ISIS Terrorists, Umesh Reddy, Parappana Agrahara Jail: ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಸಿಸ್ ಉಗ್ರರಿಗೆ, ವಿಕೃತ ಕಾಮಿ ಉಮೇಶ್ ರೆಡ್ಡಿಗೆ ರಾಜಾತಿಥ್ಯ ; ಜೈಲಿನೊಳಗೆ ಸ್ಮಾರ್ಟ್ ಫೋನ್, ಟಿವಿ ಬಳಕೆಯ ವಿಡಿಯೋ ವೈರಲ್ ! 

08-11-25 10:29 pm       Bangalore Correspondent   ಕರ್ನಾಟಕ

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ವಿಐಪಿ ಸೌಲಭ್ಯಗಳು ಮತ್ತು ಸ್ಮಾರ್ಟ್ ಫೋನ್​ಗಳು ದೊರೆಯುತ್ತಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದ್ದು ತೀವ್ರ ಕಳಕಳಿ ಹುಟ್ಟುಹಾಕುತ್ತಿದೆ.

ಬೆಂಗಳೂರು, ನ.8: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ವಿಐಪಿ ಸೌಲಭ್ಯಗಳು ಮತ್ತು ಸ್ಮಾರ್ಟ್ ಫೋನ್​ಗಳು ದೊರೆಯುತ್ತಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದ್ದು ತೀವ್ರ ಕಳಕಳಿ ಹುಟ್ಟುಹಾಕುತ್ತಿದೆ. ವಿಕೃತಕಾಮಿ ಉಮೇಶ್ ರೆಡ್ಡಿ ಮೊಬೈಲ್ ಬಳಸುತ್ತಾ ಸ್ಮಾರ್ಟ್ ಟಿವಿ ನೋಡುತ್ತಿರುವ ವಿಡಿಯೋ ಹಾಗೂ ಲಷ್ಕರ್ ಉಗ್ರನೊಬ್ಬ ಮೊಬೈಲ್ ಬಳಸುತ್ತಿರುವ ವಿಡಿಯೋಗಳು ವೈರಲ್ ಆಗಿದ್ದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ನಟ ದರ್ಶನ್ ಪ್ರಕರಣದ ಬೆನ್ನಲ್ಲೇ ಜೈಲಿನಲ್ಲಿ ಯಾವುದೇ ಸೌಲಭ್ಯಗಳನ್ನು ನೀಡದಂತೆ ರಾಜ್ಯ ಸರ್ಕಾರಗಳಿಗೆ ಹಾಗೂ ಕೇಂದ್ರ ಕಾರಾಗೃಹದ ಮುಖ್ಯಸ್ಥರಿಗೆ ಸುಪ್ರೀಂ ಕೋರ್ಟ್ ಕಠಿಣ ಸೂಚನೆ ನೀಡಿದ್ದರೂ, ಹಲವು ಜೈಲುಗಳಲ್ಲಿ ಕೈದಿಗಳಿಗೆ ವಿಐಪಿ ಸೌಲಭ್ಯಗಳನ್ನು ನೀಡುತ್ತಿರುವುದು ಪತ್ತೆಯಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಸಿಸ್​ನ ಮೋಸ್ಟ್ ವಾಂಟೆಡ್ ಉಗ್ರ ಜುಹಾದ್ ಹಮೀದ್ ಶಕೀಲ್ ಮುನ್ನಾ ಎಂಬಾತನಿಗೂ ರಾಜಾತಿಥ್ಯ ದೊರೆಯುತ್ತಿರುವುದು ಬಯಲಾಗಿದೆ. ಹೀಗಾಗಿ ಪರಪ್ಪನ ಅಗ್ರಹಾರ ಜೈಲು ಭಯೋತ್ಪಾದಕರ ಪಾಲಿಗೆ ಸ್ವರ್ಗವಾಗಿ ಪರಿಣಮಿಸಿದೆಯೇ ಎಂಬ ಅನುಮಾನ ಹುಟ್ಟಿಕೊಂಡಿದೆ. 

ಬ್ಯಾರಕ್​ ಪರಿಶೀಲನೆಗೆ ಎಡಿಜಿಪಿ ಸೂಚನೆ 

ಜೈಲಿನಲ್ಲಿ ರಾಜಾತಿಥ್ಯ ದೃಶ್ಯಗಳು ಬಹಿರಂಗವಾಗುತ್ತಿದ್ದಂತೆ ಸಂಬಂಧಪಟ್ಟ ಕೈದಿಗಳ ಬ್ಯಾರಕ್‌ಗಳನ್ನು ಪರಿಶೀಲನೆ ನಡೆಸುವಂತೆ ಜೈಲಾಧಿಕಾರಿಗಳಿಗೆ ಕಾರಾಗೃಹ ಹಾಗೂ ಸುಧಾರಣಾ ಇಲಾಖೆಯ ಎಡಿಜಿಪಿ ಬಿ.ದಯಾನಂದ್ ಸೂಚನೆ  ನೀಡಿದ್ದಾರೆ.

