ಘಟಿಕೋತ್ಸವದಲ್ಲಿ ರಾಜ್ಯಪಾಲರದ್ದೇ ದರ್ಬಾರು, ಸುಸ್ತು ಹೊಡೆದ ಕುಲಪತಿ ಕಣ್ಣೀರು, ಸಭೆಯಲ್ಲಿ ಮುಜುಗರದ ಸನ್ನಿವೇಶ, ‘ಅಧಿಕ ಪ್ರಸಂಗಿ’ತನಕ್ಕೆ ಸಿಬಂದಿಗೆ ಗಲಿಬಿಲಿ, ಗೊಂದಲ ! ಆನೆ ನಡೆದಿದ್ದೇ ಶಿಷ್ಟಾಚಾರ ! 

15-06-24 10:25 pm       Mangalore Correspondent   ಕರಾವಳಿ

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಶನಿವಾರ ನಡೆದ 42ನೇ ಘಟಿಕೋತ್ಸವ ರಾಜ್ಯಪಾಲರ ಅಧಿಕ ಪ್ರಸಂಗದ ನಡೆಯಿಂದಾಗಿ ಗೊಂದಲದ ಗೂಡಾಗಿ ಪರಿಣಮಿಸಿತ್ತು. ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಿಮಿಷಕ್ಕೊಂದರಂತೆ ಸೂಚನೆಗಳನ್ನು ನೀಡುತ್ತ ತನ್ನ ಅಂಗರಕ್ಷಕನ ಮೂಲಕ ಘಟಿಕೋತ್ಸವ ಸಭೆಯನ್ನು ನಿಯಂತ್ರಣಕ್ಕೆ ಪಡೆದು ಗೊಂದಲ ಎಬ್ಬಿಸಿದ್ದಾರೆ.

ಮಂಗಳೂರು, ಜೂನ್ 15: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಶನಿವಾರ ನಡೆದ 42ನೇ ಘಟಿಕೋತ್ಸವ ರಾಜ್ಯಪಾಲರ ಅಧಿಕ ಪ್ರಸಂಗದ ನಡೆಯಿಂದಾಗಿ ಗೊಂದಲದ ಗೂಡಾಗಿ ಪರಿಣಮಿಸಿತ್ತು. ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಿಮಿಷಕ್ಕೊಂದರಂತೆ ಸೂಚನೆಗಳನ್ನು ನೀಡುತ್ತ ತನ್ನ ಅಂಗರಕ್ಷಕನ ಮೂಲಕ ಘಟಿಕೋತ್ಸವ ಸಭೆಯನ್ನು ನಿಯಂತ್ರಣಕ್ಕೆ ಪಡೆದು ಗೊಂದಲ ಎಬ್ಬಿಸಿದ್ದಾರೆ. ಇದರಿಂದ ವಿವಿಯ ಕುಲಪತಿ ಮತ್ತು ಪ್ರೊಫೆಸರುಗಳಿಗೆ ಅವಮಾನಕಾರಿ ಪ್ರಸಂಗ ಎದುರಾಗಿದ್ದಲ್ಲದೆ, ಸಭೆಯಲ್ಲಿದ್ದವರಿಗೆಲ್ಲ ಇರಿಸುಮುರಿಸು ಆಗಿತ್ತು.

