Mangalore University, Ronald Colaso; ಮಂಗಳೂರು ವಿವಿ ಘಟಿಕೋತ್ಸವ, ಗೌರವ ಡಾಕ್ಟರೇಟಲ್ಲೂ ಸರ್ವ ಧರ್ಮ ಸಮನ್ವಯ ; ಡಾ.ರೊನಾಲ್ಡ್ ಕೊಲಾಸೋ, ಡಾ.ತುಂಬೆ ಮೊಯ್ದಿನ್, ಗೋಲ್ಡ್ ಫಿಂಚ್ ಪ್ರಕಾಶ್ ಶೆಟ್ಟಿಗೆ ಗೌರವ ಡಾಕ್ಟರೇಟ್ 

14-06-24 07:30 pm       Mangalore Correspondent   ಕರಾವಳಿ

ಮಂಗಳೂರು ವಿಶ್ವವಿದ್ಯಾನಿಲಯದ 42ನೇ ಘಟಿಕೋತ್ಸವ ಜೂ.15ರಂದು ನಡೆಯಲಿದ್ದು, ಅನಿವಾಸಿ ಭಾರತೀಯ ಉದ್ಯಮಿ ಡಾ.ರೊನಾಲ್ಡ್ ಕೊಲಾಸೋ, ತುಂಬೆ ಗ್ರೂಪ್ ಆಫ್ ಕಂಪನಿ ಅಧ್ಯಕ್ಷ ಡಾ.ತುಂಬೆ ಮೊಯ್ದೀನ್ ಹಾಗೂ ಎಂ.ಆರ್.ಜಿ ಗ್ರೂಪ್ ಸಂಸ್ಥೆಯ ಸ್ಥಾಪಕಾಧ್ಯಕ್ಷ, ಉದ್ಯಮಿ ಕೆ.ಪ್ರಕಾಶ್ ಶೆಟ್ಟಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು ಎಂದು ಮಂಗಳೂರು ವಿವಿಯ ಕುಲಪತಿ ಡಾ.ಪಿ.ಎಲ್ ಧರ್ಮ ಮಾಹಿತಿ ನೀಡಿದ್ದಾರೆ. 

ಮಂಗಳೂರು, ಜೂನ್ 14: ಮಂಗಳೂರು ವಿಶ್ವವಿದ್ಯಾನಿಲಯದ 42ನೇ ಘಟಿಕೋತ್ಸವ ಜೂ.15ರಂದು ನಡೆಯಲಿದ್ದು, ಅನಿವಾಸಿ ಭಾರತೀಯ ಉದ್ಯಮಿ ಡಾ.ರೊನಾಲ್ಡ್ ಕೊಲಾಸೋ, ತುಂಬೆ ಗ್ರೂಪ್ ಆಫ್ ಕಂಪನಿ ಅಧ್ಯಕ್ಷ ಡಾ.ತುಂಬೆ ಮೊಯ್ದೀನ್ ಹಾಗೂ ಎಂ.ಆರ್.ಜಿ ಗ್ರೂಪ್ ಸಂಸ್ಥೆಯ ಸ್ಥಾಪಕಾಧ್ಯಕ್ಷ, ಉದ್ಯಮಿ ಕೆ.ಪ್ರಕಾಶ್ ಶೆಟ್ಟಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು ಎಂದು ಮಂಗಳೂರು ವಿವಿಯ ಕುಲಪತಿ ಡಾ.ಪಿ.ಎಲ್ ಧರ್ಮ ಮಾಹಿತಿ ನೀಡಿದ್ದಾರೆ. 

ಮಂಗಳೂರಿನ ವಿವಿ ಕಾಲೇಜಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಈ ಬಾರಿ ಗೌರವ ಡಾಕ್ಟರೇಟ್‌ಗಾಗಿ 12 ಪ್ರಸ್ತಾವನೆಗಳು ಬಂದಿದ್ದವು.  ಸಾಮಾಜಿಕ, ಶೈಕ್ಷಣಿಕ ಹಾಗೂ ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳಿಗೆ ಗೌರವ ಡಾಕ್ಟರೇಟ್‌ ನೀಡುವ ಪ್ರಸ್ತಾವನೆಗಳನ್ನು ಸಿಂಡಿಕೇಟ್ ಸಭೆಯಲ್ಲಿ ಇರಿಸಿ ನಿರ್ಣಯ ಮಂಡಿಸಿ ಕುಲಾಧಿಪತಿಗಳಿಗೆ ರವಾನಿಸಲಾಗುತ್ತದೆ. ಅಲ್ಲಿಂದಲೇ ಅಂತಿಮ ಮೂರು ಹೆಸರುಗಳನ್ನು ಆಯ್ಕೆ ಮಾಡಿ ಪಟ್ಟಿ ಕಳುಹಿಸಿದ್ದಾರೆ ಎಂದರು.