ಯಾರೀ ಉಮೇಶ್​ ರೆಡ್ಡಿ ? 

ಅತ್ಯಾಚಾರ, ಕೊಲೆ ಪ್ರಕರಣದ ಅಪರಾಧಿ ಉಮೇಶ್‌ ರೆಡ್ಡಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಶಿಕ್ಷೆ ಪ್ರಶ್ನಿಸಿ ಉಮೇಶ್​ ರೆಡ್ಡಿ ಸುಪ್ರೀಂಕೋರ್ಟ್​ ಮೊರೆ ಹೋಗಿದ್ದ. ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಮಾರ್ಪಡಿಸಿ 2022ರಲ್ಲಿ ಆದೇಶಿಸಿತ್ತು. ಬೆಂಗಳೂರಿನಲ್ಲಿ 1998ರ ಫೆ.28ರಂದು ವಿಧವೆ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಉಮೇಶ ರೆಡ್ಡಿ ತಪ್ಪಿತಸ್ಥ ಎಂದು ಬೆಂಗಳೂರು ಕೋರ್ಟ್ ತೀರ್ಪು ನೀಡಿ, ಮರಣದಂಡನೆ ವಿಧಿಸಿತ್ತು. ಬಳಿಕ ರಾಷ್ಟ್ರಪತಿಗಳಿಗೆ ಉಮೇಶ್ ರೆಡ್ಡಿ ಕ್ಷಮಾಪಣಾ ಅರ್ಜಿ ಸಲ್ಲಿಸಿದ್ದ. 2013ರಲ್ಲಿ ಮೇ 12 ರಂದು ರಾಷ್ಟ್ರಪತಿಗಳು, ಉಮೇಶ್ ರೆಡ್ಡಿ ಅರ್ಜಿಯನ್ನು ತಿರಸ್ಕರಿಸಿದ್ದರು.

ಉಮೇಶ್‌ ರೆಡ್ಡಿ ಮೂಲತಃ ಚಿತ್ರದುರ್ಗದವನಾಗಿದ್ದು, ಯುವಕನಾಗಿದ್ದಾಗ ಸಿಆರ್‌ಪಿಎಫ್‌ಗೆ ಆಯ್ಕೆಯಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸೈನಿಕನಾಗಿದ್ದ. ಬಳಿಕ ಸೇನೆ ಬಿಟ್ಟು ಪೊಲೀಸ್​ ಸೇವೆ ಸೇರಿದ್ದ. ಆದರೆ, ಪೊಲೀಸ್ ಆಗಿದ್ದಾಗಲೇ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದು ವಿಕೃತ ಕಾಮಿಯಾಗಿ ಕುಖ್ಯಾತಿ ಪಡೆದು ಜೈಲು ಸೇರಿದ್ದ.‌

2024ರ ಆಗಸ್ಟ್​ ತಿಂಗಳಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊಲೆ ಆರೋಪ ಎದುರಿಸುತ್ತಿರುವ ನಟ ದರ್ಶನ್​, ರೌಡಿ ಶೀಟರ್‌ ವಿಲ್ಸನ್ ಗಾರ್ಡನ್ ನಾಗನ ಜೊತೆಗೆ ಕುಳಿತು ಸಿಗರೇಟ್‌ ಸೇದುತ್ತಿರುವ ಫೋಟೋ ವೈರಲ್​ ಆಗಿತ್ತು. ಫೋಟೋದಲ್ಲಿ ಮತ್ತೊಬ್ಬ ಕೈದಿಯಾಗಿದ್ದ ಮ್ಯಾನೇಜರ್‌ ನಾಗರಾಜ್‌ ಕೂಡ ಇದ್ದ. ನಟ ದರ್ಶನ್​ ಗೆ ರಾಜಾತಿಥ್ಯ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಏಳು ಜೈಲಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಮುಂದೆ ಹೀಗಾಗದಂತೆ ಕ್ರಮ‌ ಜರುಗಿಸುತ್ತೇವೆ ಎಂದೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಹಿತಿ ನೀಡಿದ್ದರು.

A shocking video from Parappana Agrahara Central Jail in Bengaluru has gone viral, revealing that several inmates — including notorious rapist Umesh Reddy and an ISIS terrorist — are enjoying VIP treatment, complete with smartphones and smart TVs inside the prison.