Mulihithlu, Mangalore News; ಕುಸಿದು ಬಿದ್ದ ನೇತ್ರಾವತಿ ರಿವರ್ ಫ್ರಂಟ್ ತಡೆಗೋಡೆ ; ಸ್ಮಾರ್ಟ್ ಸಿಟಿ ಕಾಮಗಾರಿ ಕಳಪೆಗೆ ಸಾಕ್ಷಿ, ಸ್ಮಾರ್ಟ್ ಅಧಿಕಾರಿಗಳ ದಿವ್ಯ ಮೌನ !  

22-06-24 11:05 pm       Mangalore Correspondent   ಕರಾವಳಿ

ಮಂಗಳೂರಿನಲ್ಲಿ ಒಂದೂವರೆ ಸಾವಿರ ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಆದರೆ ಹೆಚ್ಚಿನ ಕಡೆ ಕಳಪೆ ಕಾಮಗಾರಿಯ ಆರೋಪ ಕೇಳಿಬಂದಿದೆ.

ಮಂಗಳೂರು, ಜೂನ್ 22: ಮಂಗಳೂರಿನಲ್ಲಿ ಒಂದೂವರೆ ಸಾವಿರ ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಆದರೆ ಹೆಚ್ಚಿನ ಕಡೆ ಕಳಪೆ ಕಾಮಗಾರಿಯ ಆರೋಪ ಕೇಳಿಬಂದಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ನೇತ್ರಾವತಿ ನದಿ ತೀರದ ಮುಳಿಹಿತ್ಲು ಬಳಿ ಕಟ್ಟಲಾಗಿದ್ದ ತಡೆಗೋಡೆ ಸಾಮಾನ್ಯ ಮಳೆಗೇ ಕುಸಿದು ಬಿದ್ದಿದೆ.

70 ಕೋಟಿ ರೂಪಾಯಿ ವೆಚ್ಚದಲ್ಲಿ ರಿವರ್ ಫ್ರಂಟ್ ಯೋಜನೆ ಕಾಮಗಾರಿ ನಡೆಯುತ್ತಿದ್ದು, ಇದನ್ನು ಸಿಆರ್ ಝಡ್ ವ್ಯಾಪ್ತಿಯಲ್ಲಿ ನಡೆಸುತ್ತಿರುವುದರಿಂದ ಪರಿಸರವಾದಿಗಳು ಹಸಿರು ನ್ಯಾಯಮಂಡಳಿಗೆ ದೂರಿತ್ತು ತಡೆಯಾಜ್ಞೆ ತಂದಿದ್ದಾರೆ. ಅದರಂತೆ, ಯೋಜನಾ ಕಾಮಗಾರಿಗೆ ಹಸಿರು ಪೀಠದ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಕಾಮಗಾರಿ ಅರ್ಧಕ್ಕೆ ನಿಂತಿದೆ. ಆದರೆ, ಅರೆಬರೆ ಆಗಿದ್ದ ತಡೆಗೋಡೆಯೇ ಈಗ ಕುಸಿದು ನೇತ್ರಾವತಿ ಪಾಲಾಗಿರುವುದು ಕಳಪೆ ಕಾಮಗಾರಿಗೆ ಸಾಕ್ಷಿ ಎನ್ನುವ ಆರೋಪ ಕೇಳಿಬಂದಿದೆ.

ರಿವರ್ ಫ್ರಂಟ್ ಯೋಜನೆಯನ್ನು ನಾಲ್ಕು ಮಂದಿ ಟೆಂಡರ್ ಪಡೆದಿದ್ದಾರೆ. ನದಿ ತೀರದಲ್ಲಿ ವೀವ್ ಪಾಯಿಂಟ್ ಸೇರಿದಂತೆ ಪ್ರವಾಸಿ ತಾಣದ ರೂಪದಲ್ಲಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ. ಇದರಂತೆ, ತಡೆಗೋಡೆ ಸೇರಿದಂತೆ ನದಿಯ ದಡಕ್ಕೆ ಮಣ್ಣು ತುಂಬಿಸಿ ಆಕರ್ಷಣೆ ಗಿಟ್ಟಿಸಲು ಕಾಮಗಾರಿ ನಡೆಸಲಾಗಿತ್ತು. ಇದರಲ್ಲಿ 14.5 ಕೋಟಿ ರೂ. ವೆಚ್ಚದ ತಡೆಗೋಡೆ ಕಾಮಗಾರಿ ಈಗ ಕುಸಿದು ಬಿದ್ದಿದೆ. ಅದರಲ್ಲಿ ನೋಡಿದರೆ, ಕಗ್ಗಲ್ಲಿನಿಂದ ಕಟ್ಟಲಾಗಿದ್ದು, ಅದಕ್ಕೆ ಸಿಮೆಂಟ್ ಆಗಲೀ, ಕಾಂಕ್ರೀಟ್ ಆಗಲೀ ಬಳಸಿದ್ದು ಕಂಡುಬರುತ್ತಿಲ್ಲ. ಬರೀ ಮಣ್ಣು ಮತ್ತು ಕಲ್ಲಿನಿಂದ ಕಟ್ಟಿದ ರೀತಿಯಿದ್ದು ಹೊರಭಾಗದಲ್ಲಿ ಮಾತ್ರ ಸಿಮೆಂಟ್ ಹಾಕಲಾಗಿದೆ. ಇದೇ ಕಾರಣದಿಂದ ತಡೆಗೋಡೆ ನಡುವೆ ಹತ್ತು ಮೀಟರ್ ಉದ್ದಕ್ಕೆ ಕುಸಿದು ಬಿದ್ದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಮಾರ್ಟ್ ಸಿಟಿ ಇಂಜಿನಿಯರುಗಳು, ಗುತ್ತಿಗೆದಾರರೇ ಮರಳಿ ತಡೆಗೋಡೆಯನ್ನು ಕಟ್ಟಿ ಕೊಡಲಿದ್ದಾರೆ. ಆ ಬಗ್ಗೆ ಭರವಸೆ ನೀಡಿದ್ದಾಗಿ ಹೇಳಿದ್ದಾರೆ. ಕಳಪೆ ಗಾಮಕಾರಿ ನಡೆಸಿದ ಗುತ್ತಿಗೆದಾರನ ವಿರುದ್ಧ ಕ್ರಮಕ್ಕೆ ಪಾಲಿಕೆಯಾಗಲೀ, ಜಿಲ್ಲಾಡಳಿತವಾಗಲೀ ಮುಂದಾಗಿಲ್ಲ. ಎಲ್ಲವೂ ಕೊಡು ಕೊಳ್ಳುವಿಕೆ ರೀತಿಯಲ್ಲಿ ನಡೆಯುತ್ತಿದ್ದು, ಸ್ಮಾರ್ಟ್ ಸಿಟಿಯಡಿ ಬಂದಿರುವ ದುಡ್ಡನ್ನು ಎಲ್ಲ ಸೇರಿ ಕೊಳ್ಳೆ ಹೊಡೆಯಲು ಮುಂದಾಗಿದ್ದಾರೆಯೇ ಎನ್ನುವ ಅನುಮಾನ ಬರುವಂತಿದೆ.

In Mangalore, various development works are going on under the Smart City project at a cost of 1.5 thousand crores, but there have been allegations of poor work in most places. As proof of this, the barrier built near mulihithlu on the banks of the Netravati river has collapsed due to normal rain.