ಜೂ.15ರಂದು ಮಧ್ಯಾಹ್ನ 12.15ಕ್ಕೆ ಮಂಗಳೂರು ವಿವಿ ಆವರಣದಲ್ಲಿರುವ ಮಂಗಳಾ ಸಭಾಂಗಣದಲ್ಲಿ ಘಟಿಕೋತ್ಸವ ನಡೆಯಲಿದೆ. ಹೊಸದಿಲ್ಲಿಯ ಅಭಿವೃದ್ಧಿಶೀಲ ರಾಷ್ಟ್ರಗಳ ಸಂಶೋಧನೆ ಮತ್ತು ಮಾಹಿತಿ ವ್ಯವಸ್ಥೆಯ ಮಹಾ ನಿರ್ದೇಶಕ ಪ್ರೊ.ಸಚಿನ್ ಚತುರ್ವೇದಿ ಮುಖ್ಯ ಅತಿಥಿಯಾಗಿ ಆಗಮಿಸುವರು. ಕರ್ನಾಟಕದ ರಾಜ್ಯಪಾಲರು ಹಾಗೂ ವಿವಿಯ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಿರುವರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಘಟಿಕೋತ್ಸವದಲ್ಲಿ ಭಾಗವಹಿಸುವರು ಎಂದರು.

155 ಮಂದಿಗೆ ಪಿಎಚ್‌ಡಿ ಪದವಿ 

ಘಟಿಕೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ 155 ಸಂಶೋಧನಾರ್ಥಿಗಳಿಗೆ ಪಿ.ಎಚ್.ಡಿ. ಡಾಕ್ಟರೇಟ್ ಪದವಿ ಮಾಡಲಾಗುವುದು. (ಕಲೆ -51, ವಿಜ್ಞಾನ -73, ವಾಣಿಜ್ಯ 26, ಶಿಕ್ಷಣ -05) ಇವರಲ್ಲಿ 60 ಮಹಿಳೆಯರು ಮತ್ತು 95 ಪುರುಷರಿದ್ದಾರೆ. ಈ ಬಾರಿ 18 ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಹಾಗೂ 4 ಅಂತಾರಾಷ್ಟ್ರೀಯ ಮಹಿಳಾ ವಿದ್ಯಾರ್ಥಿಗಳು ಪಿ.ಎಚ್.ಡಿ ಪದವಿ ಪಡೆಯುತ್ತಿದ್ದಾರೆ. 58 ಚಿನ್ನದ ಪದಕ ಮತ್ತು 57 ನಗದು ಬಹುಮಾನಗಳಿದ್ದು, ವಿವಿಧ ಕೋರ್ಸ್‌ಗಳ ಒಟ್ಟು 168 ರ‌್ಯಾಂಕ್‌ಗಳಲ್ಲಿ ಪ್ರಥಮ ರ‌್ಯಾಂಕ್ ಪಡೆದ 72 ಮಂದಿಗೆ ರ‌್ಯಾಂಕ್ ಪ್ರಮಾಣ ಪತ್ರ ನೀಡಲಾಗುವುದು. ಇವರಲ್ಲಿ ಸ್ನಾತಕೋತ್ತರ ಪದವಿ 52 ಮತ್ತು 20 ಪದವೀಧರರಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯ 2022-23ನೆ ಸಾಲಿಗೆ ನಡೆಸಿದ ವಿವಿಧ ಪರೀಕ್ಷೆಗಳಲ್ಲಿ ಒಟ್ಟು 29465 ವಿದ್ಯಾರ್ಥಿಗಳು ಹಾಜರಾಗಿದ್ದು, 21319 (ಶೇ. 72.35) ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಸ್ನಾತಕೋತ್ತರ ಪದವಿ ಪರೀಕ್ಷೆಗೆ 3277 ವಿದ್ಯಾರ್ಥಿಗಳು ಹಾಜರಾಗಿದ್ದು, 2094 (ಶೇ. 94.42) ಮಂದಿ ಉತ್ತೀರ್ಣರಾಗಿದ್ದಾರೆ ಎಂದು ಡಾ.ಧರ್ಮ ಮಾಹಿತಿ ನೀಡಿದರು. 

ಸುದ್ದಿಗೋಷ್ಟಿಯಲ್ಲಿ ವಿವಿ ಆಡಳಿತ ವಿಭಾಗದ ಕುಲಸಚಿವ ರಾಜು ಮೊಗವೀರ, ಹಣಕಾಸು ಅಧಿಕಾರಿ ಪ್ರೊ.ಸಂಗಪ್ಪ, ಪರೀಕ್ಷಾಂಗ ಕುಲಸಚಿವ ಡಾ.ದೇವೇಂದ್ರಪ್ಪ ಉಪಸ್ಥಿತರಿದ್ದರು.

Honorary Doctorate to Dr Ronald Colaso, Dr Thumbe Moidin, Goldfinch Prakash Shetty by Mangalore University on June 15. Dr. Ronald Colaco, a distinguished Dubai-based businessman and philanthropist, is set to receive an honorary doctorate from Mangalore University at its 42nd annual convocation on June 15.