Mangalore, Raghupathi bhat, BJP: ಗೋಬ್ಯಾಕ್' ಅನ್ನಿಸಿಕೊಂಡವರಿಗೂ ಬೇರೆ ಕ್ಷೇತ್ರದಲ್ಲಿ ಟಿಕೆಟ್ ನೀಡಿದ್ದಾರೆ, ಈ ಚುನಾವಣೆ ಅಲ್ಲದಿದ್ದರೆ ಬೇರೆಲ್ಲೂ ನನಗೆ ಸ್ಥಾನ ಸಿಗಲಾರದು, ಹಾಗಾಗಿ ಸ್ಪರ್ಧಿಸಿದ್ದೇನೆ ; ರಘುಪತಿ ಭಟ್

02-06-24 12:04 pm       Mangalore Correspondent   ಕರಾವಳಿ

ನನ್ನನ್ನು ಕ್ಷೇತ್ರದಲ್ಲಿ ಮತದಾರರು ನಿರ್ಲಕ್ಷ್ಯ ಮಾಡಿಲ್ಲ. ಒಂದು ಚುನಾವಣೆಯನ್ನೂ ಸೋತಿದ್ದು ಇಲ್ಲ. ಕಾರ್ಯಕರ್ತರು ನನ್ನನ್ನು ವಿರೋಧಿಸಿ ಗೋ ಬ್ಯಾಕ್ ಅಂದಿದ್ದೂ ಇಲ್ಲ.

ಮಂಗಳೂರು, ಜೂನ್ 2: ನನ್ನನ್ನು ಕ್ಷೇತ್ರದಲ್ಲಿ ಮತದಾರರು ನಿರ್ಲಕ್ಷ್ಯ ಮಾಡಿಲ್ಲ. ಒಂದು ಚುನಾವಣೆಯನ್ನೂ ಸೋತಿದ್ದು ಇಲ್ಲ. ಕಾರ್ಯಕರ್ತರು ನನ್ನನ್ನು ವಿರೋಧಿಸಿ ಗೋ ಬ್ಯಾಕ್ ಅಂದಿದ್ದೂ ಇಲ್ಲ. ನಮ್ಮಲ್ಲಿ ಗೋಬ್ಯಾಕ್ ಅಂದವರಿಗೇ ಬೇರೆ ಕ್ಷೇತ್ರದಲ್ಲಿ ಟಿಕೆಟ್ ನೀಡಲಾಗಿದೆ. ನನಗೆ ಅಂತಹ ಪರಿಸ್ಥಿತಿ ಬಂದಿಲ್ಲ ಎಂದು ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ಕರೆದಿದ್ದ ವೇಳೆ, ಕೆಲವರಿಗೆ ಅಧಿಕಾರ ಇಲ್ಲದೆ ಇರಲಾಗದು ಎಂಬ ಬಿ.ಎಲ್. ಸಂತೋಷ್ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ರಘುಪತಿ ಭಟ್ ನೇರವಾಗಿ ಕೌಂಟರ್ ನೀಡಿದರು. ಈ ಮಾತನ್ನು ಪಕ್ಷದ ಎಲ್ಲರನ್ನೂ ಉದ್ದೇಶಿಸಿ ಹೇಳಿರಬಹುದು. 70 ವರ್ಷ ಮೇಲ್ಪಟ್ಟವರು, ವಿಧಾನಸಭೆ ಸೋತವರನ್ನೂ ಲೋಕಸಭೆಗೆ ನಿಲ್ಲಿಸಲಾಗಿದೆ. ತಾನೇ ಮುಖ್ಯಮಂತ್ರಿಯಾಗಬೇಕು, ತನ್ನ ಪುತ್ರನೇ ಅಧ್ಯಕ್ಷನಾಗಬೇಕು ಎಂಬ ನಾಯಕರಿಗೂ ಹೇಳಿರಬಹುದು. ನಾನು ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾರಣ, ನಾನೊಬ್ಬ ಸಕ್ರಿಯ ಜನಪ್ರತಿನಿಧಿಯಾಗಿದ್ದವನು. ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ವಯಸ್ಸು ನನ್ನದಲ್ಲ. 

