Boliyar Stabbing case, Udupi MLA Yashpal Suvarna: ಬೋಳಿಯಾರ್ ಇರಿತ ಪ್ರಕರಣ ; ವಾಲ್ಮೀಕಿ ನಿಗಮ ಹಗರಣ ಮರೆಮಾಚಲು ಕಾಂಗ್ರೆಸಿಗರ ಷಡ್ಯಂತ್ರ, ಪೊಲೀಸ್ ಆಯುಕ್ತರೇ ಕಾಂಗ್ರೆಸ್ ಕಚೇರಿ ನೌಕರನಂತೆ ವರ್ತಿಸಬೇಡಿ, ಪರಿಣಾಮ ಎದುರಿಸಲು ಸಿದ್ಧಾರಾಗಿ! ಶಾಸಕ ಯಶಪಾಲ್ ಸುವರ್ಣ ಎಚ್ಚರಿಕೆ 

13-06-24 10:58 pm       Mangalore Correspondent   ಕರಾವಳಿ

ಬೋಳಿಯಾರಿನಲ್ಲಿ ಬಿಜೆಪಿ ಕಾರ್ಯಕರ್ತರ ಇರಿತ ಪ್ರಕರಣವು ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರದ ಹಗರಣವನ್ನ ಮರೆಮಾಚಿ ಜನರನ್ನ ದಿಕ್ಕು ತಪ್ಪಿಸಲು ರಾಜ್ಯ ಕಾಂಗ್ರೆಸ್ ಸರಕಾರ ಮಾಡಿರುವ ಷಡ್ಯಂತ್ರ.

ಉಳ್ಳಾಲ, ಜೂ.13: ಬೋಳಿಯಾರಿನಲ್ಲಿ ಬಿಜೆಪಿ ಕಾರ್ಯಕರ್ತರ ಇರಿತ ಪ್ರಕರಣವು ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರದ ಹಗರಣವನ್ನ ಮರೆಮಾಚಿ ಜನರನ್ನ ದಿಕ್ಕು ತಪ್ಪಿಸಲು ರಾಜ್ಯ ಕಾಂಗ್ರೆಸ್ ಸರಕಾರ ಮಾಡಿರುವ ಷಡ್ಯಂತ್ರ. ಹಿಂದೂ ಸಮಾಜವು ಇದನ್ನೆಲ್ಲ ಸಹಿಸಿ ಕೈಕಟ್ಟಿ ಕೂರಲ್ಲ. ಮಂಗಳೂರು ಪೊಲೀಸ್ ಆಯುಕ್ತರೇ ನೀವು ಕಾಂಗ್ರೆಸ್ ಕಚೇರಿಯ ನೌಕರನಂತೆ ವರ್ತಿಸದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ, ಇಲ್ಲವಾದರೆ ಮುಂದಿನ ಪರಿಣಾಮಗಳನ್ನ ಎದುರಿಸ ಬೇಕಾಗುವುದೆಂದು ಉಡುಪಿ ಬಿಜೆಪಿ ಶಾಸಕಾರದ ಯಶಪಾಲ್ ಸುವರ್ಣ ಎಚ್ಚರಿಸಿದ್ದಾರೆ.

