Mangalore Brijesh Chowta, Oath, MP: ತುಳುನಾಡಿನ ದೈವ-ದೈವರ ಹೆಸರಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಪ್ರಮಾಣ ; ಸಂಸತ್ತಿನಲ್ಲಿ ಮೊದಲ ಬಾರಿಗೆ ತುಳು ನುಡಿಮುತ್ತಿನ ಉದ್ಘಾರ, ‘ಮಾತೆರೆಗ್ಲಾ ಸೊಲ್ಮೆಲು’ ಎಂದ ನೂತನ ಸಂಸದ

24-06-24 06:56 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ನೂತನ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಂಸತ್ತಿನಲ್ಲಿ ತುಳುನಾಡಿನ ದೈವ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಲ್ಲದೆ, ಕೊನೆಯಲ್ಲಿ ತುಳು ಭಾಷೆಯಲ್ಲಿ ಧನ್ಯವಾದ ಹೇಳಿ ಗಮನ ಸೆಳೆದಿದ್ದಾರೆ.

ಮಂಗಳೂರು, ಜೂನ್.24: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ನೂತನ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಂಸತ್ತಿನಲ್ಲಿ ತುಳುನಾಡಿನ ದೈವ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಲ್ಲದೆ, ಕೊನೆಯಲ್ಲಿ ತುಳು ಭಾಷೆಯಲ್ಲಿ ಧನ್ಯವಾದ ಹೇಳಿ ಗಮನ ಸೆಳೆದಿದ್ದಾರೆ.

ಹಂಗಾಮಿ ಸ್ಪೀಕರ್ ಭರ್ತೃಹರಿ ಮಹತಾಬ್ ಅವರು ಸೋಮವಾರ ಸಂಸತ್ತಿನ ಅಧಿವೇಶನ ಆರಂಭವಾಗುತ್ತಲೇ ನೂತನ ಸಂಸದರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ದಕ್ಷಿಣ ಕನ್ನಡ ಕ್ಷೇತ್ರದ ಸರದಿ ಬಂದಾಗ, ಬ್ರಿಜೇಶ್ ಚೌಟ ತುಳುನಾಡಿನ ಶೈಲಿಯ ವೇಷ ಭೂಷಣದಲ್ಲಿ ಗಮನ ಸೆಳೆದರು. ಬಿಳಿ ಅಂಗಿ ಮತ್ತು ಬಿಳಿ ಲುಂಗಿಯನ್ನು ಧರಿಸಿದ್ದ ಬ್ರಿಜೇಶ್ ಚೌಟ ಅದರ ಮೇಲೊಂದು ಹಿಂದುತ್ವ ಮತ್ತು ಬಿಜೆಪಿಯನ್ನು ಸೂಚಿಸುವ ಕೇಸರಿ ಶಾಲನ್ನು ಹಾಕ್ಕೊಂಡಿದ್ದರು.

ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ನಿರರ್ಗಳ ಮಾತನಾಡಬಲ್ಲವರಾದರೂ ಬ್ರಿಜೇಶ್ ಚೌಟ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಕರ್ನಾಟಕದ ಪ್ರತಿನಿಧಿಯೆಂದು ಸಾರಿದ್ದಾರೆ. ಇದರ ಜೊತೆಗೆ, ಕೊನೆಯಲ್ಲಿ ‘’ಮಾತೆರೆಗ್ಲ ಸೊಲ್ಮೆಲು’’ (ಎಲ್ಲರಿಗೂ ಧನ್ಯವಾದಗಳು) ಎನ್ನುವ ಮೂಲಕ ತನ್ನ ತುಳು ಭಾಷಾ ಪ್ರೇಮವನ್ನೂ ತೋರಿದ್ದಾರೆ. ಅಲ್ಲದೆ, ಪ್ರಮುಖವಾಗಿ ತುಳುನಾಡಿನ ದೈವ – ದೈವರ ಹೆಸರು ಉಲ್ಲೇಖಿಸಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ತುಳುನಾಡಿನಲ್ಲಿ ದೈವಾರಾಧನೆಗೆ ವಿಶೇಷ ಮಹತ್ವವಿದ್ದು, ದೈವದ ಹೆಸರಿನಲ್ಲಿ ಪ್ರಮಾಣ ಮಾಡುವುದಕ್ಕೂ ಹೆಚ್ಚಿನ ಮನ್ನಣೆಯಿದೆ. ತುಳುವರ ವಿಶಿಷ್ಟ ಸಂಸ್ಕೃತಿಯನ್ನು ಪ್ರತಿನಿಧಿಸುವ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಹಕ್ಕೊತ್ತಾಯ ಇರುವಂತೆಯೇ ಮೊದಲ ಬಾರಿಗೆ ತುಳು ಭಾಷೆಯ ನುಡಿ ಮುತ್ತೊಂದನ್ನು ಸಂಸದ ಬ್ರಿಜೇಶ್ ಸಂಸತ್ತಿನಲ್ಲಿ ಮೊಳಗಿಸಿದ್ದಾರೆ. ಬ್ರಿಜೇಶ್ ಚೌಟರ ಪ್ರಮಾಣ ವಚನದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

Mangalore Brijesh Chowta takes oath as MP of Dakshina Kannada in the name of Daiva in Tulu language