Mla Harish Poonja, Kalenja, Forest: ಕಳೆಂಜದಲ್ಲಿ ಸರ್ಕಾರದ ಜಂಟಿ ಸರ್ವೆ ; 94 ಕಡೆ 218 ಎಕ್ರೆ ಅರಣ್ಯ ಒತ್ತುವರಿ ಪತ್ತೆ, ಅಕ್ರಮ ಆಗಿದ್ದರೂ ಗ್ರಾಪಂನಿಂದ ಸವಲತ್ತು ! ಅಧಿಕಾರಿಗಳ ಕುರುಡು ನಡೆ ಬಯಲು, ಪತ್ರಿಕಾ ವರದಿಗೆ ಹರಿಹಾಯ್ದ ಬೆಳ್ತಂಗಡಿ ಶಾಸಕ  

23-03-24 07:26 pm       Giridhar Shetty, Mangaluru Correspondent   ಕರಾವಳಿ

ಆರು ತಿಂಗಳ ಹಿಂದೆ ಕಳೆಂಜ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಶಾಸಕ ಹರೀಶ್ ಪೂಂಜ ನಡುವೆ ಗುದ್ದಾಟಕ್ಕೆ ಕಾರಣವಾಗಿದ್ದ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ.

ಬೆಳ್ತಂಗಡಿ, ಮಾ.23: ಆರು ತಿಂಗಳ ಹಿಂದೆ ಕಳೆಂಜ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಶಾಸಕ ಹರೀಶ್ ಪೂಂಜ ನಡುವೆ ಗುದ್ದಾಟಕ್ಕೆ ಕಾರಣವಾಗಿದ್ದ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಶಾಸಕರು ಮತ್ತು ಸಾರ್ವಜನಿಕರ ಬೇಡಿಕೆಯಂತೆ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸರ್ವೆ ನಡೆಸಲಾಗಿದ್ದು ಆಸುಪಾಸಿನಲ್ಲಿ ನೂರಾರು ಎಕ್ರೆ ಭೂಮಿಯನ್ನು ಖಾಸಗಿಯವರು ಒತ್ತುವರಿ ಮಾಡಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

ಕಳೆಂಜ ಗ್ರಾಮದ ಅಮ್ಚಿನಡ್ಕ ಎಂಬಲ್ಲಿ ದೇವಣ್ಣ ಗೌಡ ಎಂಬವರ ಪುತ್ರ ಲೋಲಾಕ್ಷ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾಗ ಅರಣ್ಯ ಇಲಾಖೆ ಅಧಿಕಾರಿಗಳು ತಡೆದಿದ್ದರು. ಅಧಿಕಾರಿಗಳ ನಡೆಯ ವಿರುದ್ಧ ತಗಾದೆ ತೆಗೆದಿದ್ದ ಶಾಸಕ ಹರೀಶ್ ಪೂಂಜ ಮತ್ತು ಬಿಜೆಪಿ ಜನಪ್ರತಿನಿಧಿಗಳು ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ಸ್ಥಳದಲ್ಲೇ ತೀವ್ರ ಜಟಾಪಟಿ ನಡೆಸಿ ರಾಜ್ಯ ಮಟ್ಟದಲ್ಲಿ ಸುದ್ದಿ ಆಗುವಂತಾಗಿತ್ತು. ಈ ವಿಚಾರ ಬಳಿಕ ವಿಧಾನಸಭೆ ಅಧಿವೇಶನದಲ್ಲಿಯೂ ಚರ್ಚೆಗೆ ಕಾರಣವಾಗಿತ್ತು. ಅರಣ್ಯ ಸಚಿವ ಈಶ್ವರ್ ಖಂಡ್ರೆ, ಮುಖ್ಯಮಂತ್ರಿ ಬಳಿಗೂ ದೂರು ಹೋಗಿದ್ದರಿಂದ ಜಂಟಿ ಸರ್ವೆಗೆ ಸರಕಾರ ಆದೇಶ ಮಾಡಿತ್ತು. ಶಾಸಕ ಹರೀಶ್ ಪೂಂಜ ಕೂಡ ಜಂಟಿ ಸರ್ವೆ ನಡೆಸುವಂತೆ ಅಧಿಕಾರಿಗಳಿಗೆ ಸವಾಲು ಹಾಕಿದ್ದರು.