ವಿಧಾನ ಪರಿಷತ್ ಪಕ್ಷದಲ್ಲಿ ಅವಕಾಶ ವಂಚಿತರಿಗೆ ನೀಡುವ ಸ್ಥಾನ. ನಾನು ಈ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೆ ಮತ್ತೆ ಚುನಾವಣಾ ರಾಜಕೀಯದಲ್ಲಿ ಇರಲು ಸಾಧ್ಯವಾಗದು. ಕೇವಲ ಕಾರ್ಯಕರ್ತನಾಗಿ ಇರಬೇಕಾಗುತ್ತದೆ. ವಿಧಾನಸಭೆಗೆ ಇನ್ನು ನಾಲ್ಕು ವರ್ಷ ಕಾಯುವುದಾದರೆ ಅಲ್ಲಿ ನಾನೇ ಗೆಲ್ಲಿಸಿದ ಶಾಸಕರಿದ್ದು, ಮತ್ತೆ  ಸ್ಪರ್ಧಿಸಲು ಆಗದು. ಲೋಕಸಭೆಯಲ್ಲಿ ನಮ್ಮದು ಸಣ್ಣ ಮತದಾರರ ಜಾತಿ ಎನ್ನುವ ಕಾರಣಕ್ಕೆ ಸ್ಪರ್ಧೆ ಸಾಧ್ಯವಿಲ್ಲ. ವಿಧಾನ ಪರಿಷತ್‍ನಿಂದಲೂ ನೀಡುವ ಸಾಧ್ಯತೆ ಇಲ್ಲ. ಹಾಗಾಗಿ ಪದವೀಧರ ಮತದಾರರನ್ನು ವಿಶ್ವಾಸದಲ್ಲಿಟ್ಟು ಸ್ಪರ್ಧಿಸುತ್ತಿದ್ದೇನೆ ಎಂದರು.

ಮೂರು ಬಾರಿಯ ಶಾಸಕನಿಗೆ ಟಿಕೆಟ್ ತಪ್ಪುವುದು ಟಿವಿಯಲ್ಲಿ ಪ್ರಕಟವಾದಾಗ ತಿಳಿಯುವುದಲ್ಲ. ನಾಯಕರು ಕರೆದು ಈ ರೀತಿಯ ಸಾಮಾಜಿಕ ನ್ಯಾಯಕ್ಕಾಗಿ ನೀಡಲಾಗುವುದಿಲ್ಲ ಎಂಬುದನ್ನು ಮನವರಿಕೆ ಮಾಡುವ ವ್ಯವಸ್ಥೆ ಆಗಬೇಕು. ಕೊನೆಯ ವರೆಗೂ ಟಿಕೆಟ್ ಕೊಡುವುದಾಗಿ ಹೇಳಿ ತಪ್ಪಿಸುವುದು ಸರಿಯಲ್ಲ. ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಪಕ್ಷದ ಮಾನದಂಡಗಳನ್ನು ಅವರು ಆತ್ಮವಿಮರ್ಶೆ ಮಾಡಬೇಕಾಗಿದೆ ಎಂದು ಪಕ್ಷದ ನಾಯಕರನ್ನು ಕುಟುಕಿದರು.

ಸುಮಾರು 25 ಲಕ್ಷ ಪದವೀಧರರು ಹೊಂದಿರುವ ಈ ಕ್ಷೇತ್ರದಲ್ಲಿ ಮತದಾರರ ಸಂಖ್ಯೆ 85 ಸಾವಿರ ಮಾತ್ರ ಆಗಿದ್ದು, ಈ ವ್ಯವಸ್ಥೆಯನ್ನು ಬದಲಿಸಬೇಕಾಗಿದೆ. ಮುಂದೆ ಗೆದ್ದು ಬಂದಾಗ ಈ ಬಗ್ಗೆ ಪರಿಷತ್‍ನಲ್ಲಿ ಧ್ವನಿ ಎತ್ತಲಿದ್ದೇನೆ ಎಂದು ಅವರು ಹೇಳಿದರು. ಒಮ್ಮೆ ಪದವಿ ದೊರಕಿದ ಬಳಿಕ ಶಾಶ್ವತ ಇರುತ್ತದೆ. ಹಾಗಿರುವಾಗ ಆರು ವರ್ಷಗಳಿಗೊಮ್ಮೆ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆ ಅನಗತ್ಯ. ಇಂತಹ ವ್ಯವಸ್ಥೆಗಳಿಂದಾಗಿ ಸೀಮಿತ ಮತದಾರರ ನಡುವೆ ಮಾತ್ರ ಸ್ಪರ್ಧೆ ಸಾಧ್ಯವಾಗುತ್ತಿದ್ದು, ಈ ವ್ಯವಸ್ಥೆಯನ್ನು ಬದಲಿಸಬೇಕಿದೆ. ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಹಿಂದೆ ಪಕ್ಷದ ಆಧಾರದಲ್ಲಿ ಗೆಲುವು ಸಾಧಿಸಲಾಗುತ್ತಿತ್ತು. ಆದರೆ ಈ ಬಾರಿ ಗೆಲುವಿಗೆ ವ್ಯಕ್ತಿಗಳ ಸಾಧನೆಯೇ ಪ್ರಮುಖವಾಗಲಿದೆ ಎಂದರು.