ರಾಜ್ಯಪಾಲರು ಆಗಿಂದಾಗ್ಗೆ ನೀಡುತ್ತಿದ್ದ ಆದೇಶಗಳನ್ನು ಪಾಲನೆ ಮಾಡಲೂ ಆಗದೆ, ಬಿಡಲೂ ಆಗದೆ ಒಂದು ಹಂತದಲ್ಲಿ ಕುಲಪತಿ ಪ್ರೊ.ಪಿ.ಎಲ್‌.ಧರ್ಮ ಭ್ರಮನಿರಸರಾಗಿ ಕುಳಿತುಬಿಟ್ಟರು. ರಾಜ್ಯಪಾಲರು ಅಧಿಕಾರ ಚಲಾಯಿಸುತ್ತಿದ್ದುದನ್ನು ನೋಡಿ ಕುಳಿತಲ್ಲೇ ಲೋ ಬಿಪಿಗೊಳಗಾದ ಕುಲಪತಿ ಪಿ.ಎಲ್.ಧರ್ಮ, ಕೊನೆಗೆ ಹೊರಗಿನಿಂದ ಜ್ಯೂಸ್ ತರಿಸಿ ಕುಡಿದು ಸುಧಾರಿಸಿಕೊಂಡದ್ದೂ ನಡೆಯಿತು. ಬ್ರಿಟಿಷರ ಬಂದ ಬಳುವಳಿಯ ರೂಪದ ಘಟಿಕೋತ್ಸವ ಅತಿ ಶಿಷ್ಟಾಚಾರ ಎನ್ನುವ ರೀತಿ ನಡೆಯಬೇಕಿತ್ತು. ಆದರೆ, ಈ ಸಲದ ಘಟಿಕೋತ್ಸವದಲ್ಲಿ ಪೂರ್ತಿ ರಾಜ್ಯಪಾಲರು ಮತ್ತು ಅವರ ಅಂಗರಕ್ಷಕನದ್ದೇ ದರ್ಬಾರು. ಅಂಗರಕ್ಷಕ ಹೇಳಿದಂತೆ ವಿವಿಯ ಪ್ರೊಫೆಸರ್‌ಗಳು, ಕುಲಪತಿ ನಡೆದುಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿತ್ತು.

ಘಟಿಕೋತ್ಸವವನ್ನು ಶಿಷ್ಟ ಸಂಪ್ರದಾಯದಂತೆ ಆಯೋಜಿಸಲಾಗಿತ್ತು. ಬ್ಯಾಂಡ್, ವಾದ್ಯಗಳ ಜೊತೆಗೆ ವೇದಿಕೆಗೆ ಗಣ್ಯರು ಬಂದ ನಂತರ ಸಂಪ್ರದಾಯದಂತೆ ನಾಡಗೀತೆ, ವಿವಿಯ ಗೀತೆ ಹಾಡಲು ಶುರು ಮಾಡಿದಾಗ ಮಧ್ಯಪ್ರವೇಶಿಸಿದ ರಾಜ್ಯಪಾಲರು ಆರಂಭದಲ್ಲೇ ರಾಷ್ಟ್ರಗೀತೆ ಹಾಡುವಂತೆ ತಾಕೀತು ಮಾಡಿದರು. ರಾಷ್ಟ್ರಗೀತೆ ಹಾಡಲು ತಯಾರಾಗಿ ಬಂದಿಲ್ಲದ ವಿದ್ಯಾರ್ಥಿಗಳು ಇದರಿಂದ ವಿಚಲಿತರಾದರು. ಕುಲಪತಿ, ಸಿಬಂದಿಯೂ ಗಲಿಬಿಲಿಗೆ ಒಳಗಾದರು. ಕಾರ್ಯಕ್ರಮದ ಕೊನೆಯಲ್ಲಿ ಹಾಡಬೇಕಿದ್ದ ರಾಷ್ಟ್ರಗೀತೆಯನ್ನು ಬಳಿಕ ನಡುವಲ್ಲೇ ಹಾಡಲಾಯಿತು.