2023ರ ಅಕ್ಟೋಬರ್‌ನಲ್ಲಿ ಘಟನೆ ನಡೆದ ನಂತರ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೆ ಆರಂಭಿಸಿದ್ದರು. ಸರ್ವೇ ನಂಬರ್ 309ರಲ್ಲಿ ಬಹುತೇಕ ಭಾಗದಲ್ಲಿ ಸರ್ವೆ ನಡೆದಿದ್ದು ಅಂದಾಜು 300 ಎಕ್ರೆ ವ್ಯಾಪ್ತಿಯ ಈ ಪ್ರದೇಶದಲ್ಲಿ 94 ಮಂದಿ ಅರಣ್ಯ ಭೂಮಿಯಲ್ಲಿ ಮನೆ ಕಟ್ಟಿರುವುದು ಕಂಡುಬಂದಿದೆ. ವಿಧಾನಸಭೆಯ ಹಕ್ಕುಬಾಧ್ಯತಾ ಸಮಿತಿ ಕೇಳಿದ ಮಾಹಿತಿಯಂತೆ ಅವರ ಪಟ್ಟಿಯನ್ನು ಅರಣ್ಯ ಇಲಾಖೆ ತಯಾರಿಸಿದೆ. ಅಲ್ಲದೆ, ಅರಣ್ಯ ಭೂಮಿಯಲ್ಲಿ ಮನೆ ಕಟ್ಟಿರುವವರಿಗೆ ಸರಕಾರಿ ಸವಲತ್ತು ನೀಡಿರುವ ಬಗ್ಗೆ ಕಳೆಂಜ ಗ್ರಾಮ ಪಂಚಾಯತ್ ನಿಂದ ಮಾಹಿತಿ ಕೇಳಿದೆ. ಜಂಟಿ ಸರ್ವೆಯಿಂದಾಗಿ ಲೋಲಾಕ್ಷ ಮನೆ ಮಾತ್ರವಲ್ಲದೆ ಆಸುಪಾಸಿನ ನೂರಕ್ಕೂ ಹೆಚ್ಚು ಮನೆ, ಕೃಷಿ ಭೂಮಿಗಳ ಸರ್ವೆ ಆಗಿದ್ದು, ಅಕ್ರಮ ಎಂದು ಕಂಡುಬಂದಿರುವ 94 ಕುಟುಂಬಗಳಿಗೆ ತಮ್ಮ ಜಮೀನು ಬಗ್ಗೆ ಆತಂಕ ಉಂಟಾಗಿದೆ.  

ಅರಣ್ಯ ಭೂಮಿ ಒತ್ತುವರಿ ಆಗಿರುವುದು, ಈ ಪೈಕಿ 94 ಕುಟುಂಬಗಳು ಅಕ್ರಮವಾಗಿ ಮನೆ ಕಟ್ಟಿಕೊಂಡಿರುವ ವಿಚಾರ ಕಳೆದ ಜನವರಿ ತಿಂಗಳಲ್ಲಿಯೇ ಅಧಿಕಾರಿಗಳಿಗೆ ತಿಳಿದಿತ್ತು. ಈ ಬಗ್ಗೆ ಉಪ್ಪಿನಂಗಡಿ ವಲಯ ಅರಣ್ಯ ಅಧಿಕಾರಿ ಜಯಪ್ರಕಾಶ್ ಕೆ.ಕೆ. ಅವರು ಕಳೆಂಜ ಗ್ರಾಪಂ ಪಿಡಿಓಗೆ ಜ.12ರಂದೇ ಪತ್ರ ಬರೆದಿದ್ದಾರೆ. ಆನಂತರ ಫೆಬ್ರವರಿ ತಿಂಗಳಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಗ್ರಾಪಂ ಸದಸ್ಯರಿಗೆ ಪತ್ರದ ಕುರಿತು ಮಾಹಿತಿಯನ್ನೂ ನೀಡಲಾಗಿತ್ತು. ಆದರೆ, ಈ ಕುರಿತ ವಿವರ ಹೊರಗೆ ಬಂದಿರದೇ ಇದ್ದುದರಿಂದ ವಿಚಾರ ಸಾರ್ವಜನಿಕ ಆಗಿರಲಿಲ್ಲ. ಅಧಿಕಾರಿಗಳು ಮತ್ತು ಗ್ರಾಪಂ ಸದಸ್ಯರು ಈ ವಿಷಯ ಹೊರಗೆ ಬರದಂತೆ ನೋಡಿಕೊಂಡಿದ್ದರು ಎನ್ನಲಾಗುತ್ತಿದೆ.