ಬೋಳಿಯಾರು ಚೂರಿ ಇರಿತ ಪ್ರಕರಣದಲ್ಲಿ ಗಾಯಗೊಂಡು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಂದನ್ ಮತ್ತು ಹರೀಶ್ ಅಂಚನ್ ಅವರನ್ನ ಗುರುವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮದ ಜತೆಗೆ ಅವರು ಮಾತನಾಡಿದರು. ಲೋಕಸಭಾ ಚುನಾವಣೆಯಲ್ಲಿ ಹಿಂದುತ್ವದ ಭದ್ರಕೋಟೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಬಹುದೊಡ್ಡ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಬ್ರಿಜೇಶ್ ಚೌಟ ಮತ್ತು ಕೋಟ ಶ್ರೀನಿವಾಸ ಪೂಜಾರಿ ಗೆದ್ದು ಬೀಗಿದ ಖುಷಿಯಲ್ಲಿ ಸಹಜವಾಗಿಯೇ ಕಾರ್ಯಕರ್ತರು ಬೋಳಿಯಾರಿನಲ್ಲಿ ಅರ್ಥಪೂರ್ಣವಾಗಿ ವಿಜಯೋತ್ಸವ ಆಚರಿಸಿದ್ದಾರೆ. ಆದರೆ ಇಂದು ರಾಜ್ಯದ ಪರಿಸ್ಥಿತಿ ಬದಲಾಗಿದೆ. ಪೊಲೀಸ್ ಇಲಾಖೆಯ ಕೈಕಟ್ಟಿಸಿ ಕಾಂಗ್ರೆಸ್ ಕಚೇರಿಯ ಮೂಲಕ ಸೂಚನೆ ನೀಡಿ ಪೊಲೀಸರಿಂದ ಕೆಲಸ ಮಾಡಿಸೋ ಕೆಲಸ ಕಾಂಗ್ರೆಸಿಗರು ಮಾಡುತ್ತಿದ್ದಾರೆ. 

ರಾಜ್ಯದ ಮುಖ್ಯಮಂತ್ರಿ, ಗೃಹ ಮಂತ್ರಿ, ಕಾಂಗ್ರೆಸ್ ಅಧ್ಯಕ್ಷರು ಅಲ್ಪಸಂಖ್ಯಾತರ ಓಲೈಕೆ ಮಾಡೋ ರಾಜಕಾರಣ ನಡೆಸುತ್ತಿದ್ದಾರೆ. ಬೋಳಿಯಾರಲ್ಲಿ ಅನ್ಯಕೋಮಿನ ಗುಂಪು ಇರಿದು ಗಾಯಗೊಂಡ ಹಿಂದೂ ಯುವಕರನ್ನ ಉಳ್ಳಾಲದ ಶಾಸಕ, ಸ್ಪೀಕರ್ ಯು.ಟಿ.ಖಾದರ್ ಅವರು ಸೌಜನ್ಯಕ್ಕೂ ಭೇಟಿ ಮಾಡಿ ಆರೋಗ್ಯ ವಿಚಾರಿಸಿಲ್ಲ. ಆ ಮೂಲಕ ಅವರು ದುಷ್ಕರ್ಮಿಗಳ ಪರ ಇರೋದನ್ನ ಸಾಬೀತು ಪಡಿಸಿದ್ದಾರೆ ಎಂದರು.

ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಮಂಡಲ ಅಧ್ಯಕ್ಷರಾದ ಮುರಳಿ ಕೊಣಾಜೆ, ಉಪಾಧ್ಯಕ್ಷರಾದ ಸೂರಜ್ ಸಾಗರ್, ಪ್ರಧಾನ ಕಾರ್ಯದರ್ಶಿ ಲತೀಶ್ ಶೆಟ್ಟಿ ಪಿಲಾರು ಉಪಸ್ಥಿತರಿದ್ದರು. 

ದೇರಳಕಟ್ಟೆ ಆಸ್ಪತ್ರೆಗೆ ಬಿಜೆಪಿ ನಾಯಕರ ದಂಡು

ಬೋಳಿಯಾರಿನಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಅನ್ಯ ಕೋಮಿನವರು ಇರಿದ ಘಟನೆ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದ್ದು, ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾಗಿದೆ. ಶುಕ್ರವಾರ ಮಾಜಿ ಸಚಿವ, ಉಡುಪಿ/ ಚಿಕ್ಕ ಮಗಳೂರು ನೂತನ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶನಿವಾರ ಬೆಳಗ್ಗೆ ಮಾಜಿ ಸಚಿವರು, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ.

Boliyar Stabbing case, Udupi MLA Yashpal Suvarna slams Mangalore police commissioner Anupam agrwal. Says this case is to cover up the case of Valmiki scam he alleged.