ಪದವೀಧರ ಮತದಾರರು ಪ್ರಬುದ್ಧರಾಗಿದ್ದು, ಅವರು ಎಲ್ಲ ವಿಚಾರ ತಿಳಿದು ಮತದಾನ ಮಾಡುವ ವಿಶ್ವಾಸವಿದೆ. ಐದೂವರೆ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ನೈರುತ್ಯ ಕ್ಷೇತ್ರದ ವಿವಿಧ ಕಡೆ ಭೇಟಿ ನೀಡಿ ಮತಯಾಚನೆಯ ವೇಳೆ ಮತದಾರರಿಗೆ ನನ್ನನ್ನು ಪರಿಚಯಿಸುವ ಅಗತ್ಯ ಬಂದಿಲ್ಲ. ಶಾಸಕನಾಗಿ ನಾನು ಮಾಡಿದ ಸಾಧನೆಗಳೇ ಮತದಾರರ ಗಮನದಲ್ಲಿದೆ. ಮಾತ್ರವಲ್ಲದೆ ಸಾಧನೆಯ ಪಟ್ಟಿಯನ್ನು ಮತದಾರರಿಗೆ ಅಂಚೆ ಮೂಲಕ ಕಳುಹಿಸುವ ಕಾರ್ಯವನ್ನೂ ಮಾಡಿದ್ದೇನೆ. ಸಮಯದ ಅಭಾವದಿಂದ ಕೆಲವೆಡೆ ಭೇಟಿ ನೀಡಲು ಆಗಿಲ್ಲ. ಗೆದ್ದ ಮೇಲೆ ಮತದಾರರ ಜತೆ ನಿಕಟ ಸಂಪರ್ಕ ಇರಿಸಿಕೊಂಡು ಕಾರ್ಯ ನಿರ್ವಹಿಸುವ ಭರವಸೆ ನೀಡುವುದಾಗಿ ಅವರು ಹೇಳಿದರು.

ಕರಾವಳಿಯ ಪ್ರತಿ ಸಮಸ್ಯೆಗಳ ಅರಿವು ಇದೆ. ಮಲೆನಾಡಿನ ಸ್ಥಳೀಯ ಸಮಸ್ಯೆಗಳ ಬಗ್ಗೆಯೂ ಅಧ್ಯಯನ ಮಾಡಿಕೊಂಡು ಅಲ್ಲಿನ ಜನರ ಧ್ವನಿಯಾಗಲಿದ್ದೇನೆ. ಇದಲ್ಲದೆ ಪದವೀಧರರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಅಂಕಿಅಂಶ ಆಧರಿತ ಜಾಲವೊಂದನ್ನು ರಚಿಸಿ ಚರ್ಚೆ ಮಾಡುವ ನಿಟ್ಟಿನಲ್ಲಿ ಆಲೋಚನೆ ಮಾಡಿದ್ದೇನೆ. ಸರಕಾರಿ ಉದ್ಯೋಗಕಕ್ಕೆ ಸೇರಲು ಬಯಸುವ ಪದವೀಧರರಿಗೆ ಜಿಲ್ಲಾ ಕೇಂದ್ರಗಳಲ್ಲಿ ತರಬೇತಿ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿಯೂ ಕ್ರಮ ವಹಿಸುವುದಾಗಿ ರಘುಪತಿ ಭಟ್ ಭರವಸೆ ನೀಡಿದರು. ಗೋಷ್ಟಿಯಲ್ಲಿ ಅಶ್ವಿನ್ ಕುಮಾರ್, ನವೀನ್‍ಚಂದ್ರ, ಸೂರಜ್, ರಾಘವೇಂದ್ರ, ಕೃಷ್ಣ ಶೆಣೈ, ಸಂತೋಷ್ ರಾವ್ ಉಪಸ್ಥಿತರಿದ್ದರು.

Mangalore Those MPs who were mocked by people saying go back have got tickets slams Raghupathi bhat. He slammed the BJP party for giving tickets to such leaders and not to those who stood by the party.