ಅರಣ್ಯ ಭೂಮಿಯಲ್ಲಿ 82 ಅಕ್ರಮ ಮನೆ  

ಅರಣ್ಯ ಇಲಾಖೆ ಸರ್ವೇ ಪ್ರಕಾರ, 94 ಒತ್ತುವರಿದಾರರಲ್ಲಿ ಒಟ್ಟು 218.51 ಎಕರೆ ಮೀಸಲು ಅರಣ್ಯ ಭೂಮಿಯನ್ನು ಅಕ್ರಮವಾಗಿ ಸ್ವಾಧೀನದಲ್ಲಿರಿಸಿದ್ದಾರೆ. ಇದರಲ್ಲಿ 78 ಮಂದಿ ಮನೆ ನಿರ್ಮಿಸಿಕೊಂಡಿದ್ದರೆ, ನಾಲ್ಕು ಒತ್ತುವರಿದಾರರು ಎರಡೆರಡು ಮನೆ ಹೊಂದಿದ್ದಾರೆ. ಹಾಗಾಗಿ ಈ ಪ್ರದೇಶದಲ್ಲಿ ಒಟ್ಟು 82 ಮನೆಗಳಿರುವುದನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಉಳಿದ 16 ಒತ್ತುವರಿದಾರರು ಮೀಸಲು ಅರಣ್ಯ ಜಾಗದಲ್ಲಿ ಕೃಷಿ ಬೆಳೆಸಿದ್ದು ಮನೆ ನಿರ್ಮಿಸಿಲ್ಲ. ಆದರೆ ಹೆಚ್ಚಿನವರು ಮನೆಯ ಜೊತೆಗೆ ಕೃಷಿ ಮಾಡಿಕೊಂಡಿದ್ದಾರೆ. ತಲಾ 3-4 ಎಕ್ರೆಯಷ್ಟು ಜಾಗ ಹೊಂದಿದ್ದು, ಇದರಲ್ಲಿ ಎಲ್ಲ ಮತೀಯರೂ ಇದ್ದಾರೆ. ಪರಿಶಿಷ್ಟ ವರ್ಗದ ಬಡವರು, ಕೇರಳ ಮೂಲದ ಕ್ರೈಸ್ತರು, ಕೆಲವು ಕಡೆ ಮುಸ್ಲಿಂ ವ್ಯಕ್ತಿಗಳೂ ಇದ್ದಾರೆ. ಇವರ ಪಟ್ಟಿಯನ್ನು ಅರಣ್ಯ ಇಲಾಖೆ ಮಾಡಿಕೊಂಡಿದ್ದು ಅದರ ಪ್ರತಿ ಲಭ್ಯವಾಗಿದೆ.

ಅಕ್ರಮವಾದ್ರೂ 95ರಷ್ಟು ಮನೆಗಳಿಗೆ ಸವಲತ್ತು  

ವಿಶೇಷ ಅಂದ್ರೆ, ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿದ್ದರೂ, ಈ ಪೈಕಿ ಶೇ.95ರಷ್ಟು ಮಂದಿಗೆ ಕಳೆಂಜ ಗ್ರಾಮ ಪಂಚಾಯತ್ ವತಿಯಿಂದ ಡೋರ್ ನಂಬರ್ ನೀಡಲಾಗಿದೆ. 2015ರ ಮೊದಲು ನಿರ್ಮಾಣ ಮಾಡಿಕೊಂಡವರು ಮನೆಗಳಿಗೆ ಡೋರ್ ನಂಬರ್ ಪಡೆದಿದ್ದಾರೆ. ಹಾಗಾಗಿ ಈ ಮನೆಗಳಿಗೆ ವಿದ್ಯುತ್ ಸಂಪರ್ಕ, ಕೃಷಿಗೆ ವಿದ್ಯುತ್ ಪಂಪ್‌ಸೆಟ್, ವಸತಿ ಯೋಜನೆಗಳ ಪ್ರಯೋಜನ, ಉದ್ಯೋಗ ಖಾತರಿ ಯೋಜನೆ ಮತ್ತಿತರ ಸರಕಾರಿ ಯೋಜನೆಗಳ ಪ್ರಯೋಜನವೂ ಲಭಿಸಿದೆ. ಹಕ್ಕುಪತ್ರ ಸಿಗದಿರುವ ಕಾರಣ ಬ್ಯಾಂಕುಗಳಿಂದ ಸಾಲ ಪಡೆಯುವುದು ಸಾಧ್ಯವಾಗಿಲ್ಲ. 2015ರ ನಂತರ ಮನೆ ನಿರ್ಮಿಸಿರುವವರಿಗೆ ನಿಯಮ ಬದಲಾದ ಕಾರಣ ಗ್ರಾಪಂ ಡೋರ್ ನಂಬರ್ ನೀಡಿಲ್ಲ ಎಂಬ ಮಾಹಿತಿ ಲಭಿಸಿದೆ.