ಘಟಿಕೋತ್ಸವದಲ್ಲಿ ಆಯಾ ವಿಷಯವಾರು ಪಿಎಚ್ ಡಿ ಪಡೆದವರಿಗೆ ಪ್ರತ್ಯೇಕವಾಗಿ ಪ್ರಮಾಣಪತ್ರ ನೀಡುವುದು ವಾಡಿಕೆ. ಒಬ್ಬೊಬ್ಬರಿಗೆ ಪ್ರಮಾಣಪತ್ರ ನೀಡುವುದು ತಡವಾಗುತ್ತೆ ಅಂತ ಅದನ್ನೂ ಬದಲಿಸಿದ ರಾಜ್ಯಪಾಲರು ಎಲ್ಲ ವಿದ್ಯಾರ್ಥಿಗಳನ್ನೂ ಒಟ್ಟಿಗೇ ಬರುವಂತೆ ಆದೇಶಿಸಿದರು. ಕೈಯಲ್ಲಿ ಮೊದಲೇ ಸಿಬಂದಿ ಕೊಟ್ಟ ಪ್ರಮಾಣ ಪತ್ರಗಳನ್ನು ಹಿಡಿದು ಸಂಶೋಧನಾರ್ಥಿಗಳು ವೇದಿಕೆ ಏರಬೇಕಾಗಿ ಬಂತು. ಪಿಎಚ್‌ಡಿ ಪದವಿಯನ್ನು ರಾಜ್ಯಪಾಲರು ಕೈಯಾರೆ ನೀಡಬೇಕಿತ್ತು. ಆಯಾ ವಿಭಾಗದಲ್ಲಿ ಸಂಶೋಧನೆ ನಡೆಸಿದವರಿಗೆ ಅದೊಂದು ಗೌರವ ಕೂಡ. ಆ ಫೋಟೋವನ್ನು ತಮ್ಮ ಸಾಧನೆಯೆಂದು ಸಂಶೋಧಕರು ತಮ್ಮ ಮನೆಯಲ್ಲಿ ಫ್ರೇಮ್ ಮಾಡಿ ಇಟ್ಟುಕೊಳ್ಳುತ್ತಾರೆ. ಆದರೆ ರಾಜ್ಯಪಾಲರು ಈ ಸಲ ಮಾಡಿದ ಅಧಿಕ ಪ್ರಸಂಗದಿಂದಾಗಿ ವಿದ್ಯಾರ್ಥಿಗಳಿಗೆ ಮೊದಲೇ ಅನಧಿಕೃತವಾಗಿ ಸರ್ಟಿಫಿಕೆಟ್‌ ಹಂಚಿದ್ದಲ್ಲದೆ, ಅವರನ್ನು ಬಳಿಕ ವೇದಿಕೆಗೆ ಕರೆದು ಗ್ರೂಪ್‌ ಫೋಟೊಗೆ ರಾಜ್ಯಪಾಲರು ಪೋಸು ನೀಡಿದ್ದಾರೆ.

ರಾಜ್ಯಪಾಲರು ವೇದಿಕೆಯಲ್ಲಿದ್ದುಕೊಂಡೇ ಏರುಧ್ವನಿಯಲ್ಲಿ ಮನಬಂದಂತೆ ಆದೇಶ ಮಾಡುತ್ತಿದ್ದುದರಿಂದ ಇಡೀ ವಿವಿ ಬೋಧಕ ವರ್ಗವೇ ಕಂಗಾಲಾಗಿತ್ತು. ಇದರ ನಡುವೆ ರಾಜ್ಯಪಾಲರ ಅಂಗರಕ್ಷಕರಾಗಿ ಬಂದಿದ್ದ ಬೆಂಗಳೂರಿನ ಹೆಡ್‌ ಕಾನ್‌ಸ್ಟೇಬಲ್‌ ಕೂಡ ಏರುದನಿಯಲ್ಲಿ ವಿವಿ ಅಧಿಕಾರಿಗಳ ಜೊತೆಗೆ ರೇಗಾಡಿದ್ದೂ ಕಂಡುಬಂತು. ರಾಜ್ಯಪಾಲರು ಮತ್ತು ಅಂಗರಕ್ಷಕನ ನಡೆ ಘಟಿಕೋತ್ಸವಧ ಘನತೆಗೆ ಧಕ್ಕೆ ಉಂಟು ಮಾಡಿದ್ದಾಗಿ ವಿವಿಯ ಬೋಧಕ ವರ್ಗದ ಸಿಬಂದಿ ಬೇಸರ ಹೇಳಿಕೊಂಡರು. ಒಂದು ಹಂತದಲ್ಲಿ ರಾಜ್ಯಪಾಲರ ನಡೆಯಿಂದ ಬೇಸರಗೊಂಡ ಕುಲಪತಿ ಡಾ.ಪಿ.ಎಲ್. ಧರ್ಮ ಕಣ್ಣೀರು ಹಾಕಿದ್ದಲ್ಲದೆ, ಅದನ್ನು ಕೈಗವಸಿನಲ್ಲಿ ಒರೆಸಿಕೊಂಡು ಮೌನವಾಗಿ ಕುಳಿತುಬಿಟ್ಟರು. ಇದನ್ನು ಗಮನಿಸಿದ ರಾಜ್ಯಪಾಲ, ಏಯ್ ಮುಖ ಮೇಲೆತ್ತೋ ಎನ್ನುವ ರೀತಿ ಕೈಸನ್ನೆಯಲ್ಲಿ ಸೂಚನೆ ಕೊಟ್ಟಿದ್ದೂ ನಡೆಯಿತು. ಇದೇ ವೇಳೆ, ವಿಡಿಯೋ ಚಿತ್ರೀಕರಿಸುತ್ತಿದ್ದ ಮಾಧ್ಯಮದ ಕ್ಯಾಮರಾಮೆನ್‌ ಒಬ್ಬರನ್ನು ರಾಜ್ಯಪಾಲರ ಅಂಗರಕ್ಷಕ ದೂಡಿ ಹಾಕಿದ ಘಟನೆಯೂ ನಡೆಯಿತು. ಇದೆಲ್ಲಕ್ಕಿಂತಲೂ ವಿಚಿತ್ರ ಎಂದರೆ, ಘಟಿಕೋತ್ಸವದಲ್ಲಿ ಸನ್ಮಾನ ಮಾಡುವ ಪದ್ಧತಿ ಇಲ್ಲ. ಆದರೆ, ರಾಜ್ಯಪಾಲರ ಅಪೇಕ್ಷೆಯಂತೆ ವಿವಿಯ ಅಧಿಕಾರಿಗಳು ತರಾತುರಿಯಲ್ಲಿ ಹೂಹಾರ, ಹಣ್ಣುಗಳನ್ನು ತರಿಸಿಕೊಂಡು ಸನ್ಮಾನ ನೆರವೇರಿಸಿದರು.

