Rain Kuthar, House Collapsed, Mangalore; ಗುಡ್ಡದ ಏರುಹಾದಿಯಲ್ಲಿ ಅಪಾಯಕಾರಿ ರೀತಿ ಕಟ್ಟಿಕೊಂಡಿದ್ದ ಮನೆ ; ಮೇಲ್ಭಾಗದ ಮನೆಗೂ ಅಪಾಯದ ಆತಂಕ, ಕುಟುಂಬಕ್ಕೆ ಗರಿಷ್ಠ ಪರಿಹಾರದ ಭರವಸೆಯಿತ್ತ ಸ್ಪೀಕರ್ ಯುಟಿ ಖಾದರ್, ಅಪಾಯದ ಮನೆಗಳ ಬಗ್ಗೆ ತಪಾಸಣೆಗೆ ಸೂಚನೆ

26-06-24 06:20 pm       Mangalore Correspondent   ಕರಾವಳಿ

ಉಳ್ಳಾಲದ ಕುತ್ತಾರು ಬಳಿಯ ಮುನ್ನೂರು ಗ್ರಾಮದಲ್ಲಿ ಮಳೆಯಿಂದಾಗಿ ಕಂಪೌಂಡ್ ಗೋಡೆ ಕುಸಿದು ನಾಲ್ವರು ಸಾವನ್ನಪ್ಪಿದ ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಾಗೂ ಕ್ಷೇತ್ರದ ಶಾಸಕ, ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಭೇಟಿ ನೀಡಿದ್ದು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಮಂಗಳೂರು, ಜೂನ್ 26: ಉಳ್ಳಾಲದ ಕುತ್ತಾರು ಬಳಿಯ ಮುನ್ನೂರು ಗ್ರಾಮದಲ್ಲಿ ಮಳೆಯಿಂದಾಗಿ ಕಂಪೌಂಡ್ ಗೋಡೆ ಕುಸಿದು ನಾಲ್ವರು ಸಾವನ್ನಪ್ಪಿದ ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಾಗೂ ಕ್ಷೇತ್ರದ ಶಾಸಕ, ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಭೇಟಿ ನೀಡಿದ್ದು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಮುನ್ನೂರು ಗ್ರಾಮದ ಗುಡ್ಡ ಪ್ರದೇಶದಲ್ಲಿ ಒತ್ತೊತ್ತಾಗಿ ಮನೆಗಳನ್ನು ಕಟ್ಟಿದ್ದು, ಮೇಲಿನ ಮನೆಯವರು ಕುಸಿಯದಂತೆ ಅಂಗಳದ ಬದಿಗೆ ಕಲ್ಲಿನ ಕಂಪೌಂಡ್ ಗೋಡೆ ಕಟ್ಟಿದ್ದರು. ಕಲ್ಲಿನ ಗೋಡೆ ನಿನ್ನೆ ರಾತ್ರಿ ಸುರಿದ ನಿರಂತರ ಮಳೆಗೆ ಕುಸಿದಿದ್ದು, ಕೆಳಗಿದ್ದ ಮನೆಯ ಮೇಲೆ ಬಿದ್ದಿದೆ. ಹೀಗಾಗಿ ಕೆಳ ಭಾಗದಲ್ಲಿದ್ದ ಮನೆ ಸಂಪೂರ್ಣ ನಾಶವಾಗಿದೆ. ಕುಸಿದು ಬಿದ್ದ ಜಾಗದಲ್ಲಿನ ಮನೆಯ ಕೊಠಡಿಯಲ್ಲಿ ಮಲಗಿದ್ದ ನಾಲ್ವರು ಮೃತಪಟ್ಟಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಯುಟಿ ಖಾದರ್, ಈ ರೀತಿ ಅಪಾಯ ತರಬಲ್ಲ ರೀತಿ ಮನೆಗಳನ್ನು ಕಟ್ಟಬಾರದು. ಇದು ಯಾಕೆ ಆಗಿದೆ, ಯಾರ ನಿರ್ಲಕ್ಷ್ಯದಿಂದ ಆಗಿದೆ ಎನ್ನುವ ಬಗ್ಗೆ ತಪಾಸಣೆ ಮಾಡಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ. ನಾಲ್ವರು ಮಡಿದಿರುವ ಘಟನೆಯಾಗಿದ್ದು, ಅವರ ಕುಟುಂಬದ ಜೊತೆಗೆ ಮಾತನಾಡುತ್ತೇನೆ. ಅಲ್ಲದೆ, ಜಿಲ್ಲಾಡಳಿತದಿಂದ ಮಳೆ ವಿಕೋಪಕ್ಕೆ ಸಿಗಬಲ್ಲ ಪರಿಹಾರದ ವ್ಯವಸ್ಥೆಯನ್ನೂ ಮಾಡಿಸುತ್ತೇನೆ. ಇದರ ಜೊತೆಗೆ, ಶಾಲೆ ಕಲಿಯುತ್ತಿದ್ದ ಮಕ್ಕಳು ಮೃತಪಟ್ಟಿದ್ದರಿಂದ ಅದಕ್ಕೆ ಸಿಗಬಹುದಾದ ಪರಿಹಾರವನ್ನೂ ಕೊಡಿಸುತ್ತೇನೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ಸಣ್ಣ ಜಾಗದಲ್ಲಿ ಹತ್ತಿರತ್ತಿನ ಮನೆಗಳನ್ನು ನಿರ್ಮಿಸಿದ್ದರಿಂದ ದುರಂತಕ್ಕೆ ಕಾರಣವಾಗಿದೆ. ಮೇಲ್ಗಡೆ ಕಂಪೌಂಡ್ ಗೋಡೆ ಇರುವಾಗ ಅದರ ಹತ್ತಿರದಲ್ಲೇ ಕೆಳಗಡೆ ಮನೆ ಕಟ್ಟಲಾಗಿತ್ತು. ಮಳೆಗೆ ಕುಸಿದು ಬಿದ್ದಿದೆ, ಈ ರೀತಿ ಅಪಾಯ ಇರಬಲ್ಲ ಜಾಗದ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದರು. ನಸುಕಿನ ವೇಳೆಗೆ ಕಂಪೌಂಡ್ ಗೋಡೆ ಕುಸಿದು ಬಿದ್ದಿದ್ದರಿಂದಾಗಿ ಮನೆಯಲ್ಲಿ ಮಲಗಿದ್ದ ಯಾಸಿರ್ (45), ಅವರ ಪತ್ನಿ ಮರಿಯಮ್ಮ(40), ಮಕ್ಕಳಾದ ರಿಹಾನ(11), ರಿಫಾನ(17) ಮೃತಪಟ್ಟಿದ್ದಾರೆ.