ಅರಣ್ಯ ಒತ್ತುವರಿದಾರರಿಗೆ ಆತಂಕ  

ಸದ್ಯಕ್ಕೆ ನಿಡ್ಲೆ ಬ್ಲಾಕ್ -2ರಲ್ಲಿ ಸರ್ವೇ ಮಾಡಿದಾಗ 94 ಒತ್ತುವರಿದಾರರು ಇರುವುದು ಪತ್ತೆಯಾಗಿದೆ. ಇದು ಸುಮಾರು 350 ಎಕರೆ ವ್ಯಾಪ್ತಿಯ ಸರ್ವೆಯಲ್ಲಿ ಸಿಕ್ಕ ಮಾಹಿತಿ. ಒಟ್ಟು 8500 ಎಕರೆ ಜಾಗದ ಸರ್ವೇ ನಡೆಯಬೇಕಿದ್ದು, ಈ ಪ್ರದೇಶ ಪೂರ್ತಿ ಸರ್ವೆಯಾದಲ್ಲಿ ಒತ್ತುವರಿದಾರರ ಸಂಖ್ಯೆ 300 ದಾಟುವ ಸಾಧ್ಯತೆಯಿದೆ. ಕಳೆಂಜ ಮಾತ್ರವಲ್ಲದೆ, ನಿಡ್ಲೆ, ಪುದುವೆಟ್ಟು, ಶಿಶಿಲ ಗ್ರಾಮಗಳ ಕೆಲವು ಭಾಗಗಳೂ ಇದಕ್ಕೆ ಒಳಪಟ್ಟಿದ್ದು ಸ್ಥಳೀಯರು ಈ ಬಗ್ಗೆ ಆತಂಕದಲ್ಲಿದ್ದಾರೆ.

ಆದರೆ ಬೆಳ್ತಂಗಡಿ ಭಾಗದಲ್ಲಿ ಪಶ್ಚಿಮ ಘಟ್ಟ ವ್ಯಾಪ್ತಿಯ ಅರಣ್ಯ ಅತಿಕ್ರಮಣ ಇರುವುದು ಹೊಸತೇನಲ್ಲ. ಕೆಲವರು ಅಜ್ಜಂದಿರ ಕಾಲದಿಂದಲೂ ಅದೇ ಜಾಗದಲ್ಲಿ ಮನೆ, ಕೃಷಿ ಮಾಡಿಕೊಂಡಿದ್ದರೆ, ಇನ್ನು ಕೆಲವರು ಬೇರೆ ಬೇರೆ ಕಡೆಯಿಂದ ಬಂದು ಅರಣ್ಯ ಅತಿಕ್ರಮಣ ಮಾಡಿದವರಿದ್ದಾರೆ. ಉಳುವವನೇ ಹೊಲದೊಡೆಯ ಎಂಬ ಕಾನೂನು ಬಂದ ಬಳಿಕ ಈ ಭಾಗದಲ್ಲಿ ಕೆಲವರಿಗೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ. ಅರಣ್ಯ ಇಲಾಖೆಯ ಡೀಮ್ಡ್ ಫಾರೆಸ್ಟ್ ಇನ್ನಿತರ ಕಾನೂನು ತೊಡಕು, ಸ್ಥಳೀಯ ಜನಪ್ರತಿನಿಧಿಗಳ ನಿರಾಸಕ್ತಿಯಿಂದಾಗಿ ಹಕ್ಕುಪತ್ರ ಸಿಕ್ಕಿರಲಿಲ್ಲ. ಅರಣ್ಯ ಭೂಮಿ ಅತಿಕ್ರಮಣದ ಬಗ್ಗೆ ಅಧಿಕಾರಿಗಳಿಗೆ ತಿಳಿದಿದ್ದರೂ ಈ ಹಿಂದೆ ಜಂಟಿ ಸರ್ವೆ ಮಾಡಿದ ಇತಿಹಾಸ ಇಲ್ಲ. ಇದೇ ರೀತಿ ನೂರಾರು ಎಕ್ರೆ ಅರಣ್ಯವನ್ನು ಕಬಳಿಸಿ ರಬ್ಬರ್ ಎಸ್ಟೇಟ್ ಮಾಡಿಕೊಂಡವರೂ ಇದ್ದಾರೆ.