ಇಡೀ ಘಟನೆ ಬಗ್ಗೆ ವಿವಿಯ ಶಿಕ್ಷಕೇತರ ಅಧಿಕಾರಿಗಳು ತಮ್ಮಲ್ಲೇ ಬೈದುಕೊಳ್ಳುತ್ತಿದ್ದರೆ, ಕುಲಪತಿ ಡಾ.ಪಿ.ಎಲ್ ಧರ್ಮ ವೇದಿಕೆಯಲ್ಲಿದ್ದುಕೊಂಡೇ ದುಃಖಿಸುವ ಸ್ಥಿತಿಯಾಗಿತ್ತು. ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲರು ಸಭೆಯುದ್ದಕ್ಕೂ ಒಂದಿಲ್ಲೊಂದು ವಿಚಾರದಲ್ಲಿ ತಗಾದೆ ತೆಗೆದಿದ್ದನ್ನು ನೋಡಿದ ಸಭೆಯಲ್ಲಿದ್ದ ಪ್ರಮುಖರು ಈ ಮನುಷ್ಯ ಹೀಗ್ಯಾಕೆ ಮಾಡುತ್ತಿದ್ದಾರೆ ಅಂತ ಗೊಣಗುತ್ತಿದ್ದರು. ಸಭೆಯಲ್ಲಿ ಐವಾನ್ ಡಿಸೋಜ, ಸಿಟಿ ರವಿ, ಸಂಸದ ಬ್ರಿಜೇಶ್ ಚೌಟ, ಸತೀಶ್ ಕುಂಪಲ, ಜೆ.ಆರ್ ಲೋಬೊ ಸೇರಿದಂತೆ ನಾನಾ ಕ್ಷೇತ್ರಗಳ ಪ್ರಮುಖರು ಇದ್ದರು. ವೇದಿಕೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಸೇರಿದಂತೆ ಸಿಂಡಿಕೇಟ್ ಸದಸ್ಯರು, ಬೇರೆ ಬೇರೆ ವಿಭಾಗದ ಪ್ರೊಫೆಸರುಗಳು ಇದ್ದರು.

Mangalore University honorary doctorate, gathering saw  governor troubling Vice Chancellor P L Dharma often changing his rules and guidelines atee which P L Dharma was seen tensed and troubled. Mangalore University awarded honorary doctorate degrees (honoris causa) to NRI entrepreneur and philanthropist Dr Ronald Colaco, as well as entrepreneur Prakash Shetty, for their significant contributions to society. Another recipient of the honorary doctorate, Thumbay Moideen, was not present due to prior commitments.