ಘಟನೆ ನಡೆದಿರುವುದು ಬೆಳಗ್ಗಿನ ವೇಳೆಗೆ ಪಕ್ಕದ ಮನೆಯವರಿಗೆ ತಿಳಿದಿದ್ದು ಕೂಡಲೇ ಸ್ಥಳೀಯರು ಸೇರಿ ಕಾರ್ಯಾಚರಣೆ ನಡೆಸಿ ಮೂವರ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಬಳಿಕ ಅಗ್ನಿಶಾಮಕ ದಳ ಬಂದು ಇನ್ನೊಂದು ಮೃತದೇಹವನ್ನೂ ಮೇಲಕ್ಕೆ ಎತ್ತಿದೆ. ಸ್ಥಳದಲ್ಲಿ ಸಾಕಷ್ಟು ಜನರು ಸೇರಿದ್ದು, ಗುಡ್ಡದ ಏರುಹಾದಿಯಲ್ಲಿ ಅಪಾಯಕಾರಿ ರೀತಿ ಮನೆಗಳನ್ನು ಕಟ್ಟಿಕೊಂಡಿದ್ದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದರು. ಮೇಲ್ಭಾಗದಲ್ಲಿರುವ ಮನೆಯೂ ಇದೀಗ ಅಪಾಯದಲ್ಲಿದೆ ಎನ್ನುವ ಮಾತನ್ನು ಹೇಳುತ್ತಿದ್ದರು.

Four members of the same family died in their sleep when the compound collapsed and the house collapsed in Madaninagar, Munnur village of Ullala taluk of Dakshina Kannada district in the wee hours of Wednesday. Assembly Speaker and MLA UT Khader, District Collector Mullai Muhilan visited the scene and condoled with the family. At the same time, he promised to cooperate with the solution.