behaviour. Passengers also had no food and water provided by the airlines even after waiting for hours.