ಪತ್ರಿಕೆ ವಿರುದ್ಧ ಹರಿಹಾಯ್ದ ಶಾಸಕ ಪೂಂಜ

ಇದೀಗ ಶಾಸಕರ ಪ್ರಯತ್ನದಿಂದಾಗಿ ಜಂಟಿ ಸರ್ವೆ ಆಗಿದ್ದು, ಯಾರೆಲ್ಲ ಅರಣ್ಯ ಭೂಮಿ ಒತ್ತುವರಿ ಮಾಡಿದ್ದಾರೆ ಎನ್ನುವುದು ಹೊರಬಂದಿದೆ. ಇದೇ ರೀತಿಯ ಸರ್ವೆ ಅರಣ್ಯ ಭೂಮಿ ಇರುವ ಎಲ್ಲ ಕಡೆಯೂ ಆದಲ್ಲಿ ದೊಡ್ಡ ಮಟ್ಟದ ಕುಳಗಳ ಜಾತಕವೇ ಹೊರಬರಲಿದೆ. ಈ ಪೈಕಿ 40 ವರ್ಷಗಳ ಹಿಂದೆಯೇ ವಾಸ ಇದ್ದವರು ಯಾರೆನ್ನುವುದನ್ನು ಗುರುತಿಸುವುದು, ಅದಕ್ಕೆ ದಾಖಲೆ ಸಿದ್ಧಪಡಿಸುವುದು ಕಷ್ಟವೇನಲ್ಲ. ನೈಜ ವಾರಸುದಾರರಿಗೆ ಜಾಗ ಬಿಟ್ಟು ಕೊಡುವುದಕ್ಕೆ ಕಾನೂನಿನಲ್ಲಿ ಅವಕಾಶವೂ ಇದೆ. ಹತ್ತಾರು ವರ್ಷಗಳಿಂದ ಹಕ್ಕುಪತ್ರ ಸಿಕ್ಕಿಲ್ಲ ಎಂಬ ಕೊರಗಿನಲ್ಲಿದ್ದವರಿಗೆ ಸರಕಾರದ ಮೂಲಕವೇ ಹಕ್ಕುಪತ್ರ ಗಿಟ್ಟಿಸಿಕೊಳ್ಳಬಹುದು. ಒತ್ತುವರಿ ಎಂದ ಮಾತ್ರಕ್ಕೆ ಅರಣ್ಯ ಇಲಾಖೆಯವರಿಗೂ ನೇರವಾಗಿ ಒಕ್ಕಲೆಬ್ಬಿಸುವುದಕ್ಕಂತೂ ಸಾಧ್ಯವಿಲ್ಲ. ಆದರೆ, ಶಾಸಕ ಹರೀಶ್ ಪೂಂಜ ಈ ಬಗ್ಗೆ ಪತ್ರಿಕೆಯೊಂದರಲ್ಲಿ ಸುದ್ದಿ ಬಂದಿದ್ದಕ್ಕೆ ಹರಿಹಾಯ್ದು ತಾಲೂಕಿನಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದ್ದಾರೆ. ಇದಕ್ಕೆಲ್ಲ ನಾನೇ ಕಾರಣ ಎನ್ನುವಂತೆ ಪತ್ರಿಕೆ ಸುದ್ದಿ ಮಾಡಿದ್ದಾಗಿ ಕೆರಳಿ ಕೆಂಡವಾಗಿದ್ದು ಆ ಪತ್ರಿಕೆಯನ್ನು ನಿಷೇಧಿಸಬೇಕೆಂದು ಆಗ್ರಹ ಮಾಡಿದ್ದಾರೆ. ಆದರೆ ಶಾಸಕರ ಈ ರೀತಿಯ ನಡೆಯ ಬಗ್ಗೆ ಸುದ್ದಿಗೋಷ್ಟಿ ನಡೆಸಿದ ಪತ್ರಿಕೆಯ ವರದಿಗಾರರು, ಶಾಸಕರ ನಡೆಯನ್ನು ಖಂಡಿಸಿದ್ದಾರೆ.

Mangalore Kalenja 218 acres of forest land in 94 places is found to have encroched to build house, Harish Poonja video of threatening local paper goes viral. Reently Forest officials proceeded with the eviction of a partially constructed house in Amminadka, Kalenja village, disregarding instructions from a government minister.MLA Harish Poonja, along with district MLAs Rajesh Naik, Bharat Shetty, Bhagirathi Murulya, and Umanath Kotyan, rushed